HOME
CINEMA NEWS
GALLERY
TV NEWS
REVIEWS
CONTACT US
ಮಹಿಳಾ ಸಬಲೀಕರಣಕ್ಕೆ ಸ್ಪೂರ್ತಿ ರಾಮಕ್ಕ
ಪ್ರಸಕ್ತ ಸಂವಿಧಾನದಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡಿದೆ. ಆದರೆ ಪುರುಷ ಪ್ರಧಾನ ಪ್ರಪಂಚದಲ್ಲಿ ಇದು ಸಾದ್ಯನಾ ಅಂತ ಪ್ರಶ್ನೆ ಮಾಡಿದರೆ ಉತ್ತರ ‘ಹೆಬ್ಬೆಟ್ ರಾಮಕ್ಕ’ ಚಿತ್ರದ ಕಡೆ ತೋರಿಸಬಹುದು. ಇದರಿಂದಾಗಿಯೇ ಅತ್ಯುತ್ತಮ ಕನ್ನಡ ಚಿತ್ರವಂದು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಕತೆಯಲ್ಲಿ ರಾಮಕ್ಕ ಅನಕ್ಷರಸ್ತೆ. ಸಂಸಾರವನ್ನು ನೋಡಿಕೊಳ್ಳುವ ಜೊತೆಗೆ ಹೊಲದಲ್ಲಿ ಕೆಲಸ ಮಾಡುತ್ತಾ ಅಕ್ಕಪಕ್ಕದ ಜನರಲ್ಲಿ ಉತ್ತಮ ಬಾಂದವ್ಯವನ್ನು ಹೊಂದಿರುತ್ತಾಳೆ. ಪತಿ ಕಲ್ಲೇಶ್ ಸಣ್ಣ ಪ್ರಮಾಣದ ಕಂಟ್ರಾಕ್ಟ್ ಮಾಡುತ್ತಾ ಬಿಲ್ ಬಂದ ಹಣದಲ್ಲಿ ಜೀವನ ನಡೆಸುತ್ತಾ, ಸ್ಥಳೀಯ ರಾಜಕೀಯ ಮುಖಂಡರ ಸಂಪರ್ಕವನ್ನು ಹೊಂದಿರುತ್ತಾರೆ. ಮಾಜಿ ಜಿಲ್ಲಾ ಅಧ್ಯಕ್ಷರಿಗೆ ಸೀಟು ಸಿಗಬಾರದೆಂದು ಕ್ಷೇತ್ರವನ್ನು ಮಹಿಳೆಗೆ ಮೀಸಲು ಮಾಡಿಸಲು ಶಾಸಕ ಯಶಸ್ವಿಯಾಗಿರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಅಳಕ್ ಪುಳುಕ್ ಎನ್ನುವಂತೆ ರಾಮಕ್ಕನಿಗೆ ಸೀಟು ಸಿಗುವುದಲ್ಲದೆ ಗೆದ್ದು ಬರುತ್ತಾರೆ. ಪಕ್ಷದ ಕಚೇರಿಯಲ್ಲಿ ಪಂಚಾಯತ್ ಅಧ್ಯಕ್ಷಗಿರಿ ಯಾರಿಗೆ ನೀಡಬೇಕೆಂದು ಚರ್ಚೆ ಸಂದರ್ಭದಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ಅಧ್ಯಕ್ಷಗಾಧಿ ರಾಮಕ್ಕನಿಗೆ ಸಿಗುತ್ತದೆ. ಪತ್ನಿಯ ಅಧಿಕಾರವನ್ನು ಬಳಿಸಿಕೊಂಡ ಪತಿ ಸೂಕ್ಷ ಕಡತಗಳಿಗೆ ಹೆಬ್ಬೆಟ್ ಹಾಕಿಸಿಕೊಂಡು ಭ್ರಷ್ಟಚಾರಕ್ಕೆ ಇಳಿಯುತ್ತಾನೆ. ಒಂದು ಹಂತದಲ್ಲಿ ಈಕೆಗೆ ಅರಿವಾಗಿ ತಥ್ಯ ತಿಳಿದುಕೊಂಡು, ಶಿಕ್ಷಣ ಕಲಿತು, ಆಡಳಿತವನ್ನು ಹತೋಟಿ ತಂದು ಮುಂದೆ ಯಾವ ಸ್ಥಾನಕ್ಕೆ ಬರುತ್ತಾಳೆ ಎಂಬುದು ಸಿನಿಮಾ ನೋಡಿದಾಗ ತಿಳಿಯುತ್ತದೆ.

ರಾಮಕ್ಕನಾಗಿ ತಾರಾ ಅಭಿನಯ ಇಡೀ ಚಿತ್ರದ ಹೈಲೈಟ್ ಆಗಿದೆ. ಪ್ರಾರಂಭದಲ್ಲಿ ಮುಗ್ದೆಯಾಗಿ ಹೈಸ್ಕೂಲ್ ಓದುತ್ತಿರುವ ಮಕ್ಕಳ ಲಾಲನೆ ಮಾಡುವದರ ಜೊತೆಗೆ ಹೊಲದ ಕೆಲಸ, ನಂತರ ಅಧಿಕಾರ ಸಿಕ್ಕಾಗ ಊರಿನ ಅಭಿವೃದ್ದಿಗೆ ತೆಗೆದುಕೊಳ್ಳುವ ತೀರ್ಮಾನ. ಇಂತಹ ಸನ್ನಿವೇಶದಲ್ಲ ಲೀಲಜಾಲವಾಗಿ ಅಭಿನಯಿಸಿದಕ್ಕಿಂತ ಅನುಭವಿಸಿದ್ದಾರೆ ಎನ್ನಬಹುದು. ಇವರಿಗೆ ಸರಿಸಾಟಿಯಾಗಿ ದೇವರಾಜ್ (ಕಲ್ಲೇಶ್) ಮಿಂಚಿದ್ದಾರೆ. ಭ್ರಷ್ಟ ಶಾಸಕನಾಗಿ ಹನುಮಂತೇಗೌಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಿರಿಯ ಸಾಹಿತಿ ಮತ್ತು ಹಾಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ಅರ್ಥಪೂರ್ಣ ಒಂದು ಗೀತೆ ಮತ್ತು ತುಮಕೂರು, ಚಿತ್ರದುರ್ಗ ಭಾಷೆಯ ಸಂಭಾಷಣೆ ಕಚಗುಳಿ ಇಡುತ್ತದೆ. ಜೊತೆಗೆ ಚಿತ್ರರಂಗಕ್ಕೆ ಮತ್ತೋಬ್ಬ ಸಾಹಿತಿ ಪ್ರವೇಶ ಮಾಡಿದಂತಾಗಿದೆ. ಪೂರ್ಣಚಂದ್ರತೇಜಸ್ವಿ ಸಂಗೀತ ಕತೆಗೆ ಪೂರಕವಾಗಿದೆ. ಸೃಜನಶೀಲ ಚಿತ್ರಗಳ ನಿರ್ದೇಶಕರೆಂದು ಖ್ಯಾತಿ ಗಳಿಸಿರುವ ಎನ್.ಆರ್.ನಂಜುಂಡೇಗೌಡ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿ ಅದೇ ಛಾಪನ್ನು ಉಳಿಸಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲೆ ಎಸ್.ಎ.ಸುಬ್ಬರಾಜು, ಶ್ರೀಮತಿ ಕವಿತಾರಾಜ್ ಅತ್ಯತ್ತಮ ಚಿತ್ರಕ್ಕೆ ಹಣ ಹೂಡಿರುವುದು ಹೆಮ್ಮೆಯ ವಿಷಯವಾಗಿದೆ.
ಸಿನಿ ಸರ್ಕಲ್.ಇನ್ ವಿಮರ್ಶೆ
24/04/18
ಜನರ ಎದುರು ರಾಷ್ಟ್ರ ಪ್ರಶಸ್ತಿ ಚಿತ್ರ
‘ಹೆಬ್ಬೆಟ್ ರಾಮಕ್ಕ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದು, ಶುಕ್ರವಾರದಂದು ತೆರೆ ಕಾಣಲಿರುವುದರಿಂದ ವಿಷಯವನ್ನು ತಿಳಿಸಲು ಮಾದ್ಯಮದವರನ್ನು ಆಹ್ವಾನಿಸಲಾಗಿತ್ತು. ಶೀರ್ಷಿಕೆ ಹೆಸರಿನಲ್ಲಿ ಕಾಣಿಸಿಕೊಂಡಿರುವ ತಾರ ಮಾತನಾಡಿ ಪಾತ್ರ ಮಾಡಿರುವುದು ಖುಷಿ ತಂದಿದೆ. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಜಾಗೃತಿ ಮೂಡಿಸಲಿದೆ. ಅದರಲ್ಲೂ ಪ್ರಸಕ್ತ ಚುನಾವಣೆ ಸಮೀಪ ಬರುತ್ತಿದ್ದು, ಸಿನಿಮಾವು ಹೇಳಿಮಾಡಿಸಿದಂತಿದೆ. ರಾಜಕೀಯ, ಅಧಿಕಾರ, ಹೇಗೆ ದುರಪಯೋಗವಾಗುತ್ತದೆ ಎಂಬುದನ್ನು ಹೇಳಲಾಗಿದೆ. ಪ್ರಶಸ್ತಿ ಚಿತ್ರದಲ್ಲಿ ಭಾಗಿಯಾಗಿರುವುದು ಹೆಮ್ಮೆ ಅನಿಸುತ್ತದೆ. ಎಲ್ಲೆ ಹೋದರೂ ಇದೇ ಹಸರಿನಿಂದ ಕತೆಯುತ್ತಾರೆಂದು ನಕ್ಕರು.

ಸಿನಿಮಾ ಪ್ರಪಂಚಕ್ಕೆ ಬರುವಂತೆ ಮಾಡಿದ್ದು ನಿರ್ದೇಶಕರು. ಅವರು ಚಿತ್ರಕ್ಕೆ ಸಂಭಾಷಣೆ, ಸಾಹಿತ್ಯ ಬರೆಯಲು ಅವಕಾಶ ಮಾಡಿಕೊಟ್ಟಂತೆ ಇದನ್ನು ಮುಗಿಸಲು 6 ತಿಂಗಳು ಸಮಯ ತೆಗೆದುಕೊಳ್ಳಲಾಗಿದೆ. ಆದರೆ ವಸ್ತು ದೃಶ್ಯಗಳನ್ನು ಸಿದ್ದಪಡಿಸಲು ನಿರ್ದೇಶಕರು ಮಹಿಳಾ ಅಧ್ಯಕ್ಷರನ್ನು ಭೇಟಿ, ಮಾಹಿತಿಗಳನ್ನು ಕಲೆ ಹಾಕಿ ರೂಪ ಕೊಡುವಲ್ಲಿಗೆ ಎರಡು ವರ್ಷ ಕಳೆದಿದೆ. ತಾರಾ ಅವರು ಅಭಿನಯಿಸಿದ್ದಕ್ಕಿಂತ ಅನುಭವಿಸಿದ್ದಾರೆ. ಮುಖ್ಯ ಮಂತ್ರಿಗಳು ಅವರನ್ನು ಇದೇ ಹೆಸರಿನಿಂದ ಕರೆಯುತ್ತಾರೆ. ಚಿತ್ರದುರ್ಗ, ತುಮಕೂರು ಭಾಗದ ಭಾಷೆಯನ್ನು ಬಳಸಲಾಗಿದೆ. ಪಾತ್ರಗಳು ಸಂಭಾಷಣೆಗಳಿಂದ ಸೃಷ್ಟಿಸಿದೆ. ಬರೆಯುವಾಗ ಸೃಜನಾತ್ಮಕವಾಗಿ ಉಲ್ಲಾಸ ನೀಡಿತು. ಪ್ರಸ್ತುತ ರಾಜಕಾರಣ, ಚುನಾವಣೆ, ಮಹಿಳಾ ಅಧಿಕಾರ ಇವೆಲ್ಲವು ಬರಲಿದೆ. ಕಥಾ ವಸ್ತು ಮಹಿಳಾ ಕೇಂದ್ರವಾಗಿದ್ದರಿಂದ ಪರಭಾಷಿಗರು ನೋಡಲಿ. ಪ್ರಶಸ್ತಿ ಬಂದ ಸಂದರ್ಭದಲ್ಲಿ ಕೇಂದ್ರ ಸಚಿವರು ಚಿತ್ರವನ್ನು ಬೇರೆ ಭಾಷೆಗೆ ತರ್ಜುಮೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆಂದು ಮಾಹಿತಿ ಒದಗಿಸಿದರು ಕನ್ನಡ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೋ.ಎಸ್.ಜಿ.ಸಿದ್ದರಾಮಯ್ಯ.

ನಟನೆ, ಸಾಹಿತ್ಯಕ್ಕೆ ಪ್ರಶಸ್ತಿ ಬರಬೇಕಿತ್ತು. ಕಲಾತ್ಮಕ ಚಿತ್ರವಾಗದೆ ಕಮರ್ಷಿಯಲ್ ಸಿನಿಮಾದಂತೆ ತಾರಾ ನಟನೆ ಅದ್ಬುತ ಅಂತ ಬಣ್ಣನೆ ಮಾಡಿದರು ಸಂಗೀತ ನಿರ್ದೇಶಕ ಪೂರ್ಣಚಂದ್ರತೇಜಸ್ವಿ.

ತಂಡ ಇದ್ದರೆ ಮಾತ್ರ ಕ್ಯಾಪ್ಟನ್ ಇರಲು ಸಾದ್ಯ. ಕೆಲವು ಸಲ ನಿರೀಕ್ಷೆ ಮಾಡಿದ ಚಿತ್ರಕ್ಕೆ ಪ್ರಶಸ್ತಿ ಬರೋಲ್ಲ. ಆದರೆ ಈ ಸಿನಿಮಾಕ್ಕೆ 2-3 ಬರಬಹುದು ಅಂತ ಅಂದಾಜಿಸಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದರೂ, ಜನರಿಗೆ ತಲುಪಿಸುವ ಜವಬ್ದಾರಿ ಮಾಧ್ಯಮದವರಾಗಿರುತ್ತದೆ. ತಾಲ್ಲೊಕು, ಜಿಲ್ಲಾ ಪಂಚಾಯತ್‍ನಲ್ಲಿ ಮಹಿಳೆಯರಿಗೆ ಮೀಸಲಾತಿ ಎಂದು ಹೇಳಿಕೊಂಡಿದೆ. ಆದರೆ ಅವರಿಗೆ ಪ್ರಾಶಸ್ತ್ಯ ಕೊಡದೆ ಎಲ್ಲವನ್ನು ಪುರುಷರು ನೋಡಿಕೊಳ್ಳುತ್ತಾರೆ. ಇದರಿಂದ ಮಹಿಳೆಗೆ ಪ್ರಾತಿನಿದ್ಯ ಸಿಕ್ಕಂತೆ ಆಗುವುದಿಲ್ಲ. ಇಂತಹ ಹಲವು ಅಂಶಗಳನ್ನು ಹೆಕ್ಕಿಕೊಂಡು ಮಹಿಳೆಯರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಎನ್.ಆರ್.ನಂಜುಂಡೇಗೌಡ ಹೇಳಿದರು.

ನಿರ್ಮಾಪಕರಾದ ಎಸ್.ಎ.ಪುಟ್ಟರಾಜು ಮತ್ತು ಶ್ರೀಮತಿ ಕವಿತಾರಾಜ್, ಸಂಕಲನಕಾರ ಬಸವರಾಜಅರಸು ಉಪಸ್ತಿತರಿದ್ದರು. ಸುಮಾರು 60 ಕೇಂದ್ರಗಳಲ್ಲಿ ರಾಮಕ್ಕನ ಸಾಧನೆಯನ್ನು ನೋಡಬಹುದು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
24/04/18
ರಾಷ್ರ್ಟೀಯ ಚಲನಚಿತ್ರ ಪ್ರಶಸ್ತಿ ಚಂದನವನಕ್ಕೆ ಎರಡು ಗರಿ
65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2017-18ನೇ ಸಾಲಿನಲ್ಲಿ ಸ್ಯಾಂಡಲ್‍ವುಡ್‍ಗೆ ಎರಡು ಪ್ರಶಸ್ತಿಗಳು ಭಾಜನವಾಗಿದೆ. ಎನ್.ಆರ್.ನಂಜುಂಡೇಗೌಡ ನಿರ್ದೇಶನದ ಮಹಿಳಾ ಮೀಸಲಾತಿ ಕುರಿತ ಕತೆಯಾದ ‘ಹೆಬ್ಬಟ್ ರಾಮಕ್ಕ’ ಅತ್ಯತ್ತಮ ಪ್ರಾದೇಶಿಕ ಕನ್ನಡ ಚಿತ್ರ ಮತ್ತು ಕತೆಗಾರ ಜಿ.ಎಂ.ಪ್ರಹ್ಲಾದ್ ಅವರು ಮಾರ್ಚ್ 22 ಚಿತ್ರಕ್ಕಾಗಿ ರಚಿಸಿದ ‘ಮುತ್ತ ರತ್ನದ ಪ್ಯಾಟೆ’ ಎನ್ನುವ ಗೀತೆಗೆ ಅತ್ಯತ್ತಮ ಗೀತರಚನೆಕಾರ ಪ್ರಶಸ್ತಿ ಲಭಿಸಿದೆ. ಉಳಿದಂತೆ ಕರ್ನಾಟದಲ್ಲಿರುವ ತುಳು ಭಾಷೆಯ ಅಭಯಸಿಂಹ ನಿರ್ದೇಶನದ ಪಡ್ಡಾಯಿ ಚಿತ್ರವು ಪ್ರಾದೇಶಿಕ ಚಿತ್ರವೆಂದು ಅರ್ಹತೆ ಹೊಂದಿದೆ. ಜೀವಮಾನದ ಸಾಧನೆಗಾಗಿ ಕೊಡುವ ದಾದಾ ಫಾಲ್ಕೆ ಪ್ರಶಸ್ತಿಯು ಹಿರಿಯ ನಟ ದಿ.ವಿನೋಧ್‍ಖನ್ನಾ, ಮಾಮ್ ಚಿತ್ರಕ್ಕಾಗಿ ಅತ್ತುತ್ತಮ ನಟಯೆಂದು ದಿವಂಗತ ಶ್ರೀದೇವಿ, ಹಾಗೆಯೇ ಅತ್ಯತ್ತಮ ಸಂಗೀತ ನಿರ್ದೇಶನ ಮತ್ತು ಹಿನ್ನಲೆ ಸಂಗೀತವೆಂದು ಎರಡು ಚಿತ್ರಗಳಿಗೆ ಪ್ರಶಸ್ತಿಯು ಎ.ಆರ್.ರೆಹಮಾನ್ ಪಾಲಾಗಿದೆ. ರಾಜಮೌಳಿ ಸಾರಥ್ಯದ ಬಾಹುಬಲಿ ಮೊದಲ ಭಾಗ ಅತ್ಯತ್ತಮ ಮನರಂಜನೆ ಚಿತ್ರವೆಂದು ಪ್ರಶಸ್ತಿ ಗಳಿಸಿದ್ದು, ಈಗ ಎರಡನೆ ಭಾಗಕ್ಕೂ ಅದೇ ರೀತಿಯ ಪ್ರಶಸ್ತಿ ಧಕ್ಕಿರುವುದು ವಿಶೇಷವಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
14/04/18
ಗಣ್ಯರಿಂದ ಹೆಬ್ಬೆಟ್ ರಾಮಕ್ಕನಿಗೆ ಪ್ರಶಂಸೆ
ಬಿಡುಗಡೆ ಮುಂದೆ ‘ಹೆಬ್ಬೆಟ್ ರಾಮಕ್ಕ’ ಚಿತ್ರವು ಸುದ್ದಿಯಾಗಿರುವುದಕ್ಕೆ ಗಣ್ಯಾತಿ ಗಣ್ಯರುಗಳು ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಾಕ್ಷಿಯಾಗಿತ್ತು. ಸಿಡಿ ಬಿಡುಗಡೆ ಮಾಡಿದ ಪುನೀತ್‍ರಾಜ್‍ಕುಮಾರ್ ನಿರ್ಮಾಪಕರ ಮನೆಯಲ್ಲಿ ಅಂಜನಿಪುತ್ರ ಚಿತ್ರೀಕರಣ ನಡೆಸುವಾಗ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದರು. ಅದೇ ರೀತಿ ಒಳ್ಳೆ ಸಿನಿಮಾ ಮಾಡಿದ್ದಾರೆ. ಉತ್ತಮ, ಸಂದೇಶ ಇರುವುದರಿಂದ ಎಲ್ಲರಿಗೂ ತಲುಪಲಿ ಅಂತ ಶುಭ ಹಾರೈಸಿ ತುರ್ತು ಕೆಲಸವಿರುವುದರಿಂದ ನಿರ್ಗಮಿಸಿದರು. ರಾಜಕೀಯ ಕುರುಕ್ಷೇತ್ರದಲ್ಲಿ ಬ್ಯುಸಿ ಇದ್ದ ನಾನು ಹೆಬ್ಬೆಟ್‍ರಾಮಕ್ಕ ಕಲಾಕ್ಷೇತ್ರಕ್ಕೆ ಬಂದಿರುವುದು ಖುಷಿಯಾಗಿದೆ. ಈಗ ಬರುತ್ತಿರುವ ಶೀರ್ಷಿಕೆಗಳನ್ನು ನೋಡಿದರೆ ಚಿತ್ರಮಂದಿರಕ್ಕೆ ಹೋಗಲು ಮನಸ್ಸು ಬರುವುದಿಲ್ಲ. ಸಧಭಿರುಚಿಯ ಚಿತ್ರ ಬಂದಲ್ಲಿ ಜನರಿಗೆ ಆಸಕ್ತಿ ಬರುತ್ತದೆ. ಆ ಸಾಲಿಗೆ ರಾಮಕ್ಕೆ ಸೇರಲಿದೆ ಅಂತ ಭಾವಿಸಲಾಗಿದೆ. ಡಾ.ರಾಜ್‍ಕುಮಾರ್ ಅವರು ಚಿತ್ರರಂಗವನ್ನು ವೃತ್ತಿ, ತಪ್ಪಸ್ಸಿನಂತೆ ನಡೆಸಿಕೊಂಡಿದ್ದರಿಂದ ಒಳ್ಳೆ ಚಿತ್ರಗಳು ಬಿಡುಗಡೆಯಾಗಿದ್ದವು. ಅವರ ನಾಡು ನುಡಿ ವಿಚಾರ, ಮಾದರಿಯಂತೆ ಈ ಚಿತ್ರ ಸೇರಲಿದೆ. ಅವರಂತೆ ಪುನೀತ್ 200 ಚಿತ್ರಗಳಲ್ಲಿ ನಟಿಸಿ ಅಂತ ಕೇಳಿಕೊಳ್ಳಲಾಗಿದೆ. ಚಿತ್ರರಂಗಕ್ಕೆ ಯಾವುದೇ ಕೆಲಸ ಕೇಂದ್ರದಲ್ಲಿ ಆಗಬೇಕಾಗಿದ್ದಲ್ಲಿ ಮುತುವರ್ಜಿ ವಹಿಸಿ ನಡೆಸಿಕೊಡುತ್ತೆನೆಂದು ಭರವಸೆ ನೀಡಿದರು ಕೇಂದ್ರ ಸಚಿವ ಅನಂತ್‍ಕುಮಾರ್.

ಇವರ ಮಾತುಗಳಿಗೆ ಸಾರಾಗೋವಿಂದು ಡಬ್ಬಿಂಗ್, ಗೂಂಡಾಕಾಯ್ದ್ದೆ ಎರಡಕ್ಕೂ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಲು ಕ್ರಮ ವಹಿಸಬೇಕೆಂದು ಕೋರಿಕೊಂಡರು. ಮೊದಲ ಬಾರಿ ಸಂಭಾಷಣೆ,ಸಾಹಿತ್ಯ ಬರೆದಿರುವ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ ಜಿಲ್ಲಾ, ತಾಲ್ಲೊಕುಗಳಲ್ಲಿ ಅನಕ್ಷರಸ್ತ ಮಹಿಳೆಯು ಅಧಿಕಾರದಲ್ಲಿದ್ದಾಗ ಯಾವ ರೀತಿ ಇರುತ್ತಾರೆಂದು ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಿಂದ ಮಾಹಿತಿ ಪಡೆದು ಸಂಭಾಷಣೆ ಬರೆಯಲಾಗಿದೆ ಚಿಕ್ಕನಾಯಕನಹಳ್ಳಿ, ಹೊಸದುರ್ಗ ನಡುವ ಇರುವ ಸ್ಥಳದ ಭಾಷೆಯನ್ನು ಬಳಸಲಾಗಿದೆ ಎಂದರು. ಅಕಾಡಮಿ ಅಧ್ಯಕ್ಷ ರಾಜೇಂದ್ರಸಿಂಗ್‍ಬಾಬು ಕನ್ನಡದಲ್ಲಿ ಕತೆಗಳಿಗೆ ಬರವಿಲ್ಲ. ಸದ್ಯ ಹಾಲಿವುಡ್ ಚಿತ್ರರಂಗವು ಕನ್ನಡದ ಕಾದಂಬರಿ ಹಕ್ಕುಗಳನ್ನು ಪಡೆದು ಚಿತ್ರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವುದು ಸ್ವಾಗರ್ತಾಹವಾಗಿದೆ. ತಾರಾ ಅವರಿಗೆ ರಾಷ್ಟಪ್ರಶಸ್ತಿ ದಕ್ಕುವುದು ಖಚಿತವೆಂದು ಭವಿಷ್ಯ ನುಡಿದರು. ಹಿರಿಯ ನಿರ್ದೇಶಕ ಭಗವನ್ ತಾರ ಅವರಿಗೆ ಮಾತ್ರವಲ್ಲದೆ ಸಿನಿಮಾಕ್ಕೆ ಸ್ವರ್ಣಕಮಲ ಪ್ರಶಸ್ತಿ ಸಿಗಲೆಂದು ಹಾರೈಸಿದರು. ಸಂಭಾವನೆ ತೆಗೆದುಕೊಂಡು ನಟಿಸಿದ್ದೇನೆ. ಇಂತಹ ಪಾತ್ರ ಒದಗಿ ಬಂದಿರುವುದು ದೇವರು ಕೊಟ್ಟ ಕೃಪೆ ಎನ್ನಬಹುದು ಎಂಬುದು ತಾರಾ ನುಡಿ. ನಾಯಕ ದೇವರಾಜ್ ಪೋಸ್ಟರ್‍ನಲ್ಲಿ ಕಾಣ ಸಿಕೊಂಡರೆ, ನಿರ್ಮಾಪಕ ಎಸ್.ಎ.ಪುಟ್ಟರಾಜ್-ಕವಿತಾರಾಜ್ ಮತ್ತು ಕತೆ,ಚಿತ್ರಕತೆ ನಿರ್ದೇಶನ ಮಾಡಿರುವ ಎನ್.ಆರ್.ನಂಜುಂಡೇಗೌಡ ಶಿಷ್ಟಚಾರದಲ್ಲಿ ಬ್ಯುಸಿ ಇರುವ ಕಾರಣ ಮೈಕ್ ತೆಗೆದುಕೊಳ್ಳಲಿಲ್ಲ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-13/02/18


ಹೆಬ್ಬೆಟ್ ರಾಮಕ್ಕನ ಅವತಾರದಲ್ಲಿ ತಾರ
ರಾಷ್ಟ್ರ ಪ್ರಶಸ್ತಿ ವಿಜೇತೆ ತಾರಾ ನಟಿಸುತ್ತಿರುವ ‘ಹೆಬ್ಬೆಟ್ ರಾಮಕ್ಕ’ ಚಿತ್ರದ ಮಹೂರ್ತಕ್ಕೆ ಮುಖ್ಯ ಮಂತ್ರಿಗಳು ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭಹಾರೈಸಿದರು. ಅವರು ಮಾತನಾಡುತ್ತಾ ತಾರಾ ಅವರಿಗೆ ಹೆಸರು ಸೂಕ್ತವಾಗಿದೆ. ವಿಧಾನಪರಿಷತ್‍ನಲ್ಲಿ ಇನ್ನು ಮುಂದೆ ಅವರನ್ನು ಇದೇ ಹೆಸರಿನಲ್ಲಿ ಕರೆಯುತ್ತೇನೆ. ಶೇಕಡ 50ರಷ್ಟು ಮಹಿಳಾ ಜನಸಂಖ್ಯೆ ಇರುವ ಗ್ರಾಮ ಪಂಚಾಯತ್‍ನಲ್ಲಿ ಇವರಿಗೆ ವಿದ್ಯಾರ್ಹತೆಯನ್ನು ನೋಡದೆ ಮೀಸಲು ಇಡಬೇಕಾಗಿದೆ. ಅವಿದ್ಯಾವಂತರಾಗಿದ್ದರೂ ಜನರೊಂದಿಗೆ ಬೆರತು ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ಶ್ರಮಿಸುತ್ತಾರೆ. ನಿರ್ದೇಶಕರು ಇಂತಹುದೆ ವಿಷಯಗಳನ್ನು ತೆಗೆದುಕೊಂಡಿರಬಹುದು. ಇದರಿಂದ ಸಮಾಜವು ಬದಲಾವಣೆ ಆಗುತ್ತದೆ. ಅನುಭವಿ ಕಲಾವಿದರು ಇರುವುದರಿಂದ ನಿರ್ಮಾಪಕರ ಗಲ್ಲಾ ಪೆಟ್ಟಿಗೆ ತುಂಬಬಹುದು ಎಂದರು. ಹಲವು ಚಿತ್ರಗಳನ್ನು ನಿರ್ದೇಶಿಸಿ ಪ್ರಶಸ್ತಿ ಪಡೆದುಕೊಂಡಿರುವ ಎನ್.ಆರ್.ನಂಜುಂಡೇಗೌಡ ಒಂಬತ್ತು ವರುಷಗಳ ನಂತರ ಕತೆ, ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಪಂಚಾಯತ್ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಇರುವುದನ್ನು ಸರಿಯಾಗಿ ಉಪಯೋಗಿಸಿಕೊಂಡು ಅದನ್ನು ದುರುಪಯೋಗ ಮಾಡಿಕೊಳ್ಳುವುದು. ಮತ್ತೋಂದು ಕಡೆ ಅವಿದ್ಯಾವಂತಳಾಗಿ ಜನರನ್ನು ತನ್ನ ದಾರಿಗೆ ತಂದು ಯೋಜನೆಗಳನ್ನು ಸದುಪಯೋಗ ಮಾಡುವುದು. ಹೀಗೆ ಎರಡು ಕೋನಗಳಲ್ಲಿ ಚಿತ್ರಕತೆಯನ್ನು ರಚಿಸಿದ್ದಾರೆ. ಇದಕ್ಕಾಗಿ ನಿರ್ದೇಶಕರು ಹಳ್ಳಿಗಳಿಗೆ ಭೇಟಿ ನೀಡಿ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿ, ಅದಕ್ಕೊಂದು ಚೆಂದದ ನಿರೂಪಣೆ ನೀಡಿರುವುದು ವಿಶೇಷವಾಗಿದೆ. ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪ್ರೋ.ಎಸ್.ಜಿ.ಸಿದ್ದರಾಮಯ್ಯ ಸಾಹಿತ್ಯ, ಸಂಭಾಷಣೆ ಬರಯುತ್ತಿದ್ದಾರೆ. ಸಂಗೀತ ಪೂರ್ಣಚಂದ್ರತೇಜಸ್ವಿ, ಛಾಯಗ್ರಹಣ ಬಿ.ಸತೀಶ್, ಸಂಕಲನ ಬಸವರಾಜುಅರಸು ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಒಂದೇ ಹಂತದಲ್ಲಿ 30 ದಿವಸಗಳ ಕಾಲ ರಾಮನಗರ, ಚೆನ್ನಪಟ್ಟಣ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. 25 ವರುಷಗಳ ನಂತರ ದೇವರಾಜ್, ತಾರಾ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಕಪ್ಪಣ್ಣ, ನಾಗರಾಜಮೂರ್ತಿ ಸೇರಿದಂತೆ ರಂಗಭೂಮಿ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ಸವಿರಾಜ್ ಸಿನಿಮಾಸ್ ಅಡಿಯಲ್ಲಿ ಎಸ್.ಎ.ಪುಟ್ಟರಾಜು ನಿರ್ಮಾಣ ಮಾಡುತ್ತಿರುವುದು ಮೊದಲ ಪ್ರಯತ್ನವಾಗಿದೆ.
-30/08/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore