HOME
CINEMA NEWS
GALLERY
TV NEWS
REVIEWS
CONTACT US

ಸಾಹೇಬ ಚಾಣಾಕ್ಷ ಹುಡುಗನ ಪ್ರೇಮಕಥೆ
ಕನ್ನಡ ಚಿತ್ರರಂಗಕ್ಕೆ, ಕನ್ನಡ ಚಿತ್ರಗಳಿಗೆ ಹೊಸದಾದ ಮೆರುಗು ನೀಡಿದಂಥ ತಂತ್ರಜ್ಞ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಟಿಸಿರುವ ಮೊದಲ ಚಿತ್ರ ಸಾಹೇಬ ಈವಾರ ತೆರೆಕಂಡಿದೆ, ಕನ್ನಡ ಚಿತ್ರರಂಗದ ಲಕ್ಕಿ ನಿರ್ಮಾಪಕ ಹಾಗೂ ವಿತರಕ ಜಯಣ್ಣ-ಭೋಗೇಂದ್ರ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಒಂದು ನೀಟ್ ಲವ್‍ಸ್ಟೋರಿಯನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕ ಭರತ್ ಮಾಡಿದ್ದಾರೆ. ದಶಕದ ಹಿಂದೆ ಕಂಠಿ ಎಂಬ ಸಿನಿಮಾ ನಿರ್ದೇಶಿಸಿದ್ದ ಭರತ್ ಈ ಚಿತ್ರದ ಮೂಲಕ ಮತ್ತೆ ಮರಳಿದ್ದಾರೆ. ಈ ಚಿತ್ರದಲ್ಲಿ ನಾಯಕ ತಾನು ಪ್ರೀತಿಸುವ ಹುಡುಗಿಯನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಸುವ ನಿಟ್ಟಿನಲ್ಲಿ ಮಾಡುವ ಪ್ರಯತ್ನವನ್ನು ನಿರ್ದೇಶಕರು ಮನಮುಟ್ಟುವ ಹಾಗೆ ಕಟ್ಟಿಕೊಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಒಬ್ಬ ಸ್ಟಾರ್ ಕಲಾವಿದನ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸಿನಿಮಾ ಎಂದರೆ ಹೀಗೇ ಇರಬೇಕು, ಎಂಟ್ರಿ ಜೋರಾಗಿರಬೇಕು, ಹತ್ತಾರು ಸಾಹಸ ದೃಷ್ಯಗಳಿರಬೇಕು ಅಂತೆಲ್ಲಾ ವಾಡಿಕೆ ಇದೆ. ಆದರೆ ಈ ಚಿತ್ರದಲ್ಲಿ ಅದಾವುದೂ ಕಾಣುವುದಿಲ್ಲ. ಆ ಎಲ್ಲ ಫಾರ್ಮುಲಾಗಳನ್ನೂ ಮನೋರಂಜನ್ ರವಿಚಂದ್ರನ್ ನಟಿಸಿರುವ ಸಾಹೇಬ ಸಿನಿಮಾ ಬ್ರೇಕ್ ಮಾಡಿದೆ.

ಶಾಲೆ-ಕಾಲೇಜುಗಳ ಸಹವಾಸವೇ ಇಲ್ಲದ ಹಾಗೆ ಬೆಳೆದಂಥ ನಾಯಕ ಮನು(ಮನೋರಂಜನ್)ವಿಗೆ ತಾಯಿಯೇ ಗುರು, ಪುಸ್ತಕಗಳೇ ಆತನ ಪ್ರಪಂಚ. ಹೀಗೆ ಬೆಳೆದ ಹುಡುಗ ಮನು ಲೈಬ್ರರಿ ಇಟ್ಟುಕೊಂಡು ಜಗತ್ತಿನ ಎಲ್ಲ ಮಹಾನ್ ಕೃತಿಗಳನ್ನು ಓದಿ, ಜೀವನದ ಸಾರ್ಥಕತೆ ಬಗ್ಗೆ, ಬದುಕು ಅಂದರೇನು ಎಂದು ತಿಳಿದುಕೊಂಡವನು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ, ಹಕ್ಕಿಯಂತೆ ರೆಕ್ಕೆ ಬಡಿಯುತ್ತಾ ಮನಸ್ಸಿಗೆ ಬೇಕಾದಂತೆ ಬದುಕುವ, ಮನುಷ್ಯತ್ವವನ್ನಷ್ಟೇ ಧರಿಸಿದ ಧಾರಾಳಿಗ... ಈ ಸಾಹೇಬ. ಇಂಥ ಹುಡುಗನಿಗೆ ಹುಡುಗಿಯೊಬ್ಬಳ ಮೇಲೆ ವ್ಯಾಮೋಹ ಉಂಟಾಗುತ್ತದೆ. ಆಕೆಯನ್ನು ದೊಡ್ಡ ಮಟ್ಟಕ್ಕೆ ಬೆಳೆಸಬೇಕೆಂಬ ತವಕವಿರುತ್ತದೆ. ತಾನು ಕಲ್ಪಿಸಿಕೊಂಡದ್ದನ್ನು ಕರಾರುವಾಕ್ಕಾಗಿ ಕಾರ್ಯರೂಪಕ್ಕೆ ತರಬಲ್ಲ ಚಾಣಾಕ್ಷ ಮನುವಿಗೆ ತನ್ನ ಹುಡುಗಿಯನ್ನು ದಡ ದಾಟಿಸೋದು ಅಂಥಾ ಕಷ್ಟವೇನೂ ಆಗೋದಿಲ್ಲ. ಆದರೆ ತಾನು ಪಯಣ ಸುತ್ತಿರುವ ಆ ದೋಣ ಯನ್ನು ನಡೆಸುತ್ತಿರುವ ನಾವಿಕ ಈತನೇ ಎನ್ನುವುದು ಆ ಹುಡುಗಿಗೆ ತಿಳಿದಿರುವುದಿಲ್ಲ. ಆ ವಿಷಯ ಆಕೆಗೆ ತಿಳಿಯುವ ವೇಳೆಗೆ ಮನು ತನ್ನ ದಾರಿಯನ್ನು ಬದಲಿಸಿರುತ್ತಾನೆ. ಇಂಥದ್ದೊಂದು ಕತೆಯನ್ನು ತನ್ನ ಪುತ್ರ ಮನೋರಂಜನ್‍ಗಾಗಿ ರವಿಚಂದ್ರನ್ ಒಪ್ಪಿರುವುದರಲ್ಲಿ ಮುಂದಾಲೋಚನೆಯೂ ಇದೆ. ಯಾವ ಬಿಲ್ಡಪ್ಪುಗಳೂ ಇಲ್ಲದ, ಎಲೆಮರೆಯ ಕಾಯಿಯಂತೆ ಬದುಕಬೇಕೆನ್ನುವ ಹುಡುಗನೊಬ್ಬನ ಪಾತ್ರದಲ್ಲಿ ಮನೋರಂಜನ್ ಅಷ್ಟೇ ಸರಳವಾಗಿ ನಟಿಸಿದ್ದಾರೆ. ಮನೋರಂಜನ್ ಮಾತಾಡಿದರೆ ಒಮ್ಮೊಮ್ಮೆ ರವಿಚಂದ್ರನ್ ಅವರ ದನಿಯನ್ನೇ ಕೇಳಿದಂತಾಗುತ್ತದೆ. ಚಿತ್ರದ ಕ್ಯಾಮೆರಾವರ್ಕ್ ಉತ್ತಮವಾಗಿದೆ. ಹರಿಕೃಷ್ಣ ಹಾಡುಗಳನ್ನು ಕಂಪೋಜ್ ಮಾಡಲು ಜಾಸ್ತಿ ಶ್ರಮವಹಿಸಿಲ್ಲ ಅನ್ನೋದು ಎದ್ದುಕಾಣುತ್ತದೆ.
-Cine Circle News
-27/08/17

ಈ ವಾರ ತೆರೆಗೆ `ಸಾಹೇಬ'
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಾಯಕರಾಗಿ ನಟಿಸಿರುವ, ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ `ಸಾಹೇಬ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಭರತ್ ನಿರ್ದೇಶನದ ಈ ಚಿತ್ರಕ್ಕೆ ಜಿ.ಎಸ್.ವಿ ಸೀತಾರಾಂ ಅವರ ಛಾಯಾಗ್ರಹಣವಿದೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನ, ಕೆ.ರವಿವರ್ಮ ಸಾಹಸ ನಿರ್ದೇಶನ ಹಾಗೂ ಕಲೈ, ರಾಜು, ಪ್ರೇಮ್ ಅವರ ನೃತ್ಯ ನಿರ್ದೇಶನವಿದೆ.

ಮನೋರಂಜನ್ ಅವರಿಗೆ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ನಟಿಸಿದ್ದಾರೆ. ಲಕ್ಷ್ಮೀ, ಬುಲೆಟ್ ಪ್ರಕಾಶ್, ಚಿದಾನಂದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
-Cine Circle News
-24/08/17
ಸಾಹೇಬ ಯುಎ ಪ್ರಮಾಣಪತ್ರ
ಕಳೆದವರ್ಷ ಶುರುಗೊಂಡ ‘ಸಾಹೇಬ’ ಚಿತ್ರವನ್ನು ಸ್ವಾತಂತ್ರ ದಿನಾಚರಣೆ ದಿನದಂದು ಸೆನ್ಸಾರ್ ಮಂಡಳಿಯು ವೀಕ್ಷಿಸಿ ಕೆಲವೊಂದು ದೃಶ್ಯವನ್ನು ಮ್ಯೂಟ್ ಮಾಡಲು ಸೂಚಿಸಿದೆ. ಆದರೆ ನಿರ್ಮಾಪಕ ಜಯಣ್ಣ ಇದಕ್ಕೆ ಸಮ್ಮತಿ ನೀಡದ ಕಾರಣ ಯಾವುದೇ ಕಟ್ಸ್ ನೀಡದೆ ‘ಯುಎ’ ಪ್ರಮಾಣಪತ್ರ ಕರುಣ ಸಿದೆ. ರವಿಚಂದ್ರನ್ ಪುತ್ರ ಮನೋರಂಜನ್ ಮೊದಲಬಾರಿ ನಾಯಕನಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ಮಾಸ್ಟರ್‍ಪೀಸ್ ಖ್ಯಾತಿಯ ಶಾನ್ವಿಶ್ರೀವಾತ್ಸವ್ ಅಭಿನಯಿಸಿದ್ದಾರೆ. ಶಿವರಾತ್ರಿ ಮುನ್ನಾ ದಿನ ಟ್ರೈಲರ್‍ನ್ನು ಬಿಡುಗಡೆ ಮಾಡಲಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಂಠಿ ನಿರ್ದೇಶನ ಮಾಡಿದ್ದ ಭರತ್ ಧೀರ್ಘ ಸಮಯದ ನಂತರ ಆಕ್ಷನ್ ಕಟ್ ಹೇಳಿದ್ದಾರೆ. ರವಿಚಂದ್ರನ್‍ರವರ ಸೂಪರ್ ಹಿಟ್ ನಾನು ನನ್ನ ಹೆಂಡ್ತಿ ಚಿತ್ರದ ‘ಯಾರೇ ನೀನು ರೋಜ ಹೂವೆ’ ಹಾಡನ್ನು ಮತ್ತೋಮ್ಮೆ ಬಳಸಿಕೊಂಡಿರುವುದು ವಿಶೇಷ. ಛಾಯಗ್ರಹಣ ಜಿಎಸ್‍ವಿ ಸೀತಾರಾಮ್, ಸಂಗೀತ ವಿ.ಹರಿಕೃಷ್ಣ, ಸಂಕಲನ ದೀಪು.ಎಸ್.ಕುಮಾರ್ ಅವರದಾಗಿದೆ. ತಾರಬಳಗದಲ್ಲಿ ಹಿರಿಯನಟಿ ಲಕ್ಷೀ, ಕುರಿಪ್ರತಾಪ್, ಬುಲೆಟ್‍ಪ್ರಕಾಶ್ ನಟನೆ ಇದೆ. ಮುಗುಳುನಗೆ, ಭರ್ಜರಿ ಸಿನಿಮಾಗಳು ಮುಂದಕ್ಕೆ ಹೋಗಿರುವುದರಿಂದ ನಮ್ಮ ಚಿತ್ರ 25ಕ್ಕೆ ಬಿಡುಗಡೆ ಮಾಡಲಾಗುತ್ತಿದ್ದು, ಉಪಯೋಗವಾಗಲಿದೆ ಎಂಬುದು ಜಯಣ್ಣರವರ ಅಂಬೋಣ.
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore