HOME
CINEMA NEWS
GALLERY
TV NEWS
REVIEWS
CONTACT US

ಕಂಠೀರವ ಸ್ಟುಡಿಯೋದಲ್ಲಿ ಕೆ ಜಿ ಎಫ್ ಚಾಪ್ಟರ್ 2ಗೆ ಮುಹೂರ್ತ
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಮೂಡಿಬಂದಿದ್ದ ಕೆಜಿಎಫ್ ಸಿನಿಮಾ ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲ, ಜಾಗತಿಕ ಸಿನಿಮಾ ಜಗತ್ತು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಚಿತ್ರದ ತಾಂತ್ರಿಕ ಶ್ರೀಮಂತಿಕೆ, ಕ್ರಿಯಾಶೀಲತೆ, ಕಲಾವಿದರ ನೈಪುಣ್ಯತೆಯನ್ನು ಕಂಡು ಎಲ್ಲರೂ ಬೆರಗಾಗಿದ್ದರು.

ಕೆಜಿಎಫ್ ಚಿತ್ರವನ್ನು ಅಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದ ನಿರ್ಮಾಪಕ ವಿಜಯ ಕಿರಗಂದೂರು ಅವರ ನಿರ್ಮಾಣದಲ್ಲಿ ಕೆ.ಜಿ.ಎಫ್. ಚಾಪ್ಟರ್2 ಇಂದು ಮುಹೂರ್ತ ಆಚರಿಸಿಕೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿ ಇಂದು ಮುಹೂರ್ತ ಸಮಾರಂಭ ನೆರವೇರಿದೆ. ನಿರ್ದೇಶಕ ಪ್ರಶಾಂತ್ ನೀಲ್ ರವರ ತಾಯಿ ಶ್ರೀಮತಿ ಭಾರತಿ ಸುಭಾóಷ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಸಹೋದರ ಮಂಜಣ್ಣ ಕ್ಲಾಪ್ ಮಾಡಿದರು. ಕೆ.ಜಿ.ಎಫ್ ಚಾಪ್ಟರ್2 ಚಿತ್ರ ಏಪ್ರಿಲ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಪ್ರಶಾಂತ್ ನೀಲ್ ಕಥೆ ಚಿತ್ರಕಥೆ, ನಿರ್ದೇಶನ, ಸಂಭಾಷಣೆ ಪ್ರಶಾಂತ್ ನೀಲ್, ಚಂದ್ರಮೌಳಿ, ಕೆ ಭುವನ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ಚಿರುವ ಈ ಚಿತ್ರಕ್ಕೆ ಕಾರ್ತಿಕ್ ಮತ್ತು ರಾಮರಾವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ, ಚಂಪಕಧಾಮ ಬಾಬು, ಕುಮಾರ್, ಗಗನ್ ಮೂರ್ತಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ತಾರಾಗಣದಲ್ಲಿ ರಾಕಿಂಗ್ ಸ್ಟಾರ್ ಯಶ್, ಅನಂತ್ ನಾಗ್, ಶ್ರೀನಿಧಿ ಶೆಟ್ಟಿ, ಮಾಳವಿಕಾ, ಮಾಸ್ಟರ್ ಅನಮೋಲ್, ನಾಗಾಭರಣ, ಗೋವಿಂದೇಗೌಡ, ಅವಿನಾಶ್, ರಾಮ್, ಲಕ್ಕಿ, ಅಯ್ಯಪ್ಪ ಶರ್ಮ ಮುಂತಾದವರಿದ್ದಾರೆ.
14/03/19


ವಿಶ್ವಕ್ಕೆ ಹರಡಿದ ಕೆ.ಜೆ.ಎಫ್ ಹವಾ
ಕನ್ನಡ ಚಿತ್ರರಂಗದಲೇ ಇತಿಹಾಸ ಸೃಷ್ಟಿಸಿದ ‘ಕೆ.ಜಿ.ಎಫ್’ ಸಿನಿಮಾವು ಪ್ರಪಂಚದಾದ್ಯಂತ ಬಿಡುಗಡೆಯಾಗಿ ಗಳಿಕೆಯು ಚೆನ್ನಾಗಿ ಬಂದಿದೆ, ಬರುತ್ತಲೆ ಇದೆ. ಸಂಕ್ರಾಂತಿ ಹಬ್ಬದ ಮುನ್ನ ದಿನ ಮಾದ್ಯಮದ ಮೂಲಕ ಥ್ಯಾಂಕ್ಸ್ ಹೇಳಲು ನಿರ್ಮಾಪಕರು ಪಂಚತಾರ ಹೋಟೆಲ್‍ದಲ್ಲಿ ಸಣ್ಣದೊಂದು ಸಂತೋಷ ಕೂಟ ಏರ್ಪಾಟು ಮಾಡಿದ್ದರು. ಸರದಿಯಂತೆ ಮಾತು ಶುರು ಮಾಡಿದ ನಿರ್ದೇಶಕ ಪ್ರಶಾಂತ್‍ನೀಲ್ ಎಲ್ಲರ ಶ್ರಮ ಚಿತ್ರದ ಯಶಸ್ಸಿಗೆ ಕಾರಣವಾಗಿದೆ. ಛಾಪ್ಟರ್ 1ರಲ್ಲಿ ಇರುವುದು ಅರ್ಧ ಕತೆ. ಬಾಕಿ ಎರಡನೆಯದಲ್ಲಿ ಬರಲಿದೆ. ಮೊದಲ ಭಾಗಕ್ಕಿಂತಲೂ ಉತ್ತಮವಾಗಿ ಕೊಡೆತ್ತನೆಂಬ ಭರವಸೆ ಇದೆ ಎಂದರು.

ಸಿನಿಮಾಕ್ಕೆ ಭವ್ಯವಾದ ಸ್ವಾಗತ ದೊರಕಿದೆ. ಕಾಲ್ ಶೀಟ್ ಕೊಟ್ಟರೆ ನನ್ನ ಭಾಗದ ಸನ್ನಿವೇಶಗಳನ್ನು ಸಿದ್ದಮಾಡಿಕೊಳ್ಳುತ್ತೇನೆ ಅಂತ ನಿರ್ದೇಶಕರು ಹೇಳಿದರು. ಅವರ ಬಲವಂತದ ಮೇಲೆ ಹಿಂದಿಗೆ ಡಬ್ಬಿಂಗ್ ಮಾಡಿದ್ದೇನೆ. ಪತ್ನಿ ಗಾಯಿತ್ತಿ ಸಹಕಾರದಿಂದ ನಡೆಯಿತು. ಯಶ್ ಬೆಳವಣಿಗೆ ನೋಡಿದಾಗ ಖುಷಿಯಾಗುತ್ತದೆ ಎಂಬ ನುಡಿ ಅನಂತ್‍ನಾಗ್ ಅವರದು.

ಜಾಕಿಚಾನ್, ರಜನಿಕಾಂತ್ ಚಿತ್ರಗಳು ಎಲ್ಲಾ ಕಡೆಗಳಲ್ಲಿ ತೆರೆ ಕಂಡಾಗ ನಮ್ಮದು ಯಾವಾಗ ಈ ರೀತಿ ಅಂತ ಚಿಂತನೆ ಕಾಡಿತ್ತು. ಕೆಜಿಎಫ್ ಮೂಲಕ ಎಲ್ಲವು ಈಡೇರಿದೆ. ಚಿತ್ರದಲ್ಲಿ ನಾನು ಭಾಗಿಯಾಗಿರುವುದು ಸಂತಸ ತಂದಿದೆ. ಎರಡನೆ ಭಾಗವು ಇದೇ ರೀತಿ ಆಗಲಿ ಅಂತಾರೆ ಅಚ್ಯುತಕುಮಾರ್.

ತಾಯಿ ಪಾತ್ರ ಬೇಡ ಅಂದಿದ್ದರೆ ದೊಡ್ಡ ತಪ್ಪು ಮಾಡಿದೆ ಅನಿಸುತ್ತಿತ್ತು. ಬಯಸದೇ ಬಂದ ಭಾಗ್ಯ ದೈವ ಕೃಪೆ ಎನ್ನಬಹುದು ಎಂದು ಅರ್ಚನಾ ಹೇಳಿದರು. ಲೀನಾ ಹೆಸರು ಎರಡು ವರ್ಷದ ಪ್ರಯಾಣ ನೆಮ್ಮದಿ ತಂದಿದೆ. ಮುಂದಿನ ಭಾಗದಲ್ಲಿ ನನ್ನದು ಹೆಚ್ಚು ಇರಬಹುದು ಅಂದುಕೊಂಡಿದ್ದೇನೆಂದು ನಾಯಕಿ ಶ್ರೀನಿಧಿಶೆಟ್ಟಿ ಚುಟುಕು ಮಾತನಾಡಿದರು.

ಖುಷಿ ಇಡೀ ತಂಡಕ್ಕೆ ಸೇರಿದೆ. ಅನಂತ್ ಸರ್ ಹೂರತುಪಡಿಸಿ ಎಲ್ಲರ ಜೀವನ, ಬೆಳವಣಿಗೆ ಎಲ್ಲವು ಇದರಿಂದ ವೃದ್ದಿಯಾಗಲಿದೆ. ಪ್ರೀತಿ ಇಲ್ಲದ ಮೇಲೆ ಧಾರವಾಹಿಯಲ್ಲಿ ಅನಂತ್ ಸರ್ ಮಗನಾಗಿ ಕಾಣಿಸಿಕೊಂಡಿದ್ದು, ಆಗ ಅವರ ಹತ್ತಿರ ಚಿತ್ರರಂಗದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕೇಳಿದ್ದೇನೆ. ಅಭಿನಯ ಗುರುಗಳಿಂದ ಕಲಿತಿದ್ದೆ ಆದರೆ, ಅವರನ್ನು ನೋಡಿ ಕಲಿತಿರುವುದನ್ನು ಗುರುಗಳಿಂದ ಎನ್ನಬಹುದು. ನಾಲ್ಕು ವರ್ಷದ ಶ್ರಮದ ಹಿಂದೆ ಎಲ್ಲರ ಕುಟುಂಬಕ್ಕೆ ಥ್ಯಾಂಕ್ಸ್ ಹೇಳಬೇಕಾಗಿದೆ. ನಮ್ಮಗಳ ಕಷ್ಟವನ್ನು ಅರ್ಥ ಮಾಡಿಕೊಂಡು ಪ್ರೋತ್ಸಾಹ ನೀಡಿದ್ದಾರೆ. ಈ ಸಿನಿಮಾಕ್ಕೆ ನಿಜವಾದ ನಾಯಕ ಅಂದರೆ ಅದು ನಿರ್ಮಾಪಕ. ಅವರ ತಾಕತ್ತು ಇಲ್ಲಿಯವರೆಗೆ ತಂದು ನಿಲ್ಲಿಸಿದೆ ಎಂದು ಹೇಳುತ್ತಾ ಹೋದರು ಯಶ್.

ನಿರ್ಮಾಪಕ ವಿಜಯ್‍ಕಿರಗಂದೂರು ಎಲ್ಲೆಲ್ಲಿ ಪ್ರದರ್ಶನಗೊಂಡಿದೆ ಎಂದು ಸಂಪೂರ್ಣ ವಿವರ ನೀಡಿ, ಮುಂದಿನ ಭೇಟಿಯಲ್ಲಿ ಎಷ್ಟು ವೆಚ್ಚವಾಗಿದೆ, ಗಳಿಕೆಯನ್ನು ತಿಳಿಸುವುದಾಗಿ ಹೇಳುವುದರೊಂದಿಗೆ ಎಲ್ಲರ ಮಾತುಗಳಿಗೆ ಮಂಗಳ ಹಾಡಲಾಯಿತು. ಕಲಾವಿದರಾದ ಹರೀಶ್‍ರೈ, ತಾರಕ್‍ಪೊನ್ನಪ್ಪ, ಶ್ರೀನಿವಾಸಮೂರ್ತಿ, ಅವಿನಾಶ್, ರಾಂ, ವಿನಯ್, ಶೇಖರ್, ಛಾಯಗ್ರಾಹಕ ಭುವನ್‍ಗೌಡ ಉಪಸ್ತಿತರಿದ್ದು ಸಂತಸವನ್ನು ಹಂಚಿಕೊಂಡರು.
ಸಿನಿ ಸರ್ಕಲ್.ಇನ್ ನ್ಯೂಸ್
15/01/19

ಅದ್ಬುತ, ಮನಮೋಹಕ ಕೆ.ಜಿ.ಎಫ್
ಎರಡು ವರ್ಷದಿಂದ ಸುದ್ದಿಯಲ್ಲಿದ್ದ ‘ಕೆ.ಜೆ.ಎಫ್’ ಬಿಡುಗಡೆಯಾಗಿ ಇಲ್ಲಿಗೆ ನಿಂತಿಲ್ಲ. ಇನ್ನು ಮುಂದೆ ಭಾರತಾದ್ಯಂತ ವಿಸ್ತರಿಸಲು ಕಾರಣವಾಗಿದೆ. ದೇಶದ್ಯಾಂತ 2000 ಪರದೆಗಳಲ್ಲಿ ನೋಡಿರುವ ಪ್ರೇಕ್ಷಕರು ಹೇಳುವುದು ಸೂಪರ್. ಅದರಲ್ಲೂ ಕನ್ನಡಿಗರು ಜಾಸ್ತಿ ಖುಷಿಯಾಗಿದ್ದಾರೆ. ನಭೂತೋ ನಭವಿಷ್ಯತಿ ಎನ್ನುವಂತೆ ಚಿತ್ರವು ಮೂಡಿಬಂದಿದೆ. ಒಂದೊಂದು ಸನ್ನಿವೇಶವು ಕಣ್ಣಿಗೆ ರಸದೌತಣ ನೀಡುತ್ತದೆ. ಕತೆಯನ್ನು ಹೇಳಿದರೆ ಥ್ರಿಲ್ ಸಿಗುವುದಿಲ್ಲ. ಅದನ್ನು ದೊಡ್ಡ ಪರದೆ ಮೇಲೆ ನೋಡುವುದೇ ಚೆಂದ. ಆ ಜಾಗಗಳು, ಸೆಟ್‍ಗಳು, ಕಲಾವಿದರು, ಸಂಗೀತ, ಛಾಯಗ್ರಹಣ ಎಲ್ಲವನ್ನು ಬೇರೆ ಭಾಷೆಯವರು ಬೆರಗು ಕಣ್ಣಿನಿಂದ ನೋಡುವಂತೆ ಆಗಿದೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯ ಎಷ್ಟು ಹೊಗಳಿದರೂ ಕಡಿಮೆಯೇ. ನಮ್ಮ ಜನರು ಅಲ್ಲದೆ ಕನ್ನಡೇತರರು ಇವರ ನಟನೆಯನ್ನು ನೋಡಿ ಫಿದಾ ಆಗಿದ್ದಾರೆ. ಅವರ ಲುಕ್, ಟಾಕು, ವಾಕು,ಜೋಕು ಎಲ್ಲವು ಒಂದು ರೇಂಜ್‍ನಲ್ಲಿ ಮೂಡಿಬಂದಿರುವುದು ಪ್ಲಸ್ ಪಾಯಂಟ್ ಆಗಿದೆ. ದೇಸಾಯಿ ಮಗಳಾಗಿ ನಾಯಕಿ ಶ್ರೀನಿಧಿಶೆಟ್ಟಿ ಮೊದಲ ಚಿತ್ರದಲ್ಲೆ ಭವಿಷ್ಯದ ನಟಿ ಎನಿಸಿಕೊಂಡಿದ್ದಾರೆ. ಅನಂತ್‍ನಾಗ್, ಅಚ್ಯುತಕುಮಾರ್, ಮಾಳವಿಕಅವಿನಾಶ್, ವಸಿಷ್ಟಸಿಂಹ, ಅಯ್ಯಪ್ಪ , ಬಿ.ಸುರೇಶ್, ಉಷಾಭಂಡಾರಿ, ಯಶ್‍ಶೆಟ್ಟಿ ಎಲ್ಲರೂ ತಮ್ಮದೆ ಛಾಪಿನಲ್ಲಿ ಅಭಿನಯಿಸಿದ್ದಾರೆ.

ಉಗ್ರಂ ನಂತರ ನಿರ್ದೇಶನ ಮಾಡಿರುವ ಪ್ರಶಾಂತ್‍ನೀಲ್ ಎರಡನೆ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಪ್ರತಿಯೊಂದು ದೃಶ್ಯ, ನಿರೂಪಣೆ, ಕಲಾವಿದರಿಂದ ತೆಗೆದುಕೊಂಡಿರುವ ಕೆಲಸ ಎಲ್ಲಾ ಕಡೆಗಳಲ್ಲಿ ಅಚ್ಚುಕಟ್ಟಾಗಿದೆ. ಇವರಿಗೆ ಸಾತ್ ನೀಡಲು ಛಾಯಗ್ರಾಹಕ ಭುವನ್‍ಗೌಡ ಸೆರೆಹಿಡಿದಿರುವ ಸುಂದರ ತಾಣಗಳು, ಇದಕ್ಕೆ ತಕ್ಕಂತೆ ಸಂಗೀತ ಒದಗಿಸಿರುವ ರವಿಬಸ್ರೂರ್, ಕಲಾ ನಿರ್ದೇಶಕ ಶಿವಕುಮಾರ್ ಇವರೆಲ್ಲರೂ ಕಳಸವಿಟ್ಟಂತೆ ಚಿತ್ರವು ಚೆನ್ನಾಗಿ ಬರಲು ತೆರೆ ಹಿಂದೆ ಶ್ರಮ ವಹಿಸಿರುವುದು ಕಾಣಿಸುತ್ತದೆ. ನೋಡುಗರಿಗೆ ಹೆದರಿಕೆ ಹುಟ್ಟಿಸುವಂತೆ ಕಾಣಿಸಿಕೊಂಡಿರುವ ಖಳನಟರಾದ ಜಾನ್‍ಕೊಕೇನ್, ಅವಿನಾಶ್‍ಗೌಡ, ನಾಗೇಂದ್ರ, ಲಕ್ಷಣ್ ಸೂಪರ್. ಇಂತಹ ಅದ್ದೂರಿ ಚಿತ್ರಕ್ಕೆ ಧೈರ್ಯ ಮಾಡಿ ಹಣ ಹೂಡಿರುವ ವಿಜಯ್‍ಕಿರಗಂದೂರ್ ಹೆಸರು ಎಲ್ಲಾ ಕಡೆ ಮಾತಾಡುವಂತಿದೆ. ಇಷ್ಟ್ಟೆಲ್ಲಾ ಹೇಳಿದ ಮೇಲೂ ನೀವೆನಾದರೂ ಚಿತ್ರ ನೋಡದೆ ಇದ್ದಲ್ಲಿ, ಒಂದು ಭಯಂಕರ ಅವಕಾಶವನ್ನು ಮಿಸ್ ಮಾಡಿಕೊಂಡಂತೆ ಜೀವನಪೂರ್ತಿ ನೊಂದುಕೊಳ್ಳುವುದು ಖಚಿತ.
ಸಿನಿ ಸರ್ಕಲ್.ಇನ್ ವಿಮರ್ಶೆ
******
22/12/18

2000 ಪರದೆಗಳಲ್ಲಿ ಕೆ.ಜಿ.ಎಫ್ ಅಪ್ಪಳಿಸಲಿದೆ
ಎರಡು ವರ್ಷದಿಂದ ಸುದ್ದಿಯಲ್ಲಿದ್ದ ಅದ್ದೂರಿ ಚಿತ್ರ ‘ಕೆ.ಜಿ.ಎಫ್’ ಕೊನೆಗೂ ಜನರಿಗೆ ತೋರಿಸಲು ಸಜ್ಜಾಗಿದೆ. ಕರ್ನಾಟಕ ಮಾದ್ಯಮದವರೊಂದಿಗೆ ಪ್ರಚಾರ ಕಾರ್ಯವನ್ನು ಶುರು ಮಾಡಿ, ನಾಲ್ಕು ರಾಜ್ಯದಲ್ಲಿ ಪ್ರವಾಸ ಕೈಗೊಂಡ ತಂಡವು ಅಂತಿಮವಾಗಿ ಮತ್ತೆ ಪತ್ರಕರ್ತರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿತು. ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳುವಂತೆ ದೇಶದ್ಯಾಂತ 2000 ಕೇಂದ್ರಗಳು, ಅಮೇರಿಕಾ, ಕೆನಡಾ,ಯುಕೆ ಮತ್ತು ಕನ್ನಡ ಭಾಷ ಕುರಿತಂತೆ 350 ಸೆಂಟರ್, ಹಿಂದಿ ಭಾಷೆಯಲ್ಲಿ ಭಾರತದ್ಯಂತ 1000 ಕೇಂದ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ವಿತರಣೆ ಹಕ್ಕುಗಳನ್ನು ನೀಡಲಾಗಿ ಮಾರಾಟ ಮಾಡಿರುವುದಿಲ್ಲ. ಐದು ಭಾಷೆಯಲ್ಲಿ ಬರುತ್ತಿರುವ ಕಾರಣ ಈಗಲೇ ಚಿತ್ರಮಂದಿರಗಳ ಸಂಖ್ಯೆಯನ್ನು ತಿಳಿಸುವುದು ಕಷ್ಟವಾಗುತ್ತದೆ. ಬುದುವಾರ ಎಲ್ಲ ಪಕ್ಕಾ ವರದಿ ಸಿಗಲಿದೆ. ಸಿನಿಮಾದ ದೃಶ್ಯಗಳನ್ನು ಮೊಬೈಲ್‍ದಲ್ಲಿ ಸೆರೆಹಿಡಿದು ಯುಟ್ಯೂಬ್‍ನಲ್ಲಿ ಬಿಡುವುದನ್ನು ತಡೆಹಿಡಿಯಲು ತಂಡವನ್ನು ರಚಿಸಲಾಗಿದೆ. ಅಲ್ಲದೆ ಸೈಬರ್ ಕ್ರೈಮ್‍ಗೆ ಪತ್ರ ಬರೆದು ಇಂತವರ ವಿರುದ್ದ ಕ್ರಮ ತೆಗದುಕೊಳ್ಳಲು ಕೋರಿದೆ ಎಂದರು.

ಹೆಣ್ಣು ಮಗುವಿನ ತಂದೆ ಮತ್ತೋಂದು ಕಡೆ ಮಹತ್ವಕಾಂಕ್ಷೆ ಚಿತ್ರ ಬಿಡುಗಡೆ ಖುಷಿಯಲ್ಲಿರುವ ಯಶ್ ಮೊದಲು ನಾಯಕ ನಾನಲ್ಲ. ತಂತ್ರಜ್ಘರು. ಅವರಿಂದಲೇ ಉತ್ತಮ ಚಿತ್ರವಾಗಿದೆ ಎಂದು ಎಲ್ಲರ ಹೆಸರನ್ನು ಹೇಳಿದರು. ಮಾತು ಮುಂದುವರೆಸುತ್ತಾ ಕೆಜಿಎಫ್ ಕನ್ನಡಿಗರ ಸಿನಿಮಾ. ಎಲ್ಲಾ ಭಾಷೆಯ ಜನರು ನಮ್ಮ ಚಿತ್ರರಂಗದತ್ತ ನೋಡಬೇಕು ಎಂಬುದು ಆಸೆಯಾಗಿತ್ತು. ಎಲ್ಲಾ ಕಡೆಗಳಿಲ್ಲಿ ಅಲ್ಲಿನ ಉದ್ಯಮ, ಮಾದ್ಯಮ ಬೆರಗು ಕಣ್ಣಿನಿಂದ ನೋಡುತ್ತಿದ್ದಾರೆ. ಕನ್ನಡ ಹೊರತುಪಡಿಸಿ ಬೇರೆ ಭಾಷೆಗೆ ಡಬ್ ಮಾಡಿಲ್ಲ. ಐದು ಭಾಷೆಯಲ್ಲಿ ತೆರೆಕಾಣುತ್ತಿರುವುದರಿಂದ ಎರಡು ವರ್ಷದಲ್ಲಿ ಐದು ಚಿತ್ರದಲ್ಲಿ ನಟಿಸಿದಂತೆ ಆಗಿದೆ. ಸದ್ಯ ಕಿರಾತಕ-2, ನಂತರ ಕೆಜಿಎಫ್ ಛಾಪ್ಟರ್-2 ಮುಂದೆ ರಾಣಾ ಚಿತ್ರದಲ್ಲಿ ನಟಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಳ್ಳೆಯ ಕತೆ, ಸಂಸ್ಥೆ ಇದ್ದಲ್ಲಿ ಯಾವುದೇ ಭಾಷೆಯಲ್ಲಿ ನಟಿಸಲು ಅಭ್ಯಂತರವಿಲ್ಲ. ಇಲ್ಲಿಯವರೆಗೂ ಅಂತಹ ಕರೆಗಳು ಬಂದಿಲ್ಲವೆಂದು ಹೇಳಿದರು.

ಮೊದಲ ಚಿತ್ರದಲ್ಲೆ ಐದು ಭಾಷೆಗೆ ಪರಿಚಯವಾಗುತ್ತಿರುವುದು ನನ್ನ ಪಾಲಿಗೆ ಸುಕೃತ ಎನ್ನಬಹುದು. ಅಲ್ಲದೆ ಛಾಪ್ಟರ್-2 ಇರುವುದರಿಂದ ಒಟ್ಟು 10 ಸಿನಿಮಾಗಳಲ್ಲಿ ನಟಿಸಿದಂತೆ ಆಗಿದೆ ಎಂಬುದು ನಾಯಕಿ ಶ್ರೀನಿಧಿಶೆಟ್ಟಿ ಖುಷಿ ನುಡಿ.

ಶೇಕಡ 80ರಷ್ಟು ಕತೆ ಸೆಟ್‍ನಲ್ಲಿ ನಡೆಯಲಿದೆ. ಅದಕ್ಕಾಗಿ ಬೆಂಗಳೂರು, ಕೆ.ಜಿ.ಎಫ್ ಕಡೆಗಳಲ್ಲಿ ಭಾರಿ ಗಾತ್ರದ ಸೆಟ್‍ಗಳನ್ನು ಹಾಕಲು ಸುಮಾರು 350 ಕಾರ್ಮಿಕರು ಕೆಲಸ ಮಾಡಿದ್ದಾರೆಂದು ಕಲಾ ನಿರ್ದೇಶಕ ಶಿವಕುಮಾರ್ ಮಾಹಿತಿ ನೀಡಿದರು. ಕ್ಯೂಬ್‍ನಲ್ಲಿ ಅಳವಡಿಸುವದರಲ್ಲಿ ಬ್ಯುಸಿ ಇದ್ದ ನಿರ್ದೇಶಕ ಪ್ರಶಾಂತ್‍ನೀಲ್ ಹಾಜರಿರಲಿಲ್ಲ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
19/12/18


ಕೆಜಿಎಫ್ ಮೊದಲ ಹಾಡಿಗೆ ಫಿದಾ
2018ರ ಅದ್ದೂರಿ ಹಾಗೂ ಕುತೂಹಲ ಮೂಡಿಸಿರುವ ಚಾಪ್ಟರ್-1 ‘ಕೆ.ಜಿ.ಎಫ್’ ಚಿತ್ರವು ಐದು ಭಾಷೆಗಳಲ್ಲಿ ಡಿಸೆಂಬರ್ ಕೊನೆವಾರದಂದು ತೆರೆ ಕಾಣುತ್ತಿರುವುದು ತಿಳಿದ ಸಂಗತಿಯಾಗಿದೆ. ಇಲ್ಲಯವರೆಗೂ ಚಿತ್ರದ ಕುರಿತಂತೆ ಮಾಹಿತಿ ಬಿಡದ ತಂಡವು ಎಲ್ಲವನ್ನು ಚಿತ್ರಮಂದಿರದಲ್ಲಿ ನೋಡಬೇಕು ಅಂತ ಹೇಳಿಕೊಂಡಿದೆ. ಲಹರಿ ಸಂಸ್ಥೆಯು ಅತಿ ಹೆಚ್ಚಿನ ಹಣ ನೀಡಿ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ರವಿಬಸ್ರೂರು ಸಂಗೀತ ಒದಗಿಸಿರುವ ಮೊದಲ ಗೀತೆ ‘ಸಲಾಂ ರಾಕಿ ಬಾಯ್’ ಸಾಹಿತ್ಯವನ್ನು ಡಾ.ನಾಗೇಂದ್ರಪ್ರಸಾದ್ ರಚಿಸಿದ್ದು, ಗಾಯಕರುಗಳಾದ ವಿಜಯಪ್ರಕಾಶ್, ಸಂತೋಷ್‍ವೆಂಕಿ, ಸಚ್ಚಿನ್‍ಬಸ್ರೂರು, ಪುನೀತ್ ರುದ್ರನಾಗ್, ಮೋಹನ್, ಹೆಚ್.ಶ್ರೀನಿವಾಸಮೂರ್ತಿ, ವಿಜಯ್‍ಅರಸ್ ಹಾಡಿಗೆ ಧ್ವನಿಯಾಗಿದ್ದಾರೆ. ಬಿಡುಗಡೆಯಾದ ಎರಡು ದಿನದಲ್ಲೆ ಲಕ್ಷಗಟ್ಟಲೆ ಕೇಳುಗರು ಖುಷಿ ಪಟ್ಟಿದ್ದಾರಂತೆ. ಉಗ್ರಂ ನಿರ್ದೇಶನ ಮಾಡಿರುವ ಪ್ರಶಾಂತ್‍ನೀಲ್ ಆಕ್ಷನ್ ಕಟ್ ಹೇಳಿದ್ದರೆ, ರಾಜಕುಮಾರ ನಿರ್ಮಾಣ ಮಾಡಿರುವ ವಿಜಯ್ ಕಿರಗಂದೂರ್ ಹಣ ಹೂಡಿದ್ದಾರೆ. ತಾರಗಣದಲ್ಲಿ ಯಶ್, ನವನಾಯಕಿ ಶ್ರೀನಿಧಿಶೆಟ್ಟಿ, ಅನಂತನಾಗ್, ಅಚ್ಯುತಕುಮಾರ್ ಮುಂತಾದವರು ನಟಿಸಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
6/12/18
ಐದು ಭಾಷೆಯಲ್ಲಿ ಕೆಜಿಎಫ್ ಟ್ರೈಲರ್ ಬಿಡುಗಡೆ
ಎರಡು ವರ್ಷಗಳಿಂದ ಸುದ್ದಿಯಾಗಿರುವ ‘ಕೆಜಿಎಫ್’ ಚಿತ್ರದ ಟ್ರೈಲರ್ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡಿತು. ನಾಲ್ಕು ರಾಜ್ಯಗಳ ಮಾದ್ಯಮದವರು ಇದಕ್ಕೆ ಸಾಕ್ಷಿಯಾಗಿದ್ದರು. ಅಂಬರೀಷ್ ಕನ್ನಡ ಟ್ರೈಲರ್‍ಗೆ ಚಾಲನೆ ನೀಡಿದರೆ, ಉಳಿದ ಭಾಷೆಗಳಿಗೆ ಆಯಾ ರಾಜ್ಯದ ಖ್ಯಾತರು ಅನಾವರಣಗೊಳಿಸಿದರು. ಟ್ರೈಲರ್ ಕುರಿತಂತೆ ಕಲಾವಿದರು, ಗಣ್ಯರು ಆಡಿದ ಮಾತುಗಳು ನಿಮಗಾಗಿ ಸಾದರಪಡಿಸಲಾಗುತ್ತಿದೆ.

ಅಂಬರೀಷ್: ಇಡೀ ಭಾರತ ನೋಡುವಂತೆ ವಿಶಿಷ್ಟ ಸಿನಿಮಾ ಕೆಜಿಎಫ್ ಆಗಿದೆ. 46 ವರ್ಷದ ಇತಿಹಾಸದಲ್ಲಿ ಮಯೂರ, ಗೆಜ್ಜೆಪೂಜೆ, ಜೇನುಗೂಡು ಇವುಗಳ ಹೆಸರಿನಲ್ಲಿ ಕತೆ ಏನೆಂದು ತಿಳಿಯುತ್ತಿತ್ತು. ಈ ಸಿನಿಮಾದ ಟೈಟಲ್ ಕೇಳಿದಾಗ ಕೋಲಾರ್ ಗೋಲ್ಟ್ ಫೀಲ್ಡ್ ಅಂದುಕೊಂಡರೆ, ಚಿತ್ರದಲ್ಲಿ ಏನೇನು ಇದೆ ಎಂಬುದು ಬಿಡುಗಡೆ ನಂತರ ಗೊತ್ತಾಗಲಿದೆ. ಪಾತ್ರಕ್ಕಾಗಿ ಯಶ್ ಮದುವೆ, ಹನಿಮೂನ್‍ಗೆ ಹೋದಾಗಲೂ ದಾಡಿ ತೆಗೆದಿರಲಿಲ್ಲ. ಕನ್ನಡ ಚಿತ್ರರಂಗ ಸಣ್ಣ ಮಾರುಕಟ್ಟೆಯಾಗಿದ್ದು, ಇದರ ಮೂಲಕ ಸ್ಯಾಂಡಲ್‍ವುಡ್ ಏನೆಂದು ಭಾರತಕ್ಕೆ ತಿಳಯಲಿದೆ.

ನಟ ವಿಶಾಲ್: ಸಿನಿಮಾ ನೋಡಿ ತಮಿಳಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆತ್ಮೀಯ ಗೆಳಯ ಯಶ್‍ಗೆ ಶುಭವಾಗಲಿ. ಕೆಜಿಎಫ್ ಭಾರತದ ಮಟ್ಟಿಗೆ ದೊಡ್ಡ ಸಿನಿಮಾವಾಗಲಿದೆ.
ಪ್ರಶಾಂತ್‍ನೀಲ್, ನಿರ್ದೇಶಕ: ನಾಲ್ಕು ವರ್ಷದ ಹಿಂದೆ ಕತೆಯ ಒಂದು ಏಳೆ ನಿರ್ಮಾಪಕರಿಗೆ ಹೇಳಿದಾಗ ಅವರು ಸಂತೋಷದಿಂದ ನಿರ್ಮಾಣ ಮಾಡಲು ಮುಂದೆ ಬಂದರು. ಛಾಯಗ್ರಹಣ, ಸಂಕಲನ, ಸಂಗೀತ, ಕಲಾ ನಿರ್ದೇಶನ ಇವರುಗಳಿಂದ ಚಿತ್ರವು ಈ ಪರಿಗೆ ಬಂದು ನಿಂತಿದೆ. ಅದಕ್ಕೆಂದು ಎಲ್ಲರನ್ನು ಸೇರಿಸಿಕೊಂಡು ಮಾಹಿತಿ ನೀಡಲಾಗುತ್ತಿದೆ. ಪ್ರಾರಂಭದಲ್ಲಿ ಎರಡು ಛಾಪ್ಟರ್ ಮಾಡುವ ಯೋಜನೆ ಇರಲಿಲ್ಲ. ಕತೆಯು ಶಕ್ತಿಶಾಲಿಯಾಗಿದ್ದರಿಂದ ಇದನ್ನು ಒಂದರಲ್ಲಿ ತೋರಿಸಲು ಸಾದ್ಯವಿಲ್ಲವೆಂದು, ಎರಡನೆ ಭಾಗಕ್ಕೆ ಚಿಂತನೆ ನಡೆಸಲಾಯತು. ತಾಂತ್ರಿಕ ವಿಭಾಗ ಸಮರ್ಥವಾಗಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಸಾಕ್ಷಿ ಕೆಜಿಎಫ್ ಆಗಿದೆ.

ವಿಜಯ್‍ಕಿರಗಂದೂರು, ನಿರ್ಮಾಪಕ: ನಾಲ್ಕು ವರ್ಷದ ಶ್ರಮ 1500 ಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ದುಡ್ಡಿಗಿಂತ ಸಂಬಂದಗಳಿಗೆ ಬೆಲೆ ಕಟ್ಟಿದ್ದೇನೆ. ಯಶ್ ತಮ್ಮನಂತೆ ಪೂರ್ಣ ಸಹಕಾರ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಂಬಾಳೆ ಫಿಲ್ಸ್‍ಂನಿಂದ ಇತಿಹಾಸ ಸೃಷ್ಟಿಸುವ ಸಿನಿಮಾಗಳನ್ನು ನಿರ್ಮಾಣ ಮಾಡುವ ಯೋಜನೆ ಇದೆ. ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಅದಕ್ಕೆ ಬಜೆಟ್ ಲೆಕ್ಕ ಹಾಕಿಲ್ಲ.
ಶ್ರೀನಿಧಿಶಟ್ಟಿ, ನಾಯಕಿ: ಮೊದಲ ದಿನ ಸೆಟ್‍ಗೆ ಹೋದಾಗ ಯಶ್, ನಿರ್ದೇಶಕ ಇದ್ದರು. ಆಗ ಚಿತ್ರವು ಒಂದು ಭಾಷೆಯಲ್ಲಿ ಬರುವುದಾಗಿ ತಿಳಿದುಕೊಂಡಿದ್ದೆ. ನಂತರ ಎರಡು ಭಾಷೆ ಈಗ ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಎರಡು ಛಾಪ್ಟರ್‍ಗಳಲ್ಲಿ ಬರುತ್ತಿರುವುದು ಸಂತಸತಂದಿದೆ.

ಯಶ್: ಚಿತ್ರದಲ್ಲಿ ನಾನು ನಾಯಕನಾಗಿದ್ದರೂ, ನಿಜವಾದ ಹೀರೋ ನಿರ್ಮಾಪಕರು. ಅವರು ನಾವು ಏನೇ ಹೇಳಿದರೂ ಸಮ್ಮತಿ ಸೂಚಿಸುತ್ತಿದ್ದರು. ಕಾಲಕ್ಕೆ ತಕ್ಕಂತೆ ಎಲ್ಲವು ಬದಲಾಗುತ್ತಿರುವಂತೆ, ಇಂದು ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗ ದೇಶವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಇದರ ಪೋಸ್ಟರ್, ಟ್ರೈಲರ್ ನೋಡಿದವರು ಕನ್ನಡದವರ ತಾಕತ್ತು, ಧೈರ್ಯ ಏನೆಂದು ಎಲ್ಲರಿಗೂ ತಿಳಿಯುತ್ತದೆ. ಕೆಜಿಎಫ್ ಈಗ ಪ್ರಾರಂಭವಷ್ಟೇ, ಪಿಕ್ಚರ್ ಅಬೀ ಬಾಕಿ ಇದೆ.
ನಂತರ ರಾಜ್ಯದ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ತಂಡವು ಉತ್ತರ ನೀಡಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/11/18
ಎರಡು ಅಧ್ಯಾಯಗಳಲ್ಲಿ ಕೆ.ಜಿ.ಎಫ್
ಎರಡು ವರ್ಷದಿಂದ ಸುದ್ದಿಯಲ್ಲಿರುವ ಅದ್ದೂರಿ ಚಿತ್ರ ‘ಕೆ.ಜಿ.ಎಫ್’ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವುದಾಗಿ ಸುದ್ದಿಯು ಹೊರಬಂದಿತ್ತು. ಈಗ ಅದು ಡಿಸೆಂಬರ್ 21ಕ್ಕೆ ಮುಂದೂಡಿದೆ. ವಿಷಯವನ್ನು ತಿಳಿಸಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ನಿರ್ಮಾಪಕ ವಿಜಯ್‍ಕಿರಗಂದೂರ್ ಮಾತನಾಡಿ ಮುಂದಿನ ತಿಂಗಳು 16ರಂದು ಜನರಿಗೆ ತೋರಿಸಲು ಯೋಜನೆ ಹಾಕಲಾಗಿತ್ತು. ಬಾಲಿವುಡ್‍ನ ಹೆಸರಾಂತ ಮೂರು ಸಂಸ್ಥೆಗಳು ಚಿತ್ರ ನೋಡಿ ವಿಶ್ವದಾದ್ಯಂತ ಹಿಂದಿಯಲ್ಲಿ ಬಿಡುಗಡೆ ಮಾಡಲು ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಆದರೆ ಪ್ರಚಾರ ಮಾಡಲು ಸಮಯ ಕೇಳಿರುವುದರಿಂದ ಅನಿವಾರ್ಯವಾಗಿ ಮುಂದೂಡಬೇಕಾಗಿದೆ. ಡಿಸೆಂಬರ್ 21 ಯಾವುದೇ ಕಾರಣಕ್ಕೂ ಬದಲಾವಣೆ ಆಗುವುದಿಲ್ಲವೆಂದು ಹೇಳಿದರು.

ಪ್ರಾರಂಭದಲ್ಲಿ ಚಿತ್ರೀಕರಣ ನಡೆಸುವಾಗ ಎರಡು ಅಧ್ಯಾಯಗಳಲ್ಲಿ ಮಾಡುವ ಬಗ್ಗೆ ಚಿಂತನೆ ಬಂದಿರಲಿಲ್ಲ. ಕತೆ ತುಂಬ ಶಕ್ತಿಶಾಲಿಯಾಗಿರುವ ಕಾರಣ ಇದರ ಯೋಚನೆ ಬಂತು. ಅಚ್ಯುತಕುಮಾರ್, ಮಾಳವಿಕ ಸೇರಿದಂತೆ ಹಲವು ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಕನ್ನಡ ಹೂರತು ಪಡಿಸಿ ಬೇರೆ ಭಾಷೆಗೆ ಡಬ್ಬಿಂಗ್ ಮಾಡಿಲ್ಲ. ಒಂದು ಸಣ್ಣ ದೃಶ್ಯಕ್ಕೆ ಹಿನ್ನಲೆ ಸಂಗೀತವನ್ನು ಜರ್ಮನಿಯಲ್ಲಿ ಮಾಡಿಸಲಾಗಿದೆ. ಮ್ಯೂಟ್ ಮಾಡಿಕೊಂಡು ನೋಡಿದರೂ ಸಿನಿಮಾ ಅರ್ಥವಾಗುತ್ತದೆ. ಅಂತ ಶಕ್ತಿ ಚಿತ್ರಕ್ಕೆ ಇದೆ. ಕೆಜಿಎಫ್‍ದಲ್ಲಿ ಶೂಟ್ ಮಾಡಿದ್ದ್ದು ಮರೆಯಲಾಗದ ಅನುಭವ ಅಂತಾರೆ ನಾಯಕ ಯಶ್.

ಸಾರ್ವತ್ರಿಕ ಕತೆಯಾಗಿರುವುದರಿಂದ ಐದು ಭಾಷೆಯಲ್ಲಿ ಚಿತ್ರವು ಬರಲಿದೆ. ಶ್ರೀನಿಧಿಶೆಟ್ಟಿ ನಾಯಕಿಯನ್ನಾಗಿ ಪರಿಚಯಿಸಲಾಗಿದೆ. 70ರ ಕಾಲಘಟ್ಟದ ಕಥನವಾಗಿದ್ದರಿಂದ ಮೈಸೂರು, ಚೆನ್ನೈ, ಬಾಂಬೆ , ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ 130 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಎರಡನೆ ಭಾಗ ಸಿದ್ದಪಡಿಸಲು ರಾಜಮೌಳಿ ಪ್ರೇರಣೆಯಾಗಿದ್ದಾರೆ. ಅಮಿತಾಬ್‍ಬಚ್ಚನ್ ಸಿನಿಮಾಗಳನ್ನು ಇಷ್ಟಪಡುತ್ತಿದ್ದರಿಂದ ಆಕ್ಷನ್ ಕತೆಯಲ್ಲಿ ತಾಯಿ ಪಾತ್ರ ಮಹತ್ವದ್ದು ಆಗಿರುತ್ತದೆ. ಎರಡನೆ ಭಾಗವು 2019ರಲ್ಲಿ ತೆರೆಗೆ ಬರಲಿದೆ ಎಂದು ನಿರ್ದೇಶಕ ಪ್ರಶಾಂತ್‍ನೀಲ್ ಮಾಹಿತಿ ಒದಗಿಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/10/18
ಎರಡು ಭಾಗಗಳಲ್ಲಿ ಕೆಜಿಎಫ್
ಎರಡು ವರ್ಷದಿಂದ ಸುದ್ದಿಯಲ್ಲಿದ್ದ ‘ಕೆಜಿಎಫ್’ ಸಿನಿಮಾದ ಒಂದಳೆ ಕತೆ ಏನು ಎಂಬುದನ್ನು ನಿರ್ದೇಶಕ ಪ್ರಶಾಂತ್‍ನೀಲ್ ಗುಟ್ಟಾಗಿ ಇಡಲಾಗಿದ್ದು, ಇದರಲ್ಲಿ ಯಶ್ ಪಾತ್ರ ಏನು ಅಂತ ತಂಡವು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಈಗ ಬಿಡುಗಡೆ ಸಮೀಪ ಇರುವ ಕಾರಣ ಒಂದಷ್ಟು ಸಣ್ಣ ಮಾಹಿತಿಯನ್ನು ಹೊರಹಾಕಿದೆ. ಟೈಟಲ್‍ಗೆ ಅರ್ಥ ಕೋಲಾರ ಗೋಲ್ಡ್ ಫೀಲ್ಡ್ ಎಂದು ಕೊಂಡಿದ್ದಾರೆ. ಅದರಾಚೆ ಯಾವುದೇ ಜಗತ್ತಿಗೂ ಊರಿಗೂ ಲಿಂಕ್ ಆಗುವ ಕತೆಯಾಗಿದೆಯಂತೆ. ಚಿತ್ರದಲ್ಲಿ ಯಶ್ ಗ್ಯಾಂಗ್‍ಸ್ಟರ್ ರಾಕಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಭಾಗದಲ್ಲಿ ರಾಕಿಯ ಬಾಲ್ಯ ಮತ್ತು ಭೂಗತ ಲೋಕದಲ್ಲಿ ಆತ ಗ್ಯಾಂಗ್‍ಸ್ಟರ್ ಆಗಿ ಗುರುತಿಸಿಕೊಳ್ಳಲು ಕಾರಣವೇನು ಎಂಬುದುನ್ನು ಹೇಳಲಾಗಿದೆ.

ಎರಡನೆ ಭಾಗದಲ್ಲಿ ಕಥನಾಯಕ ಸಾಮಾನ್ಯ ಮನುಷ್ಯನಾಗಿ ಮುಂದೆ ಭೂಗತಲೋಕದಲ್ಲಿ ಲಿಂಕ್ ಹೇಗೆ ಆಗುತ್ತದೆ. ಜೊತೆಗೆ ತಾಯಿ ಮಗನ ಭಾವನಾತ್ಮಕ ಸಂಬಂದಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ. 1978ರ ಅಮೇರಿಕ ಮತ್ತು ಸೋವಿಯತ್ ರಷ್ಯಾ ನಡುವೆ ಕೋಲ್ಡ್ ವಾರ್ ಶುರುವಾಗಿತ್ತು. ಅದರ ಪ್ರಭಾವ ಅರಬ್ ರಾಷ್ಟ್ರಗಳ ಮೇಲೂ ಆಯಿತು. ಅದು ಬಂಗಾರಕ್ಕಾಗಿ ಶುರುವಾಗುತ್ತದೆ. ಮುಂದೆ ಬಂಗಾರದ ಬೆಲೆ ಗಗನಕ್ಕೆ ಏರಿದರೆ ಏನೆಲ್ಲಾ ಆಗಿತ್ತದೆ ಎನ್ನುವುದು ಪ್ರಮುಖವಾದ ಕತೆಯಾಗಿದೆ.

2016 ಮಿಸ್ ಸುಪ್ರಾ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದ ಶ್ರೀನಿಧಿ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಉಳಿದಂತೆ ಅನಂತ್‍ನಾಗ್, ಅಚ್ಯುತಕುಮಾರ್, ರಮ್ಯಾಕೃಷ್ಣ, ನಾಸಿರ್, ಮಾಳವಿಕಾಅವಿನಾಶ್, ವಸಿಷ್ಟಸಿಂಹ ಮುಂತಾದವರ ನಟನೆ ಇದೆ. ಒಂದು ಹಾಡಿಗೆ ಮಿಲ್ಕಿ ಬ್ಯೂಟಿ ತಮನ್ನಾ ಹೆಜ್ಜೆ ಹಾಕಿರುವುದು ವಿಶೇಷ. ಚಿತ್ರದ ಮೊದಲ ಭಾಗವು ನವೆಂಬರ್ 16ರಂದು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಎರಡನೆ ಭಾಗದ ಒಂದಷ್ಟು ಚಿತ್ರೀಕರಣ ಬಾಕಿ ಇದ್ದು, ಅದು ಮುಗಿದ ಬಳಿಕ 2019ರಲ್ಲಿ ತೆರೆ ಕಾಣಿಸಲು ತಂಡವು ಯೋಜನೆ ಹಾಕಿಕೊಂಡಿದೆ. ರಾಜಕುಮಾರ ನಿರ್ಮಾಣ ಮಾಡಿರುವ ವಿಜಯ್‍ಕಿರಂಗದೂರು ಚಿತ್ರಕ್ಕೆ ಹಣ ಹೂಡಿದ್ದಾರೆ. ಮುಂದಿನ ತಿಂಗಳು 16ರಂದು ಟ್ರೈಲರ್ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
22/09/18
ಎರಡು ಭಾಗ, ಐದು ಭಾಷೆಗಳಲ್ಲಿ ಕೆ.ಜಿ.ಎಫ್
ಪ್ರೇಕ್ಷಕನಿಗೆ ‘ಕೆ.ಜಿ.ಎಫ್’ ಸಿನಿಮಾ ಹಾಲಿವುಡ್ ಚಿತ್ರ ನೋಡಿದಂತೆ ಭಾಸವಾಗುತ್ತದೆ ಎಂದು ನಾಯಕ ಯಶ್ ಹೇಳುತ್ತಾರೆ. ಇದು ಅವರ ವೃತ್ತಿ ಜೀವನದಲ್ಲಿ ಮೈಲಿಗಲ್ಲಾಗಲಿದೆ ಎಂಬ ಆಶಾಭಾವನೆಯಲ್ಲಿದ್ದಾರೆ. ಮೂರು ವರ್ಷಗಳ ಶ್ರಮ ಒಂದು ಹಂತಕ್ಕೆ ಬರುತ್ತಿದೆ. ಚಿತ್ರೀಕರಣ ಶುರುವಾಗಿ ಒಂದು ವರ್ಷ ಮೂರು ತಿಂಗಳಾಗಿದೆ. ಕೊನೆ ಹಂತದ ಶೂಟಿಂಗ್ ನಾಳಿದ್ದು ಚೆನ್ನೈ ಬಂದರಿನಲ್ಲಿ ನಡೆಯಲಿದೆ. 80ರ ದಶಕದ ಕತೆಯಾಗಿದ್ದರಿಂದ ಆ ಜಾಗ ಸೂಕ್ತ ಅನಿಸಿದೆ. ಚಿತ್ರಕ್ಕೆ ಭಾಷೆ ಎಂಬುದು ಇರುವುದಿಲ್ಲ. ಅದರನ್ವಯ ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ದೃಶ್ಯಗಳು ಚೆನ್ನಾಗಿ ಬರಲೆಂದು ಎಲ್ಲೂ ರಾಜಿಯಾಗಿಲ್ಲ. ಇಲ್ಲಿಯವರೆಗೂ 40 ಕೋಟಿ ಹೆಚ್ಚಿಗೆ ಖರ್ಚಾಗಿರಬಹುದು. ಯಾವುದೇ ಕಲಾವಿದನಿಗೆ ಒಂದು ವೇದಿಕೆ ಸೃಷ್ಟಿಸಿಕೊಳ್ಳಬೇಕೆಂಬ ಬಯಕೆ ಇರುವುದು ಸಹಜ. ಈ ಸಿನಿಮಾದ ಮೂಲಕ ದೊಡ್ಡ ಮಟ್ಟದ ವೇದಿಕೆ ಬೆಳೆಯಬಹುದು. ಇದೆರ ಮೇಲೆ ಅಪಾರ ಮಹತ್ವಾಕಾಂಕ್ಷೆ ಇಟ್ಟುಕೊಳ್ಳಲಾಗಿದೆ. ಭಾರತದ ಒಂದು ಭಾಗದ ಕತೆಯನ್ನು ಹೇಳಲು ಹೊರಟಿದ್ದೇವೆ. ಈಗಾಗಲೇ ಬೇರೆ ಭಾಷೆಗಳಿಂದ ಬೇಡಿಕೆ ಬಂದಿದೆ. ಇನ್ನು ಮಾತಕತೆ ನಡೆದಿಲ್ಲ. ವಾಹಿನಿಗಳು ನಮಗೆ ಹಕ್ಕು ಕೊಡಿ ಎಂದು ಕೇಳುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂದು ಈಗಲೇ ಹೇಳಲಾಗದು.

ಎರಡು ಭಾಗಗಳಲ್ಲಿ ಬರಲಿದ್ದು, ಒಂದರ ಭಾಗವನ್ನು ಮೊದಲು ಬಿಡುಗಡೆ ಮಾಡಲಾಗುವುದು. ಎರಡನೆಯಕ್ಕೆ ಒಂದು ಹಂvದ ಚಿತ್ರೀಕರಣ ನಡೆಸಲಾಗಿದ್ದು, ಸ್ಪಲ್ಪ ವಿರಾಮ ತೆಗೆದುಕೊಂಡು ಶುರು ಮಾಡಲು ಯೋಜನೆ ಹಾಕಲಾಗಿದೆ. ಮುಖದ ತುಂಬ ಗಡ್ಡ ಬಿಟ್ಟುಕೊಂಡು ಎಷ್ಟು ದಿನ ಇರುವುದು. ಇದನ್ನೆ ಮುಂದೆ ವರೆಸಿದರೆ ಜನ ಬೈತಾರೆ, ಮನೆಯಲ್ಲಿ ಅಪ್ಪ-ಅಮ್ಮ, ಹೆಚ್ಚಾಗಿ ಹೆಂಡತಿ ಹೊಡಿಲೂಬಹುದು ಅಂತ ನಗುತ್ತಾರೆ ಯಶ್. ಇದರ ನಂತರ ಹರ್ಷ ಅವರಿಗೆ ರಾಣಾ ಮತ್ತು ನರ್ತನ್‍ಗೊಂದು ಚಿತ್ರ ಮಾಡಿಕೊಡಲು ಸಹಿ ಹಾಕಿದ್ದಾರಂತೆ.
ಸಿನಿ ಸರ್ಕಲ್.ಇನ್ ನ್ಯೂಸ್
-22/04/18

ಸಿದ್ದಾಂತಕ್ಕೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ – ಯಶ್
ಚಂದನವನದಲ್ಲಿ ಸ್ಟಾರ್ ನಟರ ಅಗ್ರ ಪಂಕ್ತಿ ಸಾಲಿನಲ್ಲಿ ಯಶ್ ಕೂಡ ಒಬ್ಬರು. ಇತ್ತೀಚೆಗೆ ಹೊಸಬರು ಚಿತ್ರ ಮಾಡಿದಾಗ ಪ್ರಚಾರ ಮಾಡಲು ಇವರ ಮೋರೆ ಹೋಗುತ್ತಾರೆ. ಎಲ್ಲಾ ಚಿತ್ರಗಳ ಪರವಾಗಿ ಮಾತನಾಡಲು ಒಂದು ಯೋಜನೆ ಹಾಕಿಕೊಂಡಿದ್ದಾರೆ. ಮೊದಲು ಚಿತ್ರದ ಟ್ರೈಲರ್ ನೋಡಬೇಕು. ಕತೆಯ ತಿರುಳು, ಚಿತ್ರದ ಗುಣಮಟ್ಟ ಎಲ್ಲವನ್ನು ತಿಳಿದು ಚೆನ್ನಾಗಿದ್ದರೆ ಆ ಚಿತ್ರದ ಪರವಾಗಿ ಮಾತನಾಡುವುದು ಸೂಕ್ತ ಅನಿಸುತ್ತದೆ. ಬೇಕಾಬಿಟ್ಟಿ ಮಾಡಿ ನಮ್ಮ ಸಿನಿಮಾ ಬಗ್ಗೆ ಮಾತನಾಡಿ ಎಂದರೆ ಆಗದ ಕೆಲಸ. ಗುಳ್ಟು ನೋಡಿದಾಗ ಇಂತಹ ಪ್ರಯೋಗಾತ್ಮಕ ಚಿತ್ರಗಳು ಬಂದಲ್ಲಿ ಚಿತ್ರರಂಗ ಬೆಳಯಲು ಸಹಕಾರಿಯಾಗುತ್ತದೆ. ಬಕಾಸುರ ಚಿತ್ರದ ತುಣುಕುಗಳನ್ನು ನೋಡಿ ನಿಜಕ್ಕೂ ಖುಷಿಯಾಗಿದೆ. ಕರ್ವ ನಿರ್ದೇಶಕರ ಎರಡನೆ ಸಿನಿಮಾ ಅದ್ದೂರಿ ಮೇಕಿಂಗ್‍ನಲ್ಲಿ ಮೂಡಿಬಂದಿದೆ. ಹಣದ ಹಿಂದೆ ಹೋದರೆ ಏನಾಗುತ್ತದೆ ಎಂಬುದನ್ನು ಹೇಳಲು ಹೊರಟಿದ್ದಾರೆ. ತಂಡದ ಪ್ರಯತ್ನಕ್ಕೆ ಒಳ್ಳೆಯದಾಗಲಿ. ಮನಿ, ಪೊಲಿಟಿಕಲ್ ಪವರ್ ಇದ್ದರೆ ಸತ್ಯಕ್ಕೆ ಬೆಲೆಯಿಲ್ಲ ಎಂದರೆ ಅದು ಕೇವಲ ತಾತ್ಕಾಲಿಕ. ಒಂದಲ್ಲ ಒಂದು ದಿವಸ ತಾನು ಮಾಡಿದ ತಪ್ಪಿಗೆ ಬೆಲೆ ತೆರೆಬೇಕಾಗುತ್ತದೆ. ಹಿರಿಯರು ಹೇಳಿದ ಸತ್ಯಮೇವ ಜಯತೆ ಇಂದಿಗೂ ಉಳಿದಿದೆ. ಕೊನೆಯಲ್ಲಿ ಅದೇ ಗೆಲ್ಲುವುದು. ಆದರೆ ಅಲ್ಲಿಯವರೆಗೂ ನಾವುಗಳು ತಾಳ್ಮೆಯಲ್ಲಿ ಇರಬೇಕು ಎಂದು ಬ್ಯಾಂಬೋ ಮರ ಬೆಳಯುವ ರೀತಿಯ ಉದಾಹರಣೆ ಕೊಡುತ್ತಾರೆ.

ಚಿತ್ರಮಂದಿರಗಿಂತ ಮಾಲ್‍ಗಳಲ್ಲಿ ಗಳಿಕೆ ಪಾರದರ್ಶಕವಾಗಿದೆ:
ಈಗಿನ ಟ್ರೆಂಡ್‍ನಲ್ಲಿ ಕೋಟಿಗಟ್ಟಲೆ ಕಲೆಕ್ಷನ್ ಆಗುತ್ತಿದೆ ಎಂದು ಸುದ್ದಿ ಹಬ್ಬಿಸಿ ಪ್ರಚಾರವನ್ನು ಪಡೆದುಕೊಳ್ಳುತ್ತಾರೆ. ಅóಷ್ಟಕ್ಕೂ ಕಲೆಕ್ಷನ್ ವಿಚಾರವನ್ನು ನಿರ್ಮಾಪಕರು ಹೇಳಿದರೆ ಅದಕ್ಕೆ ಬೆಲೆ ಇರುತ್ತದೆ. ಯಾರೋ ಚಿತ್ರದ ಕುರಿತು ಮಾತನಾಡಿದರೆ ಸರಿ ಅನಿಸುವುದಿಲ್ಲ. ಅದನ್ನು ಸುಳ್ಳು, ಗಾಸಿಪ್ ಎನ್ನುತ್ತಾರೆ. ಸಿಂಗಲ್ ಸ್ರ್ಕೀನ್‍ನಲ್ಲಿ ಗಳಿಕೆ ಏರುಪೇರು ಆಗಬಹುದು. ಅದೇ ಮಾಲ್‍ಗಳಲ್ಲಿ ಎಲ್ಲವು ಪಾರದರ್ಶಕವಾಗಿರುವುದರಿಂದ ಸರಿಯಾದ ಲೆಕ್ಕವನ್ನು ಹೇಳಬೇಕಾಗುತ್ತದೆ.
ಸಮಾಜ ಸೇವೆಗೆ ಸಾಥ್ ನೀಡುವವರಿಗೆ ಪ್ರಚಾರ:

ಚುನಾವಣೆಯಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಎಲ್ಲಾ ಪಕ್ಷಗಳಿಂದ ಕರೆ ಬರುತ್ತಿದೆ. ಯಾರೇ ಬಂದರೂ ಮೊದಲು ಅವರನ್ನು ಸಂದರ್ಶನ ಮಾಡುತ್ತೇನೆ. ಗೆದ್ದರೆ ಜನರಿಗೆ ಏನು ಮಾಡುತ್ತಿರಿ? ನಿಮ್ಮ ಉದ್ದೇಶ ಏನು ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ನನ್ನದೆ ಆದ ಒಂದಷ್ಟು ಕನಸುಗಳು ಇವೆ. ಅವೆಲ್ಲದ್ದಕೂ ಸಾಥ್ ನೀಡುವುದಾದರೆ ಪ್ರಚಾರಕ್ಕೆ ಬರಲು ಸಿದ್ದ. ಪಕ್ಷ ಮುಖ್ಯವಲ್ಲ. ಭೂಮಿ ಮೇಲೆ ಇರುವವರೆಗೂ ಏನಾದರೂ ಸಮಾಜಕ್ಕೆ ಸಹಾಯ ಮಾಡಬೇಕೆಂಬ ಧ್ಯೇಯ ಇದೆ. ನಾಲ್ಕು ಜನರಿಗೆ ಸಹಾಯವಾಗುವುದಾದರೆ ಕೆಟ್ಟ ಮನುಷ್ಯನಾಗಲು ಸಿದ್ದ. ಅದೇ ಒಳ್ಳೆಯನಾಗಬೇಕೆಂದು ಕೆಲವರಿಗೆ ಕಷ್ಟ ಆದರೆ ಅದು ಖಂಡಿತಾ ಬೇಡ. ಸಿದ್ದಾಂತಕ್ಕೆ ಸಿಕ್ಕಿಹಾಕಿಕೊಳ್ಳುವ ವ್ಯಕ್ತಿ ನಾನಲ್ಲವೆಂದು ಕಡ್ಡು ತುಂಡು ಮಾಡಿದಂತೆ ಹೇಳುತ್ತಾರೆ ರಾಕಿಂಗ್‍ಸ್ಟಾರ್.
ಸಿನಿ ಸರ್ಕಲ್.ಇನ್ ಸಂದರ್ಶನ
-22/04/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore