HOME
CINEMA NEWS
GALLERY
TV NEWS
REVIEWS
CONTACT US
`ಮಹಾಪರ್ವ'ಕ್ಕೆ ಚಾಲನೆ
ದೈನಂದಿನ ಧಾರಾವಾಹಿ ಎಂದರೆ ಹೀಗೆ ಇರಬೇಕು ಎಂದು ತೋರಿಸಿಕೊಟ್ಟಂತಹ ನಿರ್ದೇಶಕ ಟಿ.ಎನ್.ಸೀತಾರಾಂ ಈಗ ಮತ್ತೊಂದು ಮೆಗಾ ಧಾರಾವಾಹಿ `ಮಹಾಪರ್ವ`ವನ್ನು ಪ್ರಾರಂಭಿಸಿದ್ದಾರೆ.

ಯಾವುದರ ವಿರುದ್ಧ ಚಳುವಳಿ ಮಾಡುತ್ತೇವೋ ಪರೋಕ್ಷವಾಗಿ ನಾವು ಅದರ ಪರವಾಗಿಯೆ ಹೋಗುತ್ತಿರುತ್ತೇವೆ. ಈಥರದ ವೈರುಧ್ಯಗಳ ಮಧ್ಯೆ ಮನುಷ್ಯ ಬದುಕುತ್ತಿದ್ದಾನೆ. ಇಂತ ಹಲವಾರು ವಿಷಯಗಳನ್ನು ವಿಶ್ಲೇಷಿಸುವ ಪ್ರಯತ್ನವಾಗಿ `ಮಹಾಪರ್ವ` ಎಂಬ ದೈನಂದಿನ ಧಾರಾವಾಹಿ ಈ ಟಿವಿ ವಾಹಿನಿಯಲ್ಲಿ ಸದ್ಯದಲ್ಲೇ ಪ್ರಸಾರಗೊಳ್ಳಲಿದೆ.

ಕಳೆದವಾರ ಈ ಧಾರಾವಾಹಿಯ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಖ್ಯಾತ ಕವಿ
ಎಚ್.ಎಸ್.ವೆಂಕಟೇಶ್‌ಮೂರ್ತಿ ಆವರು ರಚಿಸಿರುವ `ಮಹಾಪರ್ವ`ದ ಶೀರ್ಷಿಕೆಗೀತೆಯನ್ನು ಗಾಯಕಿ ಸಂಗೀತಕಟ್ಟಿ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಂದಾಯ ಸಚಿವರಾದ ಶ್ರೀನಿವಾಸಪ್ರಸಾದ್, ನ್ಯಾಯಮೂರ್ತಿ ಎ.ಜೆ.ಸದಾಶಿವ. ಲೋಕಸಭಾ ಸದಸ್ಯರಾದ ಜನಾರ್ದನಸ್ವಾಮಿ, ಶಾಸಕರಾದ ರಮೇಶ್‌ಕುಮಾರ್, ಕೆ.ಎಸ್.ಪುಟ್ಟಣ್ಣಯ್ಯ, ವೈ.ಸ್.ವಿ. ದತ್ತ ಹಾಗೂ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅಲ್ಲದೆ ಈ ಟಿವಿ ವಾಹಿನಿಯ ಪರಮೇಶ್ ಗುಂಡ್ಕಲ್ ಉಪಸ್ಥಿತರಿದ್ದರು.

ಮಧ್ಯಮವರ್ಗದ ಜನರ ಅಸಾಹಯಕ ಸ್ಥಿತಿಗೆ ಕೈಗನ್ನಡಿ ಹಿಡಿದಂತಿದ್ದ `ಮಾಯಾಮೃಗ`ದಿಂದ ಕರ್ನಾಟಕದ ಕಿರುತೆರೆ ವೀಕ್ಷಕರ ನೆಚ್ಚಿನ ನಿರ್ದೇಶಕರಾಗಿ ಹೊರಹೊಮ್ಮಿದ ಟಿ.ಎನ್.ಸೀತಾರಾಂ ಆನಂತರ ರೈತರ ಸಮಸ್ಯೆಗಳು, ರಾಜಕೀಯ ಚದುರಂಗದಾಟ ಇಂತಹ ಸಮಾಜದ ಮೇಲೆ ಬೆಳಕು ಚೆಲ್ಲುವಂತಹ ನೈಜತೆಗೆ ಹತ್ತಿರವಾದ ವಿಷಯಗಳನ್ನಿಟ್ಟುಕೊಂಡು `ಮುಕ್ತ` ಹಾಗೂ `ಮುಕ್ತಮುಕ್ತ` ಧಾರಾವಾಹಿಗಳನ್ನು ನಿರ್ಮಿಸಿದ್ದರು. ಅದಾದ ನಂತರ ಈಗ ಕೂಡ ಮಧ್ಯಮವರ್ಗದ ಜನರ ಸಮಸ್ಯೆಗಳನ್ನು ಪ್ರಮುಖವಾಗಿ ಬಿಂಬಿಸುವ ಕಥೆಯನ್ನಾಧರಿಸಿದ `ಮಹಾಪರ್ವ`ವನ್ನು ಪ್ರಾರಂಭಿಸಿದ್ದಾರೆ.

ಈ ಸಮಾರಂಭದಲ್ಲಿ `ಮಾಯಾಮೃಗ`ದ ಬಗ್ಗೆ ಮಾಳವಿಕ, ಮನ್ವಂತರದ ಕುರಿತು ರಮೇಶ್‌ಕುಮಾರ್, ಮುಕ್ತ ಕುರಿತಾಗಿ ನಂದಿನಿ ಹಾಗೂ ಮುಕ್ತಮುಕ್ತದ ಬಗ್ಗೆ ಜಯಶ್ರೀ ಮಾತನಾಡಿದರು.

ನಾಲ್ಕು ಯಶಸ್ವಿ ಧಾರಾವಾಹಿಗಳನ್ನು ಕೊಟ್ಟ ನಂತರ ಈ `ಮಹಾಪರ್ವ`ದ ಬಗ್ಗೆ ಜನರು ಅಪಾರ ನಂಬಿಕೆಯಿಟ್ಟುಕೊಂಡಿರುತ್ತಾರೆ. ಅವರ ನಿರೀಕ್ಷೆಯನ್ನು ಕಂಡು ಒಂದು ಕ್ಷಣ ಭಯವಾಗುತ್ತಿದೆ. ಹಿಂದಿನ ಧಾರಾವಾಹಿಗಳಲ್ಲಿ ನಟಿಸಿದ ಕಲಾವಿದರನ್ನು ಬಿಟ್ಟು ಹೊಸಪ್ರತಿಭೆಗಳಿಗೆ ಈ ಧಾರಾವಾಹಿಯಲ್ಲಿ ಅವಕಾಶ ನೀಡುತ್ತಿದ್ದೇನೆ. ವೈರುಧ್ಯಗಳ ನಡುವೆ ಬದುಕುತ್ತಿರುವ ಮನುಷ್ಯನ ಜೀವನ ಕುರಿತಾಗಿ ಈ ಧಾರಾವಾಹಿ ಮೂಡಿಬರಲಿದೆ ಎಂದು ನಿರ್ದೇಶಕ ಟಿ.ಎನ್.ಸೀತಾರಾಂ ತಿಳಿಸಿದರು.

ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ ನಾನು ಕಳೆದ ೨೬ವರ್ಷದಿಂದ ಹೋರಾಟ ಮಾಡಿತ್ತಿದ್ದರು ಯಾರು ನನಗೊಂದು ದೂರವಾಣಿ ಕರೆ ಮಾಡಿರಲಿಲ್ಲ. ಆದರೆ ಸೀತಾರಾಂರ ಧಾರಾವಾಹಿಯಲ್ಲಿ ಪಾತ್ರಮಾಡಿ ಅದು ಪ್ರಸಾರವಾದ ದಿನದಿಂದಲ್ಲೇ ನೂರಾರು ಕರೆಗಳು ನನಗೆ ಬಂದವು. ದೃಶ್ಯ ಮಾಧ್ಯಮ ಇಷ್ಟೊಂದು ಪ್ರಬಲ ಎಂದು ನನಗೆ ಆಗಲೇ ಗೊತ್ತಾಗಿದ್ದು ಎಂದರು.

ಶಾಸಕರಾದ ವೈ.ಎಸ್.ವಿ.ದತ್ತ, ರಮೇಶ್‌ಕುಮಾರ್ ಹಾಗೂ ಸಚಿವರಾದ ಶ್ರೀನಿವಾಸಪ್ರಸಾದ್ ತಮ್ಮ ಹಾಗೂ ಸೀತಾರಾಂ ಅವರ ನಡುವಿನ ಆತ್ಮೀಯ ಗೆಳೆತನದ ಬಗ್ಗೆ ಹೇಳಿಕೊಂಡು `ಮಹಾಪರ್ವ`ಕ್ಕೆ ಶುಭಕೋರಿದರು. ಶ್ರೀನಿವಾಸ್.ಜಿ.ಕಪ್ಪಣ್ಣ ಕಾರ್ಯಕ್ರಮ ನಿರೂಪಿಸಿದರು.
-4/06/13
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore