HOME
CINEMA NEWS
GALLERY
TV NEWS
REVIEWS
CONTACT US
ಉದಯ ಟಿವಿಯಲ್ಲಿ ಹೊಸ ಧಾರಾವಾಹಿ "ಜೈ ಹನುಮಾನ"ಅಕ್ಟೋಬರ್ 8ರಿಂದ ರಾತ್ರಿ 7.30ಕ್ಕೆ
ಮನರಂಜನಾ ಕ್ಷೇತ್ರದ ಬದಲಾದ ಸನ್ನಿವೇಶದಲ್ಲಿ ಕಿರುತೆರೆಯೂ ಹಿರಿತೆರೆಯಷ್ಟು ಶ್ರೀಮಂತವಾಗಿದೆ. ವಿನೂತನ ಕಥೆ, ನಿರೂಪಣೆಗಳ ಜತೆಗೆ ಅದ್ಧೂರಿ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿ ಕನ್ನಡ ಮನರಂಜನಾ ವಾಹಿನಿಗಳ ಹಿರಿಯಣ್ಣ ಉದಯ ಟಿವಿ ‘ಜೈ ಹನುಮಾನ್’ ಎಂಬ ಅದ್ಧೂರಿ ಧಾರಾವಾಹಿಯನ್ನು ಕನ್ನಡದ ವೀಕ್ಷಕರಿಗೆ ನೀಡÀಲು ಸಿದ್ಧತೆ ನಡೆಸಿದೆ.

ಅಕ್ಟೋಬರ್ 8 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀ ದಿನ ರಾತ್ರಿ 7.30ಕ್ಕೆ ಜೈ ಹನುಮಾನ್ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋಗಳು ಪ್ರೇಕ್ಷಕರ ಮನಸೂರೆಗೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ಹವಾ ಸೃಷ್ಟಿಸಿದೆ. ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುವಂಥ ಕಥೆ, ನಿರೂಪಣೆ ಹಾಗೂ ಕಣ್ಮನ ಸೆಳೆಯುವ ನಿರ್ಮಾಣ ಈ ಧಾರಾವಾಹಿಯ ವಿಶೇಷವಾಗಿದೆ.

ಮುಂಬೈ ಮೂಲದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕಾಂಟಿಲೋ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಐವತ್ತಕ್ಕೂ ಹೆಚ್ಚಿನ ಸಂಚಿಕೆಗಳ ಚಿತ್ರೀಕರಣ ಪೂರೈಸಿದ್ದು, ಪ್ರತೀ ಪ್ರೇಂನಲ್ಲೂ ಸಿನಿಮಾದ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ರೋಚಕ ಸನ್ನಿವೇಷಗಳನ್ನು ಹೆಣೆಯಲಾಗಿದ್ದು ಬಿಗಿಯಾದ ಚಿತ್ರಕಥೆ ಹಾಗೂ ಸತ್ವಯುತ ಸಂಭಾಷಣೆಳು ಈ ಧಾರಾವಾಹಿಯ ಇನ್ನಷ್ಟು ವಿಶೇಷಗಳಾಗಿವೆ ಎನ್ನುತ್ತಾರೆ ನಿರ್ಮಾಣ ಸಂಸ್ಥೆಯವರು.

ಹದಿನಾಲ್ಕು ಲೋಕಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು, ಅಜರಾಮರನಾಗುವ ವರ ಪಡೆದುಕೊಂಡಿದ್ದ ರಾವಣ ತನ್ನ ಅಧಿಕಾರ ಲಾಲಸೆಯಿಂದ ಇತರ ಜೀವಿಗಳ ಮೇಲೆ ಕ್ರೌರ್ಯ ಎಸಗುತ್ತಿದ್ದ. ಅವನನ್ನು ಸದೆಬಡಿಯಲು ಹನುಮಂತ ಜನ್ಮ ತಳೆಯುತ್ತಾನೆ. ಅವನ ಹುಟ್ಟಿನ ಹಿನ್ನೆಲೆ. ಮುಂದೆ ಸಾಗುವ ದಾರಿ, ಆತ ಹೇಗೆ ರಾಮನನ್ನು ಸಂಧಿಸುತ್ತಾನೆ? ರಾವಣನ ಸಂಹಾರಕ್ಕೆ ಹೇಗೆ ಸಾಥ್ ನೀಡುತ್ತಾನೆ ಇತ್ಯಾದಿ ಕುತೂಹಲಗಳಿಗೆ ಉತ್ತರ ನೀಡುತ್ತದೆ ಜೈ ಹನುಮಾನ್.

ಅದ್ಧೂರಿ ಸೆಟ್ ಜತೆಗೆ ಪೂರಕವಾದ ಗ್ರಾಫಿಕ್ಸ್‍ಗಳು ಗತವೈಭವವನ್ನು ಮತ್ತೆ ತೆರೆಯ ಮೇಲೆ ತಂದರೆ, ಕಲಾವಿದರ ಪ್ರೌಢ ನಟನೆ ಇಡೀ ಧಾರಾವಾಹಿಯನ್ನು ಮತ್ತೊಂದು ಎತ್ತರಕ್ಕೇ ಕೊಂಡೊಯುತ್ತದೆ. ಅದರಲ್ಲೂ ಇಲ್ಲಿನ ವೇಷ ಭೂಷಣಗಳು, ಚಿತ್ರ ವಿಚಿತ್ರ ಹೆಸರುಗಳು ಎಲ್ಲ ವರ್ಗಗಳ ವೀಕ್ಷಕರನ್ನೂ, ಮಕ್ಕಳನ್ನೂ ಹಿಡಿದಿಟ್ಟುಕೊಳ್ಳುತ್ತವೆ ಎನ್ನುತ್ತಾರೆ ನಿರ್ದೇಶಕ ವಾಸು.

ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿರುವವರು ಖ್ಯಾತ ನಿರ್ದೇಶಕ ಬುಕ್ಕಾಪಟ್ಟಣ ವಾಸು. ಕಿರುತೆರೆಯ ನುರಿತ ನರ್ದೇಶಕ, ಬರಹಗಾರ ಬ. ಲ. ಸುರೇಶ್ ‘ಜೈ ಹನುಮಾನ್’ ಗೆ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕಥೆ ನೀರಜ್ ಮತ್ತು ತಂಡ ಮಾಡುತ್ತಿದ್ದರೆ, ನಿಷಿನ್ ಚಂದ್ರ ಡಿಓಪಿ ಆಗಿದ್ದಾರೆ. ಸಂತೋಷ್ ಸಂಕಲನದ ಜವಾಬ್ಧಾರಿ ಹೊತ್ತಿದ್ದಾರೆ. ಕಾಂಟಿಲೋ ಪ್ರೊಡಕ್ಷನ್ಸ್‍ನ ಮುಖ್ಯಸ್ಥ ಅಭಿಮನ್ಯು ಸಿಂಗ್ ಜತೆ ಯಶಸ್ವಿ ಹಿಂದಿ ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಹಿಮಾನಿ, ಗೌತಮ್, ಮನಿಷ್ ಪೋಪಟ್ ಮುಂತಾದವರ ತಂಡ ಇದೆ.

ತಾರಾಗಣದಲ್ಲಿ ಬಾಲಕ ಹನುಮಾನ್ ಪಾತ್ರವನ್ನು ಪ್ರದ್ಯುಮ್ನ ನಿರ್ವಹಿಸುತ್ತಿದ್ದಾನೆ. ಅಂಜನಾ ಪಾತ್ರವನ್ನು ಪ್ರಿಯಾಂಕಾ ಚಿಂಚೋಳಿ, ಕೇಸರಿಯಾಗಿ ಪ್ರಸನ್ನ, ಶಿವನಾಗಿ ಮಧು, ರಾವಣನಾಗಿ ವಿನಯ್ ಗೌಡ, ಕೈಕಸಿಯಾಗಿ ರಂಜಿತಾ ಸೂರ್ಯವಂಶಿ, ಪಾರ್ವತಿಯಾಗಿ ನಾಗಶ್ರಿ ವೀಕ್ಷಕರನ್ನು ರಂಜಿಸಲಿದ್ದಾರೆ.

ದುಷ್ಟರ ಸಂಹಾರಕ್ಕಾಗಿ ಅವತರಿಸಿದ “ಜೈ ಹನುಮಾನ” ಇದೇ ಅಕ್ಟೋಬರ್ 8ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
4/10/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore