HOME
CINEMA NEWS
GALLERY
TV NEWS
REVIEWS
CONTACT US
ಲಕ್ಷ್ಮಿ ಸಾಗಿಬಂದ ಹಾದಿ
ಇದು ಕಥೆಯಲ್ಲ ಜೀವನ! ಖ್ಯಾತ ನಟಿ ಲಕ್ಷ್ಮಿ ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ಶೀರ್ಷಿಕೆಯಿದು. ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಮಹಿಳಾ ಪ್ರೇಕ್ಷಕರನ್ನು ಅದರಲ್ಲೂ, ಮಧ್ಯಮ ವರ್ಗದವರನ್ನು ಅಪಾರವಾಗಿ ಸೆಳೆತ್ತು. ದೊಡ್ಡ ಸೋಫಾದ ಮೇಲೆ ಕುಳಿತು ನ್ಯಾಯವಾದಿಯಂತೆ ವಾದ ಮಂಡಿಸಿ, ನೊಂದು ಬಂದವರ ಗೋಳನ್ನು ಆಲಿಸುತ್ತಾ, ಕಡೆಗೆ ನ್ಯಾಯಾಧೀಶೆಯಂತೆ ತೀರ್ಪು ನೀಡಿ, ಮೋಸ ಹೋದವರಿಗೆ ನ್ಯಾಯ ಒದಗಿಸಿಕೊಡುವ, ವಂಚಕರಿಗೆ ಮಂಗಳಾರತಿ ಎತ್ತುವ ಮತ್ತು ನೊಂದ ಹೆಣ್ಣುಮಕ್ಕಳಿಗೆ ಸಾಂತ್ವನ ನೀಡುವ ಲಕ್ಷ್ಮಿ ಅವರ ಕಾರ್ಯಕ್ರಮ ಸಾಕಷ್ಟು ಖ್ಯಾತಿಯನ್ನೂ ಗಳಿಸಿತ್ತು.

ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಿರೂಪಕರು ಜೀವನದಲ್ಲಿ ಸಾಕಷ್ಟು ಸುಖ, ಶಾಂತಿ, ನೆಮ್ಮದಿಯಿಂದ ಇರುತ್ತಾರೆ ಎನ್ನುವುದು ಪ್ರೇಕ್ಷಕರ ವಲಯದ ನಂಬಿಕೆಯಾಗಿರುತ್ತದೆ. ಆದರೆ, ಬದುಕಿನ ಜಂಜಾಟಗಳ ಬಗ್ಗೆ, ಬಿರುಕು ಬಿಟ್ಟ ಸಂಬಂಧಗಳ ಬಗ್ಗೆ ಮತ್ತು ತೀರ ಖಾಸಗಿ ಎನಿಸುವ ಕೌಟುಂಬಿಕ ವಿಚಾರಗಳ ಬಗ್ಗೆ ಚರ್ಚಿಸುತ್ತಾ ಅದರಲ್ಲಿ ಭಾಗಿಯಾಗಿ, ಶೋಷಿತರ ಕಣ್ಣೊರೆಸುತ್ತಿದ್ದ ಲಕ್ಷ್ಮಿ ಅವರ ಬದುಕೇ ಕಣ್ಣೀರಕಡಲಲ್ಲಿ ತೇಲಿಬಂದಿರುವುದು ವಿಪರ್ಯಾಸವಲ್ಲದೇ ಮತ್ತೇನೂ ಅಲ್ಲ.

ಚಲನಚಿತ್ರ ಅಕಾಡೆಮಿ ಈ ತಿಂಗಳ `ಬೆಳ್ಳಿ ಹೆಜ್ಜೆ'ಗೆ ಲಕ್ಷ್ಮಿ ಅವರನ್ನು ಅತಿಥಿಯನ್ನಾಗಿ ಕರೆಸಿತ್ತು. ಅವರ ಬದುಕಿನ ಒಂದಿಷ್ಟು ಹೆಜ್ಜೆಗುರುತುಗಳು ಅಲ್ಲಿ ಅನಾವರಣಗೊಂಡವು. ಈ ಸಂದರ್ಭದಲ್ಲಿ ಲಕ್ಷ್ಮಿ ಅವರ ಬದುಕಿನ ಬಗ್ಗೆ ಇಣುಕು ನೋಟವಿದು...

ಲಕ್ಷ್ಮಿ ಅವರ `ಜೀವನ' ಅವರು ನಡೆದು ಬಂದ ಹಾದಿ, ಸಾಗಿಬಂದ ದಿಕ್ಕುಗಳನ್ನೊಮ್ಮೆ ನೋಡಿದರೆ ಇದು ನಿಜಕ್ಕೋ `ಕಥೆಯೋ ನಿಜವೋ' ಎನಿಸುವಷ್ಟು ಸಿಕ್ಕುಗಟ್ಟಿಕೊಂಡಿದೆ.
ತೆಲುಗು ಬ್ರಾಹ್ಮಣರ ಮನೆಯಲ್ಲಿ 1953ರ ಡಿಸೆಂಬರ್ 13ರಂದು ಜನಿಸಿದ ಹೆಣ್ಣುಮಗಳೇ ಇಂದಿನ ನಮ್ಮ `ಕಥೆ'ಯ ನಾಯಕಿ ಲಕ್ಷ್ಮಿ. ಸಾಮಾಜಿಕ ಚಿತ್ರಗಳ ಮೂಲಕ ಖ್ಯಾತರಾಗಿದ್ದ ನಿರ್ದೇಶಕ ವೈ.ವಿ. ರಾವ್ ಅವರ ಮಗಳೇ ಈ ಲಕ್ಷ್ಮಿ. ಈಕೆಯ ತಾಯಿ ಕೂಡ ಹೆಸರಾಂತ ನಟಿಯೇ. ಲಕ್ಷ್ಮಿ ಅವರ ತಾಯಿ ರುಕ್ಮಿಣಿ ಆಗಿನ ಕಾಲದಲ್ಲೇ ತಮಿಳಿನ ಹಲವಾರು ಚಿತ್ರಗಳಲ್ಲಿ ನಟಿಸಿದಾಕೆ. ಹೀಗೆ ಕಲೆಯೆಂಬುದು ಲಕ್ಷ್ಮಿ ಅವರಿಗೆ ರಕ್ತಗತವಾಗಿ ಬಂದ ಬಳುವಳಿ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ... ಹೀಗೆ ಭಾರತದ ಹಲವಾರು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಲಕ್ಷ್ಮಿ ಅವರನ್ನು ಜನ `ಪಂಚ ಭಾಷಾತಾರೆ' ಎಂದೇ ಗುರುತಿಸುತ್ತಾರೆ. ಇನ್ನು ಬಹಳಷ್ಟು ಜನರಿಗೆ ಬರೀ ಲಕ್ಷ್ಮಿ ಎಂದರೆ `ಯಾರಾಕೆ?' ಎನ್ನುತ್ತಾರೆ. ಯಾಕೆಂದರೆ ಲಕ್ಷ್ಮಿ ಹೆಸರುವಾಸಿಯಾಗಿದ್ದು `ಜ್ಯೂಲಿ ಲಕ್ಷ್ಮಿ' ಎಂದೇ. 1975ರಲ್ಲಿ ಬಂದ ಹಿಂದಿ ಜೂಲಿ ಎಂಬ ಹಿಂದಿ ಚಿತ್ರದಲ್ಲಿ ಲಕ್ಷ್ಮಿ `ರೋಮಾಂಚಕ'ವಾಗಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿ ಇಡೀ ಭಾರತೀಯ ಚಿತ್ರರಂಗವೇ ಲಕ್ಷ್ಮಿ ಅವರತ್ತ ಚಿತ್ತ ಬೀರುವಂತೆ ಮಾಡಿತ್ತು. ಅಂದಿನಿಂದ ಲಕ್ಷ್ಮಿ `ಜೂಲಿ ಲಕ್ಷ್ಮಿ' ಯಾಗಿ ಮಾರ್ಪಾಡಾಗಿಬಿಟ್ಟರು. ಅಸಲಿಗೆ ಹಿಂದಿಯ ಜ್ಯೂಲಿ ಚಿತ್ರ ಹಿಟ್ ಆಗುವ ಮುನ್ನವೇ ಮಲಯಾಂಳಂನಲ್ಲಿ ಆ ಚಿತ್ರ `ಚಟ್ಟಕಾರಿ' ಎಂಬ ಹೆಸರಿನಲ್ಲಿ ನಿರ್ಮಾಣಗೊಂಡು ಯಶಸ್ವಿಯಾಗಿತ್ತು. ಆನಂತರವೇ ಅದು ಹಿಂದಿಯಲ್ಲಿ ರಿಮೇಕ್ ಆಗಿದ್ದು. 1975ರಲ್ಲಿ ಬಿಡುಗಡೆಗೊಂಡ ಜ್ಯೂಲಿ ಚಿತ್ರ ಗಳಿಕೆಯಲ್ಲಿ ಹೊಸ ಇತಿಹಾಸ ಬರೆದ ನಂತರ ಅದೇ ಚಿತ್ರ ತೆಲುಗಿನಲ್ಲಿ `ಮಿಸ್ ಜ್ಯೂಲಿ ಪ್ರೇಮ ಕಥಾ' ಎಂಬುದಾಗಿಯೂ ರಿಮೇಕುಗೊಂಡಿತ್ತು. ಹಿಂದಿಯಲ್ಲಿ ಬಂದ `ಜ್ಯೂಲಿ' ಚಿತ್ರ ಸೂಪರ್ ಹಿಟ್ ಆಯಿತಲ್ಲದೇ, `ಅತ್ಯುತ್ತಮ ನಟಿ' ಎಂಬ ಫಿಲ್ಮ್‍ಫೇರ್ ಪ್ರಶಸ್ತಿ ಸೇರಿದಂತೆ ದೇಶದ ಅತ್ಯುತ್ತಮ ಅವಾರ್ಡುಗಳೆಲ್ಲಾ ಲಕ್ಷ್ಮಿ ಅವರ ಮಡಿಲು ಸೇರಿತು. ಅಲ್ಲಿಂದ ಲಕ್ಷ್ಮಿ ಅವರು ವೃತ್ತಿ ಜೀವನದಲ್ಲಿ ಎಂದೆಂದಿಗೂ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಜ್ಯೂಲಿ ಚಿತ್ರದ ಯಶಸ್ಸಿನಿಂದಾಗಿ ಲಕ್ಷ್ಮಿ ಅವರಿಗೆ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಬಂತು... ಹಿಂದಿ ಚಿತ್ರಗಳಲ್ಲಿ ನಟಿಸುತ್ತಲೇ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸುತ್ತಿದ್ದ ಲಕ್ಷ್ಮಿ ಒಬ್ಬ ಯಶಸ್ವೀ ನಾಯಕಿಯಾಗಿ ಹೊರಹೊಮ್ಮಿದ್ದರು. ಪಾತ್ರ ಎಂಥದ್ದೇ ಇರಲಿ ಅದನ್ನು ಲೀಲಾಜಾಲವಾಗಿ ನಿರ್ವಹಿಸುವ ಅವರ ಕೆಪಾಸಿಟಿ, ಸಿನಿಮಾದೊಂದಿಗೆ ಅವರಿಗಿದ್ದ ಬದ್ಧತೆ ಅವರಿಗೆ `ಅದ್ಭುತ ನಟಿ' ಎಂಬ ಪಟ್ಟವನ್ನು ನೀಡಿತ್ತು.

ಆದರೆ, ತೆರೆಯ ಮೇಲೆ ತನ್ನ ಅದ್ಭುತ ನಟನೆಯಿಂದ, ನಾಯಕಿಯಾಗಿ ಯಶಸ್ವಿಯಾಗಿದ್ದ ಕೂಡ ತನ್ನ ಖಾಸಗಿ ಬದುಕಿನಲ್ಲಿ ಮತ್ತೆಮತ್ತೆ ಸೋಲಬೇಕಾಗಿ ಬಂದದ್ದು, ಹಲವಾರು ಸಮಸ್ಯೆಗಳೊಂದಿಗೇ `ಜೀವನ' ಸಾಗಿಸಬೇಕಾಗಿ ಬಂದದ್ದು ಮಾತ್ರ ಒಂದು ರೀತಿಯ ವಿಧಿಯ ಅಣಕವೇ ಸರಿ.

ಆಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟು ಒಂದು ಮಟ್ಟದ ಯಶಸ್ಸು ಮತ್ತು ಹೆಸರು ಸಂಪಾದಿಸುತ್ತಿದ್ದ ಲಕ್ಷ್ಮಿ ಅವರಿಗೆ ಅವರ ಮನೆಯವರೇ ನೋಡಿ ಭಾಸ್ಕರ್ ಎಂಬುವರೊಂದಿಗೆ ಮದುವೆ ಮಾಡಿಸಿದ್ದರು. 1970ರ ಸುಮಾರಿಗೆ ಭಾಸ್ಕರ್‍ರ ಕೈಹಿಡಿದ ಲಕ್ಷ್ಮಿ ಅವರಿಗೆ ಒಂದು ಹೆಣ್ಣು ಮಗುವೂ ಆಯಿತು. ಆಕೆಯೇ ಈಗ ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಐಶ್ವರ್ಯಾ. ಮದುವೆಯೂ ಆಗಿ ಹೆಣ್ಣುಮಗುವನ್ನೂ ಪಡೆದ ನಂತರ ಲಕ್ಷ್ಮಿ ಮತ್ತು ಭಾಸ್ಕರ್‍ರ ದಾಂಪತ್ಯದಲ್ಲಿ ಹೊಂದಾಣಿಕೆಯೇ ಇರಲಿಲ್ಲ. ಈ ಕಾರಣಕ್ಕಾಗೇ ಲಕ್ಷ್ಮಿ ಭಾಸ್ಕರ್‍ಗೆ ವಿವಾಹ ವಿಚ್ಛೇದನ ನೀಡಿ, ಹೊರನಡೆದುಬಂದರು, ಈ ಹೊತ್ತಿಗೇ ಲಕ್ಷ್ಮಿ ಮತ್ತು ನಟ ಮಲಯಾಳಂ ನಟ ಮೋಹನ್ ನಡುವೆ ಪ್ರೇಮಾಂಕುರವಾಗಿತ್ತು. ನಂತರ ಲಕ್ಷ್ಮಿ ಮೋನ್‍ರನ್ನೇ ವರಿಸಿದರು. ಆದರೆ ಈ ಬಾರಿಯೂ ಲಕ್ಷ್ಮಿ ಉತ್ತಮ ಸಂಗಾತಿಯನ್ನು ಆಯ್ಕೆ ಮಾಡುಕೊಳ್ಳುವಲ್ಲಿ ಎಡವಿದ್ದರು. ಹೀಗಾಗಿ ಇವರಿಬ್ಬರ ಪ್ರೀತಿ ಪ್ರೇಮದಲ್ಲೂ ಒಡಕು ಮೂಡಿ ಬಹುಬೇಗ ಇವರಿಬ್ಬರ ಸಂಬಂಧ ಅಂತ್ಯಗೊಂಡಿತು.

ನಂತರ 1988ರ ಸಂದರ್ಭದಲ್ಲಿ `ಎನ್ ಉಯಿರ್ ಕಾದಲಿ' ಎಂಬ ತಮಿಳು ಚಿತ್ರದ ಚಿತ್ರೀಕರಣದ ವೇಳೆ ನಟ ಮತ್ತು ನಿರ್ದೇಶಕ ಕೆ.ಎಸ್. ಶಿವಚಂದ್ರನ್ ಎಂಬಾತನಿಗೆ ಮನಸೋತ ಲಕ್ಷ್ಮಿ ಆತನೊಂದಿಗೆ ಮದುವೆಯಾದರು. ಮದುವೆ ವಯಸ್ಸಿಗೆ ಬಂದ ಮಗಳ ಎದುರು ಸ್ವತಃ ಲಕ್ಷ್ಮಿ ಮತ್ತೊಂದು ಮದುವೆಯಾಗಿದ್ದನ್ನು ಮಾಧ್ಯಮಗಳು ಠೀಕಿಸಿದವು. ವಿಪರ್ಯಾಸವೆಂದರೆ, ಲಕ್ಷ್ಮಿ ಶಿವಚಂದ್ರನ್‍ಅವರೊಂದಿಗೆ ಮದುವೆಯಾಗಿದ್ದನ್ನು ಸ್ವತಃ ಲಕ್ಷ್ಮಿಯ ಹೆತ್ತ ಮಗಳು ಐಶ್ವರ್ಯಾಳೇ ವಿರೋಧಿಸಲು ಶುರು ಮಾಡಿದಳು. `ಇಲ್ಲಿವರೆಗೆ ಸರ್ ಎಂದು ಸಂಬೋಧಿಸುತ್ತಿದ್ದ ಶಿವಚಂದ್ರನ್‍ನನ್ನು ನಾನು ಹೇಗೆ ಡ್ಯಾಡಿ ಎಂದುಕರೆಯಲಿ' ಎಂದು ಐಶ್ವರ್ಯಾ ವಿಪರೀತ ಪ್ರತಿರೋಧಿಬಿಟ್ಟಳು. `ನನ್ನ ತಾಯಿಯನ್ನು ಕಂಡರೆ ನನಗೆ ಆಗುವುದಿಲ್ಲ' ಎಂದ ಐಶ್ವರ್ಯಾ ತನ್ನ ತಾಯಿ ಲಕ್ಷ್ಮಿಯ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿ ಆಕೆಯನ್ನು ಸಾಕಷ್ಟು ಮನೋವ್ಯಾಕುಲಕ್ಕೆ ದೂಡಿಬಿಟ್ಟಳು.

ಕಡೆಗೊಂದು ದಿನ ಮುಸ್ಲಿಂ ಸಮುದಾಯಕ್ಕೆ ಸೇರಿದ ಹುಗನನ್ನು ಪ್ರೀತಿಸಿದ ಐಶ್ವರ್ಯಾ ತನ್ನ ತಾಯಿ ಲಕ್ಷ್ಮಿಗೆ ಒಂದು ಮಾತೂ ಹೇಳದೆ, ಕೇಳದೆ ಹೋಗಿ ಮದುವೆಯಾದಳು. ಮಗಳು ತನಗೆ ಒಂದು ಮಾತೂ ತಿಳಿಸದೆ ಮದುವೆಯಾಗಿದ್ದರಿಂದ ಮನನೊಂದ ಲಕ್ಷ್ಮಿ `ನೀನು ಪ್ರೀತಿಸಿ ಮದುವೆಯಾಗಿದ್ದಿಯಾ... ಕಷ್ಟ-ಸುಖ ಏನೇ ಬಂದರೂ ನೀನೇ ಅನುಭವಿಸು. ನನ್ನ ಮನೆಯತನಕ ಬರಬೇಡ' ಎಂದು ಖಾರವಾಗಿ ಹೇಳಿಬಿಟ್ಟಿದ್ದರು.

ಮೂರು ಸ್ವತಃ ತಾನೇ ಮೂರು ಮದುವೆಗಳನ್ನು ಆಗಿ, ಹೆತ್ತ ಮಗಳನ್ನೇ ದೂರ ಮಾಡಿಕೊಂಡು, ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಲಕ್ಷ್ಮಿ ಚಿತ್ರರಸಿಕರ ಪಾಲಿಗೆ ಮಾತ್ರ ಎಂದೆಂದಿಗೂ `ಕನಸಿನ ನಾಯಕಿ' ಎಂಬದಂತೂ ನಿಜ. ಇಂಥ ಲಕ್ಷ್ಮಿ ಈಗ ತಮ್ಮ ಜೀವನಾನುಭವವನ್ನೇ ಬಂಡವಾಳವನ್ನಾಗಿಸಿಕೊಂಡು ನೊಂದವರ ಕಣ್ಣೀರೊರೆಸುವ, ಅವರಿಗೆ ಸಾಂತ್ವನ ನೀಡುವ ಕಾಯಕ ಮಾಡಿದ್ದಾರೆ. ಇದು ಲಕ್ಷ್ಮಿಯವರ `ಜೀವನ'ದ ಹಿಂದಿರುವ ಅಸಲೀ `ಕಥೆ'... ...........
-ಅರುಣ್
-8/08/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\