HOME
CINEMA NEWS
GALLERY
TV NEWS
REVIEWS
CONTACT US
ಹೊಸ ಕಾಮಿಡಿ ಕಿಲಾಡಿಗಳ ಜಡ್ಜಸ್ ಆಗಿ ಜಗ್ಗೇಶ್,ಯೋಗರಾಜ ಭಟ್ ಹಾಗೂ ರಕ್ಷಿತಾ
ಕಿರುತೆರೆ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಸಾಕಷ್ಟು ಹೊಸಹೊಸ ಐಡಿಯಾಗಳನ್ನು ಹುಡುಕುತ್ತ ನವನವೀನ ಕಾರ್ಯಕ್ರಮಗಳನ್ನು ನೋಡುಗರಿಗೆ ತಲುಪಿಸುವಲ್ಲಿ ಜೀ ಕನ್ನಡ ವಾಹಿನಿ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ಇದರ ಫಲವಾಗಿಯೇ ವಾರಾಂತ್ಯದಲ್ಲಿ ವೀಕೆಂಡ್ ವಿತ್ ರಮೇಶ್, ಸರಿಗಮಪ, ಡ್ರಾಮಾದಂಥ ಅದ್ದೂರಿ ವೆಚ್ಚದ ರಿಯಾಲಿಟಿ ಷೋಗಳನ್ನು ನಿರ್ಮಾಣ ಮಾಡಿ ಅಭಿಮಾನಿಗಳಿಗಾಗಿ ಪ್ರಸಾರ ಮಾಡಿದೆ. ಇಂಥ ಹಲವಾರು ರಿಯಾಲಿಟಿ ಷೋಗಳ ಪಟ್ಟಿಗೆ ಇದೀಗ ಮತ್ತೊಂದು ಹೊಸ ಹಾಸ್ಯ ಕಾರ್ಯಕ್ರಮ ಇದೇ 15ರಿಂದ ಸೇರಿಕೊಳ್ಳುತ್ತಿದೆ. ಅದರರ್ಥ ಜೀ ಕನ್ನಡ ಈಗ ಮತ್ತೊಂದು ಹೊಸಪ್ರಯತ್ನಕ್ಕೆ ಕೈಹಾಕಿದೆ.

ಇಡೀವಾರ ಅದೇ ಫ್ಯಾಮಿಲಿ, ತ್ರಿಕೋನ ಪ್ರೇಮದ ಕಥೆಗಳನ್ನು ಒಳಗೊಂಡ ಧಾರಾವಾಹಿಗಳನ್ನು ನೋಡಿ ಬೇಸತ್ತ ವೀಕ್ಷಕರು ಟಿ.ವಿ. ಮುಂದೆ ಕೂತು ಒಂದು ಗಂಟೆ ಪೂರ್ತಿ ಹೊಟ್ಟೆ ಹುಣ್ಣಾಗುವಂತೆ ನಕ್ಕುಬಿಡುವಂಥ ಹೊಸ ಕಾರ್ಯಕ್ರಮವನ್ನು ವೀಕ್ಷಕರಿಗಾಗಿ ಜೀ ವಾಹಿನಿ ಹೊರತರುತ್ತಿದೆ. ಅದರ ಹೆಸರೇ ಕಾಮಿಡಿ ಕಿಲಾಡಿಗಳು. ಇಡೀ ಕುಟುಂಬ ಒಟ್ಟಾಗಿ ಕುಳಿತು ಪರಿಶುದ್ದ ಮನರಂಜನೆ ಅನುಭವಿಸುವ ನಿಟ್ಟಿನಲ್ಲಿ ಈ ರಿಯಾಲಿಟಿ ಷೋವನ್ನು ನಿರೂಪಿಸಲಾಗಿದೆ. ಈ ನಡುವೆ ಜನರನ್ನು ಸತತವಾಗಿ ನಗಿಸುವಂತಹ ಯಾವುದೇ ಕಾರ್ಯಕ್ರಮಗಳು ಕನ್ನಡ ಕಿರುತೆರೆ ವಾಹಿನಿಗಳಲ್ಲಿ ಬರುತ್ತಿಲ್ಲ, ಕಾಮಿಡಿ ಅಂತ ಹೇಳಿಕೊಂಡು ಬಂದರೂ ಭರಪೂರ್ ನಗಿಸುವುದಲ್ಲಿ ಯಶಸ್ವಿಯಾಗುತ್ತಿಲ್ಲ ಎಂಬ ಆರೋಪಕ್ಕೆ ಉತ್ತರವಾಗಿ ಕಾಮಿಡಿ ಕಿಲಾಡಿಗಳು ಬರುತ್ತಿದೆ. ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 10ರವರಗೆ ಸತತವಾಗಿ ಒಂದು ಗಂಟೆ ನೋಡುಗರನ್ನು ನಕ್ಕು ನಗಿಸುವ ಪ್ರಯತ್ನವಾಗಿ ಈ ಪ್ರೋಗ್ರಾಮ್ ಮೂಡಿಬರಲಿದೆ. ಈ ಹಿಂದೆ ಪ್ರಸಾರವಾದ ಡ್ರಾಮಾ ಜ್ಯೂನಿಯರ್ಸ್ ಮಕ್ಕಳಿಂದ ಸಿಕ್ಕಷ್ಟೇ ಮನರಂಜನೆಯನ್ನು ಈಗ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಕೊಡುವಂತಹ ಪ್ರಯತ್ನವನ್ನು ಮಾಡಲಾಗಿದೆ.

ಕಳೆದ 2 ವರ್ಷಗಳಿಂದಲೂ ಸಾಕಷ್ಟು ಪ್ರತಿಭಾವಂತರನ್ನು ಕರ್ನಾಟಕಾದ್ಯಂತ ಆಡಿಶನ್ಸ್ ಮೂಲಕ ಗುರುತಿಸಿ ಅವರಲ್ಲಿರುವ ಪ್ರತಿಭೆಯನ್ನು ಕನ್ನಡ ನಾಡಿನ ಜನತೆಗೆ ತೋರಿಸಿರುವ ಜೀ ಕನ್ನಡ ವಾಹಿನಿ ಅನೇಕ ಕಲಾವಿದರನ್ನು ಸಂಗೀತ ಕ್ಷೇತ್ರಕ್ಕೆ ಹಾಗೂ ಸಿನಿಮಾ ಕ್ಷೇತ್ರಕ್ಕೂ ಕೊಡುಗೆಯಾಗಿ ನೀಡುವಲ್ಲಿ ಮುಖ್ಯಪಾತ್ರ ವಹಿಸಿದೆ. ಒಬ್ಬ ಸಾಮಾನ್ಯ ಕಲಾವಿದನನ್ನು ಇಂದು ಸೆಲೆಬ್ರಿಟಿಯಾಗಿ ಮಾಡುವಲ್ಲಿ ಜೀ ಕನ್ನಡ ವಾಹಿನಿ ಪ್ರಮುಖಪಾತ್ರ ವಹಿಸಿದೆ. ಈಗಾಗಲೇ ಕಾಮಿಡಿ ಕಿಲಾಡಿ ಕಾರ್ಯಕ್ರಮಕ್ಕಾಗಿ ರಾಜ್ಯದ 7 ಪ್ರಮುಖ ಜಿಲ್ಲೆಗಳಲ್ಲಿ ಆಡಿಷನ್ಸ್ ನಡೆಸಿ 10ರಿಂದ 60ರ ವಯೋಮಾನದ ಸುಮಾರು 5000 ಜನರಲ್ಲಿ ಅತ್ಯುತ್ತಮವೆನಿಸಿದ 14 ಜನ ಕಾಮಿಡಿ ಕಿಲಾಡಿಗಳನ್ನು ಆಯ್ಕೆಮಾಡಿ ವೇದಿಕೆಗೆ ತರಲಾಗಿದೆ. ಈ ಹಿಂದೆ ಪ್ರಸಾರಗೊಂಡಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಕೆಲ ಪ್ರತಿಭಾವಂತರನ್ನು ಹೊರತಂದಿದ್ದರೂ, ಈಬಾರಿಯ ಕಾರ್ಯಕ್ರಮಕ್ಕೆ ಮತ್ತಷ್ಟು ಪ್ರಾಮುಖ್ಯತೆ ಕೊಟ್ಟು ಹೊಸ ರೀತಿಯಲ್ಲಿ ಮನರಂಜನೆ ನೀಡಲು ಪ್ರಯತ್ನಿಸಲಾಗುತ್ತಿದೆ. ಈ ಮೊದಲು ಡ್ರಾಮ ಕಾರ್ಯಕ್ರಮವನ್ನ ಯಶಸ್ವಿಯಾಗಿ ನಿರೂಪಣೆ ಮಾಡಿ ವೀಕ್ಷಕರ ಹೃದಯವನ್ನು ಗೆದ್ದಿದ್ದ ಮಾಸ್ಟರ್ ಆನಂದ್ ಇದೀಗ ಮತ್ತೊಮ್ಮೆ ಕಾಮಿಡಿ ಕಿಲಾಡಿಗಳು ಶೋನ ನಿರೂಪಕರಾಗಿ ಬರಲಿದ್ದಾರೆ.

ಇದೆಲ್ಲಕ್ಕಿಂತ ಪ್ರಮುಖವಾದ ಸಂಗತಿಯೆಂದರೆ ಸ್ಯಾಂಡಲ್‍ವುಡ್‍ಲ್ಲಿ ಹಾಸ್ಯ ಎಂಬ ಪದಕ್ಕೆ ಹೊಸ ಅರ್ಥವನ್ನು ಕೊಟ್ಟಂತಹ ಕಲಾವಿದ, ನವರಸ ನಾಯಕ ಜಗ್ಗೇಶ್ ಅವರು ಈ ರಿಯಾಲಿಟಿ ಷೋನ ಜಡ್ಜ್ ಆಗಿ ಬರುತ್ತಿರುವುದು. ಇವರ ಜೊತೆಗೆ ಸ್ಟಾರ್ ಡೈರೆಕ್ಟರ್ ಎನಿಸಿಕೊಂಡ ಯೋಗರಾಜ್ ಭಟ್ಟರು, ತನ್ನ ಮಾತಿನಿಂದಲೇ ಕೇಳುಗರನ್ನು ಆಕರ್ಷಿಸುವ ಗುಣ ಹೊಂದಿರುವಂತಹ ನಟಿ ರಕ್ಷಿತಾ ಪ್ರೇಮ್ ಕೂಡ ಈ ಕಾಮಿಡಿ ಕಿಲಾಡಿಗಳ ನಿರ್ಣಾಯಕರಾಗಿ ಜಡ್ಜಸ್ ಸೀಟನ್ನು ಅಲಂಕರಿಸಲಿದ್ದಾರೆ. ಇದೇ ಅಕ್ಟೋಬರ್ 15ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಘಂಟೆಗೆ ಕಾಮಿಡಿ ಕಿಲಾಡಿಗಳು ಎಲ್ಲರನ್ನೂ ನಗಿಸಲು ಬರುತ್ತಿದ್ದಾರೆ.

-12/10/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\