HOME
CINEMA NEWS
GALLERY
TV NEWS
REVIEWS
CONTACT US

ಎಂ.ಎನ್.ಕುಮಾರ್, ಜಯಶ್ರೀದೇವಿ, ಎ.ಹರ್ಷ ಮತ್ತು ಪುನೀತ್ ರಾಜ್‍ಕುಮಾರ್ ಮಹಾಸಂಗಮ!
ಎಂ.ಎನ್.ಕೆ. ಮೂವೀಸ್ ಲಾಂಛನದಲ್ಲಿ ಖ್ಯಾತ ವಿತರಕ ಎಂ.ಎನ್. ಕುಮಾರ್ ಮತ್ತು ಹಿರಿಯ ನಿರ್ಮಾಪಕಿ ಜಯಶ್ರೀದೇವಿ ನಿರ್ಮಾಣದಲ್ಲಿ, ನಂದ ಕಿಶೋರ ನಿರ್ದೇಶನದ, ಉಪೇಂದ್ರ ಮತ್ತು ಸುದೀಪ ಅಭಿನಯದ `ಮುಕುಂದ ಮುರಾರಿ' ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಾ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದೆ.

`ಮುಕುಂದ ಮುರಾರಿ' ಚಿತ್ರದ ಅಭೂತಪೂರ್ವ ಗೆಲುವಿನ ಬೆನ್ನಲ್ಲೇ ಎಂ.ಎನ್.ಕೆ ಮೂವೀಸ್ ಅಡಿಯಲ್ಲಿ ಎಂ.ಎನ್. ಕುಮಾರ್ ಮತ್ತು ಜಯಶ್ರೀದೇವಿ ಜಂಟಿ ನಿರ್ಮಾಣದಲ್ಲಿ ಮತ್ತೊಂದು ಚಿತ್ರ ಆರಂಭವಾಗುತ್ತಿದೆ. ಈ ಚಿತ್ರ 2017ರ ಜನವರಿ ತಿಂಗಳಲ್ಲಿ ಆರಂಭವಾಗಲಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದಾರೆ. ಇನ್ನೂ ಚಿತ್ರದ ಶೀರ್ಷಿಕೆ, ತಾರಾಗಣ, ತಾಂತ್ರಿಕ ವರ್ಗ ಆಯ್ಕೆ ಪ್ರಕ್ರಿಯೆಯಲ್ಲಿದೆ. ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ಎಂದೇ ಹೆಸರಾಗಿರುವ ಎ. ಹರ್ಷ ನಿರ್ದೇಶಿಸಲಿದ್ದಾರೆ.

ನೃತ್ಯ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದ್ದ ಎ. ಹರ್ಷ ಗೆಳೆಯ ಚಿತ್ರದ ಮೂಲಕ ಸಿನಿಮಾ ನಿರ್ದೇಶನವನ್ನೂ ಆರಂಭಿಸಿ ನಂತರ ಬಿರುಗಾಳಿ, ಚಿಂಗಾರಿ, ಭಜರಂಗಿ, ವಜ್ರಕಾಯ ಮತ್ತು ಜೈ ಮಾರುತಿ 800 ಚಿತ್ರಗಳೊಂದಿಗೆ ಒಂದರ ಹಿಂದೆ ಒಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದವರು. ಪ್ರಜ್ವಲ್ ದೇವರಾಜ್, ಚೇತನ್, ದರ್ಶನ್, ಶಿವರಾಜ್ ಕುಮಾರ್ ಮತ್ತು ಶರಣ್ ಸೇರಿದಂತೆ ಸರದಿಯಲ್ಲಿ ದೊಡ್ಡ ಹೀರೋಗಳ ಸಿನಿಮಾಗಳನ್ನು ನಿರ್ದೇಶಿಸುತ್ತಾ ಬಂದ ಹರ್ಷ ಅವರಿಗೆ ಪುನೀತ್ ರಾಜ್ ಕುಮಾರ್ ಅವರಿಗಾಗಿ ಚಿತ್ರವೊಂದನ್ನು ನಿರ್ದೇಶಿಸಬೇಕು ಎನ್ನುವುದು ಬಹುಕಾಲದ ಕನಸಾಗಿತ್ತು. ಅದು ಎಂ.ಎನ್. ಕುಮಾರ್ ಮತ್ತು ಜಯಶ್ರೀ ದೇವಿ ಎಂಬ ಇಬ್ಬರು ದಿಗ್ಗಜ ನಿರ್ಮಾಪಕರ ಜಂಟಿ ನಿರ್ಮಾಣದಲ್ಲಿ ಸಾಕಾರಗೊಳ್ಳುತ್ತಿದೆ.

ನಿರ್ಮಾಪಕಿ ಜಯಶ್ರೀದೇವಿ ನಿರ್ಮಾಣ ಶ್ರೀಮಂತಿಕೆಗೇ ಹೆಸರಾದವರು. ಕನ್ನಡದಲ್ಲಿ ಅವರು ನಿರ್ಮಿಸಿದ ಬಹುತೇಕ ಎಲ್ಲ ಚಿತ್ರಗಳಲ್ಲೂ ಸ್ಟಾರ್ ನಟರುಗಳೇ ಇದ್ದದ್ದು ವಿಶೇಷ. ಅದರಲ್ಲೂ `ಹಬ್ಬ', ಸ್ನೇಹಲೋಕ, ವಂದೇ ಮಾತರಂ, ಶ್ರೀಮಂಜುನಾಥ ಸೇರಿದಂತೆ ಅನೇಕ ಮಲ್ಟಿ ಸ್ಟಾರ್ ಸಿನಿಮಾಗಳನ್ನು ನಿರ್ಮಿಸಿದ ಕೀರ್ತಿ ಜಯಶ್ರೀ ದೇವಿ ಅವರದ್ದು. ಇಂಥ ಜಯಶ್ರೀ ದೇವಿ ಅವರು ಕಳೆದ ಏಳು ವರ್ಷಗಳ ಅಜ್ಞಾತವಾಸದಿಂದ ಹೊರಬಂದು ನಿರ್ಮಿಸಿರುವ ಮುಕುಂದ ಮುರಾರಿ ಬಾಕ್ಸ್ ಆಫೀಸ್ ಕಲೆಕ್ಷನ್‍ನಲ್ಲಿ ದಾಖಲೆ ನಿರ್ಮಿಸುವುದರ ಜೊತೆಗೆ ಪ್ರೇಕ್ಷಕರನ್ನೂ ಅಪಾರವಾಗಿ ಸೆಳೆದಿದೆ.

ಎಂ.ಎನ್. ಕುಮಾರ್ ಅವರು ಕೂಡಾ ಕನ್ನಡದ ಅನೇಕ ಚಿತ್ರಗಳನ್ನು ವಿತರಣೆ ಮಾಡುತ್ತಾ, ಜೊತೆಜೊತೆಗೇ ಸಿನಿಮಾ ನಿರ್ಮಾಣವನ್ನೂ ಮಾಡುತ್ತಾ ಬಂದವರು. ಈಗ ಎಂ.ಎನ್. ಕುಮಾರ್, ಜಯಶ್ರೀದೇವಿ, ನಿರ್ದೇಶಕ ಎ. ಹರ್ಷ ಮತ್ತು ಪುನೀತ್ ರಾಜ್‍ಕುಮಾರ್ ಒಳಗೊಂದಂತೆ ದೊಡ್ಡ ಮಟ್ಟದ ಗೆಲುವನ್ನು ಕಂಡ ಎಲ್ಲರೂ ಒಂದೆಡೆ ಸೇರಿದ್ದಾರೆ. ಈ ನಾಲ್ಕು ಜನರ ಕಾಂಬಿನೇಷನ್ ನಲ್ಲಿ ನಿರ್ಮಾಣವಾಗುತ್ತಿರುವ, ಬಹುಕೋಟಿ ವೆಚ್ಚದ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮಹತ್ತರವಾದ ಇತಿಹಾಸ ಸೃಷ್ಟಿಸುವುದು ಖಚಿತ ಎನ್ನುವಂತಾಗಿದೆ.

-23/11/16

 
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore