HOME
CINEMA NEWS
GALLERY
TV NEWS
REVIEWS
CONTACT US
"ಎಲ್ಲಕ್ಕಿಂತಲೂ ಮಿಗಿಲಾಗಿ"
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ.

ಒಂದು ಸಮುದ್ರ . ಲಕ್ಷ ಮುತ್ತುಗಳು. ಕೋಟಿ ಕಪ್ಪೆ ಚಿಪ್ಪುಗಳು. ಶತಕೋಟಿ ಮೀನುಗಳು........ ಇವಿಷ್ಟು ಒಂದು ಕಡೇ !
ಒಂದು ಆಕಾಶ. ಸಾವಿರ ಗ್ರಹಗಳು. ಲಕ್ಷ ಮಿಂಚುಗಳು ಕೋಟಿ ತಾರೆಗಳು........ ಇವಿಷ್ಟು ಇನ್ನೊಂದು ಕಡೆ..... !
ಇಲ್ಲೆಲ್ಲೂ ಯಾವ ಭೇಧಗಳು ಕಾಣಿಸುವುದಿಲ್ಲ......

ಆದರೇ....... ಇರುವುದು ಒಂದೇ ಭೂಮಿ , ಹಲವು ಕೋಟಿಗಳು ಮೀರುವ ಸಂಖ್ಯೆಯಲ್ಲಿ ಕೋಟಿ ಕೋಟಿ ಜನ . ಅದಕ್ಕೂ ಮೀರಿದ ಆಸೆಗಳು, ಆಸೆಗಳಿಗೂ ಮೀರಿದ ಆಮಿಷಗಳು ಅದಕ್ಕೂ ಮೀರಿ ಆವೇಶಗಳು....

ಸುಮ್ಮನೆ ಗಮನಿಸಿ ನೋಡೋಣಾ ಕೇವಲ ಭೂಮಿಯಲ್ಲಿ ಮಾತ್ರ. ಜನರು ಇರುವ ಕಡೆ ಮಾತ್ರ. ನೆಮ್ಮದಿಯ ಸಾವು. ಹೆಜ್ಜೆಗೆ ನೂರೆಂಟು ನೋವು. ಬದಲಾಗಬೇಕಿರುವುದು ಕೇವಲ ಮನುಷ್ಯನ ಮನಸ್ಥಿತಿ,
ಮನಸ್ಥಿತಿಗಳು ಬದಲಾಗಬೇಕಾದರೆ ಮನೋಭಾವಗಳು ಬದಲಾಗಬೇಕಾಗಿದೆ.

ಇಂಥಾ ಮಾತುಗಳನ್ನು ಓದುವಾಗ ಕಬ್ಬಿಣದ ಕಡಲೆ ಎನ್ನಿಸುತ್ತದೆ. ಹಾಡುವಾಗ ಕಠಿಣ ಕೌತುಕ ಎನ್ನಿಸುತ್ತದೆ ಸುಮ್ಮನಿದ್ದರೆ ಬದುಕು ನೀರಸ ಎನ್ನಿಸುತ್ತದೆ. ಹೀಗೆಲ್ಲಾ ಆಗಬಾರದು ಎಂದರೆ......
ನಮ್ಮ ಬುದ್ದಿಶಕ್ತಿಯನ್ನು ಸ್ವಲ್ಪ ಸಾಣೆ ಹಿಡಿದುಕೊಳ್ಳಬೇಕು..... ನಮ್ಮ ತಾಳ್ಮೇಯನ್ನು ಸ್ವಲ್ಪ ಒರೆಹಚ್ಚಿಕೂಳ್ಳಬೇಕು . ಎಲ್ಲಕ್ಕಿಂತಲೂ ಮಿಗಿಲಾಗಿ ಮನಸ್ಸು ಮಗುವಾಗಿದ್ದರೇ....... ನಾಳೆಗಳೂ "ನಗುವಾಗಿರುತ್ತದೆ"
ಇದು "ಪ್ರೀತಿಯಿಂದ"
-23/10/15

"ಶೀಲದ ಸೇವಕ......."
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ........

ಸಹಜವಾಗಿ ಮಾನವ ಸಂಪನ್ಮೂಲ ಎಂಬ ಪದವನ್ನು ಅನೇಕ ಸಾರಿ ಕೇಳುತ್ತಿರುತ್ತೇವೆ. ಅಥವಾ ಹೇಳುತ್ತಿರುತ್ತೇವೆ. ವಾಸ್ತವವಾಗಿ ಅದು ಜನೋಪಯೋಗಿ ವಸ್ತುಗಳ ಬಗ್ಗೆ ಕೇಂದ್ರೀಕೃತವಾಗಿರೋ ವಿಚಾರವೇ ಆದರೂ ತುಸು ನಮ್ಮ ಕಲಾವಿಭಾಗಕ್ಕೆ ಬಂದಿದ್ದಾದರೆ \ ಕಲಾವಿಚಾರಕ್ಕೆ ಬಂದಿದಾದ್ದರೆ, ಎಲ್ಲಿ ನಿಜವಾದ ಮಾನವೀಯತೆ, ಅನುರಾಗ ಹೃದಯಾಂತರಾಳತೆಗಳು ತುಂಬಿರುತ್ತದೋ, ಎಲ್ಲಿ ಅಂಥವುಗಳನ್ನು ಬಳಸುತ್ತೇವೋ, ಬೆಳೆಸುತ್ತೇವೋ, ಅವೇ ನಿಜವಾದ ಸಂಪನ್ಮೂಲಗಳು....| ಎಲ್ಲಿ ಅಂಥಾ ಸಂಪದ್ಭರಿತ ವಿಚಾರಗಳು, ಸಹಾಯಗಳು, ಪ್ರೀತಿಗಳು ಹೆಚ್ಚುತ್ತವೋ..... ಅಂಥಲ್ಲಿ ದೇವರು ಸದಾ ಜೊತೆಯಿರುತ್ತಾನೆ. ಎಲ್ಲಿ ದೇವರು ಜೊತೆಯಿರುತ್ತಾನೋ ಅಂಥಾ ವ್ಯಕ್ತಿಗಳೇ ಶೀಲವಂತರು. ಅವರೊಳಗಿನ ಕಲೆಯೇ ನಿಜವಾದ ಶೀಲ ಎಂಬುದು ಸತ್ಯ.
ಅಂದಹಾಗೆ ಶೀಲ ಎಂಬ ವಿಚಾರಕ್ಕೇ ಬಂದಿದ್ದಾದರೆ...... ಹಿರಿಯರೊಬ್ಬರು ಹೇಳಿದ ಶೀಲದ ಕಥೆಯೊಂದು ನೆನಪಾಗುತ್ತದೆ.

ಈ ಮಾತಿನ ಮಹತ್ವವನ್ನು ನಾವು ಪ್ರಹ್ಲಾದನ ಒಂದು ಕಥೆಯಿಂದ ತಿಳಿದು ಕೊಳ್ಳಬಹುದು. ತನ್ನ ಪುಣ್ಯಕರ್ಮದ ಪ್ರಭಾವದಿಂದ ಪ್ರಹ್ಲಾದನು ಇಂದ್ರ ಪದವಿಯನ್ನು ಗಳಿಸಿದನು. ಹಾಗೂ ಆತನು ದೇವತೆಗಳ ರಾಜನಾದ. ಆಗ ದೇವೆಂದ್ರನು ತನ್ನ ಗುರುಗಳಾದ ಬೃಹಸ್ಪತಿಯ ಬಳಿ ಹೋಗಿ ಹೇಳಿದ: "ಪೂಜ್ಯರೇ, ನನಗೊದಗಿದ ಈ ಕರುಣಾಜನಕ ಸ್ಥಿತಿಯು ನಿಮಗೆ ಗೊತ್ತಿದೆ. ಕಳೆದುಕೊಂಡ ನನ್ನ ರಾಜ್ಯಾಧಿಕಾರವನ್ನು ಪುನಃ ಪಡೆದುಕೊಳ್ಳಲು ನಾನೇನು ಮಾಡಬೇಕು ಎಂಬುದನ್ನು ನನಗೆ ತಿಳಿಸಿ."

ಬೃಹಸ್ಪತಿ ಹೇಳಿದರು, "ದೇವೇಂದ್ರ, ನೀನು ಸಾಮಾನ್ಯ ಯಾಚಕನ ರೂಪದಲ್ಲಿ ಪ್ರಹ್ಲಾದನ ಸನ್ನಿಧಿಗೆ ಹೋಗಬೇಕು. ಆತನು 'ಇಚ್ಛಾದಾನ'ವನ್ನೀಯುವ ಸಮಯಲ್ಲೇ ಹೋಗಬೇಕು. ಆ ಸಂದರ್ಭದಲ್ಲಿ ಯಾಚಕರು ಕೇಳುವುದನ್ನೆಲ್ಲ ಪ್ರಹ್ಲಾದ ಕೊಡುವನು. ನೀನು ಪ್ರಹ್ಲಾದನ ಚಾರಿತ್ರ್ಯ(ಶೀಲ)ದ ಭೀಕ್ಷೆಯನ್ನು ಕೇಳಿಕೋ". ಇಂದ್ರನು ಹಾಗೆಯೇ ಮಾಡಿದ.

ಆಗ ಪ್ರಹ್ಲಾದ ಕೇಳಿದ. "ಕೇವಲ ನನ್ನ ಶೀಲದಿಂದ ನೀವು ತೃಪ್ತರಾಗುವುದೇಕೆ.?" "ನನಗೆ ಅಷ್ಟೇ ಬೇಕಾಗಿದೆ!" ಇಂದ್ರ ಉತ್ತರಿಸಿದ. "ಆಗಲಿ" ಎಂದು ಪ್ರಹ್ಲಾದನು ನುಡಿಯುತ್ತಲೇ, ಆತನ ಶರೀರದಿಂದ ದೇದೀಪ್ಯಮಾನವಾದ ಒಂದು ಶಕ್ತಿಯು ಹೊರಬಿದ್ದಿತು ಮತ್ತು ಇಂದ್ರನ ಶರೀರವನ್ನು ಸೇರಿಕೊಂಡಿತು.

ಪ್ರಹ್ಲಾದ ಕೇಳಿದ: ":ನೀನಾರು ? ನನ್ನ ಶರೀರದಿಂದ ಹೊರಬಿದ್ದು ಯಾಚಕನ ಶರೀರವನ್ನು ಪ್ರವೇಶಿಸುತ್ತಿರುವುದೇಕೆ?" ಆ ತೇಜಸ್ವಿ ಅಶರೀರ ಆಕೃತಿಯು ಉತ್ತರಿಸಿತು, " ನಾನು ನಿನ್ನ ಶೀಲವಾಗಿದ್ದೇನೆ. ನೀನು ನನ್ನನ್ನು ದಾನ ಮಾಡಿರುವುದರಿಂದ ನಾನು ಯಾಚಕನ ಶರೀರವನ್ನ ಪ್ರವೇಶಿಸುತ್ತಿದ್ದೇನೆ."

ಮರುಕ್ಷಣವೇ ಇನ್ನೊಂದು ದೇದೀಪ್ಯಮಾನ ಆಕೃತಿಯು ಹೊರಬಂದಿತು. ಪ್ರಹ್ಲಾದನು ಕೇಳಿದ "ನೀನಾರು? ನನ್ನ ದೇಹವನ್ನೇಕೆ ಬಿಟ್ಟು ಹೋಗುತ್ತಿರುವೆ?" " ನಾನು ನಿನ್ನ ಶೌರ್ಯವಾಗಿದ್ದೇನೆ. ನಾನು ಶೀಲದ ಸೇವಕನಾಗಿರುವೆ. ನಿನ್ನಲ್ಲಿ ಶೀಲ ಇದ್ದಾಗಿನವರೆಗೆ ನಾನು ಸೇವೆ ಮಾಡಿಕೊಂಡಿದ್ದೆ. ಈಗ ಶೀಲವು ಹೊರಟು ಹೋಗುತ್ತಿರುವುದರಿಂದ ನಾನೂ ಅದನ್ನು ಅನುಸರಿಸುತ್ತಿದ್ದೇನೆ" ಹೀಗೇ ಇನ್ನೂ ಒಂದೊಂದಾಗಿ ಕೆಲವು ತೇಜಸ್ವೀ ಆಕೃತಿಗಳು ಆತನ ಶರೀರವನ್ನು ಬಿಟ್ಟು ಹೊರಟು ಹೊದವು ತೀರಾ ಕೊನೆಯಲ್ಲಿ ಒಂದು ದೇದೀಪ್ಯಮಾನವಾದ ಸ್ತ್ರಿ-ರೂಪವು ಆತನ ದೇಹದಿಂದ ಹೊರಬಿದ್ದಿತು. ಆಕೆ ಹೇಳಿದಳು, "ನಾನು ನಿಮ್ಮ ರಾಜಶ್ರೀಯಾಗಿದ್ದೇನೆ. ನಾನೂ ಸಹ ಶೀಲದ ಸೇವಕಿಯಾಗಿದ್ದೇನೆ. ಎಂದೇ ನಾನು ಆ ಶೀಲದ ಬಳಿಗೆ ಹೋಗುತ್ತಿದ್ದೇನೆ,"

ಇದರ ಪರಿಣಾಮವಾಗಿ ಪ್ರಹ್ಲಾದನ ಇಡೀ ರಾಜ್ಯಾಧಿಕಾರ ಮತ್ತು ವೈಭವ ಅಳಿದು ಹೋಯಿತು ಮತ್ತು ಇಂದ್ರನು ಪುನಃ ತನ್ನ ಸಿಂಹಾಸನವನ್ನು ವಶಪಡಿಸಿಕೊಂಡನು.
ಸಾರಾಂಶವಿಷ್ಟೇ..... ಚಾರಿತ್ರ್ಯದಿಂದದಾಗಿ ಎಲ್ಲವೂ ಲಭಿಸಬಲ್ಲುದು, ಚಾರಿತ್ರ್ಯವಿಲ್ಲದಿದ್ದಲ್ಲಿ ಎಲ್ಲವೂ ಮನುಷ್ಯನಿಂದ ದೂರವಾಗುತ್ತವೆ.
ಹಾಗಾಗಿ ಗೆಳೆಯರೇ ಪ್ರೀತಿಯ ಕಲೆಯನ್ನೂ, ಕಲೆಯ ಶೀಲವನ್ನೂ, ಶೀಲದ ಹೆಸರನ್ನೂ...... ಹೃದಯವಂತಿಕೆಯಿಂದ ಕಾಪಾಡಿಕೋಳ್ಳೊಣ.
ಇದು"ಪ್ರೀತಿ"ಯಿಂದ
-21/08/15

ಹಸಿರು ಹಸಿರಾಗಿರುವುದು . . . . .
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ . . .

ನಮ್ಮ ಬದುಕಿನಲ್ಲಿ ಮುಖ್ಯವಾಗಿ ಮೂರು ಬಗೆಯ ಕವಲುಗಳು ಇರುತ್ತವೆ. ಮೊದಲನೆಯ ಕವಲು, ವಿಸ್ತಾರವಾದ ಬದುಕು. ಎರಡನೆಯ ಕವಲು, ವಿಶಾಲವಾದ ಬದುಕು. ಮೂರನೆಯ ಕವಲು, ವಿಸ್ತೀರ್ಣವಾದ ಬದುಕು.

ಮೇಲ್ನೋಟಕ್ಕೆ ವಿಸ್ತಾರ, ವಿಶಾಲ ಮತ್ತು ವಿಸ್ತೀರ್ಣ ; ಈ ಮೂರೂ ಪದಗಳು ಒಂದೇ ಅರ್ಥವನ್ನು ಪ್ರತಿಬಿಂಬಿಸುವಂತಿದ್ದರೂ ಸ್ವಲ್ಪ ಆಳಕ್ಕಿಳಿದು ಹೋದರೆ ಒಂದಕ್ಕೊಂದು ಸಂಬಂಧವೇ ಇಲ್ಲದಂತ ವಿಭಿನ್ನತೆಗಳು ಹಾಗೂ ಭಿನ್ನತೆಗಳು ಕಾಣಿಸುತ್ತವೆ.

ನೇರವಾಗಿ ಹೇಳಬೇಕೆಂದರೆ ವಿಸ್ತಾರ ಎಂಬಲ್ಲಿ ಅನುಭವ, ವಿಶಾಲ ಎಂಬಲ್ಲಿ ಮನಸ್ಥಿತಿ, ವಿಸ್ತೀರ್ಣ ಎಂಬಲ್ಲಿ ನಿಂತ ನೆಲ ಅಥವಾ ಪರಿಸ್ಥಿತಿ. ಈ ಮೂರೂ ಅಡಗಿರುತ್ತವೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ದೊಡ್ಡವರು ಹೇಳಿದ ಹಾಗೆ ಸೃಷ್ಟಿ, ಸ್ಥಿತಿ, ಲಯ ಅಥವಾ . . . ಮಂದ್ರ, ಮಧ್ಯಮ, ತಾರಕ . . . ಅಥವಾ ಏಳು, ಬೀಳು, ಬಾಳು . . . ಹೀಗೆ ಏನನ್ನಾದರೂ ಹೇಗೆ ಬೇಕಾದರೂ ಅರ್ಥ ಮಾಡಿಕೊಂಡು ಮುಂದುವರೆಯಬಹುದು.

ಇನ್ನೂ ನೇರವಾಗಿ ಹೇಳುವುದಾದರೆ ಎಲ್ಲವನ್ನೂ ಮರೆತು ಎಲ್ಲಾ ಆಲೋಚನೆಗಳಿಗೂ ಬೀಗ ಹಾಕಿ ತೆಪ್ಪಗೆ ಕುಳಿತುಬಿಡುವುದು.
ಈ ಪ್ರಪಂಚದಲ್ಲಿ ಅದೆಂಥಾ ಕಷ್ಟವಾದ ಕೆಲಸವನ್ನಾದರೂ ಕ್ಷಣದಲ್ಲೇ ಮಾಡಿಬಿಡಬಹುದು. ಆದರೆ, ಕ್ಷಣ ಮಾತ್ರವೂ ತೆಪ್ಪಗೆ ಇರಲು ಸಾಧ್ಯವಿಲ್ಲ.

ಈ ಬದುಕಿನ 'ತೆಪ್ಪ'ದಲ್ಲಿ ತೆಪ್ಪಗೆ ಸಾಗುವುದೇ ನಿಜವಾದ ಸಾಧನೆ, ನಿಜವಾದ ಧೋರಣೆ. ಇವು ನಮಗೆ ಅರ್ಥವಾಗುವಷ್ಟರಲ್ಲಿ ಬೇಗ ಬೇಗ ವಯಸ್ಸಾಗಿಬಿಡುವುದೇ ಒಂದು ಸೋಜಿಗ.
ಮಹಾತ್ಮ ಗಾಂಧಿಯವರು ಅಹಿಂಸೆಯನ್ನು ಸಾರಿದರು, ವಿವೇಕಾನಂದರು ಆತ್ಮವಿಶ್ವಾಸವನ್ನು ಹೇರಿದರು, ಅರವಿಂದ್ ಘೋಷ್ ರು ಸಹಬಾಳ್ವೆಯನ್ನು ಘೋಷಿಸಿದರು, ಅರಿಸ್ಟಾಟೆಲ್ ಅರಿವನ್ನು ಪೋಷಿಸಿದರು. ಆದರೂ, ಈ ಮನುಷ್ಯನೆಂಬ ಪ್ರಾಣಿಯ ದೇಹದಲ್ಲಿ ಅಹಂಕಾರದ ರಕ್ತಬೀಜಾಸುರರು ಮೇಲ್ಕಂಡ ಮಾತುಗಳಿಗೆ ಕಿವಿಗೊಡಲು ಬಿಡುತ್ತಲೇ ಇಲ್ಲ.

ಈ ಬದುಕಿನ ಧ್ಯೇಯ ಎಂದರೆ ಸುಮ್ಮನಿದ್ದೇವೆ ಎಂದುಕೊಂಡು ಸುಮ್ಮನಿರುವುದು ಎಂದು ಅರ್ಥವಲ್ಲ. "ಸುಮ್ಮನಿರುವುದನ್ನೂ ತಿಳಿಯದೆ ಸುಮ್ಮನಿರುವುದು". ಇಂಥಾ ಹಲವಾರು ಸೂಕ್ಷ್ಮಗಳು ಎಲ್ಲಿ ಒಡಕಿಲ್ಲದೆ ಒಡಮೂಡುತ್ತಿರುವುವೋ ಅಂತಲ್ಲಿ ಮಾತ್ರ ನಿಜವಾದ ಕಲಾವಿದ ಉದಯಿಸುತ್ತಾನೆ. ಅಂಥಾ ಉದಯೋನ್ಮುಖ ಕಲಾವಿದರಿಗೆಲ್ಲಾ ಹೃದಯಪೂರ್ವಕ ಅಭಿನಂದನೆಗಳು.
ಎಲ್ಲಿ ಹೃದಯಗಳಿಂದ ಹುಟ್ಟೋ ಅಭಿನಂದನೆಗಳು ನೇರವಾಗಿ ಹೃದಯಗಳಿಗೇ ತಾಕುವುದೋ ಅಲ್ಲಿ ಮಾತ್ರ "ಕಲೆ" ಎಂಬ ಹಸಿರು ಸದಾ ಕಾಲ ಹಸಿರಾಗಿರುವುದು.
ಇದು "ಪ್ರೀತಿ"ಯಿಂದ
-21/07/15

ಕೇಳುವ ಮನಸ್ಸಿಧ್ದರೆ....
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ........

ಪ್ರತೀ ದಿನವೂ ನಾವು ಒಬ್ಬೊಬ್ಬ ಸಾಧಕರ ಅನುಭವಗಳ ಮಾತುಗಳನ್ನು ಓದುತ್ತಾ... ಕೇಳುತ್ತಾ... ಅನುಸರಿಸುತ್ತಾ.. ನಡೆಯುತ್ತಿದ್ದರೆ, ನಮ್ಮ ಪ್ರತೀ ಹೆಜ್ಜೆಗಳಲೂ. ... ಯಶಸ್ಸನ್ನೇ ಕಾಣಬಹುದು.
ಅರಿತವರ ಅಂತರಾಳವನ್ನು ಕೇಳುವ ಮನಸ್ಸಿಧ್ದರೆ, ಅರಿಯುವ ತಾಳ್ಮೆಯಿದ್ದರೆ ಬದುಕು ನಿರಂತರ ಹಸಿರ ಉತ್ಸವ ಆಗುವುದರಲ್ಲಿ ಯಾವ ಸಂಶಯವೂ ಇರುವುದಿಲ್ಲ .

ಒಮ್ಮೆ ಶ್ರೀರಾಮಕೃಷ ಪರಮಹಂಸರು ಒಬ್ಬ ಸಾಧು ಎಂಬುವವನು ಯಾವ ರೀತಿ ಇರುತ್ತಾನೆ ಎಂಬುದರ ಕುರಿತು ಈ ರೀತಿ ಹೇಳಿದ್ದರು.... ಯಾರ ಮನಸ್ಸು , ಪ್ರಾಣ, ಅಂತರಾತ್ಮ ಭಗವದ್ಗತವಾಗಿದೆಯೋ.. ಆತನೇ ಸಾಧು. ಯಾರು ಕಾಮಕಾಂಚನ ತ್ಯಾಗಿಯೋ ಆತನೇ ಸಾಧು. ಯಾರು ಸಾಧುವೋ... ಆತ ಹೆಂಗಸರನ್ನು ಎಂದಿಗೂ ಐಹಿಕ ದೃಷ್ಟಿಯಿಂದ ನೋಡುವುದಿಲ್ಲ. ಸರ್ವದಾ ಅವರಿಂದ ದೂರದಲ್ಲೇ ಇರುತ್ತಾನೆ. ಒಂದು ಪಕ್ಷ ಅವರನ್ನು ಸಮೀಪಿಸಬೇಕಾಗಿ ಬಂದರೆ ಅವರನ್ನು ಮಾತೃದೃಷ್ಟಿಯಿಂದ ನೋಡುತಾ.... ಅವರನ್ನು ಪೂಜೆ ಮಾಡುತ್ತಾನೆ. ಸಾಧು ಎಂಬುವವನು ಯಾವಾಗಲೂ ಭಗವಚ್ಚಿಂತನೆಯನ್ನೇ ಮಾಡುತ್ತಾನೆ. ಭಗವತ್ಸಂಬಂಧವಾಗಿ ಹೊರತು ಬೇರೆ ಯಾವ ಮಾತನ್ನೂ ಆಡುವುದಿಲ್ಲ. ಆತ ಸರ್ವಭೂತಗಳಲ್ಲಿಯೂ ಭಗವಂತನೇ ಇದ್ದಾನೆ ಎಂಬುದನ್ನು ಅರಿತು ಅವರ ಸೇವೆಯನ್ನು ಮಾಡುತ್ತಾನೆ. ಸಾಮಾನ್ಯವಾಗಿ ಇವು ಸಾಧುವಿನ ಲಕ್ಷಣಗಳು.

ಈ ಮಾತನ್ನು ಕೇಳಿದ ನೆರೆಯವರು: ಹಾಗಾದರೆ ಎಲ್ಲರೂ ನಿರ್ಜನ ಪ್ರದೇಶದಲ್ಲಿಯೇ ಯಾವಾಗಲೂ ಇದ್ದುಕೊಂಡಿರಬೇಕಾಗುತ್ತದೆಯೇ? ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಶ್ರೀರಾಮಕೃಷ್ಣರು: ಪುಟ್ ಪಾತಿನಲ್ಲಿರುವ ಮರಗಳನ್ನು ನೀನು ನೋಡಿಲ್ಲವೆನೂ ? ಅವು ಸಸಿಯಾಗಿರುವವರೆಗೆ ಬೇಲಿ ಹಾಕಬೇಕು. ಇಲ್ಲದ್ದಿದ್ದರೆ ದನ, ಕರು, ಆಡು, ಅವನ್ನು ತಿಂದುಬಿಡುತ್ತವೆ. ಆದರೆ ಗಿಡದ ಕಾಂಡ ದಪ್ಪವಾಯಿತು ಎಂದರೆ, ಬಳಿಕ ಬೇಲಿ ಬೇಕಾಗಿರುವುದಿಲ್ಲ. ಅನಂತರ ಅದಕ್ಕೆ ಆನೆಯನ್ನು ತಂದು ಕಟ್ಟಿದರೂ ಅದಕ್ಕೆನೂ ಆಗುವುದಿಲ್ಲ. ಅದೇ ರೀತಿಯಾಗಿ ನೀನು ಮನಸ್ಸನ್ನು ಬಲವಾದುದನ್ನಾಗಿ ಮಾಡಿಕೊಂಡುಬಿಟ್ಟಿದ್ದೇ ಆದರೆ, ಇನ್ನು ಚಿಂತೆಯೇನು? ಭಯವೇನು ? ವಿವೇಕವನ್ನು ಗಳಿಸಿಕೊಳ್ಳಲು ಮೊದಲು ಪ್ರಯತ್ನಪಡು. ಕೈಗೆ ಎಣ್ಣೆ ಸವರಿಕೊಂಡು ಹಲಸಿನ ಹಣ್ಣು ಬಿಡಿಸು. ಆಗ ಅದರ ಅಂಟು ಅಂಟಿಕೊಳ್ಳುವದಿಲ್ಲ.

ನೆರೆಯವ:ಯಾವುದಕ್ಕೆ ವಿವೇಕ ಅಂತ ಹೆಸರು ಶ್ರೀರಾಮಕೃಷ್ಣರು: ಭಗವಂತನೊಬ್ಬನೇ ಸತ್ಯ , ಉಳಿದುದೆಲ್ಲಾ ಅಸತ್ಯ ಎಂಬ ವಿಚಾರ.. ಈ ವಿಚಾರವೇ ನಿಜವಾದ ವಿವೇಕ. ಒಮ್ಮೆ ವಿವೇಕ ಎಂಬುದು ನಮ್ಮಲ್ಲಿ ಉದಯವಾಯಿತು ಎಂದರೆ.... ಭಗವಂತನನ್ನು ಅರಿಯಬೇಕು ಎಂಬ ಇಚ್ಛೆಯಾಗುತ್ತದೆ. ಅಂಥಾ ಇಚ್ಛೆ ಅಡಕವಾಗಿರುವುದು ನಮ್ಮ ನಮ್ಮ ದೈನಂದಿನ ಕಾಯಕದಲ್ಲಿ.
ಪ್ರೀತಿಯ ಗೆಳೆಯರೇ.... ನಮ್ಮ ಪರಮಹಂಸರು ಹೇಳಿದ ರೀತಿಯಲ್ಲೇ ನಮ್ಮ ಬಸವಣ್ಣನವರೂ ಸಹ ಹೇಳಿದ್ದು.... ಕಾಯಕವೇ ಕೈಲಾಸ ಎಂಬುದಾಗಿ.

ಇಲ್ಲಿ ಕಾಯಕ ಎಂದರೆ ಕೇವಲ ಕೆಲಸವಲ್ಲ. ನಿರ್ಮಲವಾದ ಮನಸ್ಸಿನಿಂದ ಇದ್ದು, ಯಾರನ್ನೂ ಅವಹೇಳನ ಮಾಡದೆ, ಮುಖದ ಮುಂದೆ ಒಂದು.. ಬೆನ್ನಿನ ಹಿಂದೆ ಒಂದು ಮಾತಾಡದಂತೆ, ನಾನು.. ನನ್ನದು.... ನನ್ನಿಂದಲೇ.. ನನಗಾಗಿಯೇ ಎಂಬ ಅಸಹ್ಯದ ಮಾತನಾಡದೇ ನಮ್ರತೆಯಿಂದ ಹಂಚಿಕೊಂಡು ಬದುಕುವುದು ಎಂದು ಅರ್ಥ. ಸಾವಿರಾರು ಸಾಧಕರು ಇಂಥಾ ಸಾಧುಎನಿಸುವಂಥ
ಸಹಸ್ರಾರು ಕಾಯಕ ಮಂತ್ರಗಳನ್ನು ಹೇಳಿದ್ದಾರೆ. ಅವೆಲ್ಲವನ್ನೂ
ನಮ್ಮ ನಮ್ಮ ನಿತ್ಯ ಉಸಿರಾಟವನ್ನಾಗಿಸಿಕೊಳ್ಳೋಣ.
ಇದು ಪ್ರೀತಿಯಿಂದ
-21/06/2015

ಒಂದು ಸುಂದರ ಜೋಲಾಲಿ
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ......
ಅನೇಕ ಸಾರಿ ನಾವು ನಮ್ಮ ಇತಿಮಿತಿಗಳ ಆಚೆ ಬಂದಿಳಿದು.. ಒಂದಷ್ಟು ವಾತ್ಸಲ್ಯಮಯವಾಗಿ ನಮ್ಮ ನಮ್ಮ ನಡೆ ನುಡಿಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅಂಥಾ ಸವಿಸಮಯಗಳೇ ನಮಗೆ ನಿಜವಾದ ನಿರಾಳತೆ.....ಅನೇಕ. ಹಿರಿಯರು ಹೇಳುತ್ತಲೇ ಬಂದಿರುವ ಒಂದು ಉದಾಹರಣೆ ಇದು.....

ಒಮ್ಮೆ.... ಒಬ್ಬ ಹೆಂಗಸು ತನ್ನ ಆರು ವರ್ಷದ ಮಗನನ್ನು ಮೃಗಾಲಯಕ್ಕೆ ಕರೆದುಕೊಂಡು ಹೋಗುತ್ತಾಳೆ. ಪ್ರಾರಂಭದಲ್ಲಿ ಉಲ್ಲಾಸಕರ ಸೂರ್‍ಯನ ಬೆಳಕಿರುವ ಸಂಜೆಯ ಆ ದಿನ ಇಬ್ಬರೂ ಕೈ ಕೈ ಹಿಡಿದು ನಡೆದು ಹೋಗುತ್ತಿದ್ದಾಗ ಎಲ್ಲವೂ ಖುಷಿ ಮತ್ತು ಹುರುಪಿನಿಂದ ತುಂಬಿರುತ್ತದೆ. ನಂತರ ಆ ಚಿಕ್ಕ ಹುಡುಗ ಹಠಾತ್ತನೆ ತಾಯಿಯಿಂದ ತಪ್ಪಿಸಿಕೊಂಡು ಗುಂಪಿನೊಳಗೆ ಮಾಯವಾಗುತ್ತಾನೆ.

ಅರ್ಧ ಗಂಟೆಯ ಮೇಲೆ ಬಹಳ ಪರದಾಟದ ನಂತರ ಮಗು ತಾನು ಭಯ ಪಟ್ಟಂತೆ ಸಿಂಹದ ಪಂಜರದೊಳಗೆ ಸೇರಿಕೊಂಡಿರಲಿಲ್ಲ. ಆದರೆ ಸಂತೋಷವಾಗಿ ಅಲ್ಲಿದ್ದ ನೀರು ಮತ್ತು ಪಂಜರದಲ್ಲಿದ್ದ ಸಿಂಹವನ್ನು ನೋಡುತ್ತಾ ನಿಂತ್ತಿತ್ತು. ಇದನ್ನು ನೋಡಿದ ಕೂಡಲೆ ಆ ತಾಯಿಗೆ... ಸಮಾಧಾನ ಭಾವನೆಯು ಒಮ್ಮೆಲೇ ಕೋಪಕ್ಕೆ ತಿರುಗಿ ಅವನಿಗೆ ಜೋರಾಗಿ ಹೊಡೆದಳು. ಆಕೆ ಹೊಡೆದ ಒಂದೇ ಏಟಿಗೆ ಆ ಮಗುವಿಗೆ ಆಗಿದ್ದ ಸಂತೋಷವು ಕೋಪದಿಂದ ಕೂಡಿದ ಅಸಮಾಧಾನಕ್ಕೆ ತಿರುಗಿತು. ಅವನು ಜೋರಾಗಿ ಅತ್ತನು.
ನಂತರ ಪಶ್ಚಾತಾಪ ಪಟ್ಟು ತಾಯಿ ಅವನಿಗೆ ಐಸ್‌ಕ್ರೀಂ ಕೋನ್ ಕೊಡಿಸುತ್ತಾಳೆ. ತಕ್ಷಣ ಆ ಮಗುವಿನ ಅಸಮಧಾನವು ಸಂತೋಷವಾಗಿ ಪರಿವರ್ತನೆಗೊಳ್ಳುತ್ತದೆ. ಮತ್ತೆ ಅವರಿಬ್ಬರ ಪ್ರೀತಿ ಪರಸ್ಪರ ಉಕ್ಕಿ ಹರಿಯುತ್ತದೆ.

ಸ್ವಲ್ಪ ಹೊತ್ತಿನ ನಂತರ ಆ ಮಗುವು ಮತ್ತೆ ಇನ್ನೊಂದು ಐಸ್‌ಕ್ರೀಂ ಕೋನ್ ಬೇಕು ಎಂದು ಹಠ ಮಾಡುತ್ತಾನೆ. ಆದರೆ ತಾಯಿ ಒಪ್ಪುವುದಿಲ್ಲ. ಹಾಗಾಗಿ ಆ ದಿನದ ರಾತಿಯ್ರ ಊಟ ಹಾಳಾಗುತ್ತದೆ ಎಂಬುದು ತಾಯಿಯ ಚಿಂತೆ... ಮಗುವಿಗೆ ಕೋಪ ಬರುತ್ತದೆ. ಮತ್ತೊಮ್ಮೆ ತಾಯಿಗೂ... ಕೋಪವುಂಟಾಗುತ್ತದೆ.

ಇಂಥಹ ಹಲವಾರು ಘಟನೆಗಳ ನಂತರ.... ಅತೀ ಪ್ರೀತಿ ಮತ್ತು ಕೋಪಗಳ ಭಾವನೆಗಳಲ್ಲಿ ಮಿಂದು ಕೊನೆಗೆ ತಾಯಿ ಮತ್ತು ಮಗು ಇಬ್ಬರೂ ಸುಸ್ತಾಗಿ ಬಸ್ ಹಿಡಿದು ಮನೆಗೆ ಬರುತ್ತಾರೆ. ಆ ಮಗುವಿಗೆ ನಿದೆ ಹತ್ತುತ್ತದೆ. ತಾಯಿಯ ಭುಜದ ಮೇಲೆ ನೆಮ್ಮದಿಯಿಂದ ಮಲಗಿಬಿಡುತ್ತದೆ. ಇಲ್ಲಿ ಕೋಪತಾಪಗಳೆಲ್ಲವೂ....ಕರಗಿಬಿಡುವ ಐಸ್‌ಕ್ರೀಮ್‌ನಂತೆ... ಪ್ರೀತಿ ಆಪ್ಯಾಯತೆ ಮಾತ್ರ ಅದರ ನಿರಂತರ ತಂಪಿನಂತೆ...

ಪ್ರೀತಿಯ ಸ್ನೇಹಿತರೇ... ಈ ಸಮಾಜದ ವ್ಯವಸ್ಥೆಯಲ್ಲಿರುವ ನಮ್ಮ ನಮ್ಮ ನಡುವಲ್ಲಿ ಪ್ರತಿಯೊಬ್ಬರೂ ಸಹಾ ಒಮ್ಮೊಮ್ಮೆ ತಾಯಿಯಾಗಿ, ಒಮ್ಮೊಮ್ಮೆ ಮಗುವಾಗಿ...ಬದಲಾಗುತ್ತಲೇ ಇರಬೇಕಾಗುತ್ತದೆ. ಆಗ ಮಾತ್ರವೇ ಈ ಬದುಕು ಒಂದು ಸುಂದರ ಜೋಲಾಲಿ ಎಂದು ಅನ್ನಿಸುವುದು.
ಇದುಪ್ರೀತಿಯಿಂದ
-17/05/15

"ಅವರವರ ಮಿತಿಗಳಲ್ಲಿ"
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ . . .

ಅನೇಕ ಸಾರಿ ಮನುಷ್ಯನಿಗೆ ತಾನು ಏನನ್ನು ಕಲಿತುಕೊಂಡಿರುತ್ತಾನೋ, ತಿಳಿದುಕೊಂಡಿರುತ್ತಾನೋ ಅಥವಾ ತನಗೆ ಎಷ್ಟು ಮಾತ್ರ "ಗೊತ್ತು" ಎಂದುಕೊಂಡಿರುತ್ತಾನೋ . . .   ಅವಷ್ಟೇ ನಿಜವಾದ ಪ್ರಪಂಚ . . ಅವಷ್ಟೇ ನಿಜವಾದ ಜ್ಞಾನ ಮತ್ತು ನಿಜವಾದ ಸತ್ಯ ಎಂದುಕೊಂಡಿರುತ್ತಾನೆ.

ಆದರೆ, ವಾಸ್ತವದಲ್ಲಿ ಯಾವುದೇ ಮನುಷ್ಯ ಅದೆಷ್ಟೇ ದೊಡ್ಡ ಜ್ಞಾನವನ್ನು ಸಂಪಾದನೆ ಮಾಡಿದ್ದರೂ, ಅತೀ ಚಿಕ್ಕ ಚಿಕ್ಕ ತಿಳುವಳಿಕೆಗಳನ್ನು ತಿಳಿದುಕೊಳ್ಳುವುದರಲ್ಲಿ ನೂರಕ್ಕೆ ನೂರು ಪಟ್ಟು ಮೂರ್ಖನಾಗಿರುತ್ತಾನೆ. ಆದರೆ, ಅಂಥಾ ಚಿಕ್ಕ ಚಿಕ್ಕ ಸನ್ನಿವೇಶಗಳಲ್ಲೇ, ಅವನನ್ನು ಅವನು ನಿಜವಾಗಿಯೂ ಅರ್ಥ ಮಾಡಿಕೊಂಡು ತಾನಿನ್ನು ಅಂಬೆಗಾಲಿಡುತ್ತಿರುವ ನಿರಂತರ ವಿದ್ಯಾರ್ಥಿ ಎಂಬುದು ಅವನಿಗೆ ಮನವರಿಕೆಯಾಗಬೇಕಾಗುತ್ತದೆ. ಇಂಥಾ ಸೋಜಿಗಗಳಲ್ಲಿ ಅನೇಕ ಹಿರಿಯರು ತಮ ಅನುಭವಗಳನ್ನು ನೀತಿ ಕಥೆಗಳಾಗಿ ಜನರಿಗೆ ಹಂಚುತ್ತಾ ಬಂದಿದ್ದುಂಟು. ಬಹುಶಃ ಎಲ್ಲರಿಗೂ ಗೊತ್ತಿರುವ ಹಾಗೆ ಒಂದು ಪುಟ್ಟ ಉದಾಹರಣೆ.

ಒಂದು ಊರಿಬಲ್ಲಿ ಒಮ್ಮೆ ಪಂಡಿತನೊಬ್ಬನು  ಒಬ್ಬ ರಾಜನನ್ನು ಹೊಗಳುತ್ತಾ ಒಂದು ಪದ್ಯವನ್ನು ಬರೆದನು. ಆ ಪದ್ಯವನ್ನು ಓದಿದ ರಾಜನಿಗೆ ಬಹಳ ಸಂತೋಷವಾಗಿ ಆ ಪಂಡಿತನಿಗೆ ಅಮೂಲ್ಯವಾದ ಮುತ್ತು ರತ್ನಗಳನ್ನು ನೀಡಿ, ಅವನ ಗೌರವಕ್ಕಾಗಿ ಅವನು ವಾಸವಾಗಿದ್ದ ಹಳ್ಳಿಗೆ ಅವನನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಎಲ್ಲಾ ಸಂಭ್ರಮ ಸಡಗರದಿಂದ ಕರೆದೊಯ್ಯಬೇಕೆಂದು ಆಜ್ಞೆ ಮಾಡಿದನು. ಕಹಳೆಯ ಘೋಷಗಳೊಂದಿಗೆ ಪಲ್ಲಕ್ಕಿಯು ಒಂದು ಹಳ್ಳಿಯಲ್ಲಿ ಸಾಗುವಾಗ, ಗೊಲ್ಲ ಯುವಕನೊಬ್ಬ ಕುತೂಹಲದಿಂದ ಪಲ್ಲ್ಲಕ್ಕಿಯನ್ನು  ಹೊತ್ತಿದ್ದವನನ್ನು ಕೇಳಿದನು,
"ನೀನು ಯಾರನ್ನು ಒಯ್ಯುತ್ತಿರುವೆ?"
"ಪಂಡಿತ" ಎಂದು ಅವನು ಉತ್ತರಿಸಿದ. ಹಾಗೆಯೇ ಅವರ ಪ್ರಶ್ನೋತ್ತರ ಮುಂದುವರೆಯಿತು.
"ಒಬ್ಬ ಪಂಡಿತ ಯಾರು?"
"ಒಬ್ಬ ಜ್ಞಾನಿಯಾದ ವ್ಯಕ್ತಿ"
"ಒಬ್ಬ ಜ್ಞಾನಿಯಾದ ವ್ಯಕ್ತಿ ಯಾರು?"
"ಎಲ್ಲವನ್ನೂ ತಿಳಿದ ವ್ಯಕ್ತಿ"
"ಓಹೋ! ಹಾಗಾದರೆ ನಿಜಕ್ಕೂ ಅವರಿಗೆ ಎಲ್ಲವೂ ತಿಳಿದಿದೆಯೇ?"
ತಕ್ಷಣವೇ ಮೆರವಣಿಗೆ ನಿಂತಿತು. ಪಲ್ಲಕ್ಕಿಯಿಂದಾಚೆ ಇಣುಕಿ ನೋಡಿದ ಪಂಡಿತನು, ಅಸಮಾಧಾನದಿಂದ ,
"ಏಕೆ ನಿಲ್ಲಿಸಿದಿರಿ?" ಎಂದು ಕೇಳಿದನು.
ಆಗ ಅವರಲ್ಲೊಬ್ಬ. "ಪಂಡಿತರೇ, ಇಲ್ಲೊಬ್ಬ ಹುಡುಗ ನಮಗೆ ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ" ಎಂದನು.
ಗರ್ವದಿಂದಲೇ ಪಲ್ಲಕ್ಕಿಯಿಂದ ಇಳಿದು ಬಂದ ಪಂಡಿತನು, "ನನಗೆ ಪ್ರಶ್ನೆಯೇ? ಕೇಳು!" ಎಂದನು.
ನಂತರವೇ ಹುಡುಗನು ಕೆಳಗೆ ಬಗ್ಗಿ, ತನ್ನ ಕೈಯ್ಯಲ್ಲಿದ್ದ ಕೋಲಿನಿಂದ ಕೆಲವು ಅಸಮವಾದ ರೇಖೆಗಳನ್ನು ಬರೆದು, "ಇದೇನು ಹೇಳಬಲ್ಲಿರಾ?" ಎಂದು ಕೇಳಿದನು. ಪಂಡಿತನಿಗೆ ಉತ್ತರಿಸಲಾಗಲಿಲ್ಲ. ಏಕೆಂದರೆ ಅದು ಅವನಿಗೆ ತಿಳಿದ ಯಾವ ಅಕ್ಷರದಂತೆಯೂ ಇರಲಿಲ್ಲ. ಒಂದು ಹಾವು ಅಥವಾ ಹಗ್ಗದಂತೆಯೂ ಕೂಡ ಇರಲಿಲ್ಲ. ಹುಡುಗ ನಗುತ್ತಾ, "ಪಂಡಿತರೇ, ಇಷ್ಟು ಸುಲಭವಾದದ್ದು ನಿಮಗೆ ಗೊತ್ತಾಗಲಿಲ್ಲವೇ?" ಎಂದಾಗ ಪಂಡಿತ ತನ್ನ ಸೋಲನ್ನು ಒಪ್ಪಿಕೊಂಡು "ಸರಿ, ಈಗ ನೀನು ಉತ್ತರ ನೀಡು" ಎಂದು ಹೇಳಿದನು.
ಆಗ ಆ ಹುಡುಗ ಉತ್ತರಿಸಿದನು, "ಇದು ನನ್ನ ಜೋಡೆತ್ತುಗಳು ಮೂತ್ರ ಮಾಡುವ ರೀತಿ." ಎಂದು ಹೇಳುತ್ತಾನೆ.
ಆ ಮಾತನ್ನು ಕೇಳಿ, ಪಂಡಿತ ಮತ್ತೊಮ್ಮೆ ವಿದ್ಯಾರ್ಥಿಯಾಗುತ್ತಾನೆ.
ಒಂದಂತೂ ಸತ್ಯ : ಅವರವರ ಪರಿಧಿಯಲ್ಲಿ, ಅವರವರ ವ್ಯಾಪ್ತಿಯಲ್ಲಿ, ಅವರವರ ಮಿತಿಗಳಲ್ಲಿ
ಪ್ರತಿಯೊಬ್ಬರೂ ಸಹ ಪಂಡಿತರೇ ಆಗಿರುತ್ತಾರೆ. ಹಾಗಾಗಿ . . . .  ಹಾಗಾಗಿ . . . ದಯವಿಟ್ಟು . . . .
"ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ನಮ್ಮೆಲ್ಲದಾಗಿರಲಿ".  
- ಇದು "ಪ್ರೀತಿ"ಯಿಂದ
-25/04/15

"ಯಾವುದೇ ಸೋಜಿಗಗಳೂ . . . . . ."
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ...

"ಒಬ್ಬರ ಅನುಭವ ಒಬ್ಬರಿಗೆ ಪಾಠ. ಒಬ್ಬರ ತಿಳುವಳಿಕೆ ಒಬ್ಬರಿಗೆ ಊಟ. ಒಬ್ಬರ ಅಭಿಪ್ರಾಯ ಒಬ್ಬರಿಗೆ ಪೀಠ. ಒಬ್ಬರ ಯಶಸ್ಸು ಇನ್ಯಾರಿಗೋ ಪೇಟ." ಇವು ಕೇವಲ ಪ್ರಾಸಕ್ಕಾಗಿ ಓದುವುದಲ್ಲ. ಬದುಕಿನ ತ್ರಾಸಕ್ಕಾಗಿ ತಿಳಿಯಬೇಕಾದ ವಿಷಯ.
ನೆಚ್ಚಿನ ಗೆಳೆಯರೇ . . .  ಮೊದಲಿಗೆ ಈ ಯುಗಾದಿ ತಿಂಗಳ ಹೃತ್ಪೂರ್ವಕ ಶುಭಾಶಯಗಳು. ಯುಗಾದಿ ಎಂದ ಕೂಡಲೇ ಹೂವು ಚಿಗುರುಗಳೇ ಕಣ್ಣೆದುರಿನ ಟಿ.ವಿ., ಕ್ಯಾಮೆರಾ. ಸಹಜವಾಗಿ ಒಂದು ಹೂವು ಗಿಡದಲ್ಲಿ ಇದ್ದಾಗ ಅದರಲ್ಲಿ ಜೀವವಿರುತ್ತದೆ ಮತ್ತು ಅದರ ಜೀವನದ ಆಕಾರ ಅದರಲ್ಲಿ ಹರಿಯುತ್ತಿರುತ್ತದೆ. ಒಮ್ಮೆ ನಾವು ಅದನ್ನು ಅದು ಹುಟ್ಟಿದ ಆ ಗಿಡದಿಂದ ಕಿತ್ತೊಡನೆ ಅದನ್ನು ಪರೀಕ್ಷಿಸಲು ಪರೀಕ್ಷಾ ಸ್ಥಳಕ್ಕೆ ತೆಗೆದುಕೊಂಡು ಹೋಗುವಷ್ಟರಲ್ಲಿ ಆ ಹೂವು ಬೇರೆಯೇ ಆಗಿರುತ್ತದೆ. ಇಲ್ಲಿ ನಾವುಗಳು ಅದರ ಹೊರನೋಟದಿಂದ ಮರುಳಾಗುತ್ತೇವೆ. ಈಗ ಅದರಲ್ಲಿ ಜೀವ ಹರಿಯುತ್ತಿಲ್ಲ. ನಮಗೆ ಕೇವಲ ಆ ಹೂವಿನಲ್ಲಿರುವ ರಾಸಾಯನಿಕ ಪದಾರ್ಥಗಳ ಬಗ್ಗೆ ತಿಳಿಯಬಹುದೇ ಹೊರತು, ಅದರ ಎದೆಯೊಳಗಿನ ಭಾವನೆಗಳನ್ನಲ್ಲ.

ಇದನ್ನೇ ಒಬ್ಬ ಕವಿಯ ದೃಷ್ಟಿಕೋನದಲ್ಲಿ ನೋಡಿದ್ದಾದರೆ ಆತ ಆ ಹೂವನ್ನು ಗಿಡದಿಂದ ತುಂಡರಿಸುವ ಬದಲು ಆ ಹೂವಿನೊಳಗೆ ಒಂದಾಗಿ ಆಳವಾದ ಪ್ರೇಮದಿಂದ ಅದರೊಳಗಿನ ರಹಸ್ಯದಲ್ಲಿ ಭಾಗವಹಿಸಿಬಿಡಬಲ್ಲ.

ಒಂದು :- ವಿಜ್ಞಾನಿಯ ದೃಷ್ಟಿಕೋನ.
ಮತ್ತೊಂದು :- ಕವಿಯ ದೃಷ್ಟಿಕೋನ.
ಒಬ್ಬನಿಗೆ ವಿವರಣೆ ಮುಖ್ಯ, ಮತ್ತೊಬ್ಬನಿಗೆ ತಿಳುವಳಿಕೆ ಮುಖ್ಯ.
ಇಲ್ಲಿ ಯಾರು ಸರಿ ಯಾರು ತಪ್ಪು ಎಂಬ ಜಿಜ್ಞಾಸೆಗಿಂತ ಆ ಇಬ್ಬರ ದೃಷ್ಟಿಕೋನದಿಂದಲೂ ನಿಖರವಾಗಿ ನೋಡಬಲ್ಲ ಚೈತನ್ಯವಿರುವುದು ಅದನ್ನು ಪೋಷಿಸುವವನಿಗೆ ಮಾತ್ರ.
ಎಲ್ಲಿ ಒಂದು ಆಹ್ಲಾದ, ಆನಂದ, ಅನುಭವ, ಅಂತರಾಳ . . . . . ಈ ನಾಲ್ಕೂ ಒಮ್ಮೇಲೇ ಜೀವಿಸಿರುತ್ತವೋ ಅಂತ ಮನಸ್ಥಿತಿಯೇ . . .  ಈ ಕಾಲದ ಯುವಕ ಮನಸ್ಸುಗಳಿಗೆ ಬೇಕಾಗಿರುವ "ಕ್ವಾಲಿಟಿ". ಅಂತಹ ಕ್ವಾಲಿಟಿಯುಳ್ಳ ಮನಸ್ಸುಗಳು ಈ ಜಗತ್ತಿನಲ್ಲಿ ಏನನ್ನೇ ಆದರೂ ಸಾಧಿಸಿಬಿಡಬಲ್ಲದು.
ಅಂಥಾ ಪ್ರಯತ್ನಗಳು ಕೊರಡು ಕೊನರಿನಲ್ಲಿಯೂ ಸಹ ಮೊಗ್ಗೊಂದನ್ನು ಅರಳಿಸಿ, ಹೂವಾಗಿಸಬಲ್ಲದು.
ತುಸು ಕಾಲ ಚಿಂತೆಗಳನ್ನು ಮೂಟೆಕಟ್ಟಿ ಇರಿಸಿ, ಚಿಂತನೆಗಳ ಚೀಲವನ್ನು ತೆರೆಯುವತ್ತ ಎಲ್ಲರೂ ಮುಂದುವರೆಯೋಣ.
ಇಂದಿನ ತಂತ್ರಜ್ಞಾನದಲ್ಲಿ, ಜಾಗತೀಕರಣದ ಭರಾಟೆಯಲ್ಲಿ, ನಿರ್ಮಲ ಭಾವನೆಗಳು ಹಾಗೂ ನಿಶ್ಚಲ ಪ್ರೇಮಗಳು ಶವಪೆಟ್ಟಿಗೆಯಲ್ಲಿ ಕುಳಿತು ತಾವೇ ತಮಗೆ ಮೊಳೆಯನ್ನು ಹೊಡೆದುಕೊಳ್ಳುವ "ರಿಸ್ಕ್" ತೆಗೆದುಕೊಳ್ಳುತ್ತಿರುವುದು ಒಂದು ಪ್ರಸ್ತುತ ಸೋಜಿಗ . . . ನಿಜವಾಗಿಯೂ ಯುವ ಶಕ್ತಿಗಳು ಕ್ರಿಯಾಶೀಲವಾಗಿ ತಮ್ಮನ್ನು ತಾವು ಈ ಸಮಾಜದ ಎದುರು ತೆರೆದುಕೊಂಡರೆ ಯಾವುದೇ ಸೋಜಿಗಗಳೇ ಆದರೂ ಸುಮ್ಮನೆ ಸೋತುಬಿಡುತ್ತವೆ. ಸತ್ಯಗಳು ಗೆದ್ದುಬಿದುತ್ತವೆ.
-ಇದು "ಪ್ರೀತಿ"ಯಿಂದ
-18/03/15

ಸರ್ವಾಂಗೀಣ ಬೆಳವಣಿಗೆಗೆ.......
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ......

ಪ್ರೇಮಿಗಳ ಹಬ್ಬದ, ಪ್ರೀತಿಯ ಮಾಸದ ಶುಭಾಶಯಗಳು. ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಒಂದಲ್ಲ ಒಂದು ವಿಷಯಗಳಲ್ಲಿ ಒಂದಷ್ಟು ಸ್ವಾಮ್ಯವನ್ನು ಹೊಂದಿರುತ್ತೇವೆ. ಹಾಗೆಯೇ ಒಂದಷ್ಟು ವ್ಯತ್ಯಾಸಗಳನ್ನು ಕಂಡಿರುತ್ತ್ತೇವೆ, ಆದರೆ, ಇಲ್ಲೊಂದು ಮೂಲಭೂತ ಪ್ರಶ್ನೆ ಏನೆಂದರೆ, ಕ್ರಿಯೆ ಎಂಬುದಕ್ಕಿಂತಲೂ.... ಪ್ರತಿಕ್ರಿಯೆ ಎಂಬುದೇ ಬಹಳ ಮುಖ್ಯವಾದದ್ದು,.... ಎಂಬುದನ್ನ ಮರೆಯುತ್ತಾ ಇರುತ್ತೇವೆ.

ಯಾವುದೇ ಒಂದು ವಿಚಾರವನ್ನ ನಾವು ನಮ್ಮ ನಮ್ಮ ಅನುಕೂಲಕ್ಕೆ ಅನುಗುಣವಾಗಿಯೇ ಅರ್ಥ ಮಾಡಿಕೊಳ್ತಾ ಹೋಗುತ್ತಿರುತ್ತೇವೆ, ಅದರಿಂದಾಗಿಯೇ ನಮ್ಮ ಮನಸುಗಳಲ್ಲಿನ ಬಿರುಕು ಹೆಚ್ಚುವುದು. ಯದ್ಭಾವಂ ತದ್ಭವತಿ ಎಂಬ ಮಾತಿಗೆ ಪುಪ್ಠಿ ದೊರೆತಿರುವುದು. ಇದಕ್ಕೆ ಉದಾಹರಣೆಯಾಗಿ ಹಿರಿಯರೊಬ್ಬರು ಹೇಳಿದ ಕತೆ ಹೀಗಿದೆ.

ಒಮ್ಮೆ ಭಗವಾನ್ ಬುದ್ದನು ಒಂದು ದಿನ ರಾತ್ರಿಯವೇಳೆಯಲ್ಲಿ ಉಪದೇಶಿಸುತ್ತಿದ್ದನು... ಅಂದು ಓರ್ವ ಕಳ್ಳನೂ ಸಹ ಇವರ ಪ್ರವಚನವನ್ನು ಕೇಳಲು ಬಂದಿದ್ದ. ಬುದ್ದನು ಮಾತನ್ನು ಮುಂದುವರಿಸುತ್ತ ಅಲ್ಲಿದ್ದ ಜನರಿಗೆ ಹೇಳುತ್ತಾ ಹೋದ...... ನೀವೀಗ ಹೋಗಿ ನಿಮ್ಮ ರಾತ್ರಿಯ ಅಂತಿಮ ಕಾರ್ಯವನ್ನು ಮಾಡಿ. ಎಂದು. ಅಂತಿಮ ಕಾರ್ಯ ಏನೆಂದರೆ, ರಾತ್ರಿಯ ಅಂತಿಮ ಧ್ಯಾನದ ಪ್ರಕ್ರಿಯೆ. ನಿದ್ರೆ ಮಾಡುವುದಕ್ಕೆ ಮುಂಚೆ ಸಮಾಧಿ ಸ್ಥ್ತಿತಿಯಲ್ಲಿ ಮುಳುಗಿ, ನಂತರ ನಿದ್ರೆ ಮಾಡಿ ಎಂಬುದಾಗಿತ್ತು.
ಭಿಕ್ಷುಗಳು ಎದ್ದು ಧ್ಯಾನಮಾಡಲಿಕ್ಕೆ ಹೊರಟು ಹೋದರು. ಆಗ ಅಲ್ಲಿದ್ದ ಕಳ್ಳ ಯೋಚಿಸಿದ, ಸರಿಯಾದ ಸಮಯಕ್ಕೆ ಜ್ಞಾಪಿಸಿದ್ದಾರೆ ! ಅರ್ಧರಾತ್ರಿ ಆಗುತ್ತಿದೆ. ಈಗ ನಾನು ಹೋಗಿ ನನ್ನ ಅಂತಿಮ ಕಾರ್ಯದಲ್ಲಿ ತೊಡಗುವೆ .ಬುದ್ದನು ಬಲು ಅದ್ಭುತ ವ್ಯಕ್ತಿ, ಅವನಿಗೆ ಹೇಗೆ ತಿಳಿಯಿತು. ನಾನು ನನ್ನ ಕೆಲಸದಲ್ಲಿ ತೊಡಗುವೆ ಎಂದು ?!!!!.

ಇದೇ ರೀತಿ ಅಂದು ಓರ್ವ ವೇಶ್ಯೆಯೂ ಅಲ್ಲಿಗೆ ಬಂದಿದ್ದಳು. ಆಕೆಯೂ ಸಹ ಬುದ್ದನ ಆ ಮಾತುಗಳನ್ನ ಕೇಳಿಸಿಕೊಂಡಳು. ಆಕೆಯೂ ಯೊಚಿಸಿದಳು, ಸರಿಯಾಗಿಯೇ ಹೇಳಿದರು, ನಾನೀಗ ಹೋಗಿ ನನ್ನ ವ್ಯಾಪಾರವನ್ನು, ಅಂಗಡಿಯನ್ನು ತೆರೆಯುವ ಹೊತ್ತಾಯಿತು, ಎಂದುಕೊಂಡು ಹೊರಟಳು.

ಈ ಘಟನೆಯ ನಂತರ ಬುದ್ದನು ನಿರಂತರವಾಗಿ ಹೇಳುತ್ತಿದ್ದನು. ಆ ದಿನ ರಾತ್ರಿ ನಾನು ಹೇಳಿದ್ದು ಒಂದೇ ಮಾತನ್ನು, ಆದರೆ ಅರ್ಥಮಾಡಿಕೊಳ್ಳುವವರು ಬೇರೆ ಬೇರೆಯಾಗಿ ಅರ್ಥಮಾಡಿಕೊಂಡರು ಎಂದು.
ನಾವು ಅರ್ಥಮಾಡಿಕೊಳ್ಳುವದು ನಿಮಗೇನು ಬೇಕೊ ಅದನ್ನೇ. ಕಳ್ಳನ ಕಿವಿ ಏನನ್ನೋ ಕೇಳಿಸಿಕೊಳ್ಳುತ್ತದೆ. ವೇಶ್ಯೆಯ ಕಿವಿ ಇನ್ನೇನನ್ನೋ ಕೇಳಿಸಿಕೊಳ್ಳುತ್ತದೆ. ಸಂನ್ಯಾಸಿಯ ಕಿವಿ ಇನ್ನೇನನ್ನೋ ಕೇಳಿಸಿಕೊಳ್ಳುತ್ತದೆ, ಯಾವ ಕಿವಿ ತನಗೆ ಬೇಕಾದ ಅರ್ಥವನ್ನು ಕೇಳಿಸಿಕೊಳ್ಳುವುದೋ..... ಅದು ಕಿವುಡಾಗಲೇಬೆಕು, ಆಗ ಮಾತ್ರ ಅದು ಗುರುಗಳ ವಚನವನ್ನು ಕೇಳಿಸಿಕೊಳ್ಳಬಲ್ಲುದು. ಇಲ್ಲದಿದ್ದರೆ ನಾವು ಗುರುಗಳ ವಚನದಿಂದಲೂ ಸಹ, ನಮಗೆ ಬೇಕಾದ ಅರ್ಥವನ್ನೇ ಕೇಳಿಸಿಕೊಂಡು, ನಮಗೇನು ಬೇಕೋ ಅದನ್ನು ಮಾಡಿ, ಜವಾಬ್ದಾರಿಯನ್ನು ಗುರುಗಳ ಮೇಲೆಯೇ ಹಾಕಿಬಿಡುತ್ತೆವೆ ಅವರು ಹೇಳದೆ ಇರುವ ವಿಚಾರವನ್ನು ಅಥವಾ ಅಭಿಪ್ರ್ರಾಯವನ್ನು ಆಧರಿಸಿ ಹೋಗಲಾರಂಭಿಸುತ್ತೆವೆ.

ನಾವು ದಾರಿ ತಪ್ಪಿದರೂ, ಗುರುಗಳೇ ದಾರಿ ತಪ್ಪಿಸಿದರೆಂದು ಹೇಳುತ್ತೇವೆ. ಆದರೆ ಗುರುಗಳು ಹೇಳುತ್ತಿದ್ದ ವಚನಗಳನ್ನು ಕೇಳಿಸಿಕೊಳ್ಳುತ್ತಿರುವಾಗ ನನ್ನ ಕಿವಿಗಳು ದಾರಿ ತಪ್ಪಿದವು ಎಂದು, ನಾವೆಂದೂ ಹೇಳುವುದಿಲ. ನಮ್ಮ ಕಿವಿಗಳೇ ಅಪಾರ್ಥವನ್ನು ಕಲ್ಪಿಸಿಕೊಂಡದ್ದು ಎಂದು ನಾವೆಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ.

ಹಾಗಾಗಿ ಗೆಳೆಯರೇ, ಗುರು ಹಿರಿಯರು, ಸಾಧಕ, ಸನ್ಯಾಸಿಗಳು ನೀಡುವ ಉಪದೇಶಗಳು ಸದಾ ಸಕಾರಾತ್ಮಕವಾಗಿದ್ದು ಜ್ಞಾನಾರ್ಜನೆಗೆ
ವಿಶೇಷ ಹಾಗೂ ಸರ್ವಾಂಗೀಣ ಬೆಳವಣಿಗೆಗೆ ದಾರಿ ತೋರುತ್ತವೆ. ಕೇಳುವ ಕಿವಿಗಳು ಅದಕ್ಕೆ ಪೂರಕವಾಗಿರಬೇಕು. ಅಥವಾ ಸಮಂಜಸವಾದದ್ದನ್ನು ಕೇಳಲು ಪ್ರಯತ್ನಿಸಬೇಕು. ಮತ್ತು ಸದಾಕಾಲ ಪ್ರತೀ.... ಕ್ರಿಯೆಗಳಿಗೂ.... ಸಕಾರಾತ್ಮಕ ಪ್ರತಿಕ್ರಿಯೆಗಳೊಂದಿಗೇ....... ಬದುಕನ್ನು ಸ್ವೀಕರಿಸೋಣ.
-ಇದುಪ್ರೀತಿಯಿಂದ
-19/02/15

ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ . . .  .
ಮೊದಲಿಗೆ ತಮ್ಮೆಲ್ಲರಿಗೂ ಈ ಮಕರ ಸಂಕ್ರಾಂತಿಯ ಹೃತ್ಪೂರ್ವಕ ಶುಭಾಷಯಗಳು. ಪ್ರತಿಯೊಂದು ಮನೆ, ಮನಗಳಲ್ಲಿ ಸುಗ್ಗಿ ತಾಂಡವವಾಡಲಿ.

ಪ್ರತೀ ದಿವಸಕ್ಕೊಮ್ಮೆ ಒಂದೊಂದು ನೀತಿಗಳನ್ನು ಕಲಿಯುತ್ತಾ ಹೋದರೂ . . . ಇಡೀ ಜನ್ಮ ಸಾಕಾಗುವಷ್ಟು ನಾವು ಕಲಿತಿರುವುದಿಲ್ಲ. ಕಲಿಯುವುದೇನು ಬಂತು? ಓದಲಿಕ್ಕೂ ಸಾಧ್ಯವಿರುವುದಿಲ್ಲ. ಹೀಗಿರುವಾಗ ತಿಂಗಳಿಗೊಂದು ವಿಚಾರವನ್ನು ಅರ್ಥೈಸಿಕೊಂಡು ಪದೇ ಪದೇ ಯುವಕಾರಾಗುವುದರಲ್ಲೇ ಒಂದು ನಿಜವಾದ ಸಂಭ್ರಮವಿರುತ್ತದೆ. ಮೂವತ್ತು ದಿವಸಕ್ಕೆ ಒಂದು ನೀತಿ, ಮೂವತ್ತು ನಿಮಿಷಕ್ಕೆ ಒಂದು ಪ್ರೀತಿ ಸಂಪಾದಿಸುತ್ತ ಈ ಭಾರವಾದ ಬದುಕನ್ನು ಆದಷ್ಟು ಹಗುರ ಮಾಡಿಕೊಳ್ಳೋಣ.

ಒಂದು ಸಾರಿ ಒಬ್ಬನಿಗೆ ಲಾಟರಿಯಿಂದ ಹತ್ತು ಲಕ್ಷ ರೂಪಾಯಿ ಬಂದಿತಂತೆ. ಇದನ್ನು ತಿಳಿದ ಅವನ ಹೆಂಡತಿಗೆ ಹೆದರಿಕೆ ಆಗಿ ಹೋಯಿತು. ಹತ್ತು ಲಕ್ಷ ರೂಪಾಯಿ ಲಾಟರಿ ಬಂದಿದೆ! ಯಜಮಾನರಿಗೆ ಹೇಗೆ ಹೇಳುವುದು?. ಹಾರ್ಟ್ ಅಟ್ಯಾಕ್ ಏನಾದರು ಆಗಿಬಿಟ್ಟರೆ? ಏಕೆಂದರೆ ಸುಖದಿಂದಲೂ ಹಾರ್ಟ್ ಅಟ್ಯಾಕ್ ಆಗುತ್ತದೆ ಎಂದು ಎಲ್ಲೋ ಕೇಳಿದ್ದೆ. ಅದಕ್ಕೆ ಆಕೆ ಪಾದ್ರಿಗಳ ಬಳಿ ಸಲಹೆ ಕೇಳಲು ಹೋದಳು. ಆಗ ಪಾದ್ರಿ ನಾನೂ ಬರುತ್ತೇನೆ ಯೋಚನೆ ಮಾಡಬೇಡಿ. ಇಬ್ಬರೂ ಸೇರಿ ಹೇಳೋಣ ಎಂದರು. ಭಾನುವಾರ ಪಾದ್ರಿ ಅವರ ಮನೆಗೆ ಹೋದರು. ಹೋಗಿ ಆಕೆಯ ಗಂಡನ ಹತ್ತಿರ ನಿಂತು, "ನೋಡಪ್ಪ, ಭಗವಂತ ನಿನ್ನ ಮೇಲೆ ದಯೆ ಮಾಡಿ ನಿನಗೆ ಒಂದು ಲಕ್ಷ ಕೊಟ್ಟುಬಿಟ್ಟ ಎಂದುಕೋ, ಆಗ ನೀನು ಏನು ಮಾಡುತ್ತೀಯ?" ಎಂದು ಕೇಳಿದರು. ಆಗ ಅವನು ಐವತ್ತು ಸಾವಿರವನ್ನು ಚರ್ಚ್ ಗೆ ದೇಣಿಗೆಯಾಗಿ ಕೊಟ್ಟುಬಿಡುತ್ತೇನೆ, ಫಾದರ್." ಎಂದು ಹೇಳಿದ. ಈ ಮಾತನ್ನು ಕೇಳಿದ ಫಾದರ್ ಗೆ ಹಾರ್ಟ್ ಅಟ್ಯಾಕ್ ಆಯಿತು.
ಮತ್ತೊಂದು ಕೇಳುಗೆ . . .
ಒಬ್ಬ ವಿಖ್ಯಾತ ಬೀಗ ಮಾಡುವವನಿದ್ದನು. ಅವನು ತುಂಬಾ ವಿಶೇಷವಾದಂತಹ ಬೀಗಗಳನ್ನು ಮಾಡುತ್ತಿದ್ದನು. ಒಂದು ಸಲ ಅವನು ರಾತ್ರಿಯಲ್ಲಿ ರಾಜನ ಜೊತೆ ಹೋಗುತ್ತಿರುವಾಗ ದರೋಡೆಕೋರರು ಅವರಿಬ್ಬರಿಗೂ ಬೇಡಿ ಹಾಕಿ ಅವರಲ್ಲಿದ್ದ ಸಂಪತ್ತುಗಳನ್ನು ದೋಚಿಕೊಂಡು ಪರಾರಿಯಾದರು. ಆಗ ರಾಜ ನನಗೆ ಏನೂ ಚಿಂತೆಯಿಲ್ಲ. ಏಕೆಂದರೆ ನೀನು ನನ್ನ ಜೊತೆ ಇದ್ದೀಯಲ್ಲ. ಇದಕ್ಕೆ ಸರಿಹೊಂದುವ ಬೀಗವನ್ನು ಮಾಡಿ ಬಿಡಿಸುತ್ತೀಯ ಎಂದು.

ಬೆಳಿಗ್ಗೆ ಎದ್ದು ಬೇಡಿಯನ್ನು ಬೀಗವನ್ನು ಹೇಗಿದೆ ಎಂದು ಒಮ್ಮೆ ನೋಡಿದ. ಗೊಳೋ ಎಂದು ಆಳುವುದಕ್ಕೆ ಪ್ರಾರಂಭ ಮಾಡಿದ. ಈ ಬೀಗ ತೆಗೆಯುವುದಕ್ಕೆ ಆಗುವುದಿಲ್ಲ. ಏಕೆಂದರೆ ನಾನೇ ಮಾಡಿದ ಬೀಗ ಇದು. “ನಾನು ಯಾವುದೇ ಕೆಲಸವನ್ನು ಎರಡನೇ ದರ್ಜೆ ಮಾಡಿಲ್ಲ. ನಾನು ಮಾಡಿದ ಬೀಗ ಈಗ ಯಾರೂ ತೆಗೆಯಲು ಸಾಧ್ಯವೇ ಇಲ್ಲ. ಹೊಡೆಯುವುದೂ ಅಷ್ಟೊಂದು ಸುಲಭದ ಕೆಲಸವೂ ಅಲ್ಲ.” ಎಂದು ಹೇಳಿ ಕೈಚೆಲ್ಲಿ ಕುಳಿತುಬಿಟ್ಟ.
ಆತ್ಮೀಯರೇ, ಮನಸಾರೆ ನಕ್ಕು, ಹೃದಯ ಪೂರ್ತಿ ಸಂಕ್ರಾಂತಿಯ ಸಡಗರವನ್ನು ಹಮ್ಮಿಕೊಳ್ಳೋಣ.
-ಇದು'ಪ್ರೀತಿ'ಯಿಂದ
-14/01/15

ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ...
ಈ ಪ್ರಪಂಚ ನಾವು ಅಂದುಕೊಂಡಂತೆ ಅಲ್ಲ. ಆದರೆ, ನಾವು ಅಂದುಕೊಂಡಂತೆಯೇ. ಬಿಸಿಲು, ಮಳೆ, ಗಾಳಿ, ನೀರು, ಬೆಳಕು, ದಿಕ್ಕು, ದೆಸೆ, ವೇಗ, ತಿರುವು, ಒಳ್ಳೆಯದು, ಒಳ್ಳೆಯದಲ್ಲದ್ದು, ಬೇಕಾಗಿರುವುದು, ಬೇಕಾಗಿಲ್ಲದ್ದು, ಇರುವುದು, ಇಲ್ಲದಿರುವುದು, ಪಡೆಯುವುದು, ಪಡೆಯಲಾಗದ್ದು,,, ಇಂಥಹ ಸಾವಿರ ಸಾವಿರ ವಿಚಾರಗಳಲ್ಲೂ ಗೋಚರಿಸುವುದು ಏನೆಂದರೇ . . . . . .ಯಾವುದೇ ಎರಡು ವಸ್ತುಗಳಾಗಲೀ, ವಿಚಾರಗಳಾಗಲೀ, ವ್ಯಕ್ತಿಗಳಾಗಲೀ, ಒಂದಾದರೆ ಮಾತ್ರ ಒಂದು ಹೊಸತನ ಹುಟ್ಟೋದು. ಅಂಥಾ ಹೊಸತನಕ್ಕೆ “ಮಾನವತೆ“ ಎಂದು ಕರೆಯುತ್ತಾರೆ.

ಆದರೆ, ಯಾರೊಬ್ಬರ, ಯಾವುದರ ನೆರವೂ ಇಲ್ಲದೇ ಒಂದೇ ವಸ್ತುವಿನಿಂದ ಅಥವಾ ಒಂದೇ ವಿಷಯದಿಂದ ಹೊಸದೊಂದು ವಿಚಾರ ಸೃಷ್ಟಿಯಾದರೆ ಅಂಥಹ ಹೊಸತನಕ್ಕೆ “ದೇವರ ಇರುವಿಕೆ“ ಎಂದು ಕರೆಯುತ್ತಾರೆ.
ಒಂದು ಕಡೆ ಸ್ವಾಮಿ ಸುಖಬೋಧಾನಂದರು ಒಂದು ಕಥೆಯನ್ನು ಹೀಗೆ ಉಲ್ಲೇಖಿಸಿದ್ದಾರೆ.

ಜಪಾನಿನಲ್ಲಿ ಝೆನ್ ಸಂತರು ತಮ್ಮ ಸಾಧಕರಿಗಾಗಿ ಒಂದು ಧ್ಯಾನ ವಿಧಾನವನ್ನು ತಿಳಿಸುತ್ತಾರೆ. ಅದೇನೆಂದರೆ, ಒಂದು ಕೈಯ್ಯಿಂದ ಚಪ್ಪಾಳೆಯ ದನಿಯನ್ನು ಕೇಳಿಸಿಕೊಳ್ಳಲು ಸಾಧ್ಯವೇ ಎನ್ನುತ್ತಾರೆ!

ಈ ಸಾಧನೆಯನ್ನು ಸಾಧಕರು ವರ್ಷಾನುಗಟ್ಟಲೆ ಮಾಡುತ್ತಾರೆ. ಎರಡೂ ಕೈ ಕೂಡಿಸಿದಾಗ ಬರುವ ಚಪ್ಪಾಳೆಯ ಶಬ್ದವನ್ನೇನೋ ನಾವೆಲ್ಲರೂ ಕೇಳಿಸಿಕೊಂಡಿದ್ದೇವೆ. ಆದರೆ, ಒಂದು ಕೈ ಚಪ್ಪಾಳೆಯ ಶಬ್ದ ಹೇಗೆ ಸಾಧ್ಯ?!
ಆದರೆ ಝೆನ್ ಸಂತರು ಹೇಳುತ್ತಾರೆ, ಒಂದು ಕೈ ಚಪ್ಪಾಳೆಯ ಶಬ್ದವನ್ನು ಕೇಳಿಸಿಕೊಳ್ಳಿ ಎಂದು. ಇದು ಅಸಾಧ್ಯ ಎನಿಸುತ್ತದೆ. ಎಂದಾದರೂ ಒಂದು ಕೈಯ್ಯಿಂದ ಚಪ್ಪಾಳೆ ನಿರ್ಮಿತವಾಗಿದೆಯೇ? ಆದರೆ ಝೆನ್ ಸಂತರ ಪ್ರಕಾರ ಇದು ಸಾಧ್ಯ.
ಕಾಲಕ್ರಮೇಣ ಒಂದು ದಿನ ನಿರಂತರ ಸಾಧನೆಯಿಂದ ಆ ಸಾಧಕನಿಗೆ ಒಂದು ಕೈಯ್ಯಿಂದಲೇ ಶಬ್ದವೊಂದು ಕೇಳಿಬರುವುದು. ಸಾಧಕ ಕೇಳಿಸಿಕೊಳ್ಳುತ್ತಲೇ ಸಾಗಬೇಕು, ಕೇಳಿಸುವವರೆಗೂ ಸಾಧನೆಯಲ್ಲಿ ತೊಡಗಿರಬೇಕು.

ಘರ್ಷಣೆ ಇಲ್ಲದೆ ಜನಿಸುವ ಅಂತಹ ನಾದವೂ ಇದೆ. ಆ ನಾದವನ್ನೇ ನಾವು ಓಂಕಾರ ಎಂದು ಕರೆಯುವುದು. ಅದರಲ್ಲಿ ಎರಡು ಕೈಗಳ ಚಪ್ಪಾಳೆಯ ಹೊಡೆತವಿಲ್ಲ, ಅದು ಸಂಘಾತದಿಂದಲೂ ಹುಟ್ಟುವುದಿಲ್ಲ, ಆಘಾತದಿಂದಲೂ ಹುಟ್ಟುವುದಿಲ್ಲ. ಅದು ಸದಾ ಉಪಸ್ಥಿತವಾಗಿದೆ. ಜೀವನದ ಶೈಲಿಯೂ ಅದಾಗಿದೆ, ಅದು ಜೀವನದೊಂದಿಗೆ ಮಿಡಿಯುತ್ತಿದೆ. ಆದರೆ ಅದು ಅತ್ಯಂತ ಸೂಕ್ಷ್ಮವಾದುದು.

ಸದ್ದಿಲ್ಲದೇ ಮೌನವಾಗಿ ಎಲ್ಲವೂ ಆಗುತ್ತಲೇ ಇರುತ್ತದೆ. ಜೀವನದಲ್ಲಿ ಗಹನವಾದುದು ಎಲ್ಲವೂ ಆಧ್ಯಾತ್ಮಿಕ ಮೌನದಲ್ಲಿ ಆಗುತ್ತಿರುತ್ತದೆ. ಬೀಜ ನೆಲದಲ್ಲಿ ಮೊಳಕೆಯೊಡೆಯುವಾಗ, ಅಲ್ಲಿ ಯಾವ ಗದ್ದಲವೂ ಇಲ್ಲ. ಸಸಿಗಳು ಸದ್ದಿಲ್ಲದೇ ಬೆಳೆಯುತ್ತದೆ, ನಕ್ಷತ್ರಗಳು ಗದ್ದಲವಿಲ್ಲದೆ ಸಾಗುತ್ತವೆ, ಸೂರ್ಯ ಯಾವುದೇ ಗಲಾಟೆ ಮಾಡದೆ ಉದಯಿಸಿರುತ್ತಾನೆ. ಈ ಒಂದು ಅಸ್ತಿತ್ವದ ಸೂಕ್ಷ್ಮತೆಯಲ್ಲಿ ಪರಮ ಮೌನದ ಸಂಗೀತವಿದೆ. ಅದನ್ನು ಅನುಭವಿಸಬೇಕಾದರೆ ನಮ್ಮ ಇಂದ್ರಿಯಗಳೆಲ್ಲವೂ ಅತ್ಯಂತ ಸೂಕ್ಷ್ಮವಾಗಿರುವ ಅಗತ್ಯವಿದೆ.
ಯಾವುದು ಆ ಪಾಠ? ಇಂದ್ರಿಯಗಳನ್ನು ಹಾಳುಗೆಡಹುವುದಲ್ಲ, ಅವುಗಳನ್ನು ಜೀವಂತಗೊಳಿಸಿ, ಅತ್ಯಂತ ಸಂವೇದನಾಶೀಲಗೊಳಿಸಿ, ಪ್ರತಿ ಇಂದ್ರಿಯವೂ ಶುದ್ಧೋತ್ತಮ ಅನುಭವವನ್ನು ಪಡೆಯುವಂತಾದರೆ, ಆಗ ಪ್ರತಿ ಇಂದ್ರಿಯದಿಂದಲೂ ಪರಮಾತ್ಮನ ಅನುಭವ ಉಂಟಾಗುವುದು. ಆಗ ಅದರ ಸ್ವಾದವನ್ನೂ ಅನುಭವಿಸಲು ಆಗುವುದು.

ಪರಮಾತ್ಮನ ಸ್ವಾದ! ಇದು ಬಲು ಅಸಂಗತ ವಿಷಯ ಎಂದೆನಿಸಬಹುದು. ನೀವಿದೇನು ಹೇಳುತ್ತಿರುವಿರಿ ಎಂದು ನೀವು ಕೇಳಬಹುದು. ಪರಮಾತ್ಮನ ದರ್ಶನ ಆಗುವುದು ಎಂಬುದನ್ನು ನಾವು ಸರ್ವೇ ಸಾಮಾನ್ಯವಾಗಿ ಕೇಳಿರುವೆವು. ಹೀಗೆಂದ ಮಾತ್ರಕ್ಕೆ ಪರಮಾತ್ಮನ ಸ್ವಾದವನ್ನು ಅನುಭವಿಸಲಾಗದು ಎಂಬ ಅರ್ಥವನ್ನು ಕಲ್ಪಿಸಬಾರದು. ಜಗತ್ತಿನ ಬಹಳಷ್ಟು ಸಾಧಕರು ತಮ್ಮ ಕಣ್ಣುಗಳನ್ನು ಶುದ್ಧಿಗೊಳಿಸಿಕೊಂಡ ನಂತರ ಪರಮಾತ್ಮನನ್ನು ಅರಸಿರುವರು, ಆದ್ದರಿಂದ ಅವರು ಸಾಕ್ಷಾತ್ಕಾರ, ದರ್ಶನ ಎಂದು ಹೇಳಿದ್ದಾರಷ್ಟೆ, ಇನ್ಯಾವ ಕಾರಣದಿಂದಲೂ ಅಲ್ಲ. ನಾವಂತೂ ನಮ್ಮ ಇಡೀ ಹುಡುಕಾಟದ ಹೆಸರನ್ನೇ ದರ್ಶನ ಎಂದು ಅಂದುಬಿಟ್ಟೆವು. ಮನುಷ್ಯ ಕಣ್ಣುಗಳನ್ನು ಕೇಂದ್ರವಾಗಿಸಿಕೊಂಡಿದ್ದರಿಂದ ಹೀಗೆ ನಾವು ಹೇಳಿಬಿಟ್ಟೆವಷ್ಟೆ.

ಹಾಗಾಗಿ, ಗೆಳೆಯರೇ, ನಾವು ಒಬ್ಬರಾಗಿಯೂ ಸಾಧಿಸಬೇಕು, ಒಬ್ಬರ ಜೊತೆಗೂಡಿಯೂ ಸಾಧಿಸಬೇಕು. ಒಟ್ಟಿನಲ್ಲಿ ಸಾಧಿಸುತ್ತಲೇ ಇರಬೇಕು. ಅಂಥಾ ಸಾಧನೆ ಮಾತ್ರವೇ ನಮ್ಮನ್ನು ನಿಜವಾದ ಅರ್ಥದಲ್ಲಿ ಆಳುವ ಮಾರ್ಗದರ್ಶಿ.
-ಇದು “ಪ್ರೀತಿ”ಯಿಂದ
-17/12/14

ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ . . .
ಈ ಬದುಕಿನ ಹೆದ್ದಾರಿಯಲ್ಲಿ ಅನೇಕ ರೀತಿಯ ಅನಿರೀಕ್ಷಿತ ತಿರುವುಗಳು ಕಾಣುತ್ತಲೇ ಇರುತ್ತವೆ. ನಮ್ಮ ಬಾಳಿನ ಈ ಪ್ರಯಾಣದಲ್ಲಿ ಉಸಿರಾಟ ಎನ್ನುವ ಬಂಡಿಯ ಮೇಲೆ ಕುಳಿತ ನಾವು, ಅದು ಯಾವ ತಿರುವಿನತ್ತ ನಡೆಯಬೇಕೆಂಬ ನಿರ್ಧಾರವನ್ನು ಪದೇ ಪದೇ ನೆನಪಿಸುವ ಕೆಲಸವನ್ನು ಮತ್ತೊಬ್ಬರ ಅನುಭವವೇ ಮಾಡಿಬಿಡುತ್ತವೆ.
ಪ್ರತಿಯೊಂದು ಸಮಯದಲ್ಲೂ ಸವೆಸುವ ದಾರಿಯಲ್ಲೆಲ್ಲ ಮೈಲಿಗಲ್ಲನ್ನು ನೆಟ್ಟು ನಡೆಯುವ ಕೆಲಸ ನಮ್ಮ ನಮ್ಮ ಆಲೋಚನೆ, ತಿಳುವಳಿಕೆ, ವಿವೇಚನೆಗಳಿಗೆ ಬಿಟ್ಟದ್ದು. ಪ್ರತಿಯೊಂದಕ್ಕೂ ಆ ಕಾಣದ ಶಕ್ತಿಯ ಅನುಗ್ರಹವೋ, ಆಶೀರ್ವಾದವೋ, ಕೃಪೆಯೋ, ವರವೋ, ಬೇಕೇ ಬೇಕಾಗಿರುತ್ತದೆ. ಆದರೆ, ಅಂಥಾ ವರಗಳನ್ನು ಪಡೆಯುವ ನಾವು ತಗೆದುಕೊಳ್ಳಬೇಕಾದ ಸಂಯಮ ಮತ್ತು ಕರಾರುವಾಕ್ಕು ನಡೆಯ ಬಗ್ಗೆ ಬಹಳಾನೇ ಎಚ್ಚರಿಕೆಯಿಂದಿರಬೇಕಾಗುತ್ತದೆ.

ಒಮ್ಮೆ ಲಿಯೋ ಟಾಲ್ಸ್ಟಾಯ್ ಸಣ್ಣ ಕಥೆಯೊಂದನ್ನು ಹೇಳಿದ್ದಾರೆ. ಅದೇನೆಂದರೆ, ಒಮ್ಮೆ ಓರ್ವ ವ್ಯಕ್ತಿಯು . . . ಒಂದು ಪ್ರೇತವನ್ನು ಒಲಿಸಿಕೊಂಡ. ಹಾಗೆ ಒಲಿಸಿಕೊಳ್ಳಲು ಅವನಿಗೆ ಸಾಕಷ್ಟು ಸಮಯವೇ ಹಿಡಿದಿತ್ತು. ಒಂದು ದಿವಸ ಆ ಪ್ರೇತ ಈತನ ಮುಂದೆ ಬಂದು, "ನೀನು ಈಗಿಂದೀಗಲೇ ನಿನ್ನಿಷ್ಟದ ಯಾವುದಾದರೂ ಮೂರು ವರಗಳನ್ನು ಕೇಳು" ಎಂದು ಹೇಳಿತು. ಆಗ ಆತ ಹೇಳಿದ, "ನೀನು ಇಷ್ಟು ಅವಸರ ಮಾಡಿದರೆ ಹೇಗೆ? ನೀನೇ ಹೇಳುತ್ತಿರುವೆ ನನಗೆ ಮೂರು ವರಗಳನ್ನು ನೀಡುವೆ ಎಂದು. ಆದರೆ, ಈಗ ನನಗೆ ಏನು ಕೇಳಬೇಕೆಂದು ತೋಚುತ್ತಿಲ್ಲ. ಆದ್ದರಿಂದ ನನಗೆ ಅದರ ಅಗತ್ಯಬಿದ್ದಾಗ ನಾನು ಕೇಳುವೆ" ಎಂದ. ಆಗ ಪ್ರೇತ ಹೇಳಿತು, "ಸರಿ. ಆದರೆ, ಒಂದು ವಿಷಯ ನೆನಪಿರಲಿ. ನೀನು ಕೇವಲ ಮೂರು ವರಗಳನ್ನು ಮಾತ್ರ ಕೇಳಬೇಕು. ನಾಲ್ಕಲ್ಲ!". ಆಗ ಆ ವ್ಯಕ್ತಿ ಯೋಚಿಸಿದ, "ಮೂರೇ ಬೇಕಾದಷ್ಟಾಯಿತು. ಮೂರು ವರಗಳಿಂದ ಇಡೀ ಜಗತ್ತನ್ನೇ ಹೊಂದಬಹುದು. ಮೂರು ಲೋಕಗಳನ್ನು ಪಡೆಯಬಹುದು" ಎಂದು ಅಂದುಕೊಂಡ.

ನಂತರ ಆತ ಮನೆಗೆ ಹಿಂದಿರುಗಿ ಬರುತ್ತಾ 'ನನ್ನ ಬಯಕೆಗಳೆಲ್ಲವೂ ಈಡೇರಿಸುವಂತಹ ಮೂರು ವರಗಳನ್ನು ಹೇಗೆ ಕೇಳುವುದು, ಯಾವುದೂ ಇದರಲ್ಲಿ ಬಿಟ್ಟುಹೋಗಬಾರದು' ಎಂದು ಆಲೋಚಿಸಿದ. ಮನೆಗೆ ಬಂದ ನಂತರ ಪತ್ನಿಯೊಂದಿಗೆ ದಿನನಿತ್ಯದಂತೆ ಜಗಳವಾಡಿದ. ಆ ಕೋಪದಲ್ಲಿ, ಆ ಪ್ರೇತದ ಮಾತಿನಂತೆ ಮೊದಲನೆಯ ವರವಾಗಿ 'ಈಕೆಯನ್ನು ಮುಗಿಸಿಬಿಡು' ಎಂದು ಕೇಳಿದ. ತಕ್ಷಣ ಆತನ ಪತ್ನಿ ಸತ್ತೇ ಹೋದಳು. ಆಕೆ ಸತ್ತದ್ದನ್ನು ಕಂಡು ಈತನಿಗೆ ಹೆದರಿಕೆ ಆಯಿತು. 'ಈಗ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಊಟ ತಿಂಡಿಗೆ ಏನು ಮಾಡುವುದು?' ಎಂದು ಚಿಂತಿಸತೊಡಗಿದ. ನೆರೆಮನೆಯವರಿಗೆಲ್ಲಾ ವಿಷಯ ಗೊತ್ತಾಗಿಬಿಡುವುದು. ಆದರೆ, ಆಗ ಆತನಿಗೆ ಆಕೆ ಇನ್ನಾರನ್ನೋ ಪ್ರೀತಿಸುತ್ತಿದ್ದಳು ಎಂಬ ನೆನಪೂ ಬಂತು, ಅದಕ್ಕಾಗಿಯೇ ಅವಳು ಜಗಳವಾಡುತ್ತಿದ್ದಳು ಎಂದೂ ತಿಳಿಯಿತು. ನನಗೆ ನೋಡಿದರೆ ಎಪ್ಪತ್ತು ವರ್ಷ ದಾಟಿದೆ. ನಾನು ಇನ್ನೊಂದು ಮದುವೆ ಆಗೋಣವೆಂದರೆ ಯಾರು ತಾನೇ ನನಗೆ ಈ ವಯಸ್ಸಿನಲ್ಲಿ ಹೆಣ್ಣು ಕೊಡುವರು? ತಪ್ಪಾಯಿತಲ್ಲಾ ಎಂದು ಯೋಚಿಸಿ ಆತ ಆ ಪ್ರೇತವನ್ನು ಮತ್ತೆ ಕೇಳಿದ,

"ಹೇ ಪ್ರೇತವೇ! ನನ್ನ ಪತ್ನಿಯನ್ನು ಬದುಕಿಸು" ಎಂದು. ಆಗ ಆಕೆ ಮತ್ತೆ ಬದುಕಿದಳು. ಆ ವೇಳೆಗಾಗಲೇ ಎರಡು ವರಗಳು ಮುಗಿದಿದ್ದವು ಮತ್ತು ಉಳಿದದ್ದು ಕೇವಲ ಒಂದೇ ಒಂದು ವರ ಮಾತ್ರ. ಆಗ ಇದೊಂದು ದೊಡ್ಡ ಸಮಸ್ಯೆಯೇ ಆಯಿತು ಆತನಿಗೆ. ರಾತ್ರಿ ಇಡೀ ನಿದ್ರೆಯೂ ಬರಲಿಲ್ಲ. ಏನು ಬೇಡುವುದು? ಇದು ಬೇಡಲೇ, ಅದು ಬೇಡಲೇ ಎಂಬ ಚಿಂತೆಯಲ್ಲಿಯೇ ಆತನಿಗೆ ಹುಚ್ಚು ಹಿಡಿದಂತಾಗಿತ್ತು. ಇನ್ನೊಮ್ಮೆ ಏನಾದರು ನನ್ನ ಪತ್ನಿಯೊಡನೆ ಸಮಸ್ಯೆ ಬಂದರೆ ಆಗ ನಾನು ಆಕೆಯನ್ನು 'ಮುಗಿಸಿಬಿಡು' ಎಂದು ಕೇಳಿದರೆ, ಪುನಃ ಆಕೆಯನ್ನು 'ಬದುಕಿಸು' ಎಂದು ಕೇಳಲು ನಾಲ್ಕನೇ ವರವೂ ಇಲ್ಲ. ಆದ್ದರಿಂದ ಪ್ರೇತಕ್ಕೆ ಹೇಳಿದ, "ನೀನು ಆ ಮೂರನೇ ವರವನ್ನು ವಾಪಸ್ಸು ತೆಗೆದುಕೋ. ನನಗೇನು ಕೇಳಬೇಕೆಂಬುದೇ ತೋಚುತ್ತಿಲ್ಲ. ನಾನು ವರವನ್ನೇ ಕೇಳದಂತೆ ಮಾಡಿಬಿಡು" ಎಂದ. ಆಗ ಆ ಮೂರನೇ ವರವನ್ನೂ ಆ ಪ್ರೇತ ವಾಪಸ್ಸು ತೆಗೆದುಕೊಂಡಿತು.

ಪ್ರೀತಿಯ ಗೆಳೆಯರೇ. . . ಕೇವಲ ಆತನಿಗೆ ಒಂದು ಹಿಡಿಯಷ್ಟು ವಿವೇಚನಾ ಶೀಲತೆ ಅಥವಾ ಪ್ರಜ್ಞಾವಂತಿಕೆ ಎಂಬುದೇನಾದರೂ ಇದ್ದಿದ್ದರೆ, ಅಥವಾ ಯಾರಾದರೂ ತಿಳುವಳಿಕೆ ಇರುವವರು ಮಾರ್ಗವನ್ನು ಸೂಚಿಸಿದ್ದಿದ್ದರೆ . . . . . ಆತ ಈ ಬದುಕಿನ ಮಹಾನ್ ಸುಖಿಯೇ ಆಗಿಬಿಡುತ್ತಿದ್ದ. ಇರಲಿ . . . . . ಯಾವ ವರಗಳು ನಮಗೆ ಸಿಗುವುದೋ ಬಿಡುವುದೋ, ಆತ್ಮವಿಶ್ವಾಸ, ಪರಿಶ್ರಮ ಮತ್ತು ಪ್ರೀತಿ ಎಂಬ ಮೂರು ವರಗಳಂತೂ ದೈವದತ್ತವಾಗಿ ಎಲ್ಲರಿಗೂ ಬಂದೇ ಇರುತ್ತದೆ, ಹಾಗಾಗಿ ಸ್ವಲ್ಪ ಮಟ್ಟಿಗೆ ನಾವುಗಳು ಸಂಯಮ ಶೀಲರಾಗಿಬಿಟ್ಟರೆ ಸಾಕು. ಈ ಬದುಕಿನಲ್ಲಿ ಗೆದ್ದಂತೆಯೇ. . . .
- ಇದು "ಪ್ರೀತಿ”ಯಿಂದ
-15/11/14

ಎರಡು ಪ್ರಮುಖ ಹೆಜ್ಜೆಗಳು.
ತಿಂಗಳ ಮಾತಿನ ಅಂಗಳಕ್ಕ್ಕೆ ಸ್ವಾಗತ ಗೆಳೆಯರೇ . . .

ಇಡೀ ಭೂಮಂಡಲದಲ್ಲಿ ಎರಡು ವರ್ಗದ ಜನರಿದ್ದಾರೆ. ಮೊದಲನೆಯ ವರ್ಗದಲ್ಲಿ, ಮಿಂಚಿ ಮಿಂಚಿ ಬದುಕುವವರು. ಎರಡನೆಯ ವರ್ಗದಲ್ಲಿ, ಹಂಚಿ ಹಂಚಿ ಬದುಕುವವರು. ಒಂದು ಅಪೂರ್ಣತೆಯ ಸಂಕೇತ ಮತ್ತೊಂದು ಸಂಪೂರ್ಣತೆಯ ಸಂಕೇತ.
ಇಂಥಾ ಸಂಪೂರ್ಣತೆಗೆ ಉದಾಹರಣೆಯಾಗಿ "ಓಶೋ"ರವರ ಹಲವು ಸಾಲುಗಳು ನೆನಪಾಗುತ್ತವೆ.

ನಮ್ಮ ಭಾರತ ದೇಶದ ಚರಿತ್ರೆಯಲ್ಲಿ ಬರುವಂತಹ ನೂರಾರು ವಿಷಯಗಳಲ್ಲಿ ಒಂದಾದ “ಸತ್ಯಾನ್ವೇಷಣೆ” ಎಂಬ ಪ್ರಸ್ತಾಪದಲ್ಲಿ ಎರಡು ಅಧ್ಯಾಯಗಳಿವೆ.

ಮೊದಲನೆಯದರಲ್ಲಿ – “ಸಾಧಕ” ಎನ್ನಿಸಕೊಂಡವನು ಅನ್ವೇಷಿಸುತ್ತಾನೆ. ಎರಡನೆಯದರಲ್ಲಿ – “ಸಾಧಕ“ ಎಂದು ಅನ್ನಿಸಿಕೊಳ್ಳುವವನು ಹಂಚುತ್ತಾನೆ.

ನಾವು ನಮ್ಮೊಳಗಿರುವ ಆನಂದವನ್ನು ಮತ್ತೊಬ್ಬರಿಗೆ ಹಂಚುವುದರಲ್ಲಿ ಸಫಲರಾಗದ ಪಕ್ಷದಲ್ಲಿ ಆ ನಮ್ಮ ಆನಂದವನ್ನು ಪೂರ್ಣಾನಂದ ಎಂದು ತಿಳಿಯಬಾರದು. ಆನಂದದ ಅನ್ವೇಷಣೆ ಲೋಭದ ಭಾಗವೇ ಆಗಿರುವುದು ನಿಜ ಸಂಗತಿ. ತಿಳಿದವರ ದೃಷ್ಟಿಯಲ್ಲಿ ಆನಂದದ ಅಪೇಕ್ಷೆಯೂ ಸಹ ಅಹಂಭಾವವೇ. ಎಲ್ಲಿಯವರೆಗೆ ಸಾಧಕ ತನ್ನ ಆನಂದವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಆತ ಅಪೂರ್ಣನೇ. ಆನಂದ ಆತನಿಗೆ ಪ್ರಾಪ್ತವಾದಾಗಲೂ ಈತ ಅಪೂರ್ಣನೇ. ಯಾವಾಗ ಈತ ಆನಂದವನ್ನು ಹಂಚಿಕೊಳ್ಳಲು ಆರಂಭಿಸುತ್ತಾನೋ ಆಗ ಆತ ನಿಜವಾದ ಅರ್ಥದಲ್ಲಿ ಪರಿಪೂರ್ಣನಾಗುತ್ತಾನೆ.

ಇದಕ್ಕೆ ಒಂದು ಉದಾಹರಣೆ: ನಮ್ಮ ದೇಹದ ಉಸಿರಾಟದ ಪ್ರಕ್ರಿಯೆಯನ್ನು ನೋಡಿದರೆ, ಒಂದು ಉಸಿರು ಒಳಗೆ ಬರುತ್ತಿರುತ್ತದೆ, ಅದೇ ಸಮಯದಲ್ಲಿ ಇನ್ನೊಂದು ಉಸಿರು ಹೊರಗೆ ಹೋಗುತ್ತಿರುತ್ತದೆ. ಬರೀ ಒಳಗೆ ಬರುವ ಉಸಿರಷ್ಟೇ ಪೂರ್ಣವಲ್ಲ. ಹೀಗಾದಲ್ಲಿ ನಾವು ಬದುಕಲಿಕ್ಕೇ ಸಾಧ್ಯವಿಲ್ಲ. ಯಾವಾಗ ಉಸಿರು ಹೊರಗೂ ಹೋಗುವುದೋ ಆಗ ಉಸಿರಾಟದ ಚಕ್ರವು ಪೂರ್ತಿ ಆಗುವುದು. ಒಳಗೆ ಬರುವ ಉಸಿರು ಅರ್ಧ ಮತ್ತು ಹೊರಗೆ ಹೋಗುವ ಉಸಿರು ಇನ್ನರ್ಧ. ಇವೆರಡೂ ಸೇರಿಯೇ ಉಸಿರಾಟ ಪೂರ್ತಿ ಆಗುತ್ತದೆ. ಇವೆರಡೂ ನಮ್ಮ ಜೀವನದ ಸಂಚಲನೆಗೆ ಇರುವ ಎರಡು ಪ್ರಮುಖ ಹೆಜ್ಜೆಗಳು.

ಪ್ರೀತಿಯ ಗೆಳೆಯರೇ . . ಇಂಥಾ ಎರಡು ಮೂರು ಹೆಜ್ಜೆಗಳಲ್ಲ, ನೂರು ನೂರು ಹೆಜ್ಜೆಗಳು ಸವೆಸಿದಾಗಲೇ ನಾವುಗಳು ಮನುಷ್ಯರಾಗಿ ಬಾಳುವುದಕ್ಕೂ ಒಂದು ಅರ್ಥವಿರುತ್ತದೆ. ಒಮ್ಮೊಮ್ಮೆ ಅದೇ ಅರ್ಥ ಸಾರ್ಥಕತೆ ಎನಿಸುತ್ತದೆ.
ಇಂಥಾ ಜೀವನದ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಉದಾಹರಣೆಗಳ ಮೂಲಕ ಹೇಳಿದ ಮಹಾನೀಯರಿಗೆಲ್ಲ ಮನಸಾರೆ ವಂದಿಸೋಣ.
ಇದು “ಪ್ರೀತಿ“ಯಿಂದ
-15/10/14

"ಆ ಕ್ಷಣದಲ್ಲಿ......."
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೆ.......
ಒಬ್ಬ ಮನುಷ್ಯನ ಸಕಲ ಉದ್ಧಾರವು ಅವನು ಮಾಡಿದಂಥ ಪೂರ್ವ ಜನ್ಮದ ಪಾಪ ಪುಣ್ಯಗಳಿಂದಲೇ ಎಂಬುದಾಗಿ ಭಾವಿಸುವಂತಹ ನಮ್ಮ ಈ ಭರತ ಭೂಮಿಯಲ್ಲಿ ...... ಅನೇಕ ಮಹನೀಯರು, ಧ್ಯೇಯೋದಾತರು, ದೈವಸಂಜಾತರು ಹಲವು ನಿದರ್ಶನಗಳ ಮೂಲಕ, ಹಲವು ದೃಷ್ಟಾಂತಗಳ ಮೂಲಕ ಹಲವು ಕಥೆ ಉಪಕಥೆಗಳ ಮೂಲಕ ಸರಳೀಕೃತಗೊಳಿಸಿಕೊಟ್ಟಿದ್ದಾರೆ. ನಮ್ಮೆಲ್ಲರ ಪ್ರತಿದಿನದ ಪ್ರತಿಕ್ಷಣದ ಏಕಾಗ್ರತೆಗಾಗಿ ಮಹಾತ್ಮ ಅರವಿಂದರ ಭಕ್ತರೊಬ್ಬರು ತಮ್ಮದೇ ಆದ ಶೈಲಿಯಲ್ಲಿ ಹೀಗೆ ನಿರೂಪಿಸಿದ್ದಾರೆ.

ಮೊದಲಸಲ ಶ್ರೀ ಅರವಿಂದರು ಸಾಧನೆಯಲ್ಲಿ ತೊಡಗುವಾಗ, ಅವರ ಗುರುಗಳು ಹೇಳಿದರು." ಸಾಧನೆಯ ಹಾದಿಯಲ್ಲಿ ನೂರಾರು ಅಡೆತಡೆಗಳು ಇರುತ್ತವೆ. ನಿನ್ನೊಳಗೆ ನೂರಾರು ಯೋಚನೆಗಳು ಬರುತ್ತವೆ. ಹೀಗಿರುವಾಗ ನೀನೊಂದು ಕೆಲಸವನ್ನು ಮಾಡು. ಯೋಚನೆಗಳನ್ನು ಸೊಳ್ಳೆಗಳು ಎಂದುಕೊಂಡು, ಅವು ನಿನ್ನ ಸುತ್ತಲೂ ಗುಂಯ್ ಗುಡುತ್ತಿವೆ ಎಂದುಕೊ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಗಲಾಟೆಮಾಡಲು ಬಿಡು. ನೀನು ಸುಮ್ಮನೆ ಕುಳಿತು ನೋಡು." ಆಗ ಅದೇರೀತಿ ಅರವಿಂದರು ಮೂರುದಿನ ಕುಳಿತರು. ಆರಂಭದಲ್ಲಿ ಅವರಿಗೆ ಬಹಳ ಭಯವಾಯಿತು. ಲೆಕ್ಕವಿಲ್ಲದಷ್ಟು ಸೊಳ್ಳೆಗಳು ಇದ್ದವು. ಆದರೆ ಅವರು ಅಚಲ ಸಂಕಲ್ಪದ ವ್ಯಕ್ತಿ. ಗಂಟೆಗಳು ಕಳೆದಮೇಲೆ ಸೊಳ್ಳೆಗಳು ಕಡಿಮೆಯಾದದ್ದು ಅವರ ಅರಿವಿಗೆ ಬಂತ್ತು. ಅದರಿಂದ ಅವರ ಶ್ರದ್ಧೆ ಇನ್ನೂ ಹೆಚ್ಚಾಯಿತು. ಆತ್ಮವಿಶ್ವಾಸವು ಹೆಚ್ಚಿತು.

ಮೂರನೇದಿನ ಒಂದೇ ಒಂದು ಸೊಳ್ಳೆಯು ಇತ್ತು. ಆಗ ಇವರಿಗೆ ಅನಿಸಿದ್ದು, ಈಗ ನಾನು ಏಳುವದು ಉಚಿತವಲ್ಲ. ಎಲ್ಲಿಯವರೆಗೆ ಕೊನೆಯ ಸೊಳ್ಳೆ ಹೋಗುವದಿಲ್ಲವೋ ಅಲ್ಲಿಯವರೆಗೆ ನಾನು ಏಳುವದಿಲ್ಲ ಎಂದು ನಿರ್ಧರಿಸಿದರು. ಕೊನೆಗೆ ಆ ಸೊಳ್ಳೆಯೂ ಹೊರಟುಹೋಯಿತು. ಅದರ ಅರ್ಥ ಎಲ್ಲ ಯೋಚನೆಗಳೂ ಮಾಯವಾಗಿದ್ದವು. ಇದು ಒಂದು ಸಾಧನೆಯ ಕ್ಷಣ.

ಆ ಕ್ಷಣದಲ್ಲಿಯೇ... ಜೀವನ-ವಿಶೇಷತೆಯ ಅನುಭವವಾಗುತ್ತದೆ, ಅಂತರ್ ಧಾರೆ ಪ್ರಕಟಗೊಳ್ಳುತ್ತದೆ.ನಾವು ಏಕಾಗ್ರತೆಯಿಂದ ನಿರ್ವಿಚಾರಿಗಳಾಗಿ, ಧನಾತ್ಮಕ ದೃಷ್ಟಿಕೋನದಿಂದ ಕಳೆದ ಕ್ಷಣಗಳೇ ಸಾಧನೆಗೆ ದಾರಿಯೂ ಹೌದು, ಮೆಟ್ಟಿಲೂ ಹೌದು.
ಇದು "ಪ್ರೀತಿ"ಯಿಂದ
-19/09/14

ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ
ಎಲ್ಲವೂ ಮನಸ್ಸಿನ ಮೇಲೆ ನಿಂತಿದೆ. ಮನಸ್ಸೇ ಬಂಧನಕ್ಕೆ ಕಾರಣ, ಮನಸ್ಸೇ ಮುಕ್ತಿಗೆ ಕಾರಣ. ಮನಸ್ಸಿಗೆ ನಾವು ಯಾವ ಬಣ್ಣ ಕೊಟ್ಟರೆ ಅದು ಆ ಬಣ್ಣ ಧರಿಸುತ್ತದೆ. ಉದಾಹರಣೆಗೆ, ಅಗಸನ ಮನೆಯಿಂದ ತಂದ ಬಟ್ಟೆ. ಕೆಂಪು ಬಣ್ಣದಲ್ಲಿ ಅದ್ದಿದರೆ ಕೆಂಪು, ನೀಲಿ ಬಣ್ಣದಲ್ಲಿ ಅದ್ದಿದರೆ ನೀಲಿ, ಹಳದಿ ಬಣ್ಣದಲ್ಲಿ ಅದ್ದಿದರೆ ಹಳದಿ, ಮತ್ತಾವ ಬಣ್ಣದಲ್ಲಿ ಅದ್ದಿದರೂ ಕೂಡ ಅದು ಆ ಬಣ್ಣವೇ ಧರಿಸುತ್ತದೆ. ನೋಡಿಲ್ಲವೆ, ಒಂದಿಷ್ಟು ಇಂಗ್ಲೀಷು ಓದುವುದಕ್ಕೆ ಕಲಿತುಕೊಂಡಿರಿ ಎಂದರೆ, ನಿಮ್ಮನ್ನು ಹೇಳದೆ ಕೇಳದೆ "ಕೋಸ್ ಪಿಸ್" ಎಂಬ ಇಂಗ್ಲೀಷು ಪದಗಳು ನಿಮ್ಮ ಬಾಯಿಂದ ಹೊರಬೀಳುವುದನ್ನ? ಬಳಿಕ ಕಾಲಿಗೆ ಬೂಟ್ಸು, ಸಿಳ್ಳು ಹಾಕುತ್ತಾ ಆಲಾಪನೆ ಮಾಡುವುದು ಇವೆಲ್ಲ ಬಂದುಬಿಡುತ್ತವೆ. ಇವೆಲ್ಲಾ ಒಂದೇ ಜೊತೆ. ವಿದ್ಯಾವಂತ ಸಂಸ್ಕೃತ ಕಲಿತುಕೊಂಡಿದ್ದೇ ಆದರೆ ಪದೇಪದೇ ಸಂಸ್ಕೃತ ಶ್ಲೋಕಗಳನ್ನು ಎತ್ತಿ ಹೇಳುತ್ತಲೇ ಇರುತ್ತಾರೆ. ನೀನು ಕೆಟ್ಟವರೊಡನೆ ಬೆಳೆದರೆ, ನಿನ್ನ ನಡೆನುಡಿ ವ್ಯವಹಾರ ಎಲ್ಲವೂ ಅವರಂತೆಯೇ ಆಗಿಬಿಡುತ್ತವೆ. ಭಕ್ತರ ಸಹವಾಸದಲ್ಲಿ ಬೆಳೆದರೆ, ಮನಸ್ಸು ಭಗವಚ್ಚಿಂತನೆ, ಭಗವತ್ಕತೆ ಇವುಗಳಲ್ಲೇ ನಿರತವಾಗಿರುತ್ತವೆ.

"ಮನಸ್ಸೇ ಎಲ್ಲಕ್ಕೂ ಕಾರಣ. ಮನುಷ್ಯನ ಒಂದು ಪಕ್ಕದಲ್ಲಿ ಹೆಂಡತಿ, ಇನ್ನೊಂದು ಪಕ್ಕದಲ್ಲಿ ಮಗಳು. ಒಬ್ಬಳಿಗೆ ಒಂದು ವಿಧದಲ್ಲಿ, ಇನ್ನೊಬ್ಬಳಿಗೆ ಇನ್ನೊಂದು ವಿಧದಲ್ಲಿ ಪ್ರೀತಿ ತೋರಿಸುತ್ತಾನೆ. ಆದರೆ ಮನಸ್ಸು ಮಾತ್ರ ಒಂದೇ ಒಂದು.
"ಮನಸ್ಸಿನಿಂದಲೇ ಬಂಧನ, ಮನಸ್ಸಿನಿಂದಲೇ ಮುಕ್ತಿ. 'ನಾನು ಮುಕ್ತ ಪುರುಷ. ಸಂಸಾರದಲ್ಲಿ ಇದ್ದರೆ ತಾನೆ ಏನು, ಅರಣ್ಯದಲ್ಲಿ ಇದ್ದರೆ ತಾನೆ ಏನು, ನನಗೆಲ್ಲಿಯ ಬಂಧನ? ನಾನು ಭಗವಂತನ ಮಗು. ರಾಜಾಧಿರಾಜನ ಮಗು. ನನಗಾವುದರ ಬಂಧನ?' ಎಂಬುದಾಗಿ ಯಾರು ಸತತ ಚಿಂತಿಸುತ್ತಾನೋ ಆತ ಮುಕ್ತನಾಗಿಬಿಡುತ್ತಾನೆ. ಒಂದು ಪಕ್ಷ ಹಾವೇನಾದರು ಕಡಿದರೆ 'ನನ್ನನ್ನು ವಿಷ ಏನೂ ಮಾಡಲಾರದು' ಎಂಬುದಾಗಿ ಧೃಡವಾಗಿ ನಂಬಿದರೆ ಆಗ ಅದರಿಂದ ಪಾರಾಗಿಬಿಡಬಹುದು. ಹಾಗೆ "ನಾನು ಬದ್ಧನಲ್ಲ, ಮುಕ್ತ' ಎಂಬುದಾಗಿ ಧೃಡವಾಗಿ ನಂಬಿದರೆ ಹಾಗೇ ಆಗಿಬಿಡಬಹುದು-ಮುಕ್ತನೇ ಆಗಿಬಿಡಬಹುದು.
"ಒಮ್ಮೆ ನನಗೆ ಒಬ್ಬ ಕ್ರಿಶ್ಚಿಯನ್ನನು ಒಂದು ಪುಸ್ತಕ ತಂದುಕೊಟ್ಟ. ನಾನು ಆತನಿಗೆ ಅದನ್ನು ಓದಿ ಹೇಳುವಂತೆ ಹೇಳಿದೆ. ಅದರಲ್ಲಿ ಕೇವಲ ಪಾಪದ ವಿಷಯವಿತ್ತೇ ಹೊರತು ಬೇರೇನೂ ಇರಲಿಲ್ಲ. (ಕೇಶವನಿಗೆ) ನಿಮ್ಮ ಬ್ರಾಹ್ಮಸಮಾಜದಲ್ಲೂ ಕೇವಲ ಪಾಪದ ಮಾತುಕತೆಯೇ. ಯಾವ ವ್ಯಕ್ತಿ, 'ನಾನು ಬದ್ಧ' ಎಂಬುದಾಗಿ ಪದೇಪದೇ ಹೇಳುತ್ತಾನೋ ಆ ನೀಚ ಬದ್ಧನೇ ಆಗಿಬಿಡುತ್ತಾನೆ. ಯಾರೊಬ್ಬ ಹಗಲೂ ಇರುಳೂ 'ನಾನು ಪಾಪಿ, ನಾನು ಪಾಪಿ' ಎಂಬುದಾಗಿ ಹೇಳುತ್ತಲೇ ಇರುತ್ತಾನೊ ಆತ ಪಾಪಿಯೇ ಆಗಿ ಬಿಡುತ್ತಾನೆ.

"ಭಗವಂತನ ನಾಮಮಹಿಮೆಯಲ್ಲಿ ಮನುಷ್ಯನಿಗೆ ಅಂತ ಶ್ರದ್ಧೆಯುಂಟಾಗಬೇಕು, ಆತ ಹೇಳುವಂತಾಗಬೇಕು: 'ಏನು? ನಾನು ಭಗವಂತನ ನಾಮ ಜಪಿಸುತ್ತಾ ಇದ್ದೇನೆ, ನನ್ನಲ್ಲಿ ಇನ್ನೂ ಪಾಪ? ನನಗಿನ್ನಾವುದರ ಪಾಪ? ನನಗಿನ್ನೆಂಥದರ ಬಂಧನ?'
"ಭಗವಂತನ ನಾಮ ಜಪಿಸಿದರೆ ಮನುಷ್ಯನ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗಿಬಿಡುತ್ತದೆ. ಕೇವಲ ಪಾಪ, ನರಕ ಈ ಮಾತುಗಳಲ್ಲೇ ಏಕೆ ತೊಡಗಬೇಕು? ಭಗವಂತನಿಗೆ ಒಮ್ಮೆ ಹೇಳಿಬಿಡು: 'ಹೇ ಭಗವಂತ, ಇದುವರೆಗೆ ಅನ್ಯಾಯ ಕರ್ಮಗಳನ್ನು ಮಾಡಿದ್ದೇನೆ, ಇನ್ನು ಮುಂದೆ ಮಾಡುವುದಿಲ್ಲ' ಆತನ ಹೆಸರಿನಲ್ಲಿ ಶ್ರದ್ಧೆಯಿಡು."
ಪರಮಹಂಸರು ಪ್ರೇಮೋನ್ಮತ್ತರಾಗಿ ಹಾಡುತ್ತಿದ್ದಾರೆ:

-ಇದು "ಪ್ರೀತಿ"ಯಿಂದ
-14/08/14


"ಹಾಗಾದರೇ... ಜಯವೆಂಬುದು ಕಟ್ಟಿಟ್ಟ ಬುತ್ತಿ"
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ..........
ಸಂಸ್ಕೃತದಲ್ಲಿ ಸರ್ವೇಸಾಮಾನ್ಯವಾಗಿ ಬಳಸುವಂಥ ಒಂದು ಮಾತಿದೆ. "ಯದ್ಭಾವಂ ತದ್ಭವತಿ" ಅಂದ್ರೆ ಅವರವರ ಮನಸ್ಸಿನಂತೆಯೇ ಸಕಲವೂ ಮಾರ್ಪಡುವದು ಯಾವುದೇ ಒಂದು ಚಿಕ್ಕದಾದ, ಸಣ್ಣಪ್ರಮಾಣದ ಚಿಂತೆಯನ್ನೇ ನೋವನ್ನೇ ನಾವು ನೆನೆದೂ ನೆನೆದೂ ಅತೀ ದೊಡ್ಡ ಪರ್ವತವಾಗಿ ಸೃಷ್ಠಿಸಿ ಇಡೀಬದುಕನ್ನೇ ಅದರ ಬುಡದಲ್ಲಿ ನಶಿಸಿಹೋಗುವಂತೆ ಮಾಡಿಕೊಂಡುಬಿಡುತ್ತೇವೆ. ಅದರ ಬದಲು ಅದೇ ಒಂದು ಸಮಸ್ಯೆಯನ್ನು ಬೇರೆಯದೇ ಆದ ಪಾರ್ಶ್ವದಲ್ಲಿ ನೋಡಿ, ಅದರಷ್ಟಕ್ಕೆ ಅದನ್ನು ಬಿಟ್ಟು ನೋವು ಪಡುವ ಪ್ರತಿ ಸಮಯದಲ್ಲೂ ಮುಂದಿನ ಏಳಿಗೆಯ ದಿನಗಳು ಹೊಸ್ತಿಲಲ್ಲೇ ಕಾಯುತ್ತಿವೆ..... ಎಂದು ಯೋಚಿಸುತ್ತಿದ್ದರೆ ಸಾಕು.... ಒಂದೆರಡು ವಾರಗಳಲ್ಲೇ ಜಗತ್ತಿನ ಪ್ರತಿ ನೋವುಣ್ಣುವ ಮನುಷ್ಯನೂ ಸಹ ಸಂತೋಷ ಸಂಭ್ರಮದ ಬುಗ್ಗೆಯಾಗುತ್ತಾನೆ. ಸಾಮಾನ್ಯವಾಗಿ ಕ್ಷುಲ್ಲಕ ವಿಷಯಗಳಿಂದ ಉಂಟಾಗುವ ನೋವಿನಿಂದ ಹೊರಬರಬೇಕಾದರೆ ನಾವು ಏನುಮಾಡಬೇಕು? ಬಹುತೇಕ ಸಂದರ್ಭಗಳಲ್ಲಿ ನಮ್ಮ ಮನೋಭವದಲ್ಲಿ ಸಣ್ಣ ಪರಿವರ್ತನೆ ತರಬೇಕು.ನಮ್ಮ ಮನದಲ್ಲಿ ಹೊಸದಾದ, ಹಿತಕರವಾದ ದೃಷ್ಟಿಕೋನವನ್ನು ಬೆಳಿಸಿಕೊಳ್ಳಬೇಕು:
ಹಾಗೆ ಮಾಡುವುದಾದರೂ ಹೇಗೆ? ಅದಕ್ಕೆ ಅದ್ಭುತ ಉದಾಹರಣೆಗಳನ್ನು ಕೊಡುತ್ತೆನೆ- ಹೋಮರ್ ಕ್ರೋಯ್ ”ದೆ ಹ್ಯಾಡ ಟು ಸೀ ಪ್ಯೇರಿಸ್ " ನಂಥ ಡಜನ ಗಟ್ಟಲೆ ಪುಸ್ತಕಗಳನ್ನು ಬರೆದವನನು ಆತ.
ಆತ ಒಮ್ಮೆ ಒಂದು ಕೃತಿಯನ್ನು ರಚಿಸುತ್ತಿದ್ದಾಗ ಅರೆಹುಚ್ಚನಂತಾಗಿಬಿಟ್ಟಿದ್ದನಂತೆ. ನ್ಯೂಯಾರ್ಕನ ತನ್ನ ಅಪಾರ್ಟಮೆಂಟಿನಲ್ಲಿ ಆತ ಬರೆಯಲು ಕುಳಿತಾಗಲೆಲ್ಲ ರೇಡಿಯೇಟರನ ರಟರಟ ಸದ್ದು ಆತನನ್ನು ಕಂಗೆಡಿಸುತ್ತಿತ್ತು. ಆ ಕರ್ಕಶ ಸದ್ದು ವಿಪರೀತ ಕಿರಿಕಿರಿಯನ್ನುಂಟುಮಾಡುತ್ತಿತ್ತು. ಆತನಿಗೆ ಬರೆಯಲೇ ಸಾಧ್ಯವಾಗುತ್ತಿರಲಿಲ್ಲ.

ಒಂದು ದಿನ ಆತನಿಗೆ ತನ್ನ ಕೆಲ ಗೆಳೆಯರ ಜೊತೆಗೆ, ಎಲ್ಲಿಗೋ ಚಾರಣ ಹೋಗುವ ಅವಕಾಶ ಒದಗಿಬಂತು. ಆತ ವಿವರಿಸುತ್ತಾನೆ: "ಶಿಬಿರಗಳಲ್ಲಿ ಚಳಿ ಕಾಯಿಸಿಕೋಳ್ಳಲು ನಾವು ಕೊಂಬೆ ರೆಂಬೆಗಳನ್ನು ಪೇರಿಸಿ ಬೆಂಕಿ ಹಾಕುತ್ತಿದ್ದೆವು. ಬೆಂಕಿಯ ಸುತ್ತ ಕುಳಿತುಕೊಳ್ಳತ್ತಿದ್ದೆವು. ಕೊಂಬೆರೆಂಬೆಗಳು ಚಟಪಟ ಸದ್ದು ಮಾಡುತ್ತಾ ಉರಿಯುತ್ತಿದ್ದವು. ಆ ಸದ್ದನ್ನು ಕೇಳಿಸಿಕೊಂಡಾಗ ರೆಡಿಯೇಟರ ಸದ್ದಿಗೂ ಈ ಸದ್ದಿಗೂ ಎಷ್ಟೊಂದು ಸಾಮ್ಯತೆ ಇದೆ ಎಂದು ನನ್ನಲ್ಲೇ ಯೋಚಿಸಿದೆ. ಹಾಗಾದರೆ ನಾನ್ಯಾಕೆ ಒಂದು ಸದ್ದನ್ನು ಇಷ್ಟಪಟ್ಟು ಇನ್ನೊಂದನ್ನು ದ್ವೇಷಿಸುತ್ತಿರುವೆ ? ನಾನು ಯೋಚಿಸಿದೆ ಮನೆಗೆ ಮರಳಿ ನನ್ನಲ್ಲಿಯೇ ಹೇಳಿಕೊಂಡೆ - ಬೆಂಕಿಯಲ್ಲಿ ಉರಿಯುವ ರೆಂಬೆಕೊಂಬೆಗಳ ಚಟಪಟ ಸದ್ದು ಹಿತವಾಗಿ ಕೇಳಿಸುತ್ತೆ. ರೇಡಿಯೇಟರನ ಸದ್ದಿನಲ್ಲಿ ಅಂಥ ಭಿನ್ನತೆಯಾದರೂ ಏನಿದೆ? ಹಾಗಾಗಿ ಸದ್ದಿನ ಬಗ್ಗೆ ಚಿಂತಿಸದೆ ಹಾಯಾಗಿ ಮಲಗಿಬಿಡಬೇಕು ಹಾಗೆಯೇ ಮಾಡಿದೆ ಕೂಡ. ಕೆಲ ದಿನಗಳ ಕಾಲ ರೇಡಿಯೇಟರನ ಸದ್ದು ಎಂದಿನಂತೆ ನನ್ನ ಗಮನಕ್ಕೆ ಬರುತ್ತಿತ್ತು. ಕ್ರಮೇಣ ನಾನು ರೇಡಿಯೇಟರನ ವಿಷಯವನ್ನೇ ಮರೆತುಬಿಟ್ಟೆ ! ನನ್ನ ಪಾಡಿಗೆ ನನ್ನ ಕೆಲಸ ಮಾಡಿಕೊಳ್ಳಲಾರಂಭಿಸಿದೆ."

ಚಿಂತೆಗಳಿಗೆ ಇಂಥ ಸಣ್ಣಪುಟ್ಟ ಕಾರಣಗಳಿದ್ದರೂ ಸಾಕು ! ನಮಗೆ ಇಷ್ಟವಾಗದ್ದಕ್ಕೆಲ್ಲಾ ನಾವು ಚಿಂತೆಯ ದಾರಿ ಹಿಡಿಯುತ್ತೇವೆ. ಎಕೆಂದರೆ, ನಾವು ಅಂಥ ಕ್ಷುಲ್ಲಕ ವಿಷಯಗಳಿಗೂ ಪ್ರಾಮುಖ್ಯತೆ ನೀಡುತ್ತೇವೆ! ಅಂಥ ಕ್ಷುಲ್ಲಕ ವಿಷಯಗಳನ್ನೂ ದೊಡ್ಡದಾಗಿ ಕಾಣುತ್ತೇವೆ.!
"ಜೀವನವೆಂಬುದು ಅತ್ಯಂತ ಕಿರಿದಾದುದು. ಅತ್ಯಲ್ಪ ಅವಧಿಯದ್ದು. ಇಲ್ಲಿ ಅಲ್ಪತನ ತೋರುವುದಕ್ಕಾಗಲೀ ಕ್ಷುಲ್ಲಕ ವಿಷಯಗಳಿಗೆ ತಲೆಕೆಡಿಸಿಕೊಳ್ಳುವದಕ್ಕಾಗಲೀ ಸಮಯವೇ ಇಲ್ಲ" ಎನ್ನುತ್ತಾನೆ ಡುಸ್ರೆಲಿ.

ಆಂಡ್ರೆ ಮೌರೋಯಿಸ್ "ದಿಸ್ ವೀಕ್" ಮ್ಯಾಗಜಿನನಲ್ಲಿ ಹೇಳುತ್ತಾನೆ-"ಇಂಥ ಮಾತುಗಳು ನನ್ನ ಹಲವಾರು ಯಾತನಾಮಯ ಅನುಭವಗಳ ಸಂದರ್ಭಗಳಲ್ಲಿ ಬಹಳಷ್ಟು ನೆರವಾಗಿವೆ. ಎಂಥ ವಿಷಯಗಳನ್ನು ಉಪೇಕ್ಷಿಸಿ ಮರೆತಿಬಿಡಬೇಕೋ ಅಂತ ಸಣ್ಣಪುಟ್ಟ ವಿಷಯಗಳಿಗೇ ನಾವು ತಲೆ ಕೆಡಿಸಿಕೊಳ್ಳುತ್ತೇವೆ. ದುಃಖ ಪಡುತ್ತೇವೆ. ನಾವು ಈ ಭೂಮಿಯಲ್ಲಿ ಬದುಕುವುದು ಇನ್ನು ಕೆಲವೇ ದಶಕಗಳಷ್ಟು ಕಾಲ ಮಾತ್ರ. ಹಾಗಿರುವಾಗ , ನಾವು ನಮ್ಮ ಅತ್ಯಮೂಲ್ಯ ಕ್ಷಣಗಳನ್ನು ವೃಥಾ ದುಃಖಿಸುವುದರಲ್ಲಿಯೇ ಕಳೆದು ಬಿಡುವುದು ಸರಿಯೇ?

ನಾವು ದುಃಖಿಸುತ್ತಿರುವ ವಿಷಯಗಳಾದರೂ ಎಂಥವು ? ನಾವೇ ಆಗಲಿ, ಇನ್ಯಾರೇ ಆಗಲಿ, ಕೇವಲ ಒಂದು ವರ್ಷದಲ್ಲಿ. ಮುಂದೊಂದು ದಿನ ಮರೆತುಹೋಗುವಂಥ ವಿಷಯಗಳ ಬಗ್ಗೆ ದಿನಗಟ್ಟಲೆ ಚಿಂತಿಸುತ್ತಾ ಕೂರಬೇಕೇ.? ಖಂಡಿತ ಹಾಗಾಗಕೂಡದು! ನಾವು ನಮ್ಮ ಬಾಳನ್ನು ಒಳ್ಳೆಯ ಕೆಲಸಕ್ಕಾಗಿ. ಒಳ್ಳೆಯ ಭಾವನೆಗಳಿಗಾಗಿ, ಉದಾತ್ತ ಯೋಚನೆಗಳಿಗಾಗಿ. ಮಹಾನ್ ಸಾಧನೆಗಳಿಗಾಗಿ, ಮುಡಿಪಾಗಿಡೋಣ. ಏಕೆಂದರೆ, ನಮ್ಮ ಬದುಕು ತುಂಬ ಚಿಕ್ಕದು. ನಮ್ಮ ಬದುಕು ಅಲ್ಪಾವಧಿಯದ್ದು. ಇಲ್ಲಿ ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳುವಷ್ಟು ಸಮಯಾವಕಾಶವೇ ಇಲ್ಲ.

ಹಾಗಾಗಿ ದಯವಿಟ್ಟು be positive be positive be positive ಎಂಬುದು ನಮ್ಮ ಈ ಕಲಾಜಗತ್ತಿನ ನಿತ್ಯ ನಿಯಾಮಕ ಮಂತ್ರವಾಗಿರಲಿ. ನಲ್ಮೆಯ ಘನಾತ್ಮಕ ನಡುವಳಿಕೆಗಳೇ ನಮ್ಮ ಬಂಧು ಬಳಗವಾಗಿರಲಿ.... ಖಂಡಿತವಾಗಿಯೂ ಈ ಬದುಕಲ್ಲಿ ಜಯವೆಂಬುದು ಕಟ್ಟಿಟ್ಟ ಬುತ್ತಿಯೇ ಆಗಿರುವುದರಲ್ಲಿ ಯಾವ ಸಂಶಯವೂ ಇರುವುದಿಲ್ಲ...........
ಇದು "ಪ್ರೀತಿ"ಯಿಂದ
-14/0614

"ಆಯಾ ವ್ಯಕ್ತಿಯ ವ್ಯಕ್ತಿತ್ವವೇ……….."
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ..........
ಬಹುಶಃ ಯಾವುದೇ ಒಬ್ಬ ವ್ಯಕ್ತಿಯ ಹಿಂದೆ ಒಂದು ಶಕ್ತಿ ಕೆಲಸ ಮಾಡುತ್ತಲೇ ಇರುತ್ತದೆ ಅನ್ನೊ ಮಾತು ಸಹಜವಾಗಿ ಎಲ್ಲರಿಗೂ ತಿಳಿದದ್ದೆ. ಆದರೆ ನಿಜಕ್ಕೂ ಆ ಶಕ್ತಿಯು ಆಯಾ ವ್ಯಕ್ತಿಯ ವ್ಯಕ್ತಿತ್ವವೇ ಆಗಿರುತ್ತದೆ, ಎಂಬ ಸತ್ಯವನ್ನು ಅರಿತುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅಂಥ ವ್ಯಕ್ತಿತ್ವಗಳು ರೂಪುಗೊಳ್ಳುವುದು ನಮ್ಮ ನಮ್ಮ ಏಕಾಗ್ರತೆಯಿಂದ ಮಾತ್ರ. ಆದರೆ ಆ ಏಕಾಗ್ರತೆ ತಾನೇ ತಾನಾಗಿ, ಲೀಲಾಜಾಲವಾಗಿ ನಮ್ಮಲ್ಲಿ ಪ್ರವಹಿಸುತ್ತಿರಬೆಕೇ ವಿನಃ ಗಂಭೀರವಾಗಿ, ಮುಗುಮ್ಮಾಗಿ, ಏನೋ ಭಾರ ಹೊತ್ತವರಂತಿರಬಾರದು. ಆಗ ಮಾತ್ರ ಗುರಿಯೊಂದನ್ನು ಸಾಧಿಸಲು ಸಾಧ್ಯ. ಇದಕ್ಕೆ ಉದಾಹರಣೆಯಾಗಿ ಹಿರಿಯರಾಡಿದ ಕಥೆಯೊಂದು ನೆನಪಾಗುತ್ತಿದೆ......

ಜರ್ಮನಿಯ ತತ್ವ ಶಾಸ್ತ್ರಜ್ಞ ಹೆರಿಗಲ್, ಜಪಾನಿಗೆ ಧ್ಯಾನ ಕಲಿಯಲೆಂದು ಹೋದರು. ಜಪಾನಿನಲ್ಲಿ ಎಲ್ಲಾ ಬಗೆಯ ನೆಪಗಳನ್ನೂ ಸಹ ಧ್ಯಾನ ಕಲಿಸಲು ಉಪಯೋಗಿಸುವರು, ಬಿಲ್ಲುಗಾರಿಕೆ ಅದರಲ್ಲೊಂದು. ಹೆರಿಗಲ್ ಪರಿಣಿತ ಬಿಲ್ಲುಗಾರ. ಆದುದರಿಂದ ಬಿಲ್ಲು ವಿದ್ಯೆಯ ಮೂಲಕ ಧ್ಯಾನವನ್ನು ಕಲಿಯಲೆಂದು ಒಬ್ಬ ಗುರುಗಳ ಬಳಿಗೆ ಹೋದರು. ಏಕೆಂದರೆ ಈಗಾಗಲೇ ಇದರಲ್ಲಿ ನೈಪುಣ್ಯತೆ ಇತ್ತು.

ಮೂರು ವರ್ಷ ಅಧ್ಯಯನದಲ್ಲಿ ಕಳೆಯಿತು. ನಂತರ ಈತನಿಗೆ ಸಮಯ ಹಾಳುಮಾಡುತ್ತಿರುವೆನೆಂದು ಅನಿಸಿತು. ಆ ಗುರು ಈತನಿಗೆ, ನೀನು ಬಾಣವನ್ನು ತನ್ನಷ್ಟಕ್ಕೆ ತಾನೇ ಹೋಗಲು ಬಿಡು. ನೀನು ಬಿಡಬೇಡ ಎಂದು ಹೇಳಿ, ಗುರಿ ಇಡುವಾಗ ನೀನಲ್ಲಿ ಇರಬಾರದು, ಬಾಣವೇ ಗುರಿಯಾಗಲಿ ಬಿಡು ಎಂದರು.

ಇದು ಅಸಂಬಧ್ಧವಾಗಿತ್ತು. ಅದೂ ಪಾಶ್ಚಿಮಾತ್ಯ ಮನುಷ್ಯನಿಗೆ, ಪೂರ್ತಿ ಅಸಂಬಧ್ಧ. ಬಾಣವನ್ನೇ ಬಿಡದೆ ಬಾಣವನ್ನು ಹೋಗಲು ಬಿಡುವುದು ಹೇಗೆ? ಬಾಣ ತನ್ನಷ್ಟಕ್ಕೆ ತಾನೇ ಹೇಗೆ ಹೋಗುವದು? ಎಂದೆಲ್ಲ ಯೋಚಿಸಿ ತನ್ನ ಬಿಲ್ಲು ವಿದ್ಯೆಯನ್ನ ಮುಂದುವರೆಸಿದ್ದ. ಆದರೆ ಈತ ಎಂದೂ ಗುರಿ ತಪ್ಪುತ್ತಿರಲ್ಲಿಲ್ಲ.

ಆದರೆ ಗುರು ಹೇಳುತ್ತಿದ್ದರು "ಗುರಿ ಗುರಿಯೇ ಅಲ್ಲ, ನೀನೇ ಗುರಿ. ನೀನು ಗುರಿಗೆ ಬಾಣ ಬಿಡುತ್ತಿರುವೆಯೋ ಇಲ್ಲವೋ ಅದಲ್ಲ ಮುಖ್ಯ. ಅದನ್ನು ನಾನು ನೋಡುತ್ತಲೇ ಇಲ್ಲ, ಇದೊಂದು ಯಾಂತ್ರಿಕ ನೈಪುಣ್ಯತೆಯಷ್ಟೆ. ನಾನು ನೋಡುತ್ತಿರುವುದು, ನೀನು ಅಲ್ಲಿರುವೆಯೋ ಇಲ್ಲವೋ ಎಂದು. ವಿನೋದಕ್ಕಾಗಿ ಬಾಣ ಬಿಡು! ಆನಂದಿಸು, ನೀನು ಎಂದೂ ಗುರಿ ತಪ್ಪುವದಿಲ್ಲ ಎನ್ನುವದನ್ನು ನೀನು ಸಾಬಿತು ಮಾಡಬೇಡ. ನಿನ್ನ ಅಹಂಕಾರವನ್ನು ಸಾಬಿತು ಮಾಡಬೇಡ. ನೀನದನ್ನು ತೋರಿಸುವ ಅಗತ್ಯವೇನಿಲ್ಲ. ಸಡಿಲವಾಗಿರು ಮತ್ತು ಬಾಣವನ್ನು ತನ್ನಷ್ಟಕ್ಕೆ ತಾನೇ ಹೋಗಲು ಬಿಡು.

ಹೆರಿಗಲ್ ಗಿದು ಅರ್ಥವಾಗಲಿಲ್ಲ ಈತನೆಷ್ಟು ಪ್ರಯತ್ನಿಸಿದರೂ ಹೀಗಿರಲು ಅವನಿಗಾಗಲಿಲ್ಲ, ಮತ್ತು ಈತ ಪದೇಪದೇ ಗುರುವನ್ನು ಕೇಳುತ್ತಿದ್ದ, ’ನಾನು ಒಮ್ಮೆ ಕೂಡಾ ಗುರಿ ತಪ್ಪದ್ದಿದ್ದರೂ ನೀವೇಕೆ ನನಗೆ ಪ್ರಶಸ್ತಿ ಪತ್ರ ಕೊಡುತ್ತಿಲ್ಲ?"
ಪಾಶ್ಚಿಮಾತ್ಯ ಚಿತ್ತವು ಸದಾ ಅಂತಿಮ ಘಲಿತಾಂಶದ ಬಗ್ಗೆಯೇ ಆಸಕ್ತಿಯಿಂದಿರುತ್ತದೆ ಮತ್ತು ಸದಾ ಆರಂಭಿಸುವುದರಲ್ಲಿ ಇರುತ್ತದೆ,

ಕೊನೆಯಲ್ಲಿ ಅಲ್ಲ. ಪೂರ್ವದ ಚಿತ್ತಕ್ಕೆ ಘಲಿತಾಂಶ ಅನಗತ್ಯ. ಮುಖ್ಯವಾದುದು ಪ್ರಾರಂಭ. ಬಿಲ್ಲುಗಾರನಲ್ಲಿ, ಗುರಿಯಲ್ಲಿ ಅಲ್ಲ. ಆದುದರಿಂದ ಗುರು ಹೇಳಿದರು,"ಇಲ್ಲ ನೀನಿನ್ನೂ ತಲುಪಿಲ್ಲ"
ಆಗ ಹೆರಿಹಲ್ ಗೆ ಬಹಳ ಅಸಮಾಧಾನವಾಯಿತು, ನನಗೆ ಹೋಗಲು ಅಪ್ಪಣೆ ಕೊಡಿ ಎಂದು ಕೇಳಿದ." ಹಾಗದರೆ ನಾನು ಹೊರಟುಹೋಗುವೆ, ಮೂರು ವರ್ಷ ಬಹಳವಾಯಿತು. ಮತ್ತು ನಾನು ಏನನ್ನು ಗಳಿಸಲಿಲ್ಲ. ನೀವು ನೀನಿನ್ನೂ ತಲುಪಿಲ್ಲ ಎಂದು ಹೇಳುತ್ತಲೇ ಇರುವಿರಿ.....ನಾನಿನ್ನೂ ಅದೇ ಆಗಿರುವೆ ಎಂದು ಹೇಳುವಿರಿ"......

ಈತ ಹೊರಡುವ ದಿನ ಗುರುಗಳಿಗೆ ತನ್ನ ವಂದನೆಗಳನ್ನು ಹೇಳಿ ಹೊರಡುವ ಎಂದು ಗುರುಗಳ ಬಳಿಗೆ ಹೋದ, ಆಗ ಅವರು ಉಳಿದ ಶಿಷ್ಯರಿಗೆ ಹೇಳಿಕೊಡುತ್ತಿದ್ದರು. ಈ ದಿನ ಬೆಳಿಗ್ಗೆ ಹೆರಿಗಲ್ ನಲ್ಲಿ ಯಾವುದೇ ಬಗೆಯ ಆತಂಕವಿರಲಿಲ್ಲ. ಆಸಕ್ತಿ ಇರಲಿಲ್ಲ, ಈತ ತನ್ನ ದೇಶಕ್ಕೆ ಹಿಂತಿರುಗಿ ಹೋಗುತ್ತಿರುವೆ ಎನ್ನುವ ಖುಷಿಯಲ್ಲಿದ್ದ. ಈ ಇಡಿ ಯೋಜನೆಯನ್ನೆ ಕೈ ಬಿಟ್ಟಿದ್ದ. ಆದುದರಿಂದ ಗುರುಗಳು ಅವರ ಕೆಲಸವನ್ನು ಮುಗಿಸಿ ಬರುವ ವರೆಗೂ ಕಾದಿದ್ದು ಹೇಳಿ ಹೋಗುವೆ ಎಂದು ಅಲ್ಲಿಯೇ ಕುಳಿತ.

ಬೆಂಚಿನ ಮೇಲೆ ಕುಳಿತಿದ್ದಾಗ ಗುರುಗಳನ್ನು ಈತ ಮೊದಲ ಬಾರಿಗೆ ನೋಡಿದ. ಮೂರು ವರ್ಷದಲ್ಲಿ ಇದೇ ಮೊದಲ ಬಾರಿ ಈತ ಗುರುಗಳನ್ನು ನೋಡಿದ್ದು. ವಸ್ತುಶಃ ‘ಗುರುಗಳು ಏನೂ ಮಾಡುತ್ತಿರಲಿಲ್ಲ ಬಾಣ ತನ್ನಷ್ಟಕ್ಕೆ ತಾನೇ ಹೋಗುತ್ತಿತ್ತು. ಗುರಿ ಹೊಡೆಯುವವ ಅಲ್ಲಿರಲಿಲ್ಲ.

ಅಹಂ ಸದಾ ಗುರಿಯ ಕಡೆಗೇ ಓಡುತ್ತಿರುತ್ತದೆ. ವಿನೋದಕ್ಕೆ, ತಲುಪಲು ಯಾವ ಗುರಿಯೂ ಇಲ್ಲ, ವಿನೋದಕ್ಕಿರುವುದು ಯಾವಾಗ ಬಾಣವು ಬಿಲ್ಲನ್ನು ಬಿಡುತ್ತದೋ ಅದು ಮಾತ್ರ. ಅದೇನಾದರೂ ಗುರಿಗೆ ತಾಗಿದರೆ ಅದೊಂದು ಆಕಸ್ಮಿಕವಷ್ಟೆ. ಬಾಣ ಗುರಿ ತಲುಪುವುದು ಮುಖ್ಯವೆ ಅಲ್ಲ. ಆದರೆ ಬಾಣ ಬಿಲ್ಲನ್ನು ಬಿಡುವಾಗ ವಿನೋದದಿಂದಿರಬೇಕು. ಗಂಭೀರನಾಗಿರದೆ, ಲೀಲಾಜಾಲವಾಗಿ, ಆನಂದವಾಗಿದ್ದಲ್ಲಿ ಅತ್ಯಂತ ವಿಶ್ರಾಮದಿಂದ ಇದ್ದಲ್ಲಿ ಮಾತ್ರ ನೀವು ನೀವಾಗಿರುವಿರಿ., ನೀವು ಗಂಭಿರರಾದಲ್ಲಿ ಅಲ್ಲಿ ಅಹಂಕಾರ ಬರುವುದು. ನೀವು ಅಸ್ಪಷ್ಟರಾಗುವಿರಿ.

ಆಗ ಮೊಟ್ಟ ಮೊದಲ ಬಾರಿ ಹೇರಿಗಲ್ಲ ಬದಲಾದ......ಈಗ ಆತ ಗಂಭೀರನಾಗಿರಲಿಲ್ಲ, ವಿನೋದದಿಂದಿದ್ದ. ಮತ್ತು ಮೊದಲ ಸಲ ಈತನ ಗಮನ ಗುರಿಯ ಕಡೆಗಿರಲಿಲ್ಲ. ಗುರು ಮೆಚ್ಚುವ ಶಿಷ್ಯನಾದ. ಹಾಗಾಗಿ, ಗೆಳೆಯರೇ.....ಪ್ರತೀ ಕೆಲಸದಲ್ಲಿ ಎಕಾಗ್ರತೆ ಇರಿಸಿಕೊಳ್ಳೋಣ. ಆದರೆ ಗಡಸುತನ,ಗಂಭೀರತೆಯ ಬದಲಾಗಿ ಹಸನ್ಮುಖಿಗಳಾಗಿ, ಸರಳತೆಯಿಂದ ಸಾಧನೆಯ ದಾರಿಯಲ್ಲಿ ನಡೆಯೋಣ.
ಇದುಪ್ರೀತಿಯಿಂದ.........
-13/05/14

ನಮ್ಮೊಳಗಿನ 'ಸ್ವಾಭಿಮಾನ ಯುಗಾದಿ'...
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ...
ಒಂದು ಊರಿನಲ್ಲಿ ಒಬ್ಬ ರಾಜ ಇದ್ನಂತೆ, ಒಂದು ಕೋಟೆಯಲ್ಲಿ ಒಂದಷ್ಟು ಸೈನಿಕರು ಇದ್ರಂತೆ, ಒಂದು ಊರಿನಲ್ಲಿ ಒಬ್ಬ ಜಮೀನ್ದಾರ ಇದ್ನಂತೆ, ಒಂದು ಕೇರಿಯಲ್ಲಿ ಒಂದು ಗುಡಿಸಲು ಇತ್ತಂತೆ..... ಈ ಥರ ನೂರಾರು, ಸಾವಿರಾರು ಕಥೆಗಳಿಗೇನು ಬರ ಇಲ್ಲ ನಮ್ಗಳ ಹತ್ರ.
ಆದರೆ, ವಾಸ್ತವವಾಗಿ ಯಾರು, ಎಲ್ಲಿ, ಎಷ್ಟು ಕಾಲ, ಯಾರ ಜೊತೆ ಇದ್ರು ಅನ್ನೋ ವಿಚಾರಕ್ಕಿಂತ..... ಹೇಗಿದ್ರು ಅನ್ನೋ ಆಚಾರ ಮಾತ್ರ ಮುಖ್ಯ. ಅಂತದ್ರಲ್ಲಿ ತಿಳಿದೋ ತಿಳಿಯದೆಯೋ, ಅರಿತೋ ಅರಿಯದೆಯೋ, ಒಬ್ಬೊಬ್ಬ ಮನುಷ್ಯನೂ... ತನ್ನ ಮೂಗಿನ ನೇರಕ್ಕೆ ಬದುಕಿಬಿಟ್ಟು, ಬಾಳಿಬಿಟ್ಟು, ಜೊತೆಜೊತೆಗೆ ಎಷ್ಟೆಷ್ಟೋ ಮೌಲ್ಯಗಳನ್ನು ಬಿಟ್ಟು ಹೋಗ್ತಾ ಇರ್ತಾನೆ. ಆತ ಬಿಟ್ಟು ಹೋದ ಅಥವಾ ಅರ್ದಂಬರ್ದ ಸುಟ್ಟು ಹೋದ, ಅಳಿಕೆ-ಉಳಿಕೆ ಮೌಲ್ಯಗಳನ್ನಾದ್ರು ಮತ್ತೊಬ್ಬರು ಎತ್ತಿ ಹಿಡಿಯುವ, ಪರಿಪಾಲಿಸುವ ಕೆಲಸವನ್ನ ಮಾಡೋದಾಗಿದ್ರೆ ಪ್ರಾಯಶಃ ಈ ಭೂಮಿ ಒಂದಷ್ಟು ಅಸ್ತಿತ್ವವನ್ನಾದರು ಉಳಿಸಿಕೊಳ್ಳುತ್ತಿತ್ತೇನೋ!?

ಮನುಷ್ಯ ಬದುಕಿರುವಾಗಲೂ ಭೂಮಿಗೆ ಭಾರವಾಗಿ, ಸತ್ತ ಮೇಲೂ ಅಸ್ಥಿಯಾಗಿ (ಕೇವಲ ಮೂಳೆಯಾಗಿ) ಹೋಗುವುದರಿಂದಲೇ ಭೂಮಿಗೆ ಅಸ್ತಿತ್ವದ ಕೊರತೆ ಕಾಡಿರುವುದು. ಬದುಕಿದವನಿಗೆ ಅಹಂಕಾರ. ಸತ್ತವನಿಗೆ ಅಲಂಕಾರ. ಇಂತ ಕಾರಕತ್ವದಲ್ಲಿ 'ಕಲೆ' ಎಂಬ ಹಸನಾದ, ನವಿರಾದ, ಸೂಕ್ಷ್ಮವಾದ ವಿಚಾರಕ್ಕೆ ಮನ್ನಣೆ ಸಿಗುವುದು ಮಣ್ಣಿಂದಲೇ ಎಂಬುವುದು ವಿಪರ್ಯಾಸ. ಕೆಲವೊಮ್ಮೆ ಹಾಗೇನೇ..... ಭಾಷೇನೇ ಅರ್ಥವಾಗಲ್ಲ. ಆದರೂ, ಪದಗಳು ಇದ್ದೇ ಇರುತ್ತೆ. ಕೆಲವೊಮ್ಮೆ ಭಾವನೆನೇ ಅರ್ಥವಾಗಲ್ಲ. ಆದರೆ, ಅವಸ್ಥೆಗಳು ಇದ್ದೇ ಇರುತ್ತೆ.

ಪ್ರೀತಿಯ ಗೆಳೆಯರೇ, ಈ ಮೇಲ್ಕಂಡ ಸಾಲುಗಳಲ್ಲಿನ ಭಾವಾರ್ಥವಾಗಲೀ, ಗೂಡಾರ್ಥವಾಗಲೀ ಏನೇ ಇದ್ದಿರಲಿ..... ಒಬ್ಬ ಕಲಾವಿದನಂತು ತಾನು ಕಲೆಯನ್ನು ಬೆಳೆಸುವ ಮಾತಾಡುವುದರ ಬದಲಾಗಿ, ಕಲೆ ಎಂಬ ದಿವ್ಯಶಕ್ತಿ ತನ್ನನ್ನು ಬೆಳೆಸುತ್ತಿದೆ ಎಂಬ ಸತ್ಯವನ್ನ ಅರಿತುಕೊಳ್ಳಬೇಕು. ಅಂತೆಯೇ ಯಾವುದೇ ಒಬ್ಬ ಹೋರಾಟಗಾರ ತಾನು ಒಂದು ಭಾಷೆಯನ್ನೂ ಉಳಿಸುತ್ತೇನೆ ಎಂಬ ಅಹಂಭಾವ ಮಾತಾಡುವುದರ ಬದಲಾಗಿ ಅಂಥಾ ಆ ಒಂದು ಭಾಷೆಯೇ ತನ್ನಂತವನನ್ನು ಉಳಿಸುತ್ತಿದೆ ಎಂಬ ಸತ್ಯಾಂಶವನ್ನು ಮನಗಾಣಬೇಕು.
ಜಗತ್ತಿನಲ್ಲಿ ಲಕ್ಷಾಂತರ ಪುಸ್ತಕಗಳಿವೆ. ಆದರೆ, ಎಲ್ಲರೂ ಎಲ್ಲಾ ಪುಟಗಳನ್ನೂ ತಿರುವಿ ಹಾಕಿರುವುದಿಲ್ಲ.

ಹಾಗೇನೇ ಅದೇ ಜಗತ್ತಿನಲ್ಲೇ ಕೋಟ್ಯಾಂತರ ಹೃದಯವಂತರಿದ್ದಾರೆ. ಆದರೆ, ಎಲ್ಲರೂ ಅದೇ ಹೃದಯಗಳನ್ನು ಮೀಟಿರುವುದಿಲ್ಲ. ಕೊನೇ ಪಕ್ಷ ಗಾವುದ ದೂರವಿರುವ ಅದರ ಹೊಸಿಲನ್ನೂ ದಾಟಿರುವುದಿಲ್ಲ.

ಇಂತವಕ್ಕೆಲ್ಲ ಕಾರಣ... ನಿಜವಾದ, ನೈಜವಾದ, ನಾಜೂಕಾದ, ಒಳ್ಳೆಯ ತನವನ್ನು ಕಾಣುವ ನಿಟ್ಟಿನಲ್ಲಿ ಅನೇಕರಿಗೆ ಆಸಕ್ತಿಯೇ ಇರುವುದಿಲ್ಲ.

ಇಂತಹ ಹತ್ತು ಹಲವಾರು ಜಿಜ್ಞಾಸೆಗಳ ನಡುವೆಯೂ ನಮ್ಮ ಮಣ್ಣಿನ ಕಲಾವಿದರು, ತಂತ್ರಜ್ಞರು, ಕ್ರಿಯಾಶೀಲರು, ಉತ್ತರೋತ್ತರ ಅಭಿವೃಧ್ಧಿಯನ್ನು ಪಡೆದು, ಇಡೀ ದೇಶವೇ ಬೆರಗಾಗಿ ಬೆನ್ತಟ್ಟುವಂತೆ ಬೆಳೆಯುತ್ತಿರುವ ಪರಿ ನಿಜಕ್ಕೊ ಶ್ಲಾಘನೀಯ. ಅಂಥ ಪ್ರತಿಯೊಬ್ಬರಿಗೂ ಹಿಂದೆ ಬಂದು ಹೋದ 'ಚಾಂದ್ರಮಾನ ಯುಗಾದಿ'ಯ ಶುಭಾಶಯಗಳು ಹಾಗೂ... ಇದೀಗ ಕಣ್ಬಿಟ್ಟ 'ಸೌರಮಾನ ಯುಗಾದಿ'ಯ ಹಾರೈಕೆಗಳು ಮತ್ತು ಸದಾ ಕಾಲ ನಮ್ಮೆಲ್ಲರನ್ನೂ ತಲೆಕಾಯುವುದು ನಮ್ಮ ನಮ್ಮೊಳಗಿನ "ಸ್ವಾಭಿಮಾನ ಯುಗಾದಿ".
ಈ ನಿಜವಾದ ಸತ್ಯವನ್ನು ಅಥವಾ... ಸತ್ಯವಾದ ನಿಜವನ್ನು ಹೃದಯಪೂರ್ವಕವಾಗಿ ಒಪ್ಪಿಕೊಳ್ಳೋಣ.
ಇದು "ಪ್ರೀತಿ"ಯಿಂದ
-15/04/14

"ಮಂಚದ ಕಾಲುಗಳು"
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ..........
ಒಬ್ಬ ಮನುಷ್ಯ ಯಾವತ್ತಿಗೇ ಆದರೂ, ತನ್ನದೇ ಆದ ಒಂದು ಅಸ್ಥಿತ್ವವನ್ನು ಕಂಡುಕೊಳ್ಳಬೇಕಾದರೆ ಕನಿಷ್ಠ ಒಂದು ಮುಷ್ಠಿಯಷ್ಟಾದರೂ ನಂಬಿಕೆ ಎಂಬುದೊಂದನ್ನು ಇಟ್ಟುಕೊಂಡಿರಲೇಬೇಕಾಗುತ್ತೆ. ಅನೇಕ ಸಾರಿ ನಂಬಿಕೆ ಎಂಬ ವಸ್ತು ಎಲ್ಲಿರುತ್ತದೋ, ಅಂಥೆಲ್ಲೆಲ್ಲಾ ಭ್ರಮೆ ಮತ್ತು ಅನಾವಶ್ಯಕ ಕಲ್ಪನೆಗಳು ಆ ನಂಬಿಕೆ ಎಂಬುದನ್ನು ತೊಂದರೆಗೊಳಪಡಿಸುತ್ತಲೇ ಇರುತ್ತದೆ.

ಒಬ್ಬ ನಿಜವಾದ.. ವಿವೇಕ, ವಿವೇಚನೆ ಉಳ್ಳವನು ಮಾತ್ರವೇ ಅಂಥಹಾ, ಬೇಡದಂಥಾ ಕಲ್ಪನೆ, ಭ್ರಮೆಗಳಿಂದ ಹೊರಬಂದು ನಿಜವಾದ "ನಂಬಿಕೆ" ಎಂಬ ಮಹಾನ್ ಶಕ್ತಿಯನ್ನು ತನ್ನದಾಗಿಸಿಕೊಂಡಿರುತ್ತಾನೆ. ಯಾವ ಮನುಷ್ಯನಿಗೆ ತನ್ನ ನಂಬಿಕೆಯ ಮೇಲಿನ ನಂಬಿಕೆ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೂ ಆತನನ್ನು ಯಾವುದೇ ರೀತಿಯ ಸೋಲು, ಅವಮಾನ, ಅನುಮಾನಗಳು ಕಾಡುವುದಿಲ್ಲ. ಮುಂದೊಂದು ದಿನ ಆತ ನಿಜಕ್ಕೂ ಒಬ್ಬ ಸಾಧಕನಾಗಿಯೇ ಮೆರೆದುಬಿಡಬಲ್ಲ. ಈ ಸಮಯದಲ್ಲಿ ಹಿರಿಯರೊಬ್ಬರು ಬರೆದ ಪುರಾತನ ಕತೆಯೊಂದು ನೆನಪಾಗುತ್ತದೆ.

ಒಮ್ಮೆ ಒಬ್ಬ ವ್ಯಕ್ತಿಗೆ ಆತನ ಜೀವನದಲ್ಲಿ ಪ್ರತೀ ರಾತ್ರಿ..... ಹಾಗೂ...ಇಡೀ ರಾತ್ರಿ.... ದುಃಸ್ವಪ್ನಗಳೊಂದಿಗೆ ಕೂಡಿರುತ್ತಿತ್ತು.ಆತನ ಇಡೀ ರಾತ್ರಿಯೂ ಸೆಣಸಾಟವಾಗಿತ್ತು. ಅತ್ಯಂತ ನೋವಿನದಾಗಿತ್ತು. ಈ ಪರಿಸ್ಥಿತಿಯಿಂದಾಗಿ ಆತನಿಗೆ. ರಾತ್ರಿ ಮಲಗುವುದೆಂದರೆ ಹೆದರಿಕೆಯಾಗುತ್ತಿತ್ತು ಮತ್ತು ಬೆಳಗ್ಗೆ ಯಾವಾಗ ಆಗುತ್ತದೋ ಎಂದು ಕಾಯುವಂತಾ ಪರಿಸ್ಥಿತಿ ಎದುರಾಗುತ್ತಿತ್ತು . ಹಗಲಾಯಿತು ಎಂದರೆ ಆತನಿಗೆ ಖುಷಿ.

ಆತನ ಸ್ವಪ್ನದ ಸ್ವಭಾವ ಹೇಗಿತ್ತೆಂದರೆ, ಆತ ಮಲಗಿದಾಕ್ಷಣ, ಆತನ ಮಂಚದ ಕೆಳಗೆ ಲಕ್ಷಾಂತರ ಸಿಂಹಗಳು, ವಿಷಸರ್ಪಗಳು, ಹುಲಿಗಳು, ಮೊಸಳೆಗಳು ಅಷ್ಟು ಚಿಕ್ಕ ಮಂಚದ ಕೆಳಗೂ ಕುಳಿತಿರುತ್ತಿದ್ದವು. ಯಾವುದೇ ಕ್ಷಣದಲ್ಲಾದರೂ ಅವು ಈತನ ಮೇಲೆ ಎರಗಬಹುದು ಎಂಬ ಭಯದಿಂದ ಆತನಿಗೆ ನಿದ್ರಿಸಲಾಗುತ್ತಿರಲಿಲ್ಲ.

ಇಡೀ ರಾತ್ರಿ ಆತನಿಗೆ ಪೇಚಾಟವಾಗಿತ್ತು. ಹಿಂಸೆ, ನರಕವಾಗಿತ್ತು. ಆತನಿಗೆ ಔಷಧೊಪಚಾರ ಮಾಡಲಾಯಿತು, ಆದರೆ ಯಾವುದೂ....ಸಹಾ ಕೆಲಸ ಮಾಡಲಿಲ್ಲ. ಮನೋವ್ಯೆದ್ಯರಿಂದ ವಿಶ್ಲೇಷಿಸಲಾಯಿತು, ಇದರಿಂದ ಏನೂ ಪ್ರಯೋಜನವಾಗಲಿಲ್ಲ.
ಇದ್ದಕ್ಕಿದ್ದಂತೇ... ಒಂದು ದಿನ ಆತ ನಗುತ್ತಾ.... ತನ್ನ ಮನೆಯಿಂದ ಹೊರಗೆ ಬಂದ.

ಅನೇಕ ವರ್ಷಗಳಿಂದ ಈತ ನಕ್ಕಿದನ್ನು ಯಾರೂ ನೋಡಿರಲಿಲ್ಲ. ಆತನ ಮುಖ ನರಕಸದೃಶ್ಯವಾಗಿರುತ್ತಿತ್ತು. ಸದಾ ದುಃಖ , ಹೆದರಿಕೆ, ಭಯದಿಂದ ತುಂಬಿರುತ್ತಿತ್ತು. ಆದ್ದರಿಂದ ನೆರೆಮನೆಯವರು ಕೇಳಿದರು, ನೀನು ನಗುತ್ತಿರುವೆಯಲ್ಲ ಏನು ಸಮಾಚಾರ? ನೀನು ನಕ್ಕಿದನ್ನು ನೋಡಿ ಬಹಳ ಸಮಯವಾಯಿತು. ನೀನು ನಗುತ್ತಿದ್ದೆ ಎಂಬುದೂ ಸಹ ನಮಗೆ ಮರೆತೇ ಹೋಗಿದೆ. ಏನಾಯಿತು ನಿನ್ನ ದುಃಸ್ವಪ್ನಗಳಿಗೆ?"

ಈತನೆಂದ " ಬಡಗಿಯೊಬ್ಬ ಸುಮ್ಮನೆ ನನ್ನ ಮಂಚದ ಕಾಲುಗಳನ್ನು ಕುಯ್ದುಬಿಟ್ಟ ಈಗ ಆ ಮಂಚದ ಕೆಳಗೇ ಜಾಗವೇ ಇಲ್ಲ. ಆದುದರಿಂದ ನಾನು ಮೊದಲ ಸಲ ಹಾಯಗಿ ನಿದ್ರಿಸಿದೆ!" ಎಂದ.

ನೀವೊಂದು ಅಂತರವನ್ನು ನಿರ್ಮಿಸುವಿರಿ.... ಮತ್ತು ಆಸೆ ಎಂಬುದು ಈ ಅಂತರವನ್ನು ನಿರ್ಮಿಸುವ ದಾರಿ. ಆಸೆ ದೊಡ್ಡದಿದ್ದಷ್ಟೂ.... ಅದರ ಅಂತರವೂ ವಿಸ್ತಾರವಾಗಿರುತ್ತದೆ. ನಿಮ್ಮ ಆ ಆಸೆ ಈಡೇರಲು ಒಂದು ವರ್ಷ ತೆಗೆದುಕೊಂಡಲ್ಲಿ....ಅದರ ಅಂತರವೂ....ಅದೇ ಒಂದು ವರ್ಷದಷ್ಟಿರುತ್ತದೆ. ನೀವು ಅದರಲ್ಲಿ ಹಾವುಗಳು, ಘಟಸರ್ಪಗಳನ್ನು ಎದುರುಗೊಳ್ಳಬೇಕಾಗುವುದು. ನೀವು ನಿರ್ಮಿಸಿರುವ ಅಂತರವೇನಿದೆ? ಅದು ನಿರ್ಮಿತವಾದದ್ದು ಆಸೆಯಿಂದ, ನೀವದನ್ನು "ಸಮಯ", "ಕಾಲ", "ಹಣೆಬರಹ" ಎಂದು ಕರೆಯುವಿರಿ. ಹಾಗಾಗಿ ಆಸೆ, ಆಕಾಂಕ್ಷೆ, ಅಧಿಕಾರದ ಮೋಹವೇ ಇಲ್ಲದಿದ್ದರೆ, ಆಗ ಚಿಂತಿಸುವ ಯಾವುದೇ ಅಗತ್ಯವೂ ನಮಗೆ ಇರುವುದಿಲ್ಲ.

ಹಾಗಾಗಿ.... ಪ್ರಿತಿಯ ಗೆಳೆಯರೇ... ಒಂದು ವಿಷಯವನ್ನಂತೂ ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ನಮ್ಮ ಕೆಲಸದ ಮೇಲೆ ನಿಜವಾದ ನಿಷ್ಟೆ, ಪ್ರಾಮಾಣಿಕತೆ, ತನ್ನಂಬಿಕೆ ಇರುವವನು ಎಂದೆಂದಿಗೂ... ಜಯಶಾಲಿಯಾಗಬಲ್ಲ. ಹಾಗೆಯೇ ನಿಜವಾದ ಜಯಶಾಲಿಯು.. ನಿಜವಾಗಿಯೂ ಪ್ರತೀ ಪರಿಶ್ರಮದ ನಂಬಿಕೆಯನ್ನ ತನ್ನಲ್ಲಿ ಉಳಿಸಿಕೊಳ್ಳಬಲ್ಲ. ಇಂಥಾ ಸಹಜ ಜಯಶಾಲೀ ರಹಸ್ಯವು ಪ್ರತಿಯೊಬ್ಬರಲ್ಲೂ ಸದಾ... ಇರಲಿ. ಎಂದು ಆಶಿಸೋಣ..........
ಇದು
"ಪ್ರೀತಿ"ಯಿಂದ
-15/03/14

"ನಮ್ಮಂತೆಯೇ... ಎಲ್ಲರೂ........."
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ..........
ನಮ್ಮ ಭಾರತ ದೇಶದಲ್ಲಿ ಮರಳಿ ಮರಳಿ ಮರುಕಳಿಸೊ ಹತ್ತಾರು ದಿವ್ಯ ಹಬ್ಬಗಳ ರೀತಿ ಇಡೀ ವಿಶ್ವವೇ ಆವರಿಸಿಕೊಂಡಂತಹ ಪ್ರತೀ ಯುವಕ ಯುವತಿಯರ ಹಬ್ಬ ಎಂದರೆ, ಈ ಪ್ರೇಮಿಗಳ ದಿನ.
ಪ್ರೀತಿ ಚಿರಾಯು, ಪ್ರೀತಿ ಅಮರ, ಪ್ರೀತಿ ನಿರಂತರ, ಪ್ರೀತಿ ಅಜರಾಮರ, ಕಾರಣ ಪ್ರೀತಿ ಎಂಬ ಶಕ್ತಿಗೆ ಯಾವುದೇ ಭೇದಭಾವವಿಲ್ಲ. ಹಾಗಾಗಿಯೇ ಅದು ಆಕಾಶ, ಗಾಳಿ, ನೀರು, ಬೆಂಕಿ ಮತ್ತು ಭೂಮಿ ಎಂಬ ಪಂಚಭೂತಗಳನ್ನೂ ಮೆಚ್ಚಿ ಆರನೇ ಶಕ್ತಿಯಾಗಿ ನಿಂತಿದೆ.

ಈ ನಿತ್ಯ ವಸಂತವೀಯುವ ಪ್ರೇಮಕ್ಕೆ ಮತ್ತು ಪ್ರೇಮಿಗಳ ದಿನಕ್ಕೆ ಎದ್ದು ನಿಂತು ವಂದಿಸಿ ಮುಂದುವರೆಯೋಣ. ಜೊತೆಗೆ ಒಂದಿಷ್ಟು ನಂಬಿಕೆಗಳನ್ನು ಹಾಗೂ ಸ್ಪಷ್ಟವಾದ ಕನಸುಗಳನ್ನು ಹೊತ್ತೊಯ್ಯೋಣ.
ಬಲ್ಲವರು ಬರೆದಂತೆ ಬಹಳ ಹಿಂದೆ ನಡೆದ ಕಥೆ. ರಾಜನೊಬ್ಬನಿದ್ದ. ಆತ ಜ್ಯೋತಿಷಿಯೂ ಆಗಿದ್ದ. ನಕ್ಷತ್ರ ಮಂಡಲವನ್ನು ಅಧ್ಯಯನ ಮಾಡುವ ತೀವ್ರ ಆಸಕ್ತಿ ಈತನಿಗೆ. ಆತನಿಗೆ ಒಂದು ವಿಷಯ ಗೊತ್ತಾಯಿತು. ಕೂಡಲೇ ಈತನಿಗೆ ಹೆದರಿಕೆಯೂ ಆಯಿತು. ಏಂಕೆದರೆ ಮುಂದಿನ ವರ್ಷದ ಬೆಳೆಯನ್ನು ತಿಂದರೆ ಬಲು ಅಪಾಯ. ಆ ಬೆಳೆಯನ್ನು ತಿಂದರೆ ಎಲ್ಲರೂ ಹುಚ್ಚರಾಗುವರು ಎಂದು ಆತನಿಗೆ ಗೊತ್ತಾಯಿತು. ಕೂಡಲೇ ಮಂತ್ರಿ ಮತ್ತು ಸಲಹಾ ಸಭೆಯನ್ನು ಕರೆದು ಈ ವಿಷಯವನ್ನು ಅವರಿಗೆ ಹೇಳಿದ, ನಕ್ಷತ್ರಗಳು ಬಲು ಸ್ಪಷ್ಟವಾಗಿ ಈ ಗಂಡಾಂತರವನ್ನು ಸೂಚಿಸುತ್ತಿವೆ. ಕಾಸ್ಮಿಕ್ ಕಿರಣಗಳ ಪ್ರಭಾವದಿಂದ ಮುಂದಿವ ವರ್ಷದ ಬೆಳೆಗಳು ವಿಷಕಾರಿಯಾಗುತ್ತವೆ. ಹೀಗಾಗುವುದು ಅಪರೂಪ, ಸಾವಿರಾರು ವರ್ಷಗಳಿಗೊಮ್ಮೆ. ಅಂದರೆ ಮುಂದಿನ ವರ್ಷವೇ ಸಂಭವಿಸುವುದು. ಮತ್ತು ಯಾರೇ ಆ ಬೆಳೆಯನ್ನು ತಿಂದರೂ ಅವರು ಹುಚ್ಚರಾಗುವರು. ಆದ್ದರಿಂದ ನಾವೇನು ಮಾಡಬೇಕು? ಎಂದು ಕೇಳಿದನು.

ಮಂತ್ರಿ ಹೇಳಿದನು; "ಕಳೆದ ವರ್ಷದ ದಾಸ್ತಾನಿನಿಂದ ಆಹಾರ ಒದಗಿಸುವುದು ಅಸಾಧ್ಯದ ವಿಚಾರ, ಅಷ್ಟು ದವಸವಿಲ್ಲ. ಆದರೆ ಹೀಗೆ ಮಾಡಬಹುದು. ನಾನು ಮತ್ತು ನೀವು ಕಳೆದ ವರ್ಷದ ದವಸವನ್ನು ತಿನ್ನಬಹುದು. ಹೋದ ವರ್ಷದ ದವಸವನ್ನು ಶೇಖರಿಸಿ ಕೂಡಿಡಬಹುದು. ಇದಕ್ಕೇನೂ ತೊಂದರೆ ಇಲ್ಲ. ನಮಗಿಬ್ಬರಿಗೆ ಅಷ್ಟು ಸಾಕು."

ರಾಜ ಹೇಳಿದ:" ಇದು ನನಗೆ ಒಪ್ಪಿಗೆ ಇಲ್ಲ. ನನ್ನನ್ನು ನಂಬಿದವರೆಲ್ಲರೂ ಹುಚ್ಚರಾದರೆ? ಹೆಂಗಸರು, ಮುನಿಗಳು, ಪ್ರಾಮಾಣಿಕ ಕೆಲಸಗಾರರು. ನನ್ನ ಪ್ರಜೆಗಳು, ಮಕ್ಕಳೂ ಸೇರಿ! ನೀನು ನಿನ್ನನ್ನು ರಕ್ಷಿಸಿಕೊಳ್ಳುವುದು ದೂಡ್ಡದೆನಿಸುವುದಿಲ್ಲ. ನಾನೂ ಕೂಡಾ ಎಲ್ಲರೂಡನೆ ಹುಚ್ಚನಾಗುವೆ, ಹೀಗಾಗಲು ಸಾಧ್ಯವಿಲ್ಲ ಎಂದು. ಆಗ ನನ್ನಲ್ಲಿ ಇನ್ನೂಂದು ಸಲಹೆ ಇದೆ ಎಂದು ರಾಜ ಹೇಳಿದ. ನಿನ್ನ ಹಣೆಯ ಮೇಲೆ ನಾನು, ನೀನು ಹುಚ್ಚನೆಂದು ಮುದ್ರೆಯೊತ್ತುವೆ, ನೀನು ನನ್ನ ಹಣೆಯ ಮೇಲೆ ನೀನು ಹುಚ್ಚನೆಂದು ಮುದ್ರೆಯೊತ್ತು."

ಮಂತ್ರಿ ಕೇಳಿದ,: ಇದೊಂದು ಪುರಾತನ ವಿವೇಕದ ಮರ್ಮವೆಂದು ನಾನು ಕೇಳಿರುವೆ. ಇದನ್ನು ಪ್ರಯತ್ನಿಸಿ ನೋಡೋಣ. ಎಲ್ಲರೂಹುಚ್ಚರಾದ ಮೇಲೆ, ನಾವೂ ಹುಚ್ಚರಾದಮೇಲೆ. ನಾನು ನಿನ್ನ ಹಣೆಯನ್ನು ನೋಡಿದಾಗಲೆಲ್ಲ ನಾನು ಹುಚ್ಚನೆಂದು ನೆನಪಾಗುತ್ತದೆ."

ಈಗ ಮಂತ್ರಿಗೆ ಇನ್ನಷ್ಟು ಅಶ್ಚರ್ಯ; ಆತನೆಂದ,: ಆದರೆ ಇದರಿಂದ ಏನಾಗುತ್ತದೆ?"
ರಾಜನೆಂದ: ನಾನು ವಿವೇಕಿಗಳು ಹೇಳಿರುವದನ್ನು ಕೇಳಿರುವೆ: ನಿಮಗೆ ನೀವು ಹುಚ್ಚರೆಂಬುದು ನೆನಪಾದರೆ, ಆಗ ನೀವು ಹುಚ್ಚರಾಗಿರುವುದಿಲ್ಲ. ಎಂದು,;
ಹುಚ್ಚ ಎಂದೂ ತಾನೂ ಹುಚ್ಚ ಎಂದು ನೆನಪಿಸಿಕೊಳ್ಳುವದಿಲ್ಲ. ಮೂಢನೆಂದೂ ತಾನು ಮೂಢನೆಂದು ನೆನಪು ಮಾಡಿಕೊಳ್ಳುವುದಿಲ್ಲ. ಕನಸಿನಲ್ಲಿರುವವ ತಾನು ಕನಸಿನಲ್ಲಿರುವೆ ಎಂದು ಸ್ಮರಿಸುವುದಿಲ್ಲ. ನೀವೇನಾದರು ನಿಮ್ಮ ಕನಸಿನಲ್ಲಿ ಎಚ್ಚರಗೊಂಡು ನೀವು ಕನಸು ಕಾಣುತ್ತಿರುವಿರಿ ಎಂದು ಅರಿತರೆ, ಆಗ ಕನಸು ನಿಂತುಹೋಗುವುದು. ಕೂಡಲೇ ನೀವು ಪೂರ್ತಿಯಾಗಿ ಎಚ್ಚರಗೊಳ್ಳುವಿರಿ. ನಿಮಗೆ ನೀವು ಮೂಢರು ಎಂದು ತಿಳಿದರೆ ನಿಮ್ಮ ಮೂಢತೆ ನಿಂತುಹೋಗುವುದು. ಮೂಢರು ಸದಾ ತಾವು ವಿವೇಕಿಗಳು ಎಂದು ನಂಬುವರು, ಹುಚ್ಚರು ತಾವು ಸ್ವಸ್ಥರೆಂದುಕೊಳ್ಳುವರು. ತಮ್ಮನ್ನು ಮೂಢರೆಂದು ಗುರುತಿಸಿಕೊಂಡವರೇ ವಾಸ್ತವವಾಗಿ ವಿವೇಕಿಗಳು "ಆದಕಾರಣ ನಾವೂ ಹೀಗೆ ಮಾಡುವ," ಎಂದ ರಾಜ.
ಇಡೀ ಜಗತ್ತೇ ಹುಚ್ಚಾಗಿರುವಾಗ ಕೇವಲ ಎಚ್ಚರಿಕೆ ಮಾತ್ರ ಸಹಾಯ ಮಾಡುವುದು. ನಿಮ್ಮನ್ನು ನೀವು ಹೊರಗೆ ಇರಿಸಿಕೊಂಡರೆ, ಹಿಮಾಲಯಕ್ಕೆ ಹೋದರೆ ಬಹಳ ಸಹಾಯವೇನೂ ಆಗುವುದಿಲ್ಲ. ಎಲ್ಲರೂ ಹುಚ್ಚರಾಗಿರುವಾಗ, ನೀವು ಸಹಿತ ಹುಚ್ಚರಾಗುವಿರಿ. ಏಕೆಂದರೆ ನೀವು ಎಲ್ಲರೊಂದಿಗೂ ಸೇರಿದ ಭಾಗ: ಇದೊಂದು ಸಮಗ್ರತೆ, ಸಂಪೂರ್ಣತೆ, ಸಚೇತನ ಸಂಪೂರ್ಣತೆ.

ಯಾವ ಕಥೆಗಳು ಏನೇ ಆಗಿರಲಿ, ಪ್ರೀತಿಯಂತೂ ಒಂದು ದಂತಕಥೆಯಾಗಲಿ, ನಮ್ಮ ನಮ್ಮ ಸ್ವಂತ ಕಥೆಯಾಗಲಿ.
ಇದು"ಪ್ರೀತಿ"ಯಿಂದ
-14/02/14

ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ..........
ಅನೇಕ ಸಾರಿ ನಮ್ಮ ಜೀವನದಲ್ಲಿ ತಿಳಿದೋ ತಿಳಿಯದೇನೋ ಹತ್ತಾರು ಏಳು ಬೀಳುಗಳನ್ನು ನೋಡುತ್ತಲೇ ಇರುತ್ತೇವೆ. ಹಾಗೂ ಆ ಸಂದರ್ಭದಲ್ಲಿ ಎದುರಾಗೋ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಇರುತ್ತೇವೆ... ಆದರೆ ಅಂಥಾ ಸಮಯದಲ್ಲಿ ನಮ್ಮಲ್ಲಿ ಅಚ್ಚಳಿಯದೇ ಉಳಿದುಕೊಂಡುಬಿಡುವಂಥದ್ದು ಮಾತ್ರ ಅರ್ಥವಾಗದಂಥಾ ಒಂದು ಪ್ರಶ್ನೆ...|| ಹೌದು ಇವೆಲ್ಲಾ ಯಾಕೆ ಹೀಗೆ ? ಯಾಕಾಗಿ ನಮಗೆ ಪದೇ ಪದೇ ಇಂಥಾ ಪರೀಕ್ಷೆಗಳು ? ಅದರಲ್ಲೂ ನಮಗೇ ಯಾಕೆ ಈ ರೀತಿ ಸಂಕಷ್ಟಗಳು? ಅಂತೆಲ್ಲಾ ಯೋಚಿಸುತ್ತಿರುತ್ತೇವೆ. ಆದರೆ ವಾಸ್ತವದಲ್ಲಿ ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಹ ಕಷ್ಟಗಳು, ಪರೀಕ್ಷೆಗಳು ಇದ್ದೇ ಇರುತ್ತವೆ. ಸಂಕಷ್ಟ, ಸವಾಲುಗಳು ಎದುರಾಗುತ್ತಲೇ ಇರುತ್ತವೆ ಎಂಬುದನ್ನ ಮಾತ್ರ ಯಾರೂ ಊಹಿಸೋದೇ ಇಲ್ಲ.....

ಯಾವುದು ಹೇಗೇ ಇರಲಿ ನಾವು ಎದುರಿಸೊ ಪ್ರತಿ ಕಷ್ಟ, ಸವಾಲುಗಳೇ ನಮ್ಮ ಮುಂದಿನ ಜೀವನದಲ್ಲಿ ತುಂಬಿಕೊಳ್ಳುವ ಧೈರ್ಯಕ್ಕೆ, ಧೃಡನಂಬಿಕೆಗಳಿಗೆ ಕಾರಣವಾಗೊದು.. ಇಂಥಾ ಪರಿಸ್ಥಿತಿಯಲ್ಲಿ ಬಹಳ ಜಾಗರೂಕರಾಗಿ, ನಾವು ತಂದುಕೋಳ್ಳಬೇಕಾದದ್ದು ಅಂದ್ರೆ ಎಕಾಗ್ರತೆ, ಅನೇಕ ಸಾರಿ ನಮ್ಮ ಅಕ್ಕ ಪಕ್ಕದಲ್ಲಿ ಇರುವವರಿಂದಲೇ ನಮ್ಮ ಸಾಮರ್ಥ್ಯವಾಗಲೀ ದೌರ್ಬಲ್ಯವಾಗಲೀ ಅಳೆಯಲ್ಪಡುತ್ತದೆ. ಅವನ್ನೆಲ್ಲ ಮರೆತು ಎಲ್ಲಿ ನಾವೇನಾವಾಗಿ ಒಂದು ಎಕಾಗ್ರತೆಗೆ ತೆರೆದುಕೊಳ್ಳುತ್ತೇವೊ ಅಲ್ಲಿ ಮಾತ್ರ ಯಶಸ್ಸು ಸಾಧ್ಯ. ಇದಕ್ಕೆ ಒಂದು ಉದಾಹರಣೆ, ಇಲ್ಲಿದೆ.......

ಝೆನ್ ಗುರುಗಳ ಬಗ್ಗೆ ಇರುವ ಒಂದು ಕಥೆ. ಇವರೊಬ್ಬ ಕಲೆಗಾರ, ಮಹಾರಾಜನು ಅವರಿಗೆ ಹೊಸದೊಂದು ಪಗೋಡದ ನಮೂನೆಯನ್ನು ಚಿತ್ರಿಸಲು ಹೇಳಿದ್ದನು. ಚಿತ್ರಿಸುವಾಗ ಗುರುಗಳು ತಮ್ಮ ಆಪ್ತ ಶಿಷ್ಯನನ್ನು ಹತ್ತಿರದಲ್ಲಿ ಕುಳ್ಳಿರಿಸಿಕೊಳ್ಳುವುದು ವಾಡಿಕೆಯಾಗಿತ್ತು, ಇವರು ಆ ಚಿತ್ರವನ್ನು ಬರೆಯುತ್ತಿದ್ದರು, ಶಿಷ್ಯನನ್ನು ನೋಡಿ ಕೇಳಿದರು, ”ನಿನಗೇನನಿಸುತ್ತದೆ?” ಎಂದು.
ಶಿಷ್ಯ ಹೇಳುತ್ತಿದ್ದ, ”ಇದು ನಿಮ್ಮ ಪ್ರಾವೀಣ್ಯತೆಗೆ ತಕ್ಕದ್ದಾಗಿಲ್ಲ.” ಎಂದು. ಹೀಗೆ ಶಿಷ್ಯ ಹೇಳಿದಾಗಲೆಲ್ಲಾ ಅವರು ಚಿತ್ರವನ್ನು ಅಳಿಸುತ್ತಿದ್ದರು. ಹೀಗೆ ತೊಂಬತ್ತೊಂಬತ್ತು ಸಲ ಆಯಿತು. ಹೀಗೆ ಮೂರು ತಿಂಗಳು ಕಳೆದುಹೋಯಿತು, ರಾಜನು ಪದೆ ಪದೇ ಕೇಳುತ್ತಲೇ ಇದ್ದನು. ಯಾವಾಗ ಪಗೋಡದ ನಮೂನೆ ಮುಗಿಯುತ್ತದೆ, ಮತ್ತು ನಾವು ಎಂದು ಇದನ್ನು ಕಟ್ಟಲು ಶುರುಮಾಡಬಹುದು ಎಂದು. ಒಂದು ದಿನ ಗುರುಗಳು ಚಿತ್ರ ಬರೆಯುತ್ತಿರುವಾಗ ಬಣ್ಣ ಮುಗಿದುಹೋಯಿತು. ಆಗ ಅವರು "ಹೊರಗಡೆಹೋಗಿ ಬಣ್ಣ ಸಿದ್ದಮಾಡಿಕೊಂಡು ಬಾ,” ಎಂದು,
ಶಿಷ್ಯನಿಗೆ ಹೇಳಿದರು, ಶಿಷ್ಯ ಹೊರಗೆ ಹೋಗಿ, ಬಣ್ಣ ತರುವಷ್ಟರಲ್ಲಿ ಇವರು ಚಿತ್ರವನ್ನು ಬರೆದು ಮುಗಿಸಿಬಿಟ್ಟಿದ್ದರು. ಶಿಷ್ಯ ಬಂದು ಆಶ್ಚರ್ಯದಿಂದ, ” ನೀವು ಮುಗಿಸಿಬಿಟ್ಟಿರಾ! ಮತ್ತೇಕೆ ಇದನ್ನು ಮುಗಿಸಲು ಮೂರು ತಿಂಗಳು ಹಿಡಿಯಿತು?" ಎಂದು ಕೇಳಿದನು.

ಆಗ ಗುರುಗಳು ಹೇಳಿದರು, ”ನಿನ್ನ ದೆಸೆಯಿಂದ, ನೀನು ನನ್ನ ಪಕ್ಕದಲ್ಲೇ ಕುಳಿತು ಗಂಭೀರವಾಗಿ ಗಮನಿಸುತ್ತಿದ್ದೆ ಮತ್ತು ನಾನು ಗುರಿಯ ಕಡೆಗೂ, ನಿನ್ನ ಕಡೆಗೂ ಗಮನವಿಟ್ಟಿದ್ದೆ. ನೀನಿಲ್ಲಿದ್ದಾಗ ನಾನು ವಿಭಜಿತನಾಗಿದ್ದೆ. ನೀನಿಲ್ಲಿ ಇರದಿದ್ದಾಗ ನಾನು ವಿಶ್ರಮಿಸಿದೆ, ಈಗ ಗಮನಿಸುವವರಾರೂ ಇರಲಿಲ್ಲ. ಆಗ ನಾನು ಸಮಗ್ರನಾದೆನು, ಏಕಾಗ್ರಚಿತ್ತನಾದೆನು. ಈ ಮಾದರಿಯನ್ನು ನಾನು ಮಾಡಲಿಲ್ಲ. ಅದು ತನ್ನಷ್ಟಕ್ಕೆ ತಾನೇ ಮೂಡಿಬಂತು.

ಹಾಗಾಗಿ ನಾವು ಎನನ್ನೇ ಗಳಿಸದಿದ್ದರೂ ಒಂದಷ್ಟು ಏಕಗ್ರತೆಯನ್ನಾದರೂ ಗಳಿಸಿದ್ದಾದ್ರೇ ಅಂದುಕೊಳ್ಳುವುದಕ್ಕಿಂತಲೂ ಎರಡರಷ್ಟು ಸಾಧನೆ ಸಾಧ್ಯ.....
ಇದುಪ್ರೀತಿಯಿಂದ.........
-11/12/13


ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ
ಒಮ್ಮೆ ಭಗವಾನ ಬುದ್ಧ ಒಂದು ಕಥೆಯನ್ನು ಹೇಳುತ್ತಿದ್ದರು.......
ಕೆಲವರು ನದಿಯನ್ನು ದಾಟುತ್ತಿದ್ದರು ಬಹಳ ಮಳೆಯಿಂದಾಗಿ ಆ ನದಿ ಪ್ರವಾಹದಿಂದ ತುಂಬಿ ಹರಿಯುತ್ತಿತ್ತು. ಗಂಡಾಂತರ ಎಂಭಂತೆ  ಇವರು ನದಿಯಲ್ಲಿ ಕೋಚ್ಚಿಹೋಗುವಾಗ ಇವರ ಜೀವವನ್ನು ದೋಣಿಯೊಂದು ರಕ್ಷಿಸಿತು.

ಆಗ ಇವರು ಬಹಳ ಬುದ್ಧಿವಂತರಂತೆ ಇವರು ಯೋಚಿಸಿದರು, "ಈ ದೋಣಿ ನಮ್ಮನ್ನು ರಕ್ಷಿಸಿದೆ, ನಾವು ಇದನ್ನು ಇಲ್ಲಿಯೇ ಬಿಟ್ಟು ಹೋಗುವುದು ಸರಿಯಲ್ಲ, ಇದು ನಮ್ಮ ರಕ್ಷಕ, ನಾವಿದನ್ನು ಇಲ್ಲೇ ಬಿಟ್ಟು ಹೋದರೆ ನಾವು ಕೃತಜ್ಞತೆ ತೋರಿಸಿದಂತಾಗುವುದಿಲ್ಲ! ಎಂದು ಯೋಚಿಸಿ ಇವರು ದೋಣಿಯನ್ನು ತಮ್ಮ ತಲೆಯ ಮೇಲೆ ಹೊತ್ತು ಪಕ್ಕದ ನಗರಕ್ಕೆ ಬಂದರು.

ಆ ನಗರದಲೊಬ್ಬ ಕೇಳಿದ, "ನೀವಿದೇನು ಮಾಡುತ್ತಿರುವಿರಿ? ನಾನೆಂದೊ ತಲೆಯಮೇಲೆ ದೋಣಿಯನ್ನು ಹೊತ್ತು ತಿರುಗುವವರನ್ನು ನೋಡಿಲ್ಲ ಎಂದನು." ಇವರಾಗ ಹೇಳಿದರು " ನಾವು ನಮ್ಮ ಜೀವನವಿಡೀ ಇದನ್ನು ಹೊತ್ತು ತಿರುಗಿದರೆ ತಪ್ಪಿಲ್ಲ, ಏಕೆಂದರೆ ಇದು ನಮ್ಮ ಜೀವವನ್ನು ಉಳಿಸಿದೆ, ನಾವು ಕೃತಜ್ಞತೆಯನ್ನು ತೋರಿಸಲು ಇದನ್ನು ಹೋತ್ತು ತಿರುಗುತ್ತಿದ್ದೆವೆ."

ಬಲು ಬುದ್ದಿವಂತರಂತೆ ಕಾಣುತ್ತಿದ್ದ ಇವರು ಅತ್ಯಂತ ಮೂರ್ಖರಿರಬೇಕು. ಎಂದುಕೊಂಡು ಅವರಿಗೆ ಹೇಳಿದ ಧನ್ಯತೆಯನ್ನು ಸಲ್ಲಿಸಿ ಮತ್ತು ಆ ದೋಣಿಯನ್ನು ಅಲ್ಲಿಯೇ ಬಿಡಿ. ಅದನ್ನು ಹೊತ್ತು ತಿರುಗಬೇಡಿ. ನಿಮ್ಮ ತಲೆಯಲ್ಲಿ ನೀವು ಅನೇಕ ಬಗೆಯ ದೋಣಿಗಳನ್ನು ಹೂತ್ತು ತಿರುಗುತ್ತಿರುವಿರಿ - ತಲೆಯ ಮೇಲಲ್ಲ: ಪ್ರಾಯಶಃ ತಲೆಯೊಳಗೆ.  ವಾಹನ ಕೇವಲ ನಿಮಗೊಂದು ಸುದ್ದಿಯನ್ನು, ವಾರ್ತೆಯನ್ನು ಕೊಡಲಷ್ಟೆ, ನೀವು ಸುದ್ದಿಯನ್ನು ಸ್ವಿಕರಿಸಿ ವಾಹನವನ್ನು ಬಿಟ್ಟುಬಿಡಿ, ಮರೆತುಬಿಡಿ. ವಾರ್ತಾಗಾರ ಕೇವಲ ವಾರ್ತೆಯನ್ನು ನಿಮ್ಮವರಿಗೆ ತಲುಪಿಸಲಷ್ಟೆ - ವಾರ್ತೆಯನ್ನು, ಸಂದೇಶವನ್ನು ಸ್ವೀಕರಿಸಿ ಮತ್ತು ಸಂದೇಶಕನನ್ನು ಮರೆತುಬಿಡಿ.  , ಆದರೆ ಆತನನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಳ್ಳಬೇಡಿ.

ಹಾಗೆ ಗೆಳೇಯರೆ ನಮ್ಮ ನಿತ್ಯ ಜೀವನದಲ್ಲಿ ಅನೇಕ ಸಂಗತಿಗಳು ನಡೆಯುತ್ತಿರುತವೆ, ಹೊಗುತ್ತಿರುತ್ತವೆ. ನಾವು ಅಲ್ಲಿನ ಸಾರವನ್ನು ಅಲ್ಲಿನ ಸತ್ವತೆಯನ್ನು, ಆ ಕ್ಷಣಕ್ಕೆ ಅದು ನೀಡುವ ಸಂದೇಶವನ್ನು ಸ್ವಿಕರಿಸಬೇಕೇ ಹೋರತು ನಮಗೆ ಸಂದೇಸ ತಲುಪಿಸಿದ ವಸ್ತುವನ್ನು ಕೋಂಡಾಡುವದಲ್ಲ. ನಮಗೆ ತಲುಪಿದ ವಿಷಯಕ್ಕೆ ಪ್ರಾಮುಕ್ಯತೆ ಕೋಡಬೇಕೇ ಹೊರತು ಅದು ಯಲ್ಲಿಂದ ಬಂತು ಯಾರಿಂದ ಬಂತು ಅನ್ನುವದು ಮುಖ್ಯವಲ್ಲ. ಮನುಷ್ಯ ಪ್ರತಿನಿತ್ಯ ಅನೇಕ ಸಂಗತಿಗಳನ್ನು ಕಲಿಯುವುದಿರುತ್ತದೆ ಪ್ರತಿ ವಸ್ತುವಿನಲ್ಲೂ ಕಲಿಯುವುದಿರುತ್ತದೆ. ಅದನ್ನು ನೋಡಿ ಅರಿತು ಬಾಳಿದರೆ ಮಾನವ ಜನ್ಮವೆಂಬುದು ಧನ್ಯವಾಗುತ್ತದೆ, ಪಾವನವಾಗುತ್ತದೆ, ಪುನಿತನ ಗೋಳ್ಳುತ್ತದೆ.

ಬದುಕನ್ನು ಅರ್ಥಮಾಡಿಕೋಳ್ಳಿ ಸದ್ ಹೃದಯದಿಂದ ಯಲ್ಲರನ್ನು ಪ್ರೀತಿಸಿ ಅಭಿನಂದಿಸಿ.................
ಉದಾ: ಮೃತ್ಯು ಇರುವುದರಿಂದಲೇ ಜೀವನವಿರುವುದು. ಸಾವು ಇಲ್ಲದಿದ್ದರೆ ಜೀವನವೆಂಬುದೂ ಇರುತ್ತಿರಲಿಲ್ಲ. ಸಾವು ಅಂತ್ಯವಲ್ಲ, ಮತ್ತು ಇದು ಶತ್ರುವುಅಲ್ಲ - ಬದಲಾಗಿ ಸಾವಿರುವುದರಿಂದಲೆ ಜಿವನ ಸಾಧ್ಯ,. ಆದುದರಿಂದ ಸಾವು ಎಲ್ಲೋ ಕೊನೆಯಲ್ಲಿ ಇಲ್ಲ. ಅದು ಈಗ ಮತ್ತು ಇಲ್ಲಿ ಸೇರಿದೆ. ಪ್ರತಿ ಕ್ಷಣಕ್ಕೊ ಬದುಕೊ-ಸಾವು ಇದೆ:ಇಲ್ಲದಿದ್ದಲ್ಲಿ ಈ ಅಸ್ತಿತ್ವ ಅಸಂಭವ

ಕತ್ತಲಿಗೆ, ಬೆಳಕಿಗೆ, ತರ್ಕಕೆ ಇವೆರಡು ವಿಪರೀತಗಳು. ಮತ್ತು ತರ್ಕದ ಪ್ರಕಾರ: ಬೆಳಕಿದ್ದರೆ, ಅಲ್ಲಿ ಕತ್ತಲಿರಲು ಸಾದ್ಯವಿಲ್ಲ ಎಂದು. ಕತ್ತಲಿದ್ದಲ್ಲಿ ಅಲ್ಲಾವ ಬೆಳಕಿಆಳು ಸಾದ್ಯವಿಲ್ಲ. ಆದರೆದೆ ಜೀವನದ ಪ್ರಕಾರ ಇದು ವಿಭಿನ್ನವಾದುದು. ಜೀವನ ಹೇಳುವುದು; ಕತ್ತಲಿರುವುದು ಬೆಳಕಿರುವುದರಿಂದಲೇ; ಬೆಳಕಿದ್ದರೆ ಅದಿರುವುದು ಕತ್ತಲಿರುವುದರಿಂದಲೇ. ಇದೆಲ್ಲೋ ಒಂದರ ಹಿಂದೊಂದು ಅಡಗಿರುವಾಗ ನಮ್ಮ ಕಣ್ಣಿಗೆ ಕಣಿಸದಿರದು. ಶಬ್ದವಿರುವುದರಿಂದಲೇ ಮೌನವಿರುವುದು, ಶಬ್ದವಿಲ್ಲದಿದ್ದರೆ ನಿಮ್ಮಿಂದ ಮೌನವಾಗಿರಲು ಸಾದ್ಯವೆನು? ನೀವು ಹೇಗೆ ಮೌನವಾಗಿರಬಲ್ಲೀರಿ? ವಿಪರಿತವಾದುದು ಹಿನ್ನೆಲೆಯಾಗಿ ಇರಬೇಕಾಗುವುದು. ಯಾರು ತರ್ಕವನ್ನು ಅನುಸರುಸುತ್ತಾರೋ ಅವರು ಯಾವಾಗಲು ತಪ್ಪುತ್ತರೆ. ಏಕೆಂದರೆ ಅವರ ಜೀವನ ತಲೆಕೆಳಗಾಗುತ್ತದೆ. ಇವರು ಬೆಳಕಿನ ಬಗ್ಗೆ ಚಿಂತಿಸಲಾರಂಭಿಸುತ್ತಾರೆ ಮತ್ತು ಕತ್ತಲನ್ನು ಅಲ್ಲಗಳೆಯುತ್ತಾರೆ: ಜೀವನವನ್ನು ಆಲೂಚಿಸುತ್ತಾರೆ ಮತ್ತು ಮೃತ್ಯವಿನೋಂದಿಗೆ ಹೊಡೆದಾಡುತ್ತರೆ.

ಆದ್ದರಿಂದಲೇ ವಿಶ್ವದಲ್ಲಿ ಪರಮಾತ್ಮ ಬೇಳಕು ಮತ್ತು ಕತ್ತಲೆ ಇವೆರಡು ವಂದೇ ಎಂದು ಹೇಳುವ ಪರಂಪರೆ ಇಲ್ಲ. ಒಂದು ಪರಂಪರೆ ಹೇಳುತ್ತದೆ ಪರಮಾತ್ಮ ಬೆಳಕು 

-ಇದು"ಪ್ರೀತಿ"ಯಿಂದ
-18/09/13

 

 

 

ಒಂದು ಸಣ್ಣ ತಯಾರಿಕೆಯನ್ನು ಮಾಡಿಕೊಂಡರೇ...
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ..

ಸಾಮಾನ್ಯವಾಗಿ ಜನಸಾಮಾನ್ಯರಲ್ಲಿ ಅಡಗಿರುವ ಸಾವಿರಾರು ಆಸೆ, ಕನಸು, ಧ್ಯೇಯ, ಕೋರಿಕೆ, ಮುಂತಾದ ವಿಚಾರಗಳು ಕಾರ್ಯರೂಪಕ್ಕೆ ಬರುವುದಕ್ಕೆ ತನ್ನದೇ ಆದ ಒಂದು ಸಮಯವಿರುತ್ತದೆ... ಮತ್ತು ತನ್ನದೇ ಆದ ಒಂದು ರೀತಿ ನೀತಿ ಇರುತ್ತದೆ. ಆದರೆ ಅದನ್ನು ಅರಿತೂ ಅರಿಯದ ಮನುಷ್ಯ ತಾನು ಇಚ್ಚೆಪಟ್ಟಂತೆಲ್ಲಾ..ಅವುಗಳು ನಡೆದೇ ತೀರಬೇಕೆನ್ನುವ ಹೆಬ್ಬಯಕೆಯೊಂದಿಗೆ ಪ್ರತಿ ನಿಮಿಷವನ್ನೂ, ಸಾರ್ಥಕಪಡಿಸಿಕೊಳ್ಳುವುದರಲ್ಲಿ..ಸೋಲುತ್ತಲೇ ಇರುತ್ತಾನೆ..ಮತ್ತು..ತಾನಾಗಿ ಮಾಡಿಕೊಂಡ ಸೋಲುಗಳಿಗೆ..ಸಮಯದ ಮೇಲೆ, ಕಾಲದ ಮೇಲೆ ಆರೋಪವನ್ನು ಮಾಡಿ, ತಾನು ಸರ್ವಶ್ರೇಷ್ಠನೆಂದು ಬೀಗುತ್ತಲೇ ಇರುತ್ತಾನೆ..ಆದರೆ ಇದನ್ನೆಲ್ಲಾ ಕಂಡೂ ಕಾಣದ ಕಾಲವೆಂಬ ಮಾಯೆ ತನ್ನೊಳಗೆ ತಾನು ಗಹಗಹಿಸಿ ನಗುತ್ತಿರುತ್ತದೆ.
ಈ ವಿಚಾರ ಕೇವಲ ಹೊರಜಗತ್ತಿಗೆ, ಹೊರನೋಟಕ್ಕೆ, ಹೊರ ವ್ಯಾಪ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ.. ಅದರ ಬದಲಿಗೆ..ನೇರವಾಗಿ ನಮ್ಮ ಈ ಚಿತ್ರರಂಗಕ್ಕೇ ಅಳವಡಿಕೆಯಾಗುತ್ತದೆ..                         
ಒಂದು ಉದಾಹರಣೆಯಾಗುತ್ತದೆ..

ಯಾವುದೇ ಕಲಾವಿದರಾಗಲೀ..ತಂತ್ರಜ್ಞರಾಗಲೀ..ಕಾರ್ಮಿಕರಾಗಲೀ..ಕಲಾಪೋಷಕರಾಗಲೀ..                    
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ನಮ್ಮ ಯಾವುದೇ ಕ್ರಿಯಾಶೀಲತೆಗಳು ಅಡಕವಾಗಿರುವುದು ಕೇವಲ ನಮ್ಮ ಪ್ರಯತ್ನಗಳಿಂದ ಮಾತ್ರವಲ್ಲ..ಅದರ ಜೊತೆಗೆ ನಿಜವಾದ, ನಿಸ್ಪೃಹವಾದ ದೈವಾನುಗ್ರಹದಿಂದ..
 
ಇಲ್ಲಿ ದೈವ ಎಂದರೆ ಕೇವಲ ಚಿತ್ರಪಟಗಳಲ್ಲಿ ಅಡಕವಾಗಿರುವ ಬೊಂಬೆಗಳಲ್ಲ.. ಪದೇಪದೇ..ಬೀಗ ಹಾಕಿ ಬಂಧಿಸಿಡುವ ಗುಡಿಯಲ್ಲಿನ ವಿಗ್ರಹಗಳಲ್ಲ..ಸಾವಿರಾರು ವರ್ಷಗಳಿಂದಲೂ ಮೆರೆಯುತ್ತಾ..ಮೊರೆಯುತ್ತಾ ಉಳಿದುಕೊಂಡು ಬಂದಿರುವ..ಶಿಲಾಶಾಸನ, ಗುಡಿಗೋಪುರಗಳಲ್ಲ..ಇಲ್ಲಿ ದೈವ ಅಂದರೆ ನಿಜವಾದ ಅರ್ಥದಲ್ಲಿ ತಾವು ಮಾಡುವ, ಅರ್ಥಪೂರ್ಣ ಕೆಲಸ ಮಾತ್ರ..ಅದರಲ್ಲೂ ನಿಸ್ವಾರ್ಥವಾಗಿರುವ ಕೆಲಸ ಮಾತ್ರ.. ಅಂದರೆ ಪ್ರೀತಿಯ ಗೆಳೆಯರೇ ಎಲ್ಲಿ ಮೋಹರಹಿತ, ದ್ರೋಹರಹಿತವಾದ ಸ್ನೇಹಭರಿತ                  ಕೆಲಸ-ಕಾರ್ಯಗಳಿರುತ್ತವೋ..ಅಂತಲ್ಲಿಯೇ ನಿಜವಾದ ದೇವರು ನೆಲೆಸಿರುವುದು..

ಎಲ್ಲಿ ದೇವರಿರುತ್ತಾನೋ..ಅಲ್ಲಿ ಯಾರಿಗೂ ಸೋಲಿನ ಭೀತಿ ಇರುವುದಿಲ್ಲ..ಭಯದ ಸೋಂಕಿರುವುದಿಲ್ಲ.. ವಿಫಲತೆಯ ಕಾಟವಿರುವುದಿಲ್ಲ...ಮತ್ತು..ತನ್ನ ಮನಃಸಾಕ್ಷಿಯ ಎದುರು ಯಾವುದೇ ಪಾಪಪ್ರಜ್ಞೆ ಇರುವುದಿಲ್ಲ..

ಆದರೆ ಪ್ರತಿ ಹೆಜ್ಜೆಯಲ್ಲೂ ವ್ಯಾಪಾರ, ವ್ಯವಹಾರ ವಹಿವಾಟುಗಳೇ..ತುಂಬಿರುವ ಈ ಚಿತ್ರರಂಗದಲ್ಲಿ ಅಂಥ ನಿಸ್ವಾರ್ಥ ಕ್ರಿಯಾಶೀಲತೆಗೆ ಸ್ಥಳವೆಲ್ಲಿದೆ..? ಮತ್ತು ಅಂತಹ ಅಲೋಚನೆಗಳಿಗೆ ವೇದಿಕೆ ಎಲ್ಲಿದೆ..?ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡಾಗ, ಉತ್ತರ ಸಿಗದಿರಬಹುದು..ಆದರೆ ಸ್ವಲ್ಪ ಹೃದಯದ ಹತ್ತಿರ ನಿಂತು ಅವರವರ ಪಾಲಿಗೆ ಬಂದ ಕೆಲಸ ಮಾಡುತ್ತಾ ಹೋದರೆ ಸಾಕು, ಯಶಸ್ಸು ಎಂಬ ಗೆಲ್ಲುವ ಕುದುರೆಗಳು ತಾವಾಗಿಯೇ ನಮ್ಮ ನಮ್ಮ ಮನಸ್ಸಿನ ಲಾಯದಲ್ಲಿ ಬಂದು ತಲೆಯಾಡಿಸುತ್ತಾ ನಿಂತು ಬಿಡುತ್ತವೆ..

ಅಂಥ ಸಮಯದಲ್ಲಿ ಮಾತ್ರ ನಮ್ಮ ವಿವೇಕ ಹೆಚ್ಚು ಕೆಲಸ ಮಾಡಬೇಕಾಗುತ್ತದೆ..ಅಂದರೆ ಅದು ನಿಜವಾದ ಗೆಲುವೋ.? ಅಥವಾ..ಭ್ರಾಮಿಕ ಗೆಲುವೋ ಎಂಬುದನ್ನರಿತು ಬೀಗುವುದನ್ನು, ತುಸು ಕಡಿಮೆ ಮಾಡಿಕೊಂಡು, ಎದುರಾಗುವ ಪರಿಸ್ಥಿತಿಗಳನ್ನು ಪ್ರೀತಿಯಿಂದ ಗೌರವದಿಂದ ವಿನಯದಿಂದ ಅರ್ಥಮಾಡಿಕೊಂಡು ನಡೆಯುವ..ಒಂದು ಸಣ್ಣ ತಯಾರಿಕೆಯನ್ನು ಮಾಡಿಕೊಂಡರೆ..ಕನಿಷ್ಠಪಕ್ಷ ಸೋಲಂತೂ..ಸುಳಿಯುವುದಿಲ್ಲ...ಮತ್ತು ಗೆಲುವಂತೂ..ಖಚಿತವಾಗಿ ಅವರವರ ಮನೆಯ ಹೊಸ್ತಿಲು ತುಳಿಯಬಲ್ಲದು..

ಒಲುಮೆಯ ಗೆಳೆಯರೇ..ಇವೆಲ್ಲವೂ ಪುರಾಣದ ಮಾತುಗಳಲ್ಲ....ಚರಿತೆಯ ಪುಟಗಳಿಂದ, ಹೆಕ್ಕಿದ ವಸ್ತುಗಳು ಅಲ್ಲ..ಪ್ರತಿನಿತ್ಯವೂ ಕಣ್ಣೆದುರಿಗೇ ಕಣ್ಣೀರಿಡುತ್ತಿರುವ ಲೆಖ್ಖವಿಲ್ಲದಷ್ಟು..ಉದಯೋನ್ಮುಖ ಕಲಾತಂತ್ರಜ್ಞರ..ಅಂತರಂಗದ ಮಾತು..
ಅಂಥಾ ಪ್ರತಿಯೊಬ್ಬರಿಗೂ..ನಮ್ಮೀ..ಚಂದನವನ. ಒಂದೊಂದು ಗೆಲುವಿನ ವೇದಿಕೆಯನ್ನು ನಿರ್ಮಿಸಿಕೊಡಲಿ..ಎಂದು ಎಲ್ಲರೂ ಆತ್ಮಪೂರ್ವಕವಾಗಿ ಪರಮಾತ್ಮನನ್ನು ಪ್ರಾರ್ಥಿಸಿಕೊಳ್ಳೋಣ..
ಇದು
ಪ್ರೀತಿಯಿಂದ. 

-15/08/13

"ತುದಿಗಾಲಿನಲ್ಲಿ ನಿಂತಿರುತ್ತದೆ"
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ.........

ಈ ನಮ್ಮ ಜೀವನದಲ್ಲಿ ಹೆಜ್ಜೆಗೊಂದಾವರ್ತಿ ಲೆಕ್ಕವಿಲ್ಲದಷ್ಟು ಅನುಭವಗಳು, ಬದುಕಿನ ಬಗ್ಗೆ ನಿದರ್ಶನಗಳು... ಸಿಗುತ್ತಲೇ ಹೋಗುತ್ತವೆ... ಆದರೆ ಅಂಥವುಗಳಲ್ಲಿ ನಮ್ಮ  ನಮ್ಮ ಒಳಿತಿಗೆ ಯಾವುದು ಹಿತ ? ಯಾವುದು ಸೂಕ್ತ ? ಯಾವುದು ಶ್ರೇಯಸ್ಸು ? ಎಂಬ ವಿಚಾರದಲ್ಲಿ ಮಾತ್ರ ನಮ್ಮ ನಮ್ಮ ಪ್ರಜ್ಞೆ ಕೆಲಸ ಮಾಡಬೇಕಾಗುತ್ತದೆ.
ಹಾಗಾಗಿಯೇ ಅನೇಕರು ಸಾವಿರಾರು ಕಥೆಗಳ ಮೂಲಕ ನಮ್ಮ ಚತುರತೆ, ನಮ್ಮ ಜಾಣತನ, ನಮ್ಮ ಸಮಯ ಪ್ರಜ್ಞೆಯನ್ನೂ ಸಹಾ ಜಾಗೃತಗೊಳಿಸಿಕೊಳ್ಳಲು ನೆರವಾಗುತ್ತಿರುತ್ತಾರೆ...
ಅನೇಕರಿಗೆ ತಿಳಿದಿರೋ ಹಾಗೆಯೇ ಇಲ್ಲಿ ಮೂರು ಚಿಕ್ಕ ಚಿಕ್ಕ ಕಥೆಗಳಿವೆ.
 " ಮೊದಲ ಕಥೆ "....
 ಒಂದೊಂದು ಮಾತನ್ನೂ, ಒಂದೊಂದು ಮುತ್ತಿನಂತೆ ಆಡುತ್ತಿದ್ದುದು ಬೀರಬಲ್ಲನ  ವಿಶೇಷ. ಆದ್ದರಿಂದಲೇ ಅಕ್ಬರ್ ಹಾಗೂ ಬೀರಬಲ್ಗು ಬಿಟ್ಟಿರಲಾರದಂಥ ಸ್ನೇಹವೇರ್ಪಟ್ಟಿತ್ತು. ದರ್ಬಾರ್ ನಲ್ಲಿರಲಿ, ಅಂತಃಪುರದಲ್ಲಿರಲಿ, ವನವಿಹಾರವಿರಲಿ.... ಬೇಟೆಯಿರಲಿ ಬೀರಬಲ್ ಜೊತೆಗಿರಲೇಬೇಕು...
ಹೀಗಿರುವಾಗ ಒಮ್ಮೆ ಬೀರಬಲ್  " ಜೀವನದಲ್ಲಿ ಎಲ್ಲಾ ರೀತಿಯ ಸುಖ - ಸಂತೋಷ ಮೋಜು ಅನುಭವಿಸಬೇಕಾದರೆ ಅರಸೊತ್ತಿಗೆ ಇರಬೇಕು, ಅರಸುತನವಿರಬೇಕು " ಎಂದು ಪ್ರತಿಪಾದಿಸಿದ.
ಆಗ  " ನಿನ್ನ ಮಾತು ಅಕ್ಷರಶಃ ಸತ್ಯ. ಈ ಅರಸುತನ, ಅರಸೊತ್ತಿಗೆ ಎಂದಿಗೂ ನಷ್ಟವಾಗದೆ, ಅರಸನಿಗೆ ಸಾವೇ ಬರದಿದ್ದರೆ ಇನ್ನೂ ಸುಖದಿಂದಿರಬಹುದಿತ್ತಲ್ಲವೇ? "
ಎಂದು ಅಕ್ಬರ್ ತನ್ನ ಅಭಿಪ್ರಾಯ ಹೇಳಿದ.....
" ಹಾಗೇನಾದರೂ ಆಗಿದ್ದರೆ ನೀವು ಅರಸರಾಗಲು ಸಾಧ್ಯವೇ ಆಗುತ್ತಿರಲಿಲ್ಲ." ಎಂದ ಬೀರಬಲ್..... ಆತನ ಮಾತಿನ ಮರ್ಮ ಅರಿಯಲು ಅಕ್ಬರನಿಂದಾಗದೆ ಪೆಚ್ಚಾದ....
"ನಿಮಗಿಂತ ಮೊದಲಿದ್ದ ಚಕ್ರವರ್ತಿಗೆ ಸಾವೇ ಬರದಿದ್ದರೆ ನೀವು ಅರಸರಾಗಲು ಆಗುತ್ತಿರಲಿಲ್ಲ... ಹುಟ್ಟಿದ ಮನುಷ್ಯ ಸಾಯಲೇಬೇಕು... ಬದುಕಿದಷ್ಟೂ ದಿನ ಮೌಲ್ಯಯುತ ಜೀವನ ಸಾಗಿಸಿದರೆ ಅವನದೇ ಸಾರ್ಥಕ ಬದುಕು ಎಂದ.... ಬೀರಬಲ್... ಆಗ ಸೂಕ್ಷ್ಮವರಿತ ಅಕ್ಬರನು
" ತನ್ನ ಅಜ್ಞಾನವನ್ನು ಅರಿಯುತ್ತಾ..... ಬೀರಬಲ್.....ಜೊತೆ ಬೆರೆಯುತ್ತಾ ........ಸಾರ್ಥಕ ಬದುಕು,  ಬದುಕಲು  ನಿಶ್ಜಯಿಸಿದ.
" ಎರಡನೆ ಕಥೆ "
ಒಮ್ಮೆ  ಯಾವುದೋ ಕೆಲಸದ ನಿಮಿತ್ತ ಬೀರಬಲ್ ಮಣಿಪುರಕ್ಕೆ ಹೋಗಬೇಕಾಗಿ ಬಂತು. ಮಣಿಪುರದರಸರಿಗೆ ಅಕ್ಬರನನ್ನು ಕಂಡರೆ ಆಗುತ್ತಿರಲಿಲ್ಲ.... ಬಿರಬಲ್ಲನ ಎದುರಲ್ಲಿ ಅಕ್ಬರನನ್ನು ಅವಹೇಳನ ಮಾಡಬೇಕೆಂದು ತೀರ್ಮಾನಿಸಿ ಶೌಚಾಲಯದಲ್ಲಿ ಅಕ್ಬರನ ಪೋಟೋ ತಗುಲಿ ಹಾಕಿದ.
ತನ್ನ ದಿನನಿತ್ಯದ ಪ್ರಕೃತಿ ಕರೆ ಮುಗಿಸಲು ಬೀರಬಲ್ ಶೌಚಾಲಯಕ್ಕೆ ಹೋದ.... ಅಲ್ಲಿ ಅಕ್ಬರನ ಭಾವಚಿತ್ರ ನೋಡಿ ಕಸಿವಿಸಿಯಾಯ್ತು.... ಆದರೊ ತೋರ್ಪಡಿಸದೇ, ಸ್ವಲ್ಪವೂ ಬೇಸರ ವ್ಯಕ್ತಪಡಿಸದೆ " ನಿಮ್ಮ ರಾಜ್ಯದಲ್ಲಿ ಮಲಬದ್ದತೆಯ ರೋಗ ಹೆಚ್ಚಾಗಿದೆ ಎಂದು ನನ್ನ ಭಾವನೆ" ಎಂದ ಮಣಿಪುರದರಸರನ್ನುದ್ದೇಶಿಸಿ...
 " ಯಾಕೆ...ನಿಮಗೇಕೆ ಈ ಭಾವನೆ ಮೂಡಿತು?" ಎಂದು ಕೇಳಿದ ಮಣಿಪುರದರಸು. ಅದಕ್ಕೆ....
"ಯಾಕೆಂದರೆ ಶೌಚಾಲಯದಲ್ಲಿ ನಮ್ಮ ರಾಜನ ಭಾವಚಿತ್ರ ಹಾಕಿದ್ದೀರಲ್ಲ........ ಅವರ ಮುಖ ನೋಡಿದರೆ ಭಯವುಂಟಾಗಿ ಮಲ ವಿಸರ್ಜನೆಯಾಗುವುದಲ್ಲವೆ?"
ಎಂದ ಬೀರಬಲ್.... ಅಗುಲಿ ಹಾಕೋಕೆ ಹೋಗಿ ಅದೇ ತಗುಲಿಹಾಕ್ಕೋಂತಲ್ಲ ಅಂದುಕೊಂಡು ಮಣಿಪುರದರಸು ಅಕ್ಬರನ ಭಾವಚಿತ್ರ ತೆಗೆದುಹಾಕಿದ.
" ಮೂರನೆ ಕಥೆ "
ಸಮಸ್ಯೆ ಸೃಷ್ಟಿಸುವುದು ಅಕ್ಬರನ ಕೆಲಸ....ಬಿಡಿಸುವುದು ಬೀರಬಲ್ ಕೆಲಸ..... ಎನ್ನುವಂತೆ ಅಕ್ಬರ್ ಸಮಸ್ಯೆಗಳನ್ನ ಸೃಷ್ಟಿಸುತ್ತಿದ್ದ.
ಒಮ್ಮೆ ಅಕ್ಬರ್ ಬೀರಬಲ್ಲನನ್ನು ಕೇಳಿದ ..ಸೂರ್ಯನ ಬೆಳಕಾಗಲಿ ಚಂದಿರನ ಬೆಳಕಾಗಲಿ ಯಾವ ವಸ್ತುವಿನ ಮೇಲೆ ಬೀಳುವುದಿಲ್ಲ...ಅಂತಹ ವಸ್ತು ಇದೆಯಾ?
" ಇದೆ..."  ಎಂದ ಬೀರಬಲ್. ಅದಕ್ಕೆ ಆಶ್ಚರ್ಯದಿಂದ ಅಕ್ಬರನು " ಇದೆಯಾ ..? ಯಾವುದದು ?" ಎಂದು ಕೇಳಿದ. ಬೀರಬಲ್ " ಕತ್ತಲು " ಎಂದು ಉತ್ತರಿಸಿದ.
 ಅದಕ್ಕೆ ಅಕ್ಬರ್  " ಅದು ಹೇಗೆ?.. ಸೂರ್ಯ ಅಥವಾ ಚಂದ್ರನ ಬೆಳಕು ಬಿದ್ದಾಗಲ್ಲವೆ ಕತ್ತಲು ಮಾಯವಾಗುವುದು...."
"ನಿಜ... ಅಮವಾಸ್ಯೆಯ ರಾತ್ರಿ ಚಂದಿರನಿರುವುದಿಲ್ಲ.... ಯಾವ ರಾತ್ರಿಯಲ್ಲೂ ಸೂರ್ಯನಿರುವುದಿಲ್ಲ ಆದ್ದರಿಂದ ಸೂರ್ಯ - ಚಂದಿರ ಬೆಳಕು ಬೀಳದ ಒಂದು ವಸ್ತುವೆಂದರೆ ಕತ್ತಲು."
ಎಂದ ಬೀರಬಲ್... ಅಕ್ಬರ್ ಒಪ್ಪಿಕೊಳ್ಳದೆ ಬೇರೆ ಮಾರ್ಗವಿರಲಿಲ್ಲ.
 ಒಂದು ಕಥೆ ಸಾವಿನ ಕುರಿತದ್ದಾಗಿದೆ.. ಎರಡನೆಯದು ಮಾನವನ್ನು ಕಾಯ್ದುಕೊಳ್ಳುವ ಕುರಿತದ್ದಾಗಿದೆ...ಮೂರನೆಯದ್ದು ಅಸಂಬದ್ದತೆಯೊಂದಕ್ಕೆ  ಉತ್ತರಿಸೋ ಕಥೆ...

ಹೌದು ಗೆಳೆಯರೇ  / ಈ / ಸಾವು / ಈ ಮಾನ / ಈ ಅಸಂಬದ್ದತೆಯೇ ಒಬ್ಬ ಕ್ರಿಯಾಶೀಲ ವ್ಯಕ್ತಿಯನ್ನು ಪದೇ ಪದೇ ನೋವಿಗೀಡು ಮಾಡೋ, ಪೇಚಿಗೀಡುಮಾಡೋ ಸಂಗತಿಗಳು. ಹಾಗಾಗಿ ಇಂಥವುಗಳ ಬಗ್ಗೆ ಹೆಚ್ಚು ಚಿಂತಿಸದೇ, ತಲೆ ಕೆಡಿಸಿಕೊಳ್ಳದೇ, ಅವರಿವರ ಮಾತುಗಳಿಗೆ, ನಿಂದನೆಗಳಿಗೆ ಸ್ಪಂದಿಸದೇ, ನಮ್ಮ ನಮ್ಮ ಕೆಲಸಗಳನ್ನು ಮೌನವಾಗಿ, ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಹೋದರೆ ಸಾಕು... ಆಗ ಸಿಗಬೇಕಾದ ಸುಖ , ಸಿಗಬೇಕಾದ ಗೌರವ ಸದಾ ಕಾಲ ನಮ್ಮ ನಮ್ಮ ಮನೆಯ ಕಾಲಿಂಗ್ ಬೆಲ್ ಹೊಡೆಯೋಕೆ ತುದಿಗಾಲಿನಲ್ಲಿ ನಿಂತಿರುತ್ತದೆ.
ಇದು       
"ಪ್ರೀತಿ"ಯಿಂದ

-16/07/13

ಅವರವರ ಮನಸ್ಥಿತಿಗೆ ಬಿಟ್ಟದ್ದು
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ॒

ನಮ್ಮ ಭಾರತ ದೇಶದಲ್ಲಿ ಲಕ್ಷ ಲಕ್ಷ ಕಾದಂಬರಿಗಳು, ಕಥೆಗಳು, ಪುರಾಣಗಳು, ವ್ಯವಸ್ಥೆಗಳು, ಸನ್ನಿವೇಶಗಳು, ಘಟನೆಗಳು, ಆಗುಹೋಗುಗಳು, ಜ್ಞಾನ-ಅಜ್ಞಾನಗಳು, ನ್ಯಾಯ-ಅನ್ಯಾಯಗಳು, ನೀತಿ-ಅನೀತಿಗಳು, ಧರ್ಮ-ಅಧರ್ಮಗಳು, ಏಳುಬೀಳುಗಳು, ಏರುಪೇರುಗಳು, ಕಷ್ಟ-ಸುಖಗಳು, ಲಾಭ-ನಷ್ಟಗಳು, ಸಜ್ಜನಿಕೆ, ದುರ್ಜನಿಕೆಗಳು ಮುಂತಾದ ಮತ್ತಷ್ಟು ಘಳಿರುಘಳಿರುಗಳು ಪ್ರತಿಯೊಬ್ಬರ ಅನುಭವಕ್ಕೂ ಬರುತ್ತಲೇ ಇರುತ್ತವೆ. ಆದರೆ ಅಂತಹ ಯಾವುದೇ ಅನುಭವಗಳೂ ಸಹ ನಮ್ಮ ನಮ್ಮ ದೈನಂದಿನ ಜೀವನಕ್ಕೆ ಔಷಧಿಗಳಾಗಿ ಮಾರ್ಪಡುವುದೇ ಇಲ್ಲ. ಕಾರಣ, ಅನುಭವಗಳು ಕೇವಲ ಅನುಭವಗಳಾಗಿಯೇ ಉಳಿಯುವುದೇ ಇಲ್ಲಿನ ಸಮಸ್ಯೆ.ವಾಸ್ತವವಾಗಿ ಯಾವುದೇ ಅನುಭವದ ಜೊತೆಗೂ ಒಂದಿಷ್ಟು ಅಧ್ಯಯನವೂ ಸೇರಿದಾಗ ಮಾತ್ರ ಆ ಪ್ರಸ್ತಾಪ ಗಟ್ಟಿಯಾಗಿ ಉಳಿಯುತ್ತದೆ ಮತ್ತು ಮಾರ್ಗದರ್ಶಿಯಾಗಿಯೂ ಜೊತೆಗಿರುತ್ತದೆ.

ಈ ರೀತಿಯ ವಿರಾಮವಿಲ್ಲದ ಪದಗಳ ಪೋಣಿಕೆ ಶುರುವಾಗುವುದೇ ನಮ್ಮಲ್ಲಿ ಹಠಾತ್ತಾಗಿ ಒಂದು ಜಿಜ್ಞಾಸೆ ಶುರುವಾದಾಗ. ಇಂಥ ಪ್ರತಿ ಜಿಜ್ಞಾಸೆಗಳೂ ನೇರವಾಗಿ ನಮ್ಮ ನಮ್ಮ ಕಾರ್ಯವೈಖರಿಗಳ ಮೇಲೆಯೋ ಅಥವಾ ಹಣೆಬರಹದ ಮೇಲೆಯೋ ಆಟವಾಡಿದರೆ ತಡೆದುಕೊಳ್ಳಬಹುದು. ಹಾಗಾಗದೇ ದೇಹದ ಕಣಕಣದಲ್ಲಿಯೂ ಕುಳಿತು ಕಾಡುವಂತಾಗುವುದು ಒಂದು ರೀತಿಯ ವಿಪರ್ಯಾಸ.

ಅತ್ತ ಕಡೆ ಜಿಜ್ಞಾಸೆ, ಇತ್ತ ಕಡೆ ವಿಪರ್ಯಾಸ ಇವುಗಳ ನಡುವೆ ಒಬ್ಬ ಕಲಾವಿದನ ಬದುಕು ಹೇಗೆ ಅರಳಬೇಕು ಎಂಬ ಸತ್ಯ ಮತ್ತದೇ ಅನುಭವ, ಅಧ್ಯಯನಗಳಿಗೆ ಮಾತ್ರ ತಿಳಿಯುವಂತದ್ದು. ಇವುಗಳ ಸೂಕ್ಷ್ಮತೆ ಅಂದ್ರೆ ಇಷ್ಟೆ; ಯಾವುದೇ ಒಬ್ಬ ಕಲಾವಿದ ಅದರಲ್ಲೂ ಯುವ ಕಲಾವಿದ ತಾನು ಎಷ್ಟು ಕಲಿತರೂ ಕಲಿತದ್ದು ಸಾಸಿವೆಯಷ್ಟು, ಕಲಿಯಬೇಕಾದ್ದು ಸಾಗರದಷ್ಟು ಎಂಬ ನಿರಂತರ ಸತ್ಯವನ್ನು ಅರಿತು ನಡೆಯುವುದೇ ನಿಜವಾದ ಅಧ್ಯಯನ. ಹಾಗೂ ಅಂತಹ ಸಂದರ್ಭದಲ್ಲಿ ಪದೇ ಪದೇ ಗೆಲುವಿಗೆ ಬಲಗಾಲಿಟ್ಟು ಸೋಲಿಗೆ ಎಡಗಾಲಿಟ್ಟು ಮತ್ತೊಮ್ಮೆ ಗೆಲುವಿಗೆ ಎಡಗಾಲಿಟ್ಟು, ಸೋಲಿಗೆ ಬಲಗಾಲಿಡುತ್ತ ಮಾಡುವ ಕುಣಿತವೇ ನಿಜವಾದ ಅನುಭವ.

ನಲ್ಮೆಯ ಗೆಳೆಯರೇ, ಈ ಬದುಕು ಬಹಳ ಸುಂದರ;ಅಷ್ಟೇ ಸುಲಭ, ಕೇವಲ ವಾಸ್ತವವನ್ನು ಅರಿತು ನಡೆದಾಗ ಮಾತ್ರ. ಇಂತಹ ವಾಸ್ತವಗಳು ಎಂದಿಗೂ ಭ್ರಮೆಯಾಗಬಾರದು. ಹಾಗೊಂದು ವೇಳೆ ಏನಾದರೂ ಆಗಲೇ ಬೇಕಿದ್ದರೆ ಕ್ಷಣ ಮಾತ್ರದ ಒಂದೊಳ್ಳೆಯ ಕಲ್ಪನೆಯಾಗಿರಲಿ.

ಹಿರಿಯರಾಡಿದ ಮಾತುಗಳನ್ನು ಅಂಗಾತವಾಗಿ ಮೆಲುಕು ಹಾಕುವುದಾದರೆ ಭ್ರಮೆಯೆಂಬುದು ಹುಟ್ಟಿದ್ದು ರಾಕ್ಷಸ ಗುಣಗಳಿಂದ, ಕಲ್ಪನೆಯೆಂಬುದು ಹುಟ್ಟಿದ್ದು ದೈವೀಗುಣಗಳಿಂದ. ಇವೆರಡರಲ್ಲಿ ನಮ್ಮ ಕಲಾಬದುಕಿಗೆ ಯಾವುದು ಅನಿವಾರ್ಯ ಎಂಬ ಆಯ್ಕೆ ಅವರವರ ಮನಸ್ಥಿತಿಗೆ ಬಿಟ್ಟದ್ದು.

ಒಳ್ಳೆಯದಾಗಲಿ, ಒಳ್ಳೆಯ ಆಲೋಚನೆಗಳೇ ನಮ್ಮ ಬದುಕಿನ ತೇರನ್ನು ಎಳೆಯುವ ಕುದುರೆಗಳಾಗಲಿ. ಆ ಕುದುರೆಗಳ ಪ್ರತಿ ಕರಪುಟಗಳೇ ನಮ್ಮ ಕನಸುಗಳ ಪುಟಗಳಿಗೆ ಅಕ್ಷರಗಳಾಗಲಿ.
ಇದು ``ಪ್ರೀತಿ''ಯಿಂದ
-16/06/13

"ಮನಸ್ಸಿಗೆ ಮುಟ್ಟಲಿ"
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ..........
ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸದಾಕಾಲವೂ ತನಗೆ ಅನ್ನಿಸಿದ ಹಾಗೇನೇ, ತನ್ನ ಮೂಗಿನ ನೇರಕ್ಕೇನೇ, ತಾನು ಆಲೋಚಿಸಿದಂತೆಯೇ ಎಲ್ಲವೂ ಇರುವುದು... ಎಲ್ಲವು ನಡೆಯುವುದು ಎಂದು ಭಾವಿಸಿರುತ್ತಾನೆ. ಆದರೆ ನಾವು ನೋಡುವ ದೃಷ್ಠಿಕೋನದಲ್ಲಿ ಸ್ವಲ್ಪವಾದರೂ ಒಳ್ಳೆಯತನ, ಸಾತ್ವಿಕತೆ,ತುಂಬಿದ್ದೇ ಆಗಿದ್ದರೆ, ಪ್ರತಿ ಸಂದರ್ಭ ಸನ್ನಿವೇಶಗಳೂ ಸಹಾ ನಮಗೆ ಒಳ್ಳೆಯದಾಗಿಯೇ ಕಾಣುತ್ತದೆ. ಪ್ರತಿಯೊಬ್ಬರೂ ಒಳ್ಳೆಯವರಾಗಿಯೇ ಕಾಣುತ್ತಾರೆ. ಅಂಥಾ ಸಂದರ್ಭದಲ್ಲಿ ಭೂಮಿಗೂ, ಸ್ವರ್ಗಕ್ಕೂ... ವ್ಯತ್ಯಾಸವೇ ಇರುವುದಿಲ್ಲ...ಆದರೆ ಆ ರೀತಿ ಒಂದು ಪ್ರಬುದ್ಧ ನಿಲುವಿನಿಂದ ನಾವು ಯಾವುದೇ ಒಂದನ್ನು ನೋಡಬೇಕಾದರೆ, ಮೂಲತಃ ನಮಗೆ ಬೇಕಿರೋದು ಒಂದು ಅಗಾಧ ತಾಳ್ಮೆ..ಮತ್ತು ವಿವೇಚನೆ. ಜೊತೆಗೊಂದಷ್ಟು ಜೀವನಾನುಭವ ಮತ್ತು ತುಸು ಜ್ಞಾನ, ಇದಕ್ಕೆ ಉದಾಹಾರಣೆಯಾಗಿ ಒಂದೆರಡು ಜನಜನಿತ ನಿದರ್ಶನಗಳು ಹೀಗಿವೆ.....

ಒಮ್ಮೆ ಒಬ್ಬ ವ್ಯಕ್ತಿಯು ಬುದ್ಧನ ಬಳಿಗೆ ಬಂದು, ವಿಚಿತ್ರ ಮನಸ್ಥಿತಿಯಿಂದ, ಏನೋ ಹೇಳಲು ಪ್ರಯತ್ನಿಸುತ್ತಾ... ಕೋಪದಿಂದ ಮುಖದ ಮೇಲೆ ಉಗುಳಿದನು.  ಆಗ ಬುದ್ಧನು ಕಿಂಚಿತ್ತೂ ವಿಚಲಿತನಾಗದೇ ಅದನ್ನು ಒರೆಸಿಕೊಂಡು ಆ ವ್ಯಕ್ತಿಗೆ ಹೇಳಿದರು:’ಇನ್ನೂ ಏನಾದರೂ ಹೇಳಲಿಕ್ಕಿದೆಯೇನು?"

ಆಗ ಆ ಮಾತನ್ನು ಕೇಳಿದ ಬುದ್ಧನ ಜೊತೆಯಲ್ಲಿದ್ದ "ಆನಂದ"ನೆಂಬ ಭಿಕ್ಷುವು, ಅವರಿಗೆ ಹೇಳಿದ: "ನೀವು ಏನು ಮಾತನಾಡುತ್ತಿರುವಿರಿ? ಆತನು ಈಗಾಗಲೇ ತನ್ನ ಅಚಾತುರ್ಯವನ್ನು ತೋರಿಸಿಬಿಟ್ಟಿದ್ದಾನೆ. ನನಗೆ ಒಮ್ಮೆ ಅನುಮತಿ ಕೊಡಿ, ನಾನು ಆತನಿಗೆ ಸರಿಯಾದ ಪಾಠ ಕಲಿಸುವೆ. ಆತನು ನಿಮ್ಮ ಮೇಲೆ ಉಗುಳಿದ್ದು ನೋಡಿದರೆ ಆತನು ಹದ್ದು ಮೀರಿದಂತೆಯೇ ಸರಿ"
ಆಗ ಬುದ್ದ ಹೇಳಿದ: ’ಆತನು ಏನೋ ಹೇಳಬೇಕೆಂದಿದ್ದಾನೆ. ಈ ಕ್ಷಣದಲ್ಲಿ ಆತನ ಭಾಷೆಯು ಅಸಮರ್ಥವಾಗಿದೆ. ಬಹಳ ಆತುರದಲ್ಲಿದ್ದಾನೆ, ಹೇಳಲಾಗಲಿಲ್ಲ, ಹಾಗಾಗಿ ಈ ರೀತಿ ಕ್ರಿಯೆಯಿಂದ ಪ್ರಕಟಗೊಳಿಸಿದ್ದಾನಷ್ಟೆ.’ಇದನ್ನು ನಾನು ಕರುಣೆಯೆಂದು ಹೇಳುತ್ತೇನೆ"  ಇದು ಬುದ್ಧನು ಆತನ ಬಗ್ಗೆ ದಯೆಯಿಂದ ಹೇಳಿದ್ದು, ಭಾಷೆಯು ಎಷ್ಟೊಂದು ಅಸಮರ್ಥವಾದುದು ಎಂದು. ಆತನು ಹೇಳಲು  ಬಯಸುತ್ತಾನೆ. ಬಹಳ ಕೋಪದ ವಿಚಾರ, ಅದನ್ನು ಪ್ರಕಟಪಡಿಸಲು ಬಯಸುತ್ತಾನೆ. ಶಬ್ದ ಸಿಗದ ಕಾರಣ ಆತನು ಉಗುಳಿ ತೋರ್ಪಡಿಸಿದ್ದಾನೆ.ಎಂಬಂಥಾ ಬುದ್ಧನ ಮಾತುಗಳಲ್ಲಿ ಕರುಣೆಯೂ ಇತ್ತು. ಕ್ಷಮೆಯೂ ಇತ್ತು. ವಿವೇಚನೆಯೂ ಇತ್ತು.

ಮತ್ತೊಂದು ನೆನಪಿಡುವ ಸಂದರ್ಭ....
ಒಮ್ಮೆ ಸಾಕ್ರೆಟೀಸ್ ಮರಣಾವಸ್ಥೆಯಲ್ಲಿದ್ದರು, ಅವರಿಗೆ ವಿಷವನ್ನು ಕೊಡಲಾಗಿತ್ತು. ಆದರೂ.... ಅವರು ನಗುತ್ತಿದ್ದರು. ಅದನ್ನು ಕಂಡ ಅವರ ಶಿಷ್ಯ ಕ್ರೆಟೋ ಕೇಳಿದ: ’ ಏನಿದು? ಇಂಥಾ ಸಂದರ್ಭದಲ್ಲಿ ನಗುತ್ತಿರುವಿರಿ!???.... ನಮ್ಮ ಕಣ್ಣುಗಳು ಕಣ್ಣೀರಿನಿಂದ ತುಂಬಿಹೋಗಿದೆ. ನಿಮ್ಮ ಸಾವು ಅತಿ ಸಮೀಪದಲ್ಲಿದೆ, ಇದೊಂದು ವಿಷಾದದ ಕ್ಷಣವಾಗಿದೆ ಎಂದು  ಚಿಂತೆಯಿಂದ ಹಲುಬಿದ. ಆಗ ನಗು ನಗುತ್ತಾ... ಸಾಕ್ರೆಟೀಸ್ ಹೇಳಿದರು. "ವಿಷಾದ ಎಲ್ಲಿದೆ? ಸತ್ತವನು ಖಂಡಿತವಾಗಿಯೂ ಸತ್ತಲ್ಲಿ, ವಿಷಾದ ಪಡುವಂತಹುದೇನಿದೆ? ಏಕೆಂದರೆ ಸತ್ತವನು ದುಃಖವನ್ನು ಅನುಭವಿಸಲು ಸಾದ್ಯವೇ? ಏಕೆಂದರೆ ಕೊನೆಯವರೆಗೂ....ಈ ಭೂಮಿ ಮೇಲೆ ಯಾರೂ ಉಳಿದಿರುವುದಿಲ್ಲ. ಹಾಗೂ ಸತ್ತೂ ಬದುಕಿದ್ದಲ್ಲಿ, ಆಗಲೂ ಸಹ ದುಃಖ ಏತಕ್ಕಾಗಿ? ಯಾವುದು ಇಲ್ಲವಾಯಿತೋ, ಅದು ಹೇಗೂ... ನನ್ನದಾಗಿರಲಿಲ್ಲ, ಹಾಗೆಯೇ ಯಾವುದು ನನ್ನದಾಗಿತ್ತೋ.... ಅದು ಉಳಿದಿದೆ!" ಸಾಕ್ರೆಟೀಸ್ ಮುಂದುವರೆಸಿದರು. "ನಾನು ಖುಷಿಯಾಗಿದ್ದೇನೆ. ಸಾವು ಎರಡೇ ಕೆಲಸ ಮಾಡಬಹುದು. ಒಂದೋ.... ಪೂರ್ತಿಯಾಗಿ ಇಲ್ಲವಾಗಿಸುವುದು. ಹಾಗೇನಾದರೂ ಆದರೆ,  ಪೂರ್ತಿಯಾಗಿ ಖಾಲಿಯಾದ ಖುಶಿ ನನ್ನದು. , ಏಕೆಂದರೆ ಆಗ ದುಃಖವನ್ನು ಅನುಭವಿಸಲು ನಾವು ಉಳಿದೇ ಇರುವುದಿಲ್ಲ: ಒಂದು ವೇಳೆ ನನ್ನನ್ನೇನಾದರೂ ಉಳಿಸಿದಲ್ಲಿ, ಆಗಲೂ ಖುಶಿಯೇ.... ಏಕೆಂದರೆ ಯಾವುದು ನನ್ನದಲ್ಲವೋ, ಅದು ನಷ್ಟವಾಗುತ್ತದೆ, ನಾನು ಉಳಿಯುತ್ತೇನೆ. ಮೃತ್ಯುವಿಗೆ ಮಾಡಲಾಗುವುದು ಇವೆರಡು ಕೆಲಸ ಮಾತ್ರ ತಾನೇ?"

ಈ ಹಿರಿಯರ ಮಾತುಗಳಲ್ಲಿ ಯಾವುದೇ ಅಂಜಿಕೆ ಇರಲಿಲ್ಲ, ಅಸೂಯೆ ಇರಲಿಲ್ಲ. ಯಾರ ಮೇಲೂ.... ದ್ವೇಷವಿರಲಿಲ್ಲ.....
ಪ್ರೀತಿಯ ಗೆಳೆಯರೇ...ಅಂಥಾ ಹಿರಿಯರ ಸುಗುಣಗಳು, ಮಾನವೀಯ ಸ್ವಭಾವಗಳು ಎಲ್ಲ ಯುವಪೀಳಿಗೆಯ ಮನಸಿಗೆ ಮುಟ್ಟಲಿ ಎಂದು ಹಾರೈಸೋಣ........

ಇದು
"ಪ್ರೀತಿ"ಯಿಂದ......

"ಬಲ್ಲವರ - ಬೇವು ಬೆಲ್ಲ"
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ..........
ಇದೀಗ ತಾನೇ ನೂತನ ಸಂವತ್ಸರ ಆರಂಭವಾಗಿದೆ......ಎಲ್ಲರ ಬದುಕು ಸಹಾ ಹಸನಾಗಲಿ/ಹಸಿರಾಗಲಿ./ ಈ ಸಂದರ್ಭದಲ್ಲಿ ಮುಖ್ಯವಾಗಿ ನಮ್ಮ ಯುವಜನತೆಗೆ ಹೇಳಬಯಸೋದೇನೆಂದ್ರೇ....ಯಾವುದೇ ಒಂದು ಸಂದರ್ಭ, ಸನ್ನಿವೇಶಗಳಲ್ಲೇ ಇರಲಿ....ನಮ್ಮ ಆಯ್ಕೆ ಮತ್ತು ನಿರ್ಧಾರಗಳು ಮಾತ್ರ ನಿಜವಾಗಿಯೂ ಪ್ರಜ್ಞಾವಂತಿಕೆಯಿಂದಲೇ ಕೂಡಿರಬೇಕು. ಆಗ ಮಾತ್ರ ಪ್ರತಿಯೊಬ್ಬರ ಪ್ರತಿಯೊಂದು ಮುಂಬರುವ ನಾಳೆಗಳೂ ಸಹಾ ಆಶಾದಾಯಕವಾಗಿರುತ್ತದೆ. ಬಹುಮುಖ್ಯವಾಗಿ ಇದು ಕಲಾವಿದರ -ತಂತ್ರಜ್ಞರ, ಅದರಲ್ಲೂ... ಈಗಷ್ಟೇ ಚಿಗುರೊಡೆಯುತ್ತಿರುವ ಪ್ರತಿಯೊಬ್ಬ ಸರಸ್ವತಿ ಪುತ್ರರಿಗೂ ಅನ್ವಯಿಸುತ್ತದೆ. ಅದು ಎಂಥಹಾ ವಿಚಾರವೇ ಆಗಿರಲಿ...ಒಂದೆರಡು ನಿಮಿಷ ಯೊಚಿಸಿ, ಸ್ವಲ್ಪ ವಿವೇಕ, ವಿವೇಚನೆಯಿಂದ ವರ್ತಿಸಿದ್ದಾದ್ರೇ... ಆ ಎಲ್ಲರ ಬದುಕಲ್ಲೂ ಗೆಲುವು ಖಚಿತ....

ಇದಕ್ಕೆ ಇಲ್ಲಿ ಎರಡು ಸಮಂಜಸ ಕಥೆಗಳಿವೆ......ಈ ಕಥೆಗಳು ನಿಜವಾಗಿಯೂ ನಡೆದದ್ದೋ, ಅಥವಾ ಹಿರಿಯರು, ಬಲ್ಲವರು, ಕಾಲ್ಪನಿಕವಾಗಿ ಹೇಳಿದ್ದೋ ಎಂಬ ಗೊಂದಲವನ್ನು ಬಿಟ್ಟು, ನೇರವಾಗಿ ನಮ್ಮ ನಮ್ಮ ಮನದಾಳಕ್ಕೇ ತಂದುಕೊಳ್ಳುವುದಾದರೆ, ಒಂದಷ್ಟು ಘನಾತ್ಮಕ ಬದಲಾವಣೆಗಳು ಖಂಡಿತಾ ಸಾಧ್ಯ.

ಮೊದಲ ಉದಾಹರಣೆಯಾಗಿ.....
ಒಮ್ಮೆ ರಾಜನೊಬ್ಬ ಝೆನ್ ಗುರುಗಳಲ್ಲಿಗೆ ಬಂದು, ವಜ್ರಗಳಿಂದ ಅಲಂಕೃತವಾಗಿದ್ದ ಚಿನ್ನದ ಕತ್ತರಿಯೊಂದನ್ನು ಉಡುಗೊರೆಯಾಗಿ ನೀಡಿದ. ರಾಜನಿಗೆ ಆ ಕತ್ತರಿ ತುಂಬ ಇಷ್ಟವಾಗಿತ್ತು. ಹೀಗಾಗಿ ತನಗಿಷ್ಟವಾದ ಅಮೂಲ್ಯ ವಸ್ತುವೊಂದನ್ನು ಗುರುಗಳಿಗೆ ನೀಡಬೇಕೆಂದು, ಅವನು ಇದನ್ನು ಉಡುಗೊರೆಯಾಗಿ ನೀಡಿದ್ದ.

ಝೆನ್ ಗುರುಗಳು ಅವನು ಕೊಟ್ಟ ಪುಟ್ಟ ಪೆಟ್ಟಿಗೆಯನ್ನು ತೆಗೆದು ನೋಡಿ, ಆ ಕತ್ತರಿಯನ್ನೇ ಅರೆಕ್ಷಣ ದಿಟ್ಟಿಸಿದರು. ಆಮೇಲೆ ರಾಜನನ್ನು ಆಪಾದಮಸ್ತಕವಾಗಿ ನೋಡಿ, "ಮಹಾರಾಜ, ಈ ಕತ್ತರಿ ತೆಗೆದುಕೊಂಡು ನಾನು ಇಲ್ಲೇನು ಮಾಡಲಿ? ಏಕೆಂದರೆ ಕತ್ತರಿ.... ಕತ್ತರಿಸುತ್ತದೆ, ಎರಡು ಹೋಳಾಗಿಸುತ್ತದೆ, ವಿಭಜಿಸುತ್ತದೆ. ನನಗೆ ಅದರ ಉಪಯೋಗವಿಲ್ಲ. ಕತ್ತರಿಯ ಬದಲಿಗೆ ನನಗೆ ಸೂಜಿಯೊಂದನ್ನು ಕೊಡು, ಸೂಜಿಯಾದರೆ...ಬೇರೆ ಬೇರೆಯಾಗಿರುವ ಯಾವುದೇ ವಸ್ತುವನ್ನಾಗಲೀ, ವಿಷವನ್ನಾಗಲೀ.....  ಹೊಲಿಯಬಹುದು ಮತ್ತು  ಪ್ರತ್ಯೇಕವಾಗಿದ್ದನ್ನು ಜೋಡಿಸಬಹುದು. ಹಾಗಾಗಿ ನನಗೆ ಕತ್ತರಿಗಿಂತ ಸೂಜಿಯೇ ಹೆಚ್ಚು ಸಾಂಕೇತಿಕವಾಗಿರುತ್ತದೆ" ಎಂದು ಆ ಕತ್ತರಿಯನ್ನು ರಾಜನಿಗೆ ಮರಳಿಸಿದರು.

ಎರಡನೇ ಉದಾಹರಣೆಯಾಗಿ.......
ಒಮ್ಮೆ ಜೀವನದಲ್ಲಿ ಬೇಸರಹೊಂದಿದ ಹತಾಶ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಬಯಸಿದ. ಆತ ದೊಡ್ಡದಾದ ಕೆರೆಯ ಹತ್ತಿರ  ಬಂದು, ಯಾರೂ ಇಲ್ಲವೆಂದುಕೊಂಡು  ಧುಮುಕಿದ. ಆತ ಕೆರೆಗೆ ಜಿಗಿಯುವುದನ್ನು ದೂರದಿಂದಲೇ ನೋಡಿದ ದಾರಿಹೋಕನೊಬ್ಬ, ಆತ ಈಜಲು ನೀರಿಗೆ ಜಿಗಿದಿದ್ದಾನೆ ಎಂದುಕೊಂಡ. ಆದರೆ ಅಷ್ಟರಲ್ಲಿಯೇ...... ಆ ಹತಾಶ ವ್ಯಕ್ತಿಯು "ಯಾರಾದರೂ ನನ್ನನ್ನು ಕಾಪಾಡ್ರಪ್ಪೋ, ನೀರಿನಿಂದ ಮೇಲೆ ಎತ್ತಿರಪ್ಪೋ" ಎಂದು ಜೋರಾಗಿ ಕೂಗಿಕೊಳ್ಳತೊಡಗಿದ. ದಾರಿಹೋಕನಿಗೆ ಸ್ವಲ್ಪ ಗೊಂದಲವಾಯಿತು. ಮರುಕ್ಷಣದಲ್ಲಿಯೇ  ಓಡಿಬಂದು, ನೀರಿಗೆ ಧುಮುಕಿ, ಅವನ ಜೀವ ಉಳಿಸಿದ.

ಆಗ ಆ ಹತಾಶ ವ್ಯಕ್ತಿಯು "ಅಯ್ಯೋ ದೇವ್ರೇ, ನೀನೇನು ಮಾಡಿದೆ? ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸ್ತಾ ಇದ್ದೆ" ಎಂದು ಆತ ಹೇಳಿದ.

ಅದಕ್ಕೆ ಆಶ್ಚರ್ಯಪಟ್ಟ ದಾರಿಹೋಕ "ಇದೂಳ್ಳೇ ವಿಚಿತ್ರವಾಗಿದೆ. ಹಾಗಿದ್ದರೆ ನೀನು, ಯಾರಾದ್ರೂ  ಕಾಪಾಡ್ರಪ್ಪೋ..... ಅಂತ ಯಾಕೆ ಚೀರುತ್ತಿದ್ದೆ.

"ಏನಿಲ್ಲ ಭಯವಾಯ್ತು, ಅದಕ್ಕೇ ಕೂಗಿಕೊಂಡೆ" ಎಂದು ಆತ ಹೇಳಿದ.

ಈ ಮೇಲಿನ ಮೊದಲನೆಯ ಕಥೆಯಲ್ಲಿ ವ್ಯಕ್ತಿಯೊಬ್ಬನನ್ನು ಸೋಲಿಸುತ್ತಿರುವುದು "ಭಯ" ಎಂಬ ವಿಷಯ. ಹಾಗೆಯೇ ಎರಡನೇ ಕಥೆಯಲ್ಲಿ ವ್ಯಕ್ತಿಯೊಬ್ಬನಿಗೆ - ಬೇಡವೆಂದರೂ ಸದಾಕಾಲ ಬಂದು ಸೇರುವುದು "ಅನಗತ್ಯ ವಸ್ತುಗಳೇನೇ" ಎಂಬ ವಿಷಯ..... ಹಾಗಾಗಿ ಆ ಎರಡೂ ಹಂತಗಳಲ್ಲಿ..... ನಿಜವಾದ "ಪ್ರಜ್ಞಾವಂತಿಕೆ" ಮೆರೆದರೆ ಸೋಲು ಎಂಬ ಪದ, ಯಾರ ಜೀವನದಲ್ಲೂ ಸುಳಿಯೋದೇ ಇಲ್ಲ.... ಅಂಥಾ ಗೆಲುವು ಈ ಹೊಸ ಯುಗಾದಿ ವರ್ಷದಲ್ಲಿ ಎಲ್ಲರದ್ದಾಗಲಿ ಎಂದು ಹಾರೈಕೆ.
ಇದು
"ಪ್ರೀತಿ"ಯಿಂದ        

ದಾರಿದೀಪ
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ..........

ನಮ್ಮಲ್ಲಿ ಬುದ್ದಿವಂತಿಕೆ ಮತ್ತು ಬೌದ್ಧಿಕತೆ ಎಂಬ ಮಾತುಗಳು ಸಹಜವಾಗಿ ಪ್ರಚಲಿತದಲ್ಲಿರುತ್ತದೆ..ಆದರೆ ಅವುಗಳ ನಡುವಿನ ವ್ಯತ್ಯಾಸವಾಗಲೀ, ಸ್ವಾಮ್ಯವಾಗಲೀ..ಸುಲಭಕ್ಕೆ ಅರ್ಥವಾಗುವಂಥದ್ದಲ್ಲ. ಆದರೂ ಹತ್ತು ಹಲವು ಅನುಭವಸ್ಥರ..ಜ್ಞಾನಿಗಳ ಮಾತು,ಕೃತಿ, ನಡೆ, ನಡುವಳಿಕೆಯ ಆಧಾರದ ಮೇಲೆ ನಾವು ನಮ್ಮ ನಮ್ಮ ಜೀವನದ ಪ್ರತಿ ಹೆಜ್ಜೆಗಳನ್ನು ಸವೆಸಬೇಕಾಗುತ್ತದೆ. ಹಾಗಾಗಿ ಹಿರಿಯರಾಡಿದ, ರಚಿಸಿದ, ಒಂದಷ್ಟು ದೃಷ್ಟಾಂತಗಳು ನೆನಪಿಗೆ/ಬರಲೇಬೇಕಾಗುತ್ತದೆ. ಅದಕ್ಕೊಂದು ಉದಾಹರಣೆ ಅಂದರೇ.....ಭಗವಾನ್ ಶ್ರೀರಾಮಕೃಷ್ಣರು ಒಂದು ಕಥೆಯನ್ನು ಹೇಳುತ್ತಿದ್ದರು.

"ಒಮ್ಮೆ ಕೆಲವರು ಒಂದು ಮಾವಿನ ತೋಟಕ್ಕೆ ಹೋಗಿ, ಆ ಗಿಡದ ರೆಂಬೆಕೊಂಬೆ, ಅದರ ಬಣ್ಣ ಮತ್ತು ಅವುಗಳ ಗಾತ್ರ ಇವುಗಳನ್ನು ಅಧ್ಯಯನ ಮಾಡಿ ಅದನ್ನು ಜೋಪಾನವಾಗಿ, ಕೇವಲ ಒಂದು ಪುಸ್ತಕದಲ್ಲಿ ಬರೆದಿಡುವುದರಲ್ಲೇ ನಿರತರಾಗಿರುತ್ತಿದ್ದರು. ಅನಂತರ ಪ್ರತಿಯೊಂದು ವಿಷಯದ ಮೇಲೂ ಚರ್ಚೆಮಾಡುವುದಕ್ಕೆ ದೊಡ್ಡದೊಂದು ಸಭೆಯನ್ನೇ ಸೇರುತ್ತಿದ್ದರು, ಮತ್ತು ಬಹಳ ಕುತೂಹಲದಿಂದ ಇದೇ ವಿಷಯವನ್ನೇ ಚರ್ಚಿಸುತ್ತಿದ್ದರು. ಆದರೆ ಅವರಲ್ಲಿ ಒಬ್ಬ, ಎಲ್ಲರಿಗಿಂತ ವಿವೇಕಿಯಾದವನು ಇದಾವುದನ್ನೂ ಲೆಕ್ಕಿಸಲಿಲ್ಲ. ಹಾಗೂ ನೇರವಾಗಿ, ಯಾವುದೇ ಪ್ರಲೋಭನೆಗಳು ಇಲ್ಲದೇ ಹಣ್ಣನ್ನು ತಿನ್ನಲು ಶುರು ಮಾಡಿದನು. ನಿಜವಾದ ಅರ್ಥದಲ್ಲಿ ಅವನೇ ಬುದ್ದಿವಂತನಲ್ಲವೆ? ಇಲ್ಲೊಂದು ಸಹಜ ಜಾಣತನವಿದೆ. ಎಲೆ, ರೆಂಬೆ, ಎಣಿಸಿ ಬರೆದಿಡುವುದನ್ನು ಇತರರಿಗೆ ಬಿಡಿ. ಇಂತಹ ವಿಷಯಗಳಿಗೂ ಯೋಗ್ಯ ಸ್ಥಳವಿದೆ. ಆದರೆ ಆಧ್ಯಾತ್ಮಿಕ ಕಾರ್ಯಕ್ಷೇತ್ರದಲ್ಲಿ ಆ ರೀತಿ ಅಲ್ಲ. ಕೇವಲ ಎಲೆ, ಬಳ್ಳಿ ಎಣಿಸುವುದು ವೀರರ ಲಕ್ಷಣವಲ್ಲ.ಮೂಲ ತಿರುಳು ತಾನೇ ಮುಖ್ಯ.

ಹಾಗೆಯೇ ನೀವು ನಿಜವಾದ ಭಕ್ತರಾಗಬೇಕಾದರೆ... ಶ್ರೀಕೃಷ್ಣನು ಮಥುರೆಯಲ್ಲಿ ಹುಟ್ಟಿದನೋ, ಕಡಲಿನಲ್ಲಿ ಹುಟ್ಟಿದನೋ.. ಕಮಲದಲ್ಲಿ ಹುಟ್ಟಿದನೋ? ಅವನು ಮಾಡುತ್ತಿದ್ದುದು ಏನು? ಅಥವಾ ನಿಜವಾಗಿ ಯಾವ ತಾರೀಖಿನ ದಿನ ಅವನು ಗೀತಾ ಸಂದೇಶವನ್ನು ಸಾರಿದನು? ಎಂಬುದನ್ನು ತಿಳಿದುಕೊಳ್ಳಬೇಕಾಗಿಲ್ಲ. ಮತ್ತು ಆ ರೀತಿಯ ಕೇವಲ ಅಗತ್ಯಕ್ಕೆ ಬಾರದ ಎಲೆ ಬಳ್ಳಿಗಳ ಹುಡುಕಾಟ ಬೇಕಿಲ್ಲ. ಕೇವಲ ಆ ಭಗವಂತ ನುಡಿದ ಗೀತೆಯಲ್ಲಿ ಬರುವ ಕರ್ಮತತ್ಪರತೆ, ಬದುಕಿನ ನೀತಿ ಮತ್ತು ಪ್ರೇಮ ಮುಂತಾದ ಘನವಾದ ವಿಷಯಗಳಲ್ಲಿ ನಮಗೆ ಆಸಕ್ತಿ ಬೇಕು, ಅಷ್ಟೆ. ಒಂದು ಗ್ರಂಥ ಮತ್ತು ಅದರ ಕರ್ತೃವಿನ ವಿಷಯದ ಚರ್ಚೆಯ ವಿವರಗಳೆಲ್ಲ ಪಂಡಿತ ರಂಜನೆಗೆ ಮಾತ್ರ. ಅವರಿಗೆ ಬೇಕಾದುದನ್ನು ಅವರೇ ಇಟ್ಟುಕೊಳ್ಳಲಿ. ಪಾಂಡಿತ್ಯದಿಂದ ಕೂಡಿರುವ ಅವರ ವಾದಗಳಿಗೆ ಕಿವಿಗೊಡುವುದರ ಬದಲು

ಸಾರವಿರುವ ಸಾತ್ವಿಕತೆಯ ಮಾವಿನ ಹಣ್ಣನ್ನು ತಿನ್ನುವುದೇ ಸದ್ಯದ ಶೀಘ್ರಗತಿಯ, ನಾಗಾಲೋಟದ ಪ್ರಪಂಚಕ್ಕೆ ಬೇಕಿರುವ ವಿವೇಕ." ಎಂಬುದಾಗಿ ಪರಮಹಂಸರು ಹೇಳಿದ್ದು ಕೇವಲ ಸಮಯ ಕಳೆಯುವ ಮಾತಲ್ಲ. ಅದಕ್ಕೊಂದು ಮಾರ್ಮಿಕ ಅರ್ಥವಿದ್ದೇ ಇದೆ.

ಉದಾಹರಣೆಗೆ...ಎಲ್ಲರಿಗೂ ಗೊತ್ತಿರುವ ಹಾಗೆ.. ಒಂದು ಆಮೆಯು ತನ್ನ ಕಾಲುಗಳನ್ನೂ ಮತ್ತು ತಲೆಯನ್ನೂ, ತನ್ನ ಚಿಪ್ಪಿನ ಒಳಕ್ಕೆಳೆದುಕೊಂಡಾಗ, ನಾವು ಅದನ್ನು ಚೂರು ಚೂರು ಮಾಡಿ ಕೊಂದರೂ, ಅದು ತನ್ನ ತಲೆಯನ್ನು ಹೇಗೆ ಹೊರಗೆ ಚಾಚುವುದಿಲ್ಲವೋ... ಆ ಪ್ರಕಾರವಾಗಿಯೇ... ತನ್ನ ಪ್ರತಿಭೆಯ ಮೇಲೆ ನಿಜವಾದ ನಂಬಿಕೆ ಇರುವವನು.. ತನ್ನೊಳಗಿನ, ಪ್ರೇರಕ ಶಕ್ತಿಗಳ ಮೇಲೆಯೂ, ಕರ್ಮೇಂದ್ರಿಯಗಳ ಮೇಲೆಯೂ, ಪ್ರಾಮಾಣಿಕ ಪರಿಶ್ರಮದ ಮೇಲೆಯೂ ನೆಲೆ ನಿಂತಿರುತ್ತಾನೆ. ಹಾಗಾಗಿ... ಆತನ ಅಂತಸ್ಥ ಬಲಗಳು ಆತನ ವಶವಾಗಿರುವುದರಿಂದ, ಆತನ ಇಚ್ಚೆಗೆ ವಿರೋಧವಾಗಿ ಅವನನ್ನು ಯಾರೂ, ಅವನ ಆತ್ಮಬಲದ ಪರಿಧಿಯಿಂದ ಹೊರಗೆಳೆಯಲಾರರು. . ಅಂತಹವನು ಎಂದೆಂದಿಗೂ ಸುರಕ್ಷಿತನು. ಏಕೆಂದರೆ ಕಷ್ಟ ಪಡುವವನು ಮತ್ತು ಸಂಸ್ಕಾರ ಉಳ್ಳವನು ಎಂದೆಂದಿಗೂ ಕೆಟ್ಟದ್ದನ್ನು ಮಾಡಲಾರ..

ಗೆಳೆಯರೇ.....ಇಂಥಾ ಇತಿಹಾಸವಾಗೋ ಸನ್ನಿವೇಶ, ಸಂದರ್ಭ, ಉದಾಹರಣೆ, ವಿಚಾರಗಳೇ....

ಯುವ ಪೀಳಿಗೆಯ ಮುಂದಿನ ಬದುಕಿನ ದಾರಿದೀಪವಾಗಲಿ......
ಇದು
"ಪ್ರೀತಿ"ಯಿಂದ

ಏಕತೆ-ವಿಭಿನ್ನತೆ
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ.....
ಈ ಬದುಕು ನಮಗೆ ತಿಳಿದಂತೆ ಹಲವು, ಹಾಗೂ ತಿಳಿಯದಂತೆ ಹಲವು ವಿಭಿನ್ನ ದೃಷ್ಠಿಕೋನಗಳನ್ನು ನೀಡುತ್ತಾ ಬಂದಿದೆ.....ಅದೆಷ್ಟೋ ಲೆಖ್ಖವಿಲ್ಲದಷ್ಟು ಸಲ ನಾವು ಈ ಪ್ರಕೃತಿಗೆ ಇದರ ವೈಶಿಷ್ಠ್ಯಕ್ಕೆ ಸೋತೇ ಇರುತ್ತೀವಿ. ಆದರೂ ’ನಾನು’, ನನ್ನದು, ನನ್ನಿಂದಲೇ, ನನಗಾಗಿಯೇ; ಎನ್ನುವಂಥ ದರ್ಪ ಅಥವಾ ಮೂರ್ಖತನ                ಇರುತ್ತದೆ.... ಹಾಗಾಗಿಯೇ ಆಗಾಗ ಹಿರಿಯರ ಅನುಭವ.ನಡೆ ನುಡಿ, ಬದುಕಿದ ರೀತಿ ನೀತಿಗಳನ್ನು ಅಭ್ಯಾಸ ಮಾಡುತ್ತಲೇ ಇರಬೆಕಾಗುತ್ತದೆ...

ಬಹುಮುಖ್ಯವಾಗಿ ಯುವಜನತೆ ಇದರತ್ತ ಕಣ್ಣು ಹಾಯಿಸೋದು ಪ್ರಸಕ್ತ ಸಮಯದಲ್ಲಿ ತುಂಬಾ ಸೂಕ್ತ ....ಇದಕ್ಕೆ ಸಂಬಂಧಪಟ್ಟ ಹಾಗೆ ಒಂದೆರಡು ಪುಟ್ಟ ದೃಷ್ಠಾಂತಗಳು.............. 

ಭಗವಾನ್ ಬುದ್ದನ ಶ್ರೇಷ್ಠ ಶಿಷ್ಯನ ಹೆಸರು ಉಪಗುಪ್ತ. ಆತನು ಒಬ್ಬ ಸಂತನಾಗಿದ್ದ. ಆತ ತನ್ನ ಪ್ರಯಾಣದ ಸಂದರ್ಭದಲ್ಲಿ ಅತ್ಯಂತ ಸುಂದರ ವೇಶ್ಯಾಸ್ತ್ರಿಯೊಬ್ಬಳನ್ನು ಸಂಧಿಸಿದ. ಆಕೆಗೆ ಇವನ ಮೇಲೆ ಪ್ರೇಮವುಂಟಾಯಿತು. ಆದರೆ ಅದಕ್ಕೆ ಮನಸೋಲದ ಆ ಸಂತನು "ಭೌತಿಕಸುಖ ಮುಂದೆ ದುಃಖವನ್ನುಂಟುಮಾಡುವುದು" ಎಂದು ಹೇಳಿ, ಆಕೆಯ ಬಯಕೆಯನ್ನು ಈಡೇರಿಸದೆ ಹೊರಟುಹೋದ. ಆದರೆ ಮುಂದೆ ಆಕೆ ಅಪೇಕ್ಷಿಸಿದಾಗ ತಾನು ಬರುವುದಾಗಿ ಮಾತುಕೊಟ್ಟಿದ್ದ. ಹಾಗೆಯೇ ಅನೇಕ ವರ್ಷಗಳು ಕಳೆದವು. ಮುಂದೊಂದು ದಿನ ಆ ಸ್ತ್ರೀಯು ಖಾಯಿಲೆಗೆ ತುತ್ತಾಗಿ ತನ್ನ ಸೌಂದರ್ಯವನೆಲ್ಲ ಕಳೆದುಕೊಂಡಳು. ಕೊಳೆತು ನಾರುವ ಮಾಂಸದ ಮುದ್ದೆಯಂತಾದಳು. ಆಗ ಆಕೆ ಉಪಗುಪ್ತನನ್ನ ತೀವ್ರವಾಗಿ ಚಿಂತಿಸಿದಳು. ಕೂಡಲೇ ಅವನು ಅವಳೆದುರು ಬಂದು ನಿಂತ. ಆಗ ಅವಳೆಂದಳು, "ನನ್ನ ದೇಹದಲ್ಲಿ ಸೌಂದರ್ಯವಿದ್ದಾಗ, ಒಡವೆ ವಸ್ತ್ರಗಳಿಂದ ಅಲಂಕೃತವಾಗಿದ್ದಾಗ, ನೀನು ಬರಲು ನಿರಾಕರಿಸಿದೆ. ನಾನೀಗ ಇಂತಹ ಅಸಹ್ಯ ಪರಿಸ್ಥಿತಿಯಲ್ಲಿದ್ದಾಗ ಬಂದಿದ್ದೀಯೆ?"   ಎಂದಾಗ ಉಪಗುಪ್ತ ಉತ್ತರಿಸಿದ."ಸೋದರಿ.. ಸರಿಯಾದ ತಿಳುವಳಿಕೆಯುಳ್ಳವನ ದೃಷ್ಟಿಯಲ್ಲಿ ನೀನು ಏನನ್ನೂ ಕಳೆದು ಕೊಂಡಿಲ್ಲ .ಬಾಹ್ಯ ಸೌಂದರ್ಯವನ್ನು ಅವಲಂಬಿಸಿದ ಪ್ರೀತಿಗಿಂತ, ನಿನ್ನ ಮೇಲಿನ ನನ್ನ ಅಂತರಂಗದ ಪ್ರೀತಿ ಆಳವಾದುದುಆಕೆಯ ಕಣ್ಣುಗಳು ಅರಳಿದವು. ಭರವಸೆ ಹಿಂದಿರುಗಿತು. ಮುಂದೆ ಬುದ್ದನ ದಿವ್ಯಸಂದೇಶವನ್ನು ಪಡೆದು ತನ್ನ ಜೀವನವನ್ನು ಪಾವನಗೊಳಿಸಿಕೊಂಡಳು.

ಹಾಗೆಯೇ... ಹಿಂದೊಮ್ಮೆ ನಡೆದ ಕಥೆ.......ಒಮ್ಮೆ, ಮಹಾ ಯತಿಗಳಾದ ವ್ಯಾಸರಾಜರ ಕೀರ್ತಿಯನ್ನು ಸಹಿಸಲಾರದೆ ಯಾವನೋ ಒಬ್ಬನು ವಿಷಪ್ರಯೋಗವನ್ನು ಮಾಡಿದನು. ವ್ಯಾಸರಾಜರ ನೈವೇದ್ಯದ ಅಡುಗೆಯಲ್ಲಿ ವಿಷವನ್ನು ಹಾಕಿಸಿದನು. ಹಣದಾಸೆಗೆ ಅಡುಗೆಯವನು ಬಲಿಯಾದರೂ  ಸಹ ಸ್ವಾಮಿಗಳಿಗೆ ಬಡಿಸುವಾಗ ಬೆದರಿ ಅವನ ಕೈ ನಡುಗಿತು.

ಸ್ವಾಮಿಗಳು...’ಹೀಗೇಕೆ ನಿಂತ್ತಿದ್ದಿಯೇ? ಬಡಿಸು’ ಎಂದರು.
ಅಡುಗೆಯವನಿಗೆ ಕೈ ಬರಲಿಲ್ಲ. ತಪ್ಪು ಮಾಡಿದೆ. ಕ್ಷಮಿಸಿ. ತಾವು ಅದನ್ನು ಬೋಜನ ಮಾಡಬಾರದು.. ಎಂದು ಕೈಮುಗಿದ. ,

ಯಾಕೆ ?’ ಎಂದರು ವ್ಯಾಸರು.
ಆತ ’ಅದರಲ್ಲಿ ವಿಷಹಾಕಿದೆ’ ಎಂದು ಹೇಳಿ ನಡೆದುದನ್ನು ತಿಳಿಸಿದ. ವ್ಯಾಸರಾಜರು ಪ್ರಶ್ನಿಸಿದರು: ಅದನ್ನು ದೇವರ ನೈವೇದ್ಯಕ್ಕಿಟ್ಟಿದ್ದೆಯ?.....

’ಹೌದು ಎಂದ ಅಡುಗೆಯವನು. ಯಾವ ಭಾವನೆಯಿಂದ ದೇವರ ಮುಂದಿಟ್ಟೆ-ಅನ್ನವೆಂದೋ ವಿಷವೆಂದೋ?
ಆತಾ ಅನ್ನ, ಎಂದು ಹೇಳಿದ. ಅದನ್ನು ಕೇಳಿದ ಗುರುಗಳು, ಸರಿ.. ನನಗೂ ಅದನ್ನೆ ಬಡಿಸು ಎಂದರು. ಅಡುಗೆಯವನಿಗೆ ಬಡಿಸಲು ಕೈಯೇ ಬರಲಿಲ್ಲ .ಸ್ವಾಮಿಗಳನ್ನು ಬೇಡಿಕೊಂಡ .ಇದನ್ನು ಮುಟ್ಟಬೇಡಿ ಎಂದು.
ಆದರೆ ಗುರುಗಳು, ಆ ದೇವರ ಪ್ರಸಾದವೇ ತಮಗೂ ಭೋಜನವಾಗಲಿ ಎಂದು ವಿಷವನ್ನೇ ತಿಂದರು. ರಾತ್ರಿ ನಿದ್ರೆಮಾಡದೆ ವಿಷವನ್ನು ನೈವೇದ್ಯ ಮಾಡಿದುದಕ್ಕಾಗಿ ಕ್ಷಮಿಸು ಎಂದು ಭಗವಂತನನ್ನು ಬೇಡುತ್ತಾ ಭಜಿಸುತ್ತ.ವಿಷವನ್ನು ಜೀರ್ಣಿಸಿಕೊಂಡರು.

ವಿಷಯ ತಿಳಿದ ಜನರು ಸ್ವಾಮಿಗಳಿಗೆ ವಿಷಹಾಕಿದ ವ್ಯಕ್ತಿಯನ್ನು ಶಿಕ್ಷಿಸಬೇಕೆಂದು ಕೇಳಿಕೊಂಡರು. ಆದರೆ ವ್ಯಾಸರಾಯರು ಮುಗುಳ್ನಗುತ್ತಾ, ಪ್ರಾಣಾಪಹಾರಿಯಾದ ವಿಷವು ಭಗವದರ್ಪಿತವಾಗಿ ಅಮೃತವಾಯಿತು.  ಆದ್ದರಿಂದ ಯಾರೂ  ವಿಷಹಾಕಲಿಲ್ಲ; ಹಾಕಿಸಲಿಲ್ಲ. ಅವರನ್ನು ಕ್ಷಮಿಸಿರಿ. ಎಂದು ಜನರನ್ನು ಸಮಾಧಾನಪಡಿಸಿಧರು.

ಈ ಘಟನೆಯಿಂದ ವ್ಯಾಸರಾಯರ ಕೀರ್ತಿ ಇನ್ನಷ್ಟು ಹರಡಿತು.
ಈ ಎರಡು ಸನ್ನಿವೇಶಗಳಲ್ಲಿ ಕಂಡುಬರುವ ಸಾಮಾನ್ಯ ಅಂಶವೇನೆಂದ್ರೇ..........”.ಅನಿವಾರ್ಯತೆಯನ್ನು ಅರಿತುಕೊಳ್ಳೊದು.. ಮತ್ತು ತಪ್ಪುಗಳನ್ನು ಕ್ಷಮಿಸಿಬಿಡೋದು’ ಇಲ್ಲಿ ಏಕತೆಯೂ ಒಂದೇ ರೀತಿ, ವಿಭಿನ್ನತೆಯೂ ಒಂದೇ ರೀತಿ ಕಾಣುತ್ತದೆ.
ಹಾಗಾಗಿ ಗೆಳೆಯರೇ.....ಪ್ರತೀ ಹಂತದಲ್ಲೂ, ಇವೆರಡೂ ಗುಣಗಳನ್ನು.... ನಮ್ಮದಾಗಿಸಿಕೊಂಡು ಬಾಳಿಬಿಡೊಣ. ಆಗ ಬದುಕು ಕೈಹಿಡಿಯುತ್ತದೆ............
ಇದು
"ಪ್ರೀತಿ”ಯಿಂದ.

ಮೊದಲ ಪಾಠ
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ…
ಸದಾಕಾಲ ನಾವೆಲ್ಲರೂ ಅಂದುಕೊಳ್ಳೋ ಹಾಗೆ, ಏನೇ ಆಗಲಿ, ಹೇಗೇ ಆಗಲಿ, ಎಲ್ಲದಕ್ಕೂ ಟೈಮ್ ಬರಬೇಕು, ಕಾಲ ಕೂಡಿ ಬರಬೇಕು. ಆ ದೇವರು ಕೆಳಗಿಳಿದು, ಮುಂದೆ ಬಂದು ಕೈ ಹಿಡಿದುಕೊಂಡು ಒಳ್ಳೆಯದು ಮಾಡಬೇಕು ಎಂಬ ಭಾವನೆಗಳು, ಧೋರಣೆಗಳು ಹೆಜ್ಜೆಹೆಜ್ಜೆಗೂ ಕಾಡ್ತಾನೇ ಇರುತ್ತೆ. ಆದರೆ ವಾಸ್ತವವಾಗಿ, ನಾವಾಗಿ ಒಂದು ಹೆಜ್ಜೆಯನ್ನೂ ಮುಂದೆ ಇಡದೇ ಹೋದರೆ ದಾರಿ ಚಿಕ್ಕದಾಗೊಲ್ಲ. ದಾರಿ ಚಿಕ್ಕದಾಗದೇ ಹೋದ್ರೆ, ಗುರಿ ಹತ್ತಿರವಾಗೊಲ್ಲ. ಈ ರೀತಿಯ ಹೆಜ್ಜೆ, ದಾರಿ, ಗುರಿ ಮುಂತಾದ ಯಾವುದೋ ವಿಷಯಗಳು ನೇರವಾಗಿ ಅನ್ವಯಿಸೋದು, ಪ್ರತಿಯೊಬ್ಬರ ಆಲೋಚನೆಗಳು ಮತ್ತು ಅನುಭವಗಳ ಆಧಾರದ ಮೇಲೆಯೇ!

ಒಂದು ಚಿಕ್ಕ ಗಮನಿಕೆ.
ಭಗವಾನ್ ಬುದ್ಧ ಎಂಥಾ ಚೈತನ್ಯಶಾಲಿ ಅನ್ನೋದು ಪ್ರಪಂಚಕ್ಕೇ ಅರಿವಾಗಿದ್ದ ದಿನಗಳವು. ಅಂಥಾ ಬುದ್ಧನಿಗೆ ಅನೇಕ ಶಿಷ್ಯರಿದ್ರು. ಅವರೆಲ್ಲರೂ ಸಹಾ ಅಸಾಧಾರಣ ಶಕ್ತಿಯನ್ನು, ಚಾಕಚಕ್ಯತೆಯನ್ನು ಹೊಂದಿದವರಾಗಿದ್ರು. ಬುದ್ಧನ ಶಿಷ್ಯರಲ್ಲಿ ಕೌಶಲ್ಯ ಎಂಬೊಬ್ಬನಿರ್ತಾನೆ. ಅವನಿಗೆ ಸಕಲ ಮಂತ್ರ, ತಂತ್ರ, ಪವಾಡಗಳೆಲ್ಲವೂ ಸುಲಲಿತವಾಗಿ ಒಲಿದು ಬಂದಿತ್ತು. ಒಂದು ಸಾರಿ ರಾಜನ ಆಸ್ಥಾನದಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಪಂಥವೊಂದನ್ನು ಕಟ್ಟಿ ಸವಾಲು ಎಸೆದಿರ್ತಾನೆ. ಒಂದು ಗಂಧದ ಪಾತ್ರೆಯಲ್ಲಿ ಬೆಲೆಬಾಳುವ ರತ್ನಾಭರಣಗಳನ್ನು ತುಂಬಿಸಿ, ಅತೀ ಎತ್ತರದ ಛಾವಣಿಯ ಬೊಂಬಿನ ಮೇಲೆ ತಲೆಕೆಳಗಾಗಿ ಇಟ್ಟು, ನಾಣ್ಯಗಳು ಕೆಳಗೆ ಬೀಳದ ಹಾಗೆ ಚಾತುರ್ಯವನ್ನು ತೋರಿಸಿ, ಬುದ್ಧನ ಶಿಷ್ಯರನ್ನು ಹತ್ತಿರ ಕರೆಯುತ್ತಾನೆ. ಮೂವತ್ತ್ ಅಡಿ ಎತ್ತರದ ಆ ಗಂಧದ ಮಡಕೆಯತ್ತ ಯಾವುದೇ ಏಣಿಯನ್ನಾಗಲೀ, ಕೋಲನ್ನಾಗಲೀ, ಇತರೇ ಸಾಧನಗಳನ್ನಾಗಲೀ ಬಳಸದೇ ಆ ಪಾತ್ರೆಯನ್ನು ಮುಟ್ಟಿದ್ದಾದ್ರೆ, ಅದರಲ್ಲಿನ ನಗನಾಣ್ಯಗಳೆಲ್ಲವನ್ನೂ ಅವರಿಗೇ ಅರ್ಪಿಸಿ, ಸೋಲೊಪ್ಪಿಕೊಂಡುಬಿಡುವುದಾಗಿ ಹೇಳಿ, ಮುಂದೆ ರಾಜಾರೋಷವಾಗಿ ನಿಂತಿದ್ದಾನೆ. ಬುದ್ಧನ ಶಿಷ್ಯರು ದಾರಿತೋಚದೇ ನಿಂತಿದ್ದಾರೆ. ಆಗ ಕೌಶಲ್ಯನು ಆ ಬೊಂಬಿನ ಕೆಳಗೆ ನಿಂತಲ್ಲಿಂದಲೇ ತನ್ನ ಕೈಗಳನ್ನು ಮೇಲೆತ್ತಿ ಹಿಡೀತಾನೆ. ಆತನ ತಪೋಶಕ್ತಿಯಿಂದ ಆ ಕೈಯ್ಯ ಅಳತೆ ದೊಡ್ಡದಾಗಿ ಬೆಳೆಯುತ್ತಾ ಬೆಳೆಯುತ್ತಾ, ಆ ಮಡಕೆಯವರೆಗೂ ಉದ್ದವಾಗಿ, ಕ್ಷಣಾರ್ಧದಲ್ಲೇ ಆ ಶಿಷ್ಯ, ಆ ಮಡಕೆಯನ್ನು ಕೈಯ್ಯಲ್ಲಿ ಹಿಡಿದು ಗೆಲುವಿನ ನಗೆ ಬೀರುತ್ತಾನೆ. ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ನಂತರ ಕೌಶಲ್ಯನ ಈ ಚಾತುರ್ಯವು ಬುದ್ಧನ ಕಣ್ಣಿಗೂ ಬಿತ್ತು. ಆ ಶಿಷ್ಯಂದಿರ ಸಂಭ್ರಮ ಕಂಡು ಬುದ್ಧನಿಗೆ ನಿಜಕ್ಕೂ ಬೇಸರವಾಯ್ತು. ಅರ್ಥವಾಗದೇ ಶಿಷ್ಯರು ಅವಾಕ್ಕಾಗಿ ನೋಡ್ತಿದ್ದಾರೆ. ಬುದ್ಧ ಹೇಳ್ತಾನೆ, “ ಮನುಷ್ಯನಿಗೆ ಅವನು ಅಂದುಕೊಂಡದ್ದಕ್ಕಿಂತಲೂ ಅಧಿಕವಾದ ಶಕ್ತಿ, ಪವಾಡ, ಸಾಮರ್ಥ್ಯ ಇದ್ದೇ ಇರುತ್ತೆ. ಆದರೆ ಸಕಾರಣವಲ್ಲದ ವಿಷಯಕ್ಕೆ, ಮೋಜು ಮಾಡಲಿಕ್ಕೆ, ಮತ್ತೊಬ್ಬರನ್ನು ಕಡೆಗಾಣಿಸಲಿಕ್ಕೆ ಇಂಥಾ ಪವಾಡಗಳನ್ನು ಮಾಡಬಾರದು. ನಮ್ಮ ಸಾಮರ್ಥ್ಯ ಪ್ರದರ್ಶನ ಎಂದಿಗೂ ಸಮಾಜಮುಖಿಯಾಗಿರಬೇಕು. ನೊಂದ, ದೀನದಲಿತರತ್ತ, ಅವರ ಉದ್ಧಾರದತ್ತಲೇ ಉಪಯೋಗವಾಗಬೇಕು. ಆಗ ಮಾತ್ರ ನಮ್ಮೊಳಗಿನ ವಿಶೇಷ ಶಕ್ತಿ ಇಮ್ಮಡಿಗೊಳ್ಳುವುದು. ವೈಯಕ್ತಿಕ ವರ್ಚಸ್ಸಿಗೆ ಅಥವಾ ಯಾರೋ ವ್ಯಕ್ತಿಯೋರ್ವನ ಗರ್ವ ಇಳಿಸಲಿಕ್ಕಾಗಿ ನಮ್ಮಲ್ಲಿನ ತೇಜಸ್ಸನ್ನು ಕಡಿಮೆ ಮಾಡಿಕೊಳ್ಳಕೂಡದು.
ಈ ಮಾತು ಅಂದಿನ ಬುದ್ಧನ ಶಿಷ್ಯರಿಗೆ ಮಾತ್ರವಲ್ಲ, ಇಂದಿನ, ಪ್ರತೀ ಯುವಕ-ಯುವತಿಯರಿಗೂ ದಿನದ ಮೊದಲ ಪಾಠವಾಗಬೇಕು. ಶಕ್ತಿ, ಬಲ, ಹಣ, ವಿದ್ಯೆ, ಇವೆಲ್ಲ ಇರೋದು ಯಾರೊಬ್ಬರನ್ನೋ ಮಣಿಸಲಿಕ್ಕಲ್ಲ. ಯಾವುದೋ ಒಂದನ್ನು ಗಳಿಸಲಿಕ್ಕಲ್ಲ. ಪ್ರಕೃತಿಯಿಂದ ಪಡೆದದ್ದು ಸಮಾಜಕ್ಕೆ. ಸಮಾಜದಿಂದ ಪಡೆಯೋದು ಶಿಕ್ಷಣಕ್ಕೆ.. ಎಂಬಂತಾಗಬೇಕು.
ಒಟ್ಟಾರೆ, ನಾನೆಂಬ ಗರ್ವ ಮಾಯವಾಗಿ, ’ನಾವು’ ಎಂಬುದು ನಿತ್ಯ ಸತ್ಯ ಜಗಜ್ಜಾಹೀರಾಗಬೇಕು. ಆಗ ಮಾತ್ರ ’ಶಾಂತಿ’ ಸೌಹಾರ್ದ ಸಾಧ್ಯ ಅನ್ನೋದು ಬುದ್ಧನ ಬದುಕಲ್ಲಿ ದಾರಿಯೊಂದಾಗಿತ್ತು. ಅಂಥಾ ಬದ್ಧತೆ ಪ್ರತಿಯೊಬ್ಬ ಕ್ರಿಯಾಶೀಲ ವ್ಯಕ್ತಿಗಳದ್ದಾಗಿರಲಿ ಎಂಬುದೇ ಸದ್ಯದ ಎಲ್ಲರ , ಜಗದೆಲ್ಲರ ಹಾರೈಕೆ.

ಇದು
’ಪ್ರೀತಿ’ಯಿಂದ

 

ಬಿತ್ತುವುದೇ ಬೆಳೆಯುವುದು
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ....

ಎಲ್ಲರಿಗೂ ತಿಳಿದಿರುವಂತೆ ನಮ್ಮ ಈ ದೇಶ ಲೆಖ್ಖವಿಲ್ಲದಷ್ಟು ಮಹಾತ್ಮರನ್ನು ಮಹೋದಯರನ್ನು, ಮಹಾ ಅನ್ವೇಷಣಾಕಾರರನ್ನು ಕಂಡಿದೆ, ಆ ಬಗ್ಗೆ ಸಾವಿರಾರು ಚರಿತ್ರೆ, ಗ್ರಂಥ, ಪುರಾವಳಿಗಳಲ್ಲಿ ಕಾಣ ಸಿಗುತ್ತಲೇ ಇರುತ್ತದೆ... ಆದರೆ ಅಂಥಾ ಮಹಾ ಮಹಿಮರ ಪ್ರತಿ ಬದುಕಿನ ಹಿಂದೆ ಒಂದೊಂದು ಕೊಳದಷ್ಟು ಬೆವರು, ಕಣ್ಣೀರು, ಹತಾಷೆ, ನಿರಾಶೆಗಳ ಮಹಾಪೂರವೇ ತುಂಬಿ ತುಳುಕುತ್ತಿರೋದು ಅಥವಾ ತುಂಬು ತುಳುಕಿರೋದು ಮಾತ್ರ ಯಾಕೆ ಇಂಬ ಜಿಜ್ಞಾಸೆ ಅನೇಕರಿಗೆ ಕಾಡುವುದೇ ಇಲ್ಲ..... ಕಾರಣ ಅಂಥವರುಗಳ ಸಾಧನೆಗಳೇ ಅವರುಗಳ ವೇದನೆಗಳನ್ನು ಮರೆಸಿಬಿಟಟ್ಟಿರುತ್ತದೆ.. ಎಂಬಿತ್ಯಾದಿ ತರ್ಕಗಳನ್ನು ಬದಿಗೊತ್ತಿ ನೇರವಾಗಿ ಅಂಥವರುಗಳ ಪರಿಶ್ರಮವೊಂನ್ನು ಮಾತ್ರ ಗಮನದಲ್ಲಿಟ್ಟುಕೊಂಡು, ಅಂಥಾ ಪ್ರತೀ ಸ್ವಯಂಶಿಲ್ಪಿಗಳ ಆದರ್ಶಗಳನ್ನು ರೂಢಿಯಲ್ಲಿಟ್ಟುಕೊಂಡರೆ ಸಾಕು..... ಪ್ರತಿಯೊಬ್ಬರೂ ಸಹಾ ಅವರಿಗರಿವಿಲ್ಲದೇನೆ ಅಪಾರ ಪ್ರಯತ್ನಶೀಲರಾಗಿ ಉತ್ತುಂಗವನ್ನೇ ತಮ್ಮ ಕಾಲಡಿಯಲ್ಲಿರಿಸಿಕೊಂಡು ಬಿಟ್ಟಿದ್ದಾರೆ.....

ಆದರೆ ಯಾರು ನಿಜವಾದ ಪ್ರಯತ್ನಶೀಲರೋ.. ಅಂತಹ ಯಾರಿಗೂ ಅಹಂ ಎಂಬ ಪದದ ಗಂಧ ಗಾಳಿಯೇ ಗೊತ್ತಿರುವುದಿಲ್ಲ...

ಹೌದು ಗೆಳೆಯರೇ.. ಒಬ್ಬ ನಿಜವಾದ ಸಾಧಕರಿಗೆ ಸದಾಕಾಲ ಶತ್ರುವಾಗುಳಿಯೋದು ಅವನ ಅಹಂಕಾರ ಮಾತ್ರಾನೇ..... ಯಾರು ಅಹಂಕಾರಭರಿತ ಸಾಧನೆಯುಳ್ಳವರೋ, ಅಂಥವರ ಬದುಕು ವಿಸ್ತಾರವಾಗಿರುತ್ತದೆಯೇ ವಿನಃ ಭವಿಷ್ಯ ಉದ್ಧಾರವಾಗೋಲ್ಲ... ಅದೇ ಯಾರ ಬದುಕು ವಿನಯ ಪೂರ್ವಕ, ಸಾಧನೆಗಳನ್ನು ಒಳಗೊಂಡಿರುವುದೋ, ಅಂಥವರ ಬದುಕು ಕೆಲವೇ ವರ್ಷಗಳಷ್ಟೇ ಆಗಿದ್ದರೂ ಸರೀ, ಅವರ ಭವಿಷ್ಯ ಮಾತ್ರ ಮುಂದಿನ ಶತಶತಮಾನಗಳಲ್ಲಿ ಉದಯಿಸೋ ಎಷ್ಟೋ ನಿಜಸಾಧಕರ ಬಾಳಿಗೆ ಹಣತೆ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಪರಿಯ ಮಾತುಗಳನ್ನು ಹಿರಿಯರೆಲ್ಲ ಪದೇ ಪದೇ ಆಡುತ್ತಿರುವುದಕ್ಕೆ ಕಾರಣ ಅವರೊಳಗೆ ಕಿರಿಯರ ಭವಿಷ್ಯದ ಬಗ್ಗೆ ಇರುವ ಕಾಳಜಿ ಮಾತ್ರಾನೆ...

ಹಾಗಾಗಿ ಹಿರಿಯರ ಕಾಳಜಿಗಾಗಿ ಶ್ರಮಿಸೋಣ.., ಬದುಕಿನ ಪ್ರತಿ ದಾರಿಗಳನ್ನು ಸಹಾ ಶುಭ್ರ ಭರವಸೆಗಳ ಜೊತೆ ಕ್ರಮಿಸೋಣ... ನಡುನಡುವೆ ನಮ್ಮ ನಮ್ಮ ಪಾಲಿಗೆ ಒದಗಿ ಬರೋ ಪ್ರತೀ ಕಾಯಕವನ್ನು ಸಹಾ ಭಕ್ತಿ ಶ್ರದ್ಧೆಯಿಂದ ರಮಿಸೋಣ...

ಬಿತ್ತಿದ್ದೇ ಬೆಳೆಯುತ್ತೇವೆ ಅನ್ನೋ ಗಾದೆಯನ್ನು ತುಸು ವರ್ಗಾಯಿಸಿಕೊಂಡು, ಒಳ್ಳೆಯದನ್ನೇ ಬಿತ್ತಿ, ಒಳ್ಳೆಯದನ್ನೇ ಬೆಳೀತೀವಿ ಎಂಬ ತತ್ವಕ್ಕೆ ದೊರೆಗಳಾಗೋಣ ಎಂಬುದೇ ನಿತ್ಯ ಸುಪ್ರಭಾತವಾದರೆ, ನಿತ್ಯ ಸಂಧ್ಯಾರಾಗವಾದರೆ, ಹಿತ ಬಯಸೋ ಹಿರಿಯರ ಕಾಳಜಿಗೆ ಒಂದು ಬೆಲೆ ಬಂದಂತೆ ತಾನೇ..?
ಇದು ಪ್ರೀತಿಯಿಂದ...
ಅಜರಾಮರರು
ತಿಂಗಳ ಮಾತಿನ ಅಂಗಳಕ್ಕೆ ಸ್ವಾಗತ ಗೆಳೆಯರೇ,
ಮಾಸಗಳು ಮಾಸಿದರೂ ನೆನಪುಗಳು ಮಾಸದು. ಈ ಪ್ರಪಂಚದ ಒಳಹರಿವೇ ಹಾಗೆ. ಭೂಮಿ ಹಳೆಯದಾದರೂ ಇಲ್ಲಿನ ನಿಯಮಗಳಂತೂ ಮರೆಯೋ ಹಾಗೇ ಇಲ್ಲ. ಸೂರ್ಯ, ಚಂದ್ರ, ಆಕಾಶ, ತಾರೆಗಳು, ಚುಕ್ಕ್ಕಿಗಳು, ಹಾರುವ ತಟ್ಟೆಗಳು, ನದಿ, ಸಮುದ್ರ, ಸಾಗರ, ಗಾಳಿ, ಬೆಳಕು, ವ್ಯವಸ್ಥೆ ಎಲ್ಲವೂ ಒಂದು ಅಪೂರ್ವವಾದ, ಅಮೂಲ್ಯವಾದ ಶಕ್ತಿಗಳೇ ಹೌದು. ಇಂಥಾ ಎಲ್ಲಾ ಶಕ್ತಿಗಳಿಗೂ ಈ ಸೃಷ್ಠಿಯೊಂದು ಸ್ವಯಂ-ಪ್ರೇರಿತ ಸಾಕ್ಷಿಯಾಗಿರೋದೇ ಆ ದೇವರ ಇರುವಿಕೆಗೆ ಸಾಕ್ಷಿ. ಆತನ ಇರುವಿಕೆ ಒಂದು ಸ್ವಾಭಿಮಾನದ ಸಂಕೇತ.

ಇಂಥಾ ಪರಿಸ್ಥಿತಿಯಲ್ಲಿ ಯಾರು ತಮ್ಮ ತಮ್ಮ ಆತ್ಮ ಗೌರವವನ್ನು ಎತ್ತಿ ಹಿಡಿಯುತ್ತಾ ಈ ಲೌಕಿಕತೆಯಲ್ಲಿ, ಈ ಭೂಮಿಯ ಈ ನಾಗರೀಕ ಮುದಾಯದಲ್ಲಿ, ಸ್ವ್ವಾಭಿಮಾನಿಯಾಗಿ ಬಾಳಿ ಬದುಕುತ್ತಾರೋ ಅಂಥವರ ಎದೆಯಲ್ಲೇ ದೇವರಿರುತ್ತಾನೆ. ಅಂಥವರ ನಿರ್ಧಾರಗಳಲ್ಲೇ ಆ ದೇವರು ವಾಸಿಸುತ್ತಾನೆ ॒ಎನ್ನುವುದೂ ಸಹಾ ಒಂದು ಮರೆಯಲಾಗದ ವಿಚಾರ.

ಆ ದಿನಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಾರ ನಡೆಸುತ್ತಾ ಇದ್ದ ಕೆಲವು ಮುಸ್ಲಿಮರಿದ್ದರು. ಅವರಲ್ಲಿ ಒಬ್ಬಾತ, ದಾದ ಅಬ್ದುಲ್ ಸೇಠ್ ಎನ್ನುವವರ ಸಂಬಂಧಿ. ಆತ ಗಾಂಧೀಜಿಯ ಅಣ್ಣನಿಗೆ ಪರಿಚಿತ. ಆತನು, ಬ್ಯಾರಿಸ್ಟರ್ ಆಗಿರೋ ಗಾಂಧಿಯನ್ನು, ತಮ್ಮ ಬಂಧುವಿನ ಮೊಕದ್ದಮೆಯಲ್ಲಿ ಇಂಗ್ಲಿಷ್ ನ್ಯಾಯವಾದಿಗೆ ನೆರವು ನೀಡುವ ಸಲುವಾಗಿ, ದಕ್ಷಿಣ ಆಫ್ರಿಕಾಗೆ ಬರಲಿಕ್ಕೆ ಸಾಧ್ಯವೇ ಎಂದು ಕೇಳಿಕೊಳ್ಳುತ್ತಾನೆ. ಆ ವೇಳೆಗಾಗಲೇ ತಮ್ಮ ವೃತ್ತಿಯಲ್ಲಿ ನಿರಾಶರಾಗಿ ಇಂಗ್ಲಿಷ್ ರಾಜಕೀಯ ಪ್ರತಿನಿಧಿಯಿಂದ ಅವಮಾನಿತರಾಗಿದ್ದ ಗಾಂಧಿಗೆ, ಇದೊಂದು ಒಳ್ಳೆಯ ಅವಕಾಶವೆನಿಸಿ, ಅವರು ತಮ್ಮ ಅಣ್ಣನ ಅಪ್ಪಣೆಯನ್ನು ಪಡೆದು ೧೮೯೩ರ ಎಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸುತ್ತಾರೆ. ಆಗ ಅವರಿಗಿನ್ನೂ ೨೪ ವರ್ಷ ಮಾತ್ರ.

ಮುಂದೆ. ಬಂದ ಉದ್ದೇಶದ ಸಲುವಾಗಿ ನ್ಯಾಯಲಯಕ್ಕೆ ಹೋದಾಗ ಗಾಂಧೀಜಿ ತಮ್ಮ ತಲೆಗೆ ರುಮಾಲು ಸುತ್ತಿರುತ್ತಾರೆ. ಇದನ್ನು ಗಮನಿಸಿದ ನ್ಯಾಯಾಧೀಶ ಅದನ್ನು ತೆಗೆಯಲು ಸೂಚಿಸುತ್ತಾರೆ. ಅಲ್ಲಿನ ನಿಯಮದ ಪ್ರಕಾರ ಸದಾಕಾಲ ರುಮಾಲು ಧರಿಸುವ ಮುಸಲ್ಮಾನರನ್ನು ಬಿಟ್ಟು, ಉಳಿದ ಭಾರತೀಯರೆಲ್ಲರೂ ಅದನ್ನು ತೆಗೆದು ನ್ಯಾಯಸ್ಥಾನಕ್ಕೆ ಗೌರವ ಸೂಚಿಸಬೇಕಿತ್ತು. ಆದರೆ ಸ್ವಾಭಿಮಾನಿಯಾಗಿದ್ದ ಗಾಂಧೀಜಿ, ತಮ್ಮ ರುಮಾಲನ್ನು ತೆಗೆದು ಅವರೆದರು ನಿಲ್ಲಲು ಇಚ್ಛೆ ಪಡದೇ.. ಆ ನ್ಯಾಯಸ್ಥಾನದಿಂದಲೇ ಹೊರಗೆ ಬಂದರು. ಆ ಸಭೆಯ ಮಟ್ಟಿಗೆ ಅದು ಗಾಂಧೀಜಿಗಾದ ಅವಮಾನ. ಆದರೆ ಅಂಥಾ ಪರಸ್ಥಳದಲ್ಲೂ ಗಾಂಧೀಜಿ ನಡೆದುಕೊಂಡ ರೀತಿ ನಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯುವಂತಾಗಿತ್ತು ಎಂದು ನಂತರದ ದಿನಗಳಲ್ಲಿ ಇಡೀ ಭಾರತವೇ ಹೆಮ್ಮೆಪಟ್ಟಿತು.

ಇಲ್ಲ್ಲಿ ನಡೆದ ಘಟನೆ ಅತೀ ಸರಳ ಅಂತ ಅನಿಸಿದರೂ.. ಪ್ರತಿಯೊಬ್ಬ ಕಲಾವಿದರ ಒಳಗೂ ಒಬ್ಬೊಬ್ಬ ಗಾಂಧಿ ಇರುತ್ತಾರೆ. ಮತ್ತು ಅವರವರ ನೈತಿಕ ನಿಲುವುಗಳೇ ಅವರವರ ರುಮಾಲಾಗಿರುತ್ತದೆ. ಹಾಗೂ ಉಳಿದ ಕಟ್ಟ್ಟುಪಾಡುಗಳೆಲ್ಲಾ, ದಕ್ಷಿಣ ಆಫ್ರಿಕಾವೋ ಇಲ್ಲಾ ಉತ್ತರ ಆಫ್ರಿಕಾವೋ ಆಗಿರುತ್ತದೆ ಅನ್ನೊದು ಒಂದು ಸೂಕ್ಷ್ಮ ಉದಾಹರಣೆ.

ಎಲ್ಲಾ ಕಲಾವಿದರೂ ಬಾಳುತ್ತಾರೆ ನಿಜ. ಆದರೆ ಯಾರು ಸ್ವಾಭಿಮಾನಿ ಕಲಾವಿದರಾಗಿರುತ್ತಾರೋ ಅಂಥವರು ಮಾತ್ರಾನೇ "ಅಜರಾಮರರಾಗಿ" ಇರುತ್ತಾರೆ ಅನ್ನೋದು ಮರೆಯಲಾಗದ ಸತ್ಯ.
ಇದು "ಪ್ರೀತಿ"ಯಿಂದ.
-17/11/12

"ನಂಬಿಕೆಯ ನಾಲ್ಕು ತಂತಿಗಳು... "
ತಿಂಗಳ ಮಾತಿನ ಅಂಗಳಕ್ಕೆ ಆತ್ಮೀಯ ಸ್ವಾಗತ ಗೆಳೆಯರೆ!

ದೇವರು ಇದ್ದಾನಾ ಇಲ್ಲವಾ?... ಇದು ಅನಾದಿಕಾಲದಿಂದಲೂ ನಿರಂತರವಾಗಿ ಹೌದು ಇಲ್ಲಗಳ ಸಂಘರ್ಷಗಳನ್ನು ಎದುರಿಸಿಕೊಂಡು ಬಂದಿರುವ ಪ್ರಶ್ನೆ! ಅಷ್ಟೇ ಅಲ್ಲ, ಮನುಕುಲದ ಅಳಿವಿನವರೆಗೂ ಈ ಪ್ರಶ್ನೆ ತನ್ನ ಸಂಘರ್ಷವನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಇದು ನಂಬಿಕೆಗಳಿಗೆ ಸೇರಿದ ವಿಚಾರ. ಪ್ರತಿಯೊಬ್ಬರಿಗೂ ಅವರದೇ ಆದ ನಂಬಿಕೆಗಳ ನೆರಳಿನಲ್ಲಿ ಬದುಕುವ ಹಕ್ಕಿದೆ. ಆದರೆ ಅವರ ನಂಬಿಕೆಗಳು ಇನ್ನೊಬ್ಬರಿಗೆ ನೋವಾಗುವಂತಿರಬಾರದು ಮತ್ತು ಉಪದ್ರವಕಾರಿಯಾಗಿರಬಾರದು. ಅಷ್ಟೆ.

ನಂಬಿಕೆಗಳ ನಡುವಿನ ತಾಕಲಾಟಗಳ ಸೂಕ್ಮತೆ ಕುರಿತಂತೆ ಒಂದು ಸಣ್ಣ ಘಟನೆ ನೆನಪಾಗುತ್ತದೆ. ಮೂರ್ತಿರೂಪದಲ್ಲಿ ಭಗವಂತನನ್ನು ನಂಬುವ ಒಬ್ಬ ಮಹಾತ್ಮರಿಗೆ ನಿರಾಕಾರ ರೂಪದಲ್ಲಿ ದೇವನನ್ನು ನಂಬುವ ಮತ್ತೊಬ್ಬ ಟೀಕಿಸುತ್ತಲೇ ಇದ್ದ. ಭಗವಂತನಿಗೆ ಕಣ್ಣು ಮೂಗು ಬಾಯಿಗಳನ್ನಿಟ್ಟು ಮಾನವನ ಮಟ್ಟಕ್ಕೆ ಇಳಿಸುವುದೇ ಮಹಾಪರಾಧ ಎನ್ನುತ್ತಿದ್ದ. ವಿಗ್ರಹ ಪೂಜೆಯೇ ತಪ್ಪು ಎನ್ನುತ್ತಿದ್ದ. ಒಮ್ಮೆ ಆತನ ಮನೆಗೆ ಬಂದ ಮಹಾತ್ಮರು ಆತನ ತಂದೆಯ ಫೋಟೋವನ್ನು ನೋಡಿ 'ಈ ಫೋಟೋಗೆ ಒಮ್ಮೆ ಉಗುಳಿದರೆ ಹೇಗಿರುತ್ತದೆ' ಎಂದರು. ಆತ ಕೋಪಾವಿಷ್ಟನಾದ. 'ತಂದೆಗೆ ಅವಮಾನ ಮಾಡುತ್ತೀರಾ' ಎಂದ. ಅದಕ್ಕೆ ಅವರು 'ಇದು ಎಷ್ಟೇ ಆದರೂ ಬರಿಯ ಒಂದು ಚಿತ್ರ ತಾನೇ? ತಂದೆಯೇ ಅಲ್ಲವಲ್ಲ, ಪೂಜೆ ಮಾಡಿದರೂ ಒಂದೇ ಉಗುಳಿದರೂ ಒಂದೇ ಅಲ್ಲವೆ?' ಎಂದರು. ಆತ ನಿರುತ್ತರನಾದ. ನನ್ನ ನಂಬಿಕೆಯೇ ಸರಿ. ನಾನು ನಂಬಿರುವುದೇ ಶ್ರೇಷ್ಠ ಎಂದು ವಾದಿಸುತ್ತಾ ಮತ್ತೊಬ್ಬರ ನಂಬಿಕೆಯನ್ನು ಟೀಕಿಸುವ ಮನುಷ್ಯ ಹೀಗೆ ಹುಂಬನೆನಿಸಿಕೊಳ್ಳುತ್ತಾನೆ ಅಲ್ಲವೆ...?

ಈ ನಂಬಿಕೆಗಳಲ್ಲಿ ನಾಲ್ಕು ವಿಧಗಳಿದೆ. ನಂಬಿಕೆ, ಅಪನಂಬಿಕೆ, ಅತಿನಂಬಿಕೆ ಮತ್ತು ಮೂಢನಂಬಿಕೆ. ಬಹುಶಃ ಎಲ್ಲ ರೀತಿಯ ನಂಬಿಕೆಗಳೂ ಕೂಡಾ ಈ ನಾಲ್ಕು ಬಗೆಯ ನಂಬಿಕೆಗಳ ಒಳಗೇ ಸೇರಿಕೊಳ್ಳುತ್ತವೇನೋ ಎಂಬುದು ನನ್ನ ನಂಬಿಕೆ. ಮೊದಲನೆಯದು, ನಂಬಿಕೆ. ನಂಬಿದರೇ ಬದುಕು ಎನ್ನುವುದು ಎಲ್ಲ ಧರ್ಮಸಾರಗಳ ತಿರುಳು. ಬದುಕಿರುತ್ತೇನೆ ಎಂಬ ನಂಬಿಕೆ ಇಲ್ಲದಿದ್ದರೆ ನಾಳೆ ಎನ್ನುವ ಮಾತೇ ಹುಟ್ಟುತ್ತಿರಲಿಲ್ಲ. ಮುಂದಿನ ಕ್ಷಣ ಏನು ಎನ್ನುವ ಚಿಂತನೆಯೇ ಇರುತ್ತಿರಲಿಲ್ಲ. ಬಲ್ಲವರು ಅದಕ್ಕಾಗಿಯೇ 'ನಂಬಿಕೆಯೇ ದೇವರು' ಎನ್ನುತ್ತಾರೆ. ನಮಗೆ ಈ ಜಗತ್ತಿನ ಅಸ್ಥಿತ್ವವೇ ಕಂಡ, ಕಂಡುಕೊಂಡ, ಕೇಳಿಸಿಕೊಂಡ ಮತ್ತು ಒಪ್ಪಿಕೊಂಡ ನಂಬಿಕೆಗಳ ಮೇಲೆ ನಿಂತಿದೆ. ನಂಬಿಕೆಗಳೇ ಇಲ್ಲದೆ ನಾವು ಕಣ್ತೆರೆದು ಜಗತ್ತನ್ನು ನೋಡುವುದೇ ಅಸಾಧ್ಯ. ನಮ್ಮ ಬದುಕಿನ ಪ್ರತಿಹೆಜ್ಜೆಗಳಲ್ಲೂ ಯಾವುದೋ ಒಂದು ನಂಬಿಕೆಗೆ ನಮ್ಮನ್ನು ಒಪ್ಪಿಸಿಕೊಂಡೇ ಮುಂದುವರೆಯುತ್ತೇವೆ. ಅದು ಎಲ್ಲರ ಅನುಭವಕ್ಕೆ ಗ್ರಾಹ್ಯವಾಗಿರುವುದರಿಂದ ಅದರ ಬಗ್ಗೆ ಚರ್ಚೆಯೇ ಬೇಡ.

ಎರಡನೆಯದು ಅಪನಂಬಿಕೆ. ಇದೊಂದು ಮನೋರೋಗ ಎನ್ನಬಹುದು ಅಥವಾ ಮನಃಸ್ಥಿತಿ ಎಂತಲೂ ಕರೆಯಬಹುದು. ಆರೋಗ್ಯವಾದ ಅಪನಂಬಿಕೆಗೆ ಎಚ್ಚರಿಕೆ ಎನ್ನಬಹುದು. ಅನಾರೋಗ್ಯಕರವಾದ ಅಪನಂಬಿಕೆಗೆ ಖಂಡಿತವಾಗಿ ಮನೋರೋಗ ಎಂತಲೇ ಹೇಳಬಹುದು. ಇಡಿಯ ಜಗತ್ತು ಅಪನಂಬಿಕೆಯಿಂದಲೇ ತುಂಬಿದೆ. ಅಪನಂಬಿಕೆಯಿಂದಲೇ ಅನೇಕತೆಯನ್ನು ಹೊಂದಿದೆ. ನಂಬಿಕೆಯಿಂದಲೇ ಅನೇಕತೆಯಲ್ಲಿ ಏಕತೆಯನ್ನು ಹೊಂದಿದೆ. (ಯೂನಿಟಿ ಇನ್ ಡೈವರ್‍ಸಿಟಿ). ಪ್ರತಿಯೊಬ್ಬರೂ ಕೂಡಾ ಮತ್ತೊಬ್ಬರ ಮೇಲಿನ ಅಪನಂಬಿಕೆಗಳಿಂದಲೇ ತಮ್ಮದೇ ಸ್ವಂತ ಎಂಬಂತಹ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾರೆ. ಕೆಲವರಂತೂ ಪ್ರತಿ ನಡೆನುಡಿಯಲ್ಲೂ ಕೂಡಾ ಲೆಕ್ಕಾಚಾರ ತೋರುತ್ತಾರೆ. ಅದನ್ನು ಜಾಣ್ಮೆ ಎಂದು ಹೇಳಿಕೊಳ್ಳುತ್ತಾರೆ. ಪರಿಶೀಲಿಸಿ ನೋಡಿದರೆ ಅದರಲ್ಲಿ ಅಪನಂಬಿಕೆ ಎದ್ದು ಕಾಣುತ್ತಿರುತ್ತದೆ. ಈ ಅಪನಂಬಿಕೆಯ ಅಗತ್ಯ ಎಷ್ಟು ಎಂಬುದು ಅವರವರ ಅನುಭವಕ್ಕೆ ಗ್ರಾಹ್ಯವಾಗಿರುವುದರಿಂದ ಅದರ ಮೇಲೂ ಚರ್ಚೆ ಅನಗತ್ಯ.

ಮೂರನೆಯದು ಮೂಢನಂಬಿಕೆ. ಅದರ ಬಗ್ಗೆ ನಾವು ಹೆಚ್ಚು ಮಾತಾಡುವಂತೆಯೇ ಇಲ್ಲ. ಅದು ತೀರಾ ವೈಯಕ್ತಿಕವಾದದ್ದು. ಬೆಳಗ್ಗೆ ಬಲಗಡೆಯಿಂದ ಎದ್ದರೆ ಒಳ್ಳೆಯದೋ, ಎಡಗಡೆಯಿಂದ ಎದ್ದರೆ ಒಳ್ಳೆಯದೋ ಎನ್ನುವುದರಿಂದ ಹಿಡಿದು, ಪ್ರತಿ ಹೆಜ್ಜೆಯಲ್ಲೂ ಪ್ರತಿ ಕೆಲಸದಲ್ಲೂ ಅದು ಹೀಗೆಯೇ ಇರಬೇಕೆಂಬ ನೀತಿ ನಿಯಮಗಳನ್ನು, ಆಚಾರ ವಿಚಾರಗಳನ್ನು ಕೆಲವರು ಪ್ರತಿಪಾದಿಸುತ್ತಾರೆ. ಬಲ್ಲವರು ಹೇಳಿರಬಹುದಾದ ಜಾಣತನವನ್ನು ಹಿಂದು ಮುಂದು ವಿಚಾರಿಸದೆ ಪಾಲಿಸಿಕೊಂಡು ಬರುವುದನ್ನು ಕೂಡಾ ಕೆಲವರು ಮೂಢನಂಬಿಕೆ ಎನ್ನುತ್ತಾರೆ. ಯಾವ ಘಳಿಗೆಯಲ್ಲಿ ಯಾರನ್ನು ನೆನೆದು ಏನನ್ನು ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ಚಿಂತನೆಗಳನ್ನು ಕೂಡಾ ಮೂಢನಂಬಿಕೆ ಎನ್ನುತ್ತಾರೆ. ಸತ್ಯವಾಗಿ ಹೇಳುವುದಾದರೆ ನಂಬಿಕೆಗಳಲ್ಲಿ ಯಾವುದು ಮೂಢ, ಯಾವುದು ಅಲ್ಲ ಎಂಬುದು ಸುಲಭವಾಗಿ ಅನುಭವಕ್ಕೆ ಗ್ರಾಹ್ಯವಾಗುವಂಥದ್ದಲ್ಲ. ಅನುಭವಕ್ಕೆ ಸಿಕ್ಕಿದರೂ ಕೂಡಾ ಅರ್ಥವಾಗುವಂಥಾದ್ದೂ ಅಲ್ಲ. ಹಾಗಾಗಿ ಅದರ ಬಗ್ಗೆಯೂ ಚರ್ಚೆ ಮಾಡುವುದು ಬೇಡ.

ಈ ಅತಿನಂಬಿಕೆ ಎನ್ನುವುದೊಂದಿದೆ ನೋಡಿ... ಇದು ಕೆಲವೊಮ್ಮೆ ಅಪಾಯಕಾರಿ. ಕೆಲವೊಮ್ಮೆ ಉಪಕಾರಿ. ಗೆದ್ದೇ ಗೆಲ್ಲುತ್ತೇನೆ ಎಂಬ ಅತಿನಂಬಿಕೆಯೋ, ಆತ್ಮವಿಶ್ವಾಸವೋ, ಹುರಿಗಟ್ಟಿದ ಉತ್ಸಾಹವೋ, ಒಟ್ಟುಗೂಡಿದ ಸಂಕಲ್ಪವೋ... ಅದು ನಮ್ಮನ್ನು ಗೆಲುವಿನತ್ತ ಅಥವಾ ಸಾಧನೆಯತ್ತ ಹೆಜ್ಜೆ ಹಾಕಿಸಬಹುದು. ಕೆಲವೊಮ್ಮೆ ಗೆಲ್ಲಿಸಲೂಬಹುದು. ಆದರೆ ಈ ಅತಿನಂಬಿಕೆ ನಮ್ಮನ್ನು ಭಾಗಶಃ ಕಣ್ಣು ಕಾಣದವರನ್ನಾಗಿಸುತ್ತದೆ. ಅತಿನಂಬಿಕೆಯ ಬೆಳಕು ಕಣ್ಣು ಚುಚ್ಚುತ್ತಿರುವಾಗ ಅಕ್ಕ ಪಕ್ಕ ನಾವು ನೋಡುವುದೇ ಇಲ್ಲ. ಕಲ್ಲು ಮುಳ್ಳು, ಹಳ್ಳಗಳನ್ನು ಗಮನಿಸುವುದೇ ಇಲ್ಲ. ನಮ್ಮ ಸಾಧನೆಯ ಹಾದಿಯಲ್ಲಿ ಜಾರಿಬಿದ್ದಾಗಲೇ ನಮಗೆ ನಂಬಿಕೆಯ ಬೆಳಕು ಕಮ್ಮಿಯಾಗಿ ವಾಸ್ತವದ ಅರಿವಾಗುತ್ತದೆ. ಸೋಲು ಸಹಿಸಬೇಕಾದ ಅನಿವಾರ್ಯ ಎದುರಿಸಬೇಕಾಗುತ್ತದೆ.

ಗೆಳೆಯರೇ, ಈ ಮಾತು ಚೆನ್ನಾಗಿ ನೆನಪಿರಲಿ. ಅತಿನಂಬಿಕೆಯೇ ನಮ್ಮನ್ನು ಸಾಧನೆಯ ಹಾದಿಗೆ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಆದರೆ ಸೋಲನ್ನೂ ಸ್ವೀಕರಿಸುವ ಎಚ್ಚರ ನಮ್ಮಲ್ಲಿರಬೇಕು ಅಷ್ಟೇ.

ಇದು 'ಪ್ರೀತಿ'ಯಿಂದ,
-23/10/12

" ಕಲಿಯುವಿಕೆಯ ಹಸಿವು..."
ತಿಂಗಳ ಮಾತಿನ ಅಂಗಳಕ್ಕೆ ಆತ್ಮೀಯ ಸ್ವಾಗತ ಗೆಳೆಯರೆ!

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ...? ಶತಮಾನಕ್ಕೂ ಹೆಚ್ಚು ಕಾಲ ಬಾಳಿದ ಅನರ್ಘ್ಯ ಜೀವರತ್ನ ಅದು. ಇಂತಹ ಹಿರಿಯ ಜೀವ ಮಾಡಿರುವ ಸಾಧನೆಗಳು ಸಾವಿರ ಸಾವಿರ. ನಮಗೆ ಗೊತ್ತಿರುವುದು ಕೆಆರ್‌ಎಸ್ ಕಟ್ಟಿಸಿದ್ದು ಮಾತ್ರ. ಆದರೆ ಇಂದಿಗೂ ಕರ್ನಾಟಕದ ಶೇಕಡ ಎಪ್ಪತ್ತು ಅಣೆಕಟ್ಟುಗಳು, ವಿಶ್ವೇಶ್ವರಯ್ಯನವರ ಯೋಜನೆಯಲ್ಲೇ ರೂಪುಗೊಂಡಿದ್ದು ಮತ್ತು ಕೆಲವು ಇನ್ನೂ ರೂಪಿತಗೊಳ್ಳುತ್ತಿರುವುದು. ದೇಶಾದ್ಯಂತ ಮತ್ತು ವಿದೇಶದಲ್ಲೂ ಕೂಡಾ ಅವರ ಹಲವಾರು ಯೋಜನೆಗಳಿವೆ. ಇಷ್ಟೆಲ್ಲಾ ಸಾಧನೆ ಮಾಡಿದ ಆ ಹಿರಿಯ ಜೀವ ವಿಧಿವಶರಾಗುವ ಕೇವಲ ಎರಡು ದಿನಗಳ ಮುಂಚೆ ಆಡಿದ ಮಾತೊಂದು ಗೊತ್ತಾ...? "ನಾನು ಇನ್ನೂ ಏನೇನೋ ಕಲಿಯಬೇಕೆಂದುಕೊಂಡಿದ್ದೆ. ಆದರೆ, ಈ ಕೆಲಸಗಳ ಒತ್ತಡದಲ್ಲಿ ಯಾವುದನ್ನೂ ಸರಿಯಾಗಿ ಕಲಿಯಲು ಆಗಲೇ ಇಲ್ಲ. ಅದೇ ದೊಡ್ಡ ಬೇಸರ" ಎಂದಿದ್ದರಂತೆ.

ಕೇವಲ ಒಂದು ಕಥೆಯಾಗಿ, ಘಟನೆಯಾಗಿ ಅಥವಾ ಹೀಗಂತೆ ಹಾಗಂತೆ ಎಂದು ಮಾತಾಡಿ ಮರೆತುಬಿಡುವ ಸಾಮಾನ್ಯ ಜನರ ಹಾಗೆ ನಾವು ನೀವು ಯೋಚಿಸುವುದು ಬೇಡ ಗೆಳೆಯರೆ. ಅವರ ಈ ಮಾತು ನಮಗೆ ಮಾದರಿಯಾಗಬೇಕು. ಸದಾ ನೆನಪಿನಲ್ಲಿರಬೇಕು. ಅವರೊಬ್ಬ ಮಹಾನ್ ಸಾಧಕರು. ಅವರ ಸಾಧನೆಯ ಶೇಕಡಾ ಒಂದು ಭಾಗ ನಾವು ಮಾಡಿದರೂ ಕೂಡಾ ಬಹುಶಃ ಈ ಕಾಲದಲ್ಲಿ ಭಾರತರತ್ನಕ್ಕೆ ನಮ್ಮ ಹೆಸರೂ ಸೂಚಿಸಬಹುದೇನೋ. ಅಂತಹಾ ಸಾಧಕ ಕೂಡಾ ತನ್ನ ಸಾಧನೆಗೆ ಮೈಮರೆತು ಕಲಿಯುವಿಕೆಯನ್ನು ಕಡೆಗಣಿಸಿದವರಲ್ಲ. ಅಂತಹುದರಲ್ಲಿ ಎರಡಕ್ಷರ ಓದಿ ನಾನೂ ವಿದ್ಯಾವಂತನೆನ್ನುವ, ಒಂದಕ್ಷರ ಬರೆದು ನಾನೂ ಬರಹಗಾರ ಎನ್ನುವ, ಯಾವುದೇ ವಿದ್ಯೆಯಲ್ಲಿ ಮೊದಲ ಹೆಜ್ಜೆ ಮುಗಿದ ಮರುಕ್ಷಣವೇ ತನಗೆ ಎಲ್ಲವೂ ಗೊತ್ತಾಯಿತು ಎಂದು ಬೀಗುವ ಅಲ್ಪಬುದ್ಧಿ ನಮಗೆ ಬೇಕೇ...? ಈ ಮಾತು ಸಾಂಧರ್ಭಿಕವೂ ಹೌದು ಮತ್ತು ಶಾಶ್ವತವಾದ ಸತ್ಯವೂ ಹೌದು. ಇಂದಿನ ಬಹುತೇಕ ಯುವಕರು ಚಿತ್ರರಂಗಕ್ಕೆ ಹೀಗೆಯೇ ಕನಸು, ಗುರಿ, ಸಾಧನೆಯನ್ನು ಅರಸಿ ಬರುತ್ತಾರೆ. ಶ್ರಮ ಪಡುತ್ತಾರೆ. ಒಂದಷ್ಟು ಕಲಿಯುತ್ತಾರೆ. ಅದೃಷ್ಟ ಅವಕಾಶ ಮತ್ತು ವಿದ್ಯೆ ಮೂರೂ ಗಟ್ಟಿ ಇದ್ದರೆ ಅಥವಾ ಮೂರರಲ್ಲಿ ಒಂದಾದರೂ ಗಟ್ಟಿ ಇದ್ದರೆ ಯಾವುದಾದರೊಂದು ಪ್ರಯತ್ನದಲ್ಲಿ ತಕ್ಕಮಟ್ಟಿಗಿನ ಯಶಸ್ಸನ್ನು ದಾಖಲಿಸಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಅಪಾಯವಿದೆ. ಪೂರ್ತಿ ಕಲಿಯುವ, ಅನುಭವಗಳೊಂದಿಗೆ ಮಾಗುವ ಮುನ್ನವೇ ಯಶಸ್ಸನ್ನು ತಮ್ಮದಾಗಿಸಿಕೊಂಡ ಎಷ್ಟೋ ಮಂದಿ ತಮ್ಮಲ್ಲಿಯೇ ಬೀಗುತ್ತಾ ಅಲ್ಲಿಯೇ ನಿಂತುಬಿಡುತ್ತಾರೆ ಅಥವಾ ಆ ದಾರಿಯಲ್ಲೇ ಸಾಗಿಬಿಡುತ್ತಾರೆ. ಮುಖ್ಯವಾಗಿ 'ತಾವಿನ್ನೂ ಕಲಿಯಬೇಕು' ಎನ್ನುವ ಸತ್ಯವನ್ನು ಮರೆತುಬಿಡುತ್ತಾರೆ.

ಬಹುಶಃ ನೀವು ಗಮನಿಸಿದರೆ ಇತಿಹಾಸದುದ್ದಕ್ಕೂ ಇಂತಹಾ ಅನೇಕ ಸಾಕ್ಷ್ಯಗಳು ದೊರಕುತ್ತವೆ. ಒಂದು ಯಶಸ್ಸಿನಿಂದ ಅಸೀಮ ಆಗಸದತ್ತ ನೆಗೆದ ಹಲವಾರು ಪ್ರತಿಭೆಗಳು ನಮ್ಮ ಕಣ್ಮುಂದೆ ಬರುತ್ತವೆ. ಆದರೆ ಅವರಾರಿಂದಲೂ ಇತಿಹಾಸವನ್ನು ಮತ್ತೆ ಪುನರಾವರ್ತಿಸಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಇದೇ. ಅವರ ಕಲಿಯುವಿಕೆ ಮರೆತು ಹೋಗಿರುತ್ತದೆ. ಅನಿಸುವಿಕೆಯೇ ಮುಖ್ಯವಾಗಿರುತ್ತದೆ. ಅದು ಒಂದು ಚಿತ್ರದ ನಟನೆಯಲ್ಲಿ ಗೆದ್ದ ನಾಯಕ 'ತನ್ನ ಅಭಿಮಾನಿಗಳು ಮತ್ತು ಇಮೇಜ್' ಎಂದು ಗುರುತಿಸಿಕೊಳ್ಳುವುದರ ಮೂಲಕ ಪಾತ್ರಾಭಿವ್ಯಕ್ತಿಯ ಅನನ್ಯತೆಯನ್ನು ಮರೆಯುವುದಾಗಿರಬಹುದು. ಇಂತಹ ಕಥೆ, ಇಂತಹ ದೃಶ್ಯ ಮತ್ತು ಹೀಗಿದ್ದರೇ ಜನ ಮೆಚ್ಚುವುದು ಎನ್ನುವ ಹುಂಬ ನಂಬಿಕೆಯೊಂದಿಗೆ ಅಂತಹುದೇ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕರಾಗಿರಬಹುದು.... ಹೀಗೇ ಪ್ರತಿಯೊಂದು ವಿಭಾಗವನ್ನು ನೀವು ಗಮನಿಸಿ ನೋಡಿದರೆ ಕಲಿಯುವಿಕೆ ಮರೆತ ಕ್ಷಣದಿಂದಲೇ ಏಕತಾನತೆ ಆರಂಭವಾಗುತ್ತದೆ. ಕಲಿಯುವಿಕೆ ಜೀವಂತವಾಗಿದ್ದಷ್ಟೂ ಹೊಸತನ ಸೃಷ್ಟಿಯಾಗುತ್ತಿರುತ್ತದೆ. ಇಷ್ಟೆಲ್ಲಾ ಮಾತನಾಡುವುದಕ್ಕಿಂತ ನಾವು ಒಂದು ಕ್ಷಣ ಯೋಚಿಸೋಣ. ಅಂಥಹಾ ಮುತ್ತಿನಂಥಾ ಮಾತನಾಡಿದ ವಿಶ್ವೇಶ್ವರಯ್ಯನವರ ಕಥೆ ಕೇಳಿದ ಮೇಲೂ ಇದೆಲ್ಲಾ ಚರ್ಚೆ ಅಗತ್ಯವೇ...?

ಗೆಳೆಯರೇ, ಗೆಲಿಲಿಯೋ ನಿಮಗೆ ಗೊತ್ತು. ಇತಿಹಾಸ ಕಂಡ ಅತ್ಯಂತ ಪ್ರತಿಭಾನ್ವಿತ ಭೌತ ವಿಜ್ಞಾನಿ. ಶತಶತಮಾನಗಳಷ್ಟು ಹಿಂದೆಯೇ ಭೂಮಿ ಮತ್ತು ಇತರ ಗ್ರಹಗಳು ಸೂರ್ಯನ ಸುತ್ತುತ್ತಿವೆ ಎಂದು ಪ್ರತಿಪಾದಿಸಿದ ಮೇಧಾವಿ. ಹಾಗೆ ನುಡಿದು ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಗಲ್ಲುಶಿಕ್ಷೆ ಅನುಭವಿಸುವಂತಾಗಿ ಜೈಲು ಸೇರುತ್ತಾನೆ. ಆದರೂ ಆತ ತನ್ನ ನಿಲುವು ಬದಲಿಸಿಕೊಳ್ಳುವುದಿಲ್ಲ. ಆತನನ್ನು ನೇಣಿಗೇರಿಸುವ ಹಿಂದಿನ ದಿನ ಆತನಿದ್ದ ಸೆರೆಮನೆಯ ಪಕ್ಕದಲ್ಲಿದ್ದ ಖೈದಿಯೊಬ್ಬ ಆತನ ಮೇಲಿನ ಕನಿಕರದಿಂದ ಕೊಳಲು ನುಡಿಸುತ್ತಾನೆ. ಅದನ್ನು ಕೇಳುವ ಗೆಲಿಲಿಯೋ ಅಚ್ಚರಿಗೊಳಗಾಗಿ 'ಅರೆ! ಎಷ್ಟು ಚೆನ್ನಾಗಿದೆ. ಇದನ್ನು ನುಡಿಸುವುದು ನನಗೂ ಕಲಿಸುತ್ತೀಯಾ?' ಎನ್ನುತ್ತಾನೆ. ಆತ ಈತನನ್ನು ಕನಿಕರದಿಂದ ನೋಡಿ, 'ಅಲ್ಲಯ್ಯಾ ನಾಳೆ ಗಲ್ಲಿಗೇರುತ್ತಿದ್ದೀಯ. ಇದನ್ನು ಕಲಿತೇನು ಮಾಡುತ್ತೀಯ?' ಎನ್ನುತ್ತಾನೆ. ಅದಕ್ಕೆ ಗೆಲಿಲಿಯೋ 'ಗಲ್ಲಿಗೇರುವುದಿನ್ನೂ ನಾಳೆ ತಾನೇ? ಅಲ್ಲಿಯತನಕ ತುಂಬಾ ಸಮಯವಿದೆ, ಕಲಿಸುತ್ತೀಯಾ ಹೇಳು?' ಎನ್ನುತ್ತಾನೆ.

ಗೆಳೆಯರೇ, ಸಾಧಕರ ಕಲಿಯುವಿಕೆಯ ಹಸಿವು ಎಷ್ಟಿರುತ್ತದೆ ಮತ್ತು ಎಷ್ಟಿರಬೇಕೆಂಬ ಅರಿವು ಈಗ ನಮಗಾಗಿದೆ. ಅಲ್ಲವೇ...?

ಇದು 'ಪ್ರೀತಿ'ಯಿಂದ,

-19/09/12

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore